ಸಿಬಿಎಸ್ಇ 10, 12ನೇ ತರಗತಿ ಫಲಿತಾಂಶ: ನಕಲಿ ವೈರಲ್ ಸುತ್ತೋಲೆಯ ವಿರುದ್ಧ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಮಂಡಳಿ
ಸೋಷಿಯಲ್ ಮೀಡಿಯಾದಲ್ಲಿ ಸಿಬಿಎಸ್ಇ ಫಲಿತಾಂಶ ಪ್ರಕಟದ ಕುರಿತ ತಪ್ಪು ದಿನಾಂಕಗಳ ಪೋಸ್ಟ್ಗಳನ್ನು ವೈರಲ್ ಮಾಡಲಾಗುತ್ತಿದೆ. ಈ ಕುರಿತು ಸಿಬಿಎಸ್ಇ ಸ್ಪಷ್ಟನೆ ನೀಡಿದ್ದು, ದಿನಾಂಕಗಳ ಕುರಿತ ಸುತ್ತೋಲೆ ಸುಳ್ಳು ಎಂದು ಹೇಳಿದೆ.

ಸಿಬಿಎಸ್ಇ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶ ಇನ್ನೂ ಬಿಡುಗಡೆಯಾಗಿಲ್ಲ. ಫಲಿತಾಂಶ ಪ್ರಕಟವಾಗುವ ದಿನಾಂಕವನ್ನು ಕೇಂದ್ರೀಯ ಮಾಧ್ಯಮ ಶಿಕ್ಷಣ ಮಂಡಳಿ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ದಿನಾಂಕಗಳನ್ನು ತಪ್ಪಾಗಿ ಹೇಳಿಕೊಂಡು ಪೋಸ್ಟ್ಗಳನ್ನು ವೈರಲ್ ಮಾಡಲಾಗುತ್ತಿದೆ. ಈ ಬಗ್ಗೆ ಸಿಬಿಎಸ್ಇ ಸ್ಪಷ್ಟನೆ ನೀಡಿದ್ದು, ದಿನಾಂಕಗಳ ಕುರಿತ ಸುತ್ತೋಲೆ ಸುಳ್ಳು ಎಂದು ಹೇಳಿದೆ. ಈ ತಪ್ಪು ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಫಲಿತಾಂಶವು ಒಟ್ಟು ನಾಲ್ಕು ಹಂತಗಳಲ್ಲಿ ಮೇ 9, 13, 14 ಮತ್ತು 16ರಂದು ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು CBSE ಫಲಿತಾಂಶ ಪೋರ್ಟಲ್, ಡಿಜಿಲಾಕರ್, ಉಮಾಂಗ್ ಮತ್ತು ಇತರ ಆನ್ಲೈನ್ ತಾಣಗಳ ಮೂಲಕ ಡೌನ್ಲೋಡ್ ಮಾಡಬಹುದು ಎಂದು ಈ ನಕಲಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದು ಸತ್ಯಕ್ಕೆ ದೂರವಾದ ಪೋಸ್ಟ್.
ನಕಲಿ ಸುತ್ತೋಲೆಯಲ್ಲಿ ಏನು ಹೇಳಲಾಗಿದೆ?
46 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್ಇ 2025ರ ಪರೀಕ್ಷೆಗಳಿಗೆ ಹಾಜರಾಗಿದ್ದರು. ಅಧಿಕೃತ ವೆಬ್ಸೈಟ್ನಲ್ಲಿ ಟ್ರಾಫಿಕ್ ಕಡಿಮೆ ಮಾಡುವ ಸಲುವಾಗಿ ಮಂಡಳಿಯು ಫಲಿತಾಂಶಗಳನ್ನು ಭಿನ್ನ ರೀತಿಯಲ್ಲಿ ಘೋಷಿಸಲು ನಿರ್ಧರಿಸಿದೆ ಎಂದು ಈ ನಕಲಿ ಸುತ್ತೋಲೆ ಹೇಳಿಕೊಂಡಿದೆ. ವಿದ್ಯಾರ್ಥಿಗಳಿಗೆ ಡೌನ್ಲೋಡ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ವಿಧಾನ ಹೇಳಲಾಗಿದೆ. ಆದರೆ, ಯಾವುದೇ ಹೊಸ ವಿಧಾನಗಳನ್ನು ಪರಿಚಯಿಸುತ್ತಿರುವ ಕಾರಣದಿಂದ ಫಲಿತಾಂಶಗಳು ವಿಳಂಬವಾಗಿಲ್ಲ ಎಂದು ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಭರವಸೆ ನೀಡಿದೆ. ಎರಡನೇ ನಕಲಿ ಸುತ್ತೋಲೆಯಲ್ಲಿ ನಿಖರ ಮತ್ತು ಸರಿಯಾದ ಮಾಹಿತಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಅವಲಂಬಿಸುವಂತೆ ಸೂಚಿಸಲಾಗಿದೆ.
ಈ ವರ್ಷ, 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿದ್ದರು. ಅದರಲ್ಲಿ 24.12 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದರೆ, 17.88 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆ ಬರೆದಿದ್ದಾರೆ. CBSE 10ನೇ ತರಗತಿ ಪರೀಕ್ಷೆಗಳನ್ನು ಫೆಬ್ರುವರಿ 15ರಿಂದ 18 ರವರೆಗೆ ನಡೆಸಲಾಯಿತು. ಆದರೆ 12ನೇ ತರಗತಿ ಪರೀಕ್ಷೆಗಳು ಫೆ. 15ರಿಂದ ಏಪ್ರಿಲ್ 4 ರವರೆಗೆ ಭಾರತದ 7,842 ಕೇಂದ್ರಗಳಲ್ಲಿ ಮತ್ತು ವಿದೇಶಗಳ 26 ಕೇಂದ್ರಗಳಲ್ಲಿ ನಡೆಸಲಾಯ್ತು.
ಕಳೆದ ವರ್ಷ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಮೇ 13ರಂದು ಬಿಡುಗಡೆ ಮಾಡಲಾಗಿತ್ತು. ಅದಕ್ಕೂ ಹಿಂದೆ 2023ರಲ್ಲಿ ಮೇ 12ರಂದು ಘೋಷಿಸಲಾಗಿತ್ತು.