ಚಂದ್ರಯಾನ: ಇದು ಪ್ರಧಾನಿ ಒಬ್ಬರದೇ ಯಶಸ್ಸಲ್ಲ, ಬಡಜನರ ನಿರ್ಲಕ್ಷ್ಯವೂ ಅಲ್ಲ; ವೈಎನ್ ಮಧು ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚಂದ್ರಯಾನ: ಇದು ಪ್ರಧಾನಿ ಒಬ್ಬರದೇ ಯಶಸ್ಸಲ್ಲ, ಬಡಜನರ ನಿರ್ಲಕ್ಷ್ಯವೂ ಅಲ್ಲ; ವೈಎನ್ ಮಧು ಬರಹ

ಚಂದ್ರಯಾನ: ಇದು ಪ್ರಧಾನಿ ಒಬ್ಬರದೇ ಯಶಸ್ಸಲ್ಲ, ಬಡಜನರ ನಿರ್ಲಕ್ಷ್ಯವೂ ಅಲ್ಲ; ವೈಎನ್ ಮಧು ಬರಹ

ʼಚಂದ್ರಯಾನ 3ರ ಯಶಸ್ಸು ದೇಶದ ಪ್ರಧಾನಿಯೊಬ್ಬರ ಯಶಸ್ಸಲ್ಲ, ಹಾಗಂತ ಇಂತಹ ಸಂಶೋಧನೆಗಳಿಗೆ ಹಣ ಖರ್ಚು ಮಾಡುವುದು ಬಡಜನರ‌ ನಿರ್ಲಕ್ಷ್ಯ ಸಹ ಅಲ್ಲʼ ಎನ್ನುವ ವೈಎನ್‌ ಮಧು ಚಂದ್ರಯಾನ ಹಾಗೂ ಚಂದ್ರಯಾನಕ್ಕೆ ಸಂಬಂಧಿಸಿದ ಟೀಕೆಗಳಿಗೆ ಫೇಸ್‌ಬುಕ್‌ ಬರಹದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಂದ್ರಯಾನ 3
ಚಂದ್ರಯಾನ 3

ಚಂದ್ರಯಾನಕ್ಕೆ ಸಂಬಂಧಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಚಂದ್ರಯಾನ ಯಶಸ್ಸನ್ನು ಸಂಭ್ರವಿಸುವ ಜೊತೆಗೆ ಕೆಲವು ಇದನ್ನು ಬಡಜನರ ನಿರ್ಲಕ್ಷ್ಯ, ಚಂದ್ರಯಾನಕ್ಕಾಗಿ ಖರ್ಚು ಮಾಡಿದ ಹಣವನ್ನು ಬಡವರಿಗೆ ನೀಡಿದರೆ ಏನು ಎಂದು ಪ್ರಶ್ನಿಸಿದ್ದಾರೆ. ಇದರೊಂದಿಗೆ ಪ್ರಧಾನಿಯವರು ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗುವುದಕ್ಕೂ ಮುಂಚೆ ಟಿವಿ ಪರದೆಯ ಮೇಲೆ ಕಾಣಿಸಿದ್ದು ಅಸಮಾಧಾನಕ್ಕೂ ಕಾರಣವಾಗಿದೆ.

ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ತಮ್ಮ ಅಭಿಪ್ರಾಯವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ವೈಎನ್‌ ಮಧು.

ಮಧು ಅವರ ಫೇಸ್‌ಬುಕ್‌ ಬರಹ ಹೀಗಿದೆ 

ವೈಜ್ಞಾನಿಕ/ವೈಚಾರಿಕ ಸಮಾಜದ ಮುನ್ನಡೆಯ ದೇಶದ ಏಳ್ಗೆಯ ಕಡಿಮೆ ಸಂಬಳಕ್ಕೆ ತೆತ್ತುಕೊಂಡು ಸಮಾಜಕ್ಕೆ ಅಗಾಧ ಕೊಡುಗೆ ನೀಡುವ ವಿಜ್ಞಾನಿ ಎಂಜಿನಿಯರುಗಳ ಯಶಸ್ಸಿನ ಸಂಗತಿಯಾಗಿ ಸಂತೋಷದ ಪಡುವ ಸಮಯ ಇದು. ಇದರ ಪ್ರತಿಫಲ ಖಂಡಿತವಾಗಿ ಪ್ರತಿಯೊಬ್ಬ ಭಾರತೀಯನಿಗೆ ಲಭಿಸಲಿದೆ. ಅಂದು ಸ್ಯಾಟಲೈಟ್ ತಂತ್ರಜ್ಞಾನಕ್ಕೆ‌ ತೆರೆದುಕೊಳ್ಳದೇ ಇದ್ದಲ್ಲಿ ಇಂದು ಪ್ರತಿಯೊಬ್ಬನ ಕೈಲಿ ಮೊಬೈಲ್ ಇರುತ್ತಿರಲಿಲ್ಲ.

