ಧರ್ಮ vs ಚಂದ್ರಯಾನ: ವಿಶ್ವನಿಯಾಮಕನ ಆಶೀರ್ವಾದವೂ ಇರಲೆಂಬ ನಂಬಿಕೆ ವಿಜ್ಞಾನಿಗಿದ್ದರೆ ತಪ್ಪೇನು; ಬೇಳೂರು ಸುದರ್ಶನ ಬರಹ
ವಿಜ್ಞಾನಿಗಳು ದೇವರು, ಧರ್ಮದ ಪಾಲನೆ ಮಾಡುವುದು ತಪ್ಪೇ, ದೇವರ ಮೇಲೆ ನಂಬಿಕೆ ಇರಿಸಿ ಮಾಡುವ ಕಾರ್ಯದಲ್ಲಿ ಅಡೆತಡೆ ಬಾರದೆಂದು ಪೂಜೆ ಸಲ್ಲಿಸುವುದಕ್ಕೂ ವಿಜ್ಞಾನಕ್ಕೂ ಹೋಲಿಕೆ ಏಕೆ? ಈ ವಿಚಾರದಲ್ಲಿ ಗೇಲಿ ಮಾಡುವ ಜನರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ ಪತ್ರಕರ್ತ ಬೇಳೂರು ಸುದರ್ಶನ. ಇವರ ಫೇಸ್‌ಬುಕ್ ಬರಹ ಇಲ್ಲಿದೆ.
ವಿಜ್ಞಾನಿಗಳು ದೇವರ ಪೂಜೆ ಮಾಡುವುದು, ಧರ್ಮ ಪಾಲನೆ ಮಾಡುವುದನ್ನು ನಿಂದಿಸುವವರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ ಪತ್ರಕರ್ತ ಬೇಳೂರು ಸುದರ್ಶನ. ಇವರ ಫೇಸ್‌ಬುಕ್ ಬರಹ ಇಲ್ಲಿದೆ.
ಬೇಳೂರು ಸುದರ್ಶನ ಅವರ ಬರಹವನ್ನು ನೀವೂ ಓದಿ
ಯಾವುದೇ ಸಮಾಜದ ನಂಬಿಕೆಗಳನ್ನು ಗೇಲಿ ಮಾಡುತ್ತಲೇ ಬದುಕುವ ಸ್ವಯಂಘೋಷಿತ ವೈಜ್ಞಾನಿಕ ಚಿಂತಕರು – ಲೇಖಕರಿಗಿಂತ, ಪರಂಪರೆಯಿಂದ ಬಂದ ನಂಬಿಕೆಗಳನ್ನು ಬಿಡದೆಯೂ ವಿಜ್ಞಾನವನ್ನು ವೃತ್ತಿಯಾಗಿ, ಪ್ರವೃತ್ತಿಯಾಗಿ ಅನುಸರಿಸಿ, ಚಂದ್ರಯಾನವನ್ನು ಗೆಲ್ಲಿಸಿದ ವಿಜ್ಞಾನಿಗಳೇ ಈ ದೇಶದ ನಿಜ ಆಸ್ತಿ.
ಅವರವರ ನಂಬುಗೆಯನ್ನು ಉಳಿಸಿಕೊಂಡೇ ತಮ್ಮ ಪಾಡಿಗೆ ಮನುಕುಲದ ಏಳಿಗೆಗಾಗಿ ಸಂಶೋಧನೆ ಮಾಡಿದವರನ್ನು ವಿಜ್ಞಾನಿಗಳೇ ಅಲ್ಲ ಎಂಬಂತೆ ಮತ್ತು ಎಲ್ಲ ಧರ್ಮಗಳೂ ವಿಜ್ಞಾನಿಗಳನ್ನು ಕತ್ತರಿಸಿಬಿಟ್ಟವು ಎಂಬಂತೆ ಬಿಂಬಿಸುವವರದು ಅಪ್ಪಟ ಐಡೆಂಟಿಟಿ ಕ್ರೈಸಿಸ್ ಅಷ್ಟೆ!!
