ಯುಗಾದಿಗೂ ಮುನ್ನ ಸಂಸದರಿಗೆ ಗುಡ್ ನ್ಯೂಸ್; ಶೇ 24ರಷ್ಟು ವೇತನ ಹೆಚ್ಚಳ, ಪಿಂಚಣಿ ಪರಿಷ್ಕರಣೆ
ಸಂಸದೀಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ ಸಂಸದರ ವೇತನ, ದೈನಂದಿನ ಭತ್ಯೆಗಳನ್ನು ಹೆಚ್ಚಿಸಲಾಗಿದೆ. : ಸಂಸದರ ಮಾಸಿಕ ವೇತನವನ್ನು 1 ಲಕ್ಷ ರೂ.ಗಳಿಂದ 1,24,000 ರೂ.ಗೆ ಹೆಚ್ಚಿಸಲಾಗಿದೆ.

ನವದೆಹಲಿ: ಯುಗಾದಿ ಹಬ್ಬಕ್ಕೂ ಮುಂಚಿತವಾಗಿ ಸಂಸದರಿಗೆ ಕೇಂದ್ರ ಸರ್ಕಾರ ಶುಭಸುದ್ದಿ ಕೊಟ್ಟಿದ್ದು, ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಹಣಕಾಸು ವರ್ಷದ ಕೊನೆಯ ತಿಂಗಳು ಮುಗಿಯಲು ಕೆಲವೇ ದಿನಗಳು ಬಾಕಿಯಿದ್ದು, ಅದಕ್ಕೂ ಮುನ್ನ ಸಂಸತ್ ಸದಸ್ಯರ ವೇತನ ಹೆಚ್ಚಳ ಘೋಷಣೆಯಾಗಿದೆ. ಸಂಸದರು ಮತ್ತು ಮಾಜಿ ಸಂಸದರ ವೇತನ, ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಪರಿಷ್ಕರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ (ಮಾ.22) ಪ್ರಕಟಿಸಿದ್ದು, ಹಾಲಿ ಸಂಸದರ ವೇತನದಲ್ಲಿ ಶೇಕಡಾ 24ರಷ್ಟು ಹೆಚ್ಚಳವನ್ನು ಸೂಚಿಸಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ಹಾಲಿ ಸದಸ್ಯರಿಗೆ ದೈನಂದಿನ ಭತ್ಯೆಗಳು ಮತ್ತು ಮಾಜಿ ಸದಸ್ಯರಿಗೆ ಐದು ವರ್ಷಗಳಲ್ಲಿ ಪ್ರತಿ ವರ್ಷದ ಸೇವೆಗೆ ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಹೆಚ್ಚಿಸಲಾಗಿದೆ.
1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ತಿಳಿಸಲಾದ ವೆಚ್ಚ ಹಣದುಬ್ಬರ ಸೂಚ್ಯಂಕದ ಆಧಾರದ ಮೇಲೆ ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಕಾಯ್ದೆಯಡಿ (Salary, Allowances and Pension of Members of Parliament Act) ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ ವೇತನ ಹೆಚ್ಚಳದ ಅಧಿಸೂಚನೆ ಹೊರಡಿಸಲಾಗಿದೆ.
ಸಂಸದರಿಗೆ ವೇತನದಲ್ಲಿ ಏನೆಲ್ಲಾ ಬದಲಾವಣೆ?
- ಮಾಸಿಕ ವೇತನ: ಸಂಸದರ ಮಾಸಿಕ ವೇತನವನ್ನು 1,00,000 ರೂ.ಗಳಿಂದ 1,24,000 ರೂ.ಗೆ ಹೆಚ್ಚಿಸಲಾಗಿದೆ.
- ದೈನಂದಿನ ಭತ್ಯೆ: ದೈನಂದಿನ ಭತ್ಯೆಯನ್ನು (Daily Allowance) 2,000 ರೂ.ಗಳಿಂದ 2,500 ರೂ.ಗೆ ಹೆಚ್ಚಿಸಲಾಗಿದೆ.
- ಪಿಂಚಣಿ: ಮಾಜಿ ಸಂಸದರ ಪಿಂಚಣಿಯನ್ನು ತಿಂಗಳಿಗೆ 25,000 ರೂ.ಗಳಿಂದ 31,000 ರೂ.ಗೆ ಹೆಚ್ಚಿಸಲಾಗಿದೆ.
- ಐದು ವರ್ಷಗಳ ಸೇವೆಯ ಪ್ರತಿ ವರ್ಷದ ಹೆಚ್ಚುವರಿ ಪಿಂಚಣಿಯನ್ನು ತಿಂಗಳಿಗೆ 2,000 ರೂ.ಗಳಿಂದ 2,500 ರೂ.ಗೆ ಹೆಚ್ಚಿಸಲಾಗಿದೆ.
ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರವು ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರ ವೇತನವನ್ನು 100 ಪ್ರತಿಶತ ಹೆಚ್ಚಿಸಲು ಅನುಮೋದನೆ ನೀಡಿತ್ತು. ಇದಾದ ಕೆಲವೇ ದಿನಗಳ ಕೇಂದ್ರದಲ್ಲೂ ವೇತನ ಪರಿಷ್ಕರಣೆಯ ಸುದ್ದಿ ಬಂದಿದೆ. ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆಯ ಪ್ರಕಾರ, ಮುಖ್ಯಮಂತ್ರಿಗಳ ಮಾಸಿಕ ವೇತನವನ್ನು 75,000 ರೂ.ಗಳಿಂದ 1.5 ಲಕ್ಷ ರೂ.ಗಳಿಗೆ ದ್ವಿಗುಣಗೊಳಿಸಲಾಗುತ್ತದೆ. ಸಚಿವರ ವೇತನವು 60,000 ರೂ.ಗಳಿಂದ 1.25 ಲಕ್ಷ ರೂ.ಗಳಿಗೆ, ಅಂದರೆ ಶೇ.108 ರಷ್ಟು ಹೆಚ್ಚಾಗಲಿದೆ.