ಇದು ಪ್ರಧಾನಿಯ ಯಶಸ್ಸಲ್ಲ. ಇನ್ನೂ ಲ್ಯಾಂಡ್ ಆಗುವುದಕ್ಕೆ ಎರಡು ನಿಮಿಷ ಮುಂಚೆಯೇ ಟೆಕ್ನಿಶಿಯನ್‌ಗಳ ತಂಡ ಇನ್ನೂ ಪರದೆ ನೊಡುತ್ತಿರುವಾಗಲೇ ಪಕ್ಕದ ಪರದೆಗೆ ಬಂದು ಆಕ್ರಮಿಸಿಕೊಂಡದ್ದು ನನಗೆ ಡಿಸ್ಟ್ರಾಕ್ಷನ್ ಅನ್ನಿಸಿತು. ಅಷ್ಟು ಆತುರವಾ ಕ್ರೆಡಿಟ್ ತಗೊಳ್ಳುವುದಕ್ಕೆ ಅಂತ.

ಹಾಗೆ ಇದು ಬಡಜನರ‌ ನಿರ್ಲಕ್ಷ್ಯ ಸಹ ಅಲ್ಲ. ಒಂದು ಕಡೆಯ ರಾಜಕಾರಣ ಇದರ ಶ್ರೇಯಸ್ಸನ್ನು ತನ್ನದಾಗಿಸಿಕೊಳ್ಳಲು ಹೊರಟಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸುವ ರೀತಿ ಬೇರೆ ಇದೆ. ಅದಕ್ಕಾಗಿ ಯೋಜನೆಯನ್ನೇ ಅಲ್ಲಗಳೆಯಬಾರದು. ಸಮಾಜದ ದೃಷ್ಟಿಯಲ್ಲಿ ದೇಶದ್ರೋಹಿ ಅಂತ ಬಿಂಬಿಸಲು ನೀವೇ ಅನುವು ಮಾಡಿಕೊಟ್ಟ ಹಾಗಿರುತ್ತೆ.

ಒಟ್ಟಾರೆ ಒಂದು ಗುಡ್ ನ್ಯೂಸನ್ನು ಸಹ ಹೀಗೆ ರಾಜಕಾರಣದಲ್ಲಿ ಎಳದಾಡಿ ರಾಡಿ ಮಾಡುವುದು ನೋಡಿದರೆ ನಮ್ಮ ದೇಶ ಯಾಕೆ ಹಿಂಗಿದೆ ಅಂತ ಬೇಸರವಾಗತ್ತೆ. ಯಾಕೆ ಹಿಂಗಿದೆ ಅನ್ನೋದಕ್ಕೆ ಕಾರಣಾನೂ ಸಿಗತ್ತೆ.

ಇವರ ಬರಹಕ್ಕೆ ಹಲವರು ಕಾಮೆಂಟ್‌ ಮಾಡಿದ್ದು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೆಲವರು ಮಧು ಅವರ ಹೇಳಿಕೆಯನ್ನು ಸಮರ್ಥಿಸಿದರೆ ಇನ್ನೂ ಕೆಲವರು ತೆಗಳಿದ್ದಾರೆ.

ಶ್ರೀಧರ ಮೂರ್ತಿ ಅವರ ಕಾಮೆಂಟ್‌ ಹೀಗಿದೆ

ʼಸರ್, ಮೊದಲೇ ಹೇಳಿಬಿಡುತ್ತೇನೆ ನಾನು ಮೋದಿ ಭಕ್ತಾನೂ ಅಲ್ಲ ದ್ವೇಷ ಮಾಡುವವನೂ ಅಲ್ಲ. ನಿಮ್ಮ ಬರಹಗಳ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳ ಅಭಿಮಾನಿ. ಮೋದಿ ಕೂತರೂ, ಸೀನಿದರೂ ವೈಭವೀಕರಿಸುವವರು ಒಂದು ಕಡೆ ಮೋದಿ ಏನು ಮಾಡಿದರೂ ತೆಗಳುವ ಬಣ ಇನ್ನೊಂದೆಡೆ. ಸಾಕಾಗಿದೆ. ಮೋದಿ ಅಕಸ್ಮಾತ್ ಈ ಸಂಭ್ರಮದಲ್ಲಿ ಪಾಲ್ಗೊಳ್ಳದೇ ಇದ್ದಿದ್ದರೆ ಅದಕ್ಕೆ ಅವರನ್ನು ಬೈಯುವುದು ಶುರುವಾಗುತ್ತಿತ್ತು. ಸರ್...ಸಂಭ್ರಮಿಸೋಣ ಅಷ್ಟೇʼ

ಮಮತಾ ಭಾಮಾ ಕಾಮೆಂಟ್‌ ಮಾಡಿದ್ದು ಹೀಗೆ

ʼಮೊಸರಲ್ಲಿ ಕಲ್ಲು ಹುಡುಕೋ ಜನ. 2019ರಲ್ಲಿ ಚಂದ್ರಯಾನ ವಿಫಲವಾದಾಗ ಸಹ ಕೊನೆ ಕ್ಷಣ ಪಕ್ಕದಲ್ಲಿ ಪ್ರಧಾನಿ ಇದ್ದು ಸೋತವರ ಬೆನ್ನು ತಟ್ಟಿದರು. ಇದು ಒಬ್ಬ ಪ್ರಧಾನಿಯಾಗಿ ಮಾಡಲೇ ಬೇಕಾದ ಕಾರ್ಯ. ಆ ಪ್ರಧಾನಿ ಯಾವುದೇ ಪಕ್ಷಕ್ಕೆ ಸೇರಿದ್ದರು ಹೆಮ್ಮೆ ಪಡಬೇಕಾದದ್ದೇ. ದಕ್ಷಿಣ ಆಫ್ರಿಕಾದಲ್ಲಿ ಇದ್ದರೂ ಕಾತರತೆ ಇಂದ ಕಾದಿದ್ದು ವಿಜ್ಞಾನಿಗಳ ಅಭಿನಂದಿಸಿದರು. ಆಲೂಗಡ್ಡೆಯಿಂದ ಚಿನ್ನ ತೆಗೆಯುವವರಿಗೆ ಅರ್ಥನೆ ಆಗಿಲ್ಲ ಬಿಡಿ. ಇಲ್ಲೂ ರಾಜಕೀಯ ತಂದು ಆಡಿಕೊಳ್ಳು ಜನ. ದೇವರೇ ಕಾಪಾಡಬೇಕು.ʼ

ಮಮತಾ ಶೆಟ್ಟಿ ಕಾಮೆಂಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ

ದೇಶ ಯಶಸ್ಸನ್ನು ಸಾಧಿಸಿದಾಗ ಜನರ ಪ್ರತಿನಿಧಿಯಾಗಿ ವಿಜ್ಞಾನಿಗಳನ್ನ ಅಭಿನಂದಿಸಿದ್ದಾರೆ ಹೊರತು ಒಬ್ಬ ಪ್ರಧಾನಿ ಲಾಭ ತೆಗೆದುಕೊಳ್ಳಿಕ್ಕೆ ಅಲ್ಲ ಅಂತ ನನ್ನ ಅನಿಸಿಕೆ. ಇಲ್ಲಿ ಬೇರೆ ಯಾರೇ ಪ್ರಧಾನಿಯಾಗಿದ್ದರೂ ಕೂಡ ಬರುತ್ತಿದ್ದರು ಅನ್ನಿಸುತ್ತೆ. ಒಂದು ವೇಳೆ ಲ್ಯಾಂಡ್ ಆಗುವ ಮೊದಲೇ ಅವರು ಮಾತನಾಡಿದ್ದರೆ ಅದಕ್ಕೆ ನಾವು ಹೇಳಬಹುದು. ಮೀಡಿಯಾದವರು ಪ್ರಧಾನಿಯವರು ನೋಡುತ್ತಾ ಇದ್ದಾರೆ ಅನ್ನುವ ಸೂಚನೆಯನ್ನು ಕೊಟ್ಟಿದ್ದಾರೆ, ವಿನಹ ಒಮ್ಮೆಲೇ ಬಂದು ಮಾಧ್ಯಮದಲ್ಲಿ ಕುಳಿತುಕೊಂಡು ಮಾತನಾಡಲು ಆಗುವುದಿಲ್ಲ ಅಲ್ಲವೇ ಅದನ್ನು ಮೊದಲು ತೋರಿಸಿರಬಹುದು. ಆದರೆ ನಮಗೆ ಯಾರಿಗೂ ಅಲ್ಲಿ ಆತುರ ಕಂಡುಬರಲಿಲ್ಲ. ಇನ್ನು ಅವರ ಭಾಷಣದಲ್ಲಿ ಇದು ಕೇವಲ ಭಾರತದ ಸಾಧನೆ ಅಲ್ಲ ಇಡೀ ಜಗತ್ತನ್ನೇ ಈ ಯಶಸ್ಸಿನಲ್ಲಿ ತೆಗೆದುಕೊಂಡಿದ್ದಾರೆ. ಎಲ್ಲೂ ಕೂಡ ಇದಕ್ಕೆ ನಾನು ಕಾರಣಕರ್ತ ಅಂತ ಹೇಳಿದ್ದಿಲ್ಲ. ಒಬ್ಬ ಪ್ರಧಾನಿಯಾಗಿದ್ದುಕೊಂಡು ಇವತ್ತು ಇಸ್ರೋ ವಿಜ್ಞಾನಿಗಳನ್ನು ಮಾಧ್ಯಮದಲ್ಲಿ ಬಂದು ಅಭಿನಂದಿಸಿದ್ದು, ಪ್ರಧಾನಿಯಾಗಿದ್ದುಕೊಂಡು ಅವರ ಕರ್ತವ್ಯ ನಿರ್ವಹಿಸಿದ್ದೇ ಹೊರತು ರಾಜಕಾರಣ ಮಾಡುವುದಕ್ಕಲ್ಲ.

ಇಷ್ಟೇ ಅಲ್ಲದೆ ಇನ್ನೂ ಹಲವರು ಇವರ ಈ ಪೋಸ್ಟ್‌ಗೆ ಕಾಮೆಂಟ್‌ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.