ನಾನೇ ನೋಡಿದ ಹಾಗೆ ಸಿಡ್ಯಾಕ್ ಬೆಂಗಳೂರು ಕಚೇರಿಯ ಆಗಿನ ನಿರ್ದೇಶಕ ಪಿ ರಾಮಾನುಜಂ, ಐಐಐಟಿಬಿಯ ಮಾಜಿ ನಿರ್ದೇಶಕ ಸಡಗೋಪನ್, - ಇಬ್ಬರದೂ ಹಣೆಯ ಮೇಲಿನ ನಾಮವೇ ಸಿಗ್ನೇಚರ್ ಆಗಿತ್ತು. ರಾಮಾನುಜಂ ಅಂತೂ ಕಚ್ಚೆ ಪಂಚೆ - ಶಲ್ಯದಲ್ಲೇ ಕಚೇರಿಗೆ ಹಾಜರಾಗುತ್ತಿದ್ದರು. ಇವೆರಡೂ ನಾನು ನೋಡಿದ ನಿದರ್ಶನಗಳು. ಆದರೆ ಅವರು ತಮ್ಮ ವೃತ್ತಿಯಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ.
ಇತಿಹಾಸವನ್ನೇ ನೋಡಿದರೆ ಶ್ರೀನಿವಾಸ ರಾಮಾನುಜನ್ ಇರಲಿ, ಐಸಾಕ್ ನ್ಯೂಟನ್ ಇರಲಿ – ಎಲ್ಲರೂ ವೈಜ್ಞಾನಿಕ ಮನೋಭಾವದೊಂದಿಗೇ ಧಾರ್ಮಿಕ ಆಚರಣೆಗಳನ್ನೂ ನಂಬಿದವರು. ರಾಮಾನುಜನ್ - ನ್ಯೂಟನ್ ಕಂಡುಹಿಡಿದ ಸೂತ್ರಗಳು ಇಂದಿಗೂ ವಿಜ್ಞಾನಿಗಳನ್ನು ಕಾಡುತ್ತಿವೆ.
ಯಾವುದೇ ದೇಶದಲ್ಲೂ ಆಯಾ ದೇಶದ ದೇಸಿ ಪರಂಪರೆಗೆ ಆದ್ಯತೆ ಮತ್ತು ಗೌರವ ನೀಡುವುದು ನಾಗರಿಕತೆಯ ಲಕ್ಷಣ. ಸಂಥಾಲಿ ವಿಜ್ಞಾನಿಯೊಬ್ಬರು ಸಾಂಪ್ರದಾಯಿಕ ಮುಂಡು ಉಟ್ಟುಕೊಂಡೇ ಕಚೇರಿಗೆ ಬಂದರೆ ತಪ್ಪೇನಿದೆ?
ಅದಿಲ್ಲದೆ ಹೋದರೆ ಮೊದಲೇ ಹೇಳಿದಂತೆ ಈ ಸ್ವಯಂಘೋಷಿತರು ಆಧಾರ್ ನಂಬರನ್ನೇ ತಮ್ಮ ಹೆಸರನ್ನಾಗಿ ಬದಲಿಸಿಕೊಂಡು ವೈಜ್ಞಾನಿಕ ಚಿಂತನೆಯನ್ನು ಗಟ್ಟಿಗೊಳಿಸುವುದೊಂದೇ ದಾರಿ.
ಚಂದ್ರಯಾನ - 3 ಯಶ ಪಡೆಯಲಿ ಎಂದು ಭಾರತದಾದ್ಯಂತ ಹಿಂದುಗಳು - ಮುಸ್ಲಿಮರು - ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದ ವಿಡಿಯೊವನ್ನು ಬಿಬಿಸಿ ಪ್ರಕಟಿಸಿದೆ. ಹೀಗೆ ಪ್ರಾರ್ಥನೆ ಮಾಡಿದವರು ವಿಜ್ಞಾನವನ್ನೇ ಓದಿರಲಿಕ್ಕಿಲ್ಲ; ಆದರೆ ವಿಜ್ಞಾನಿಗಳ ವೃತ್ತಿಪರತೆಯಲ್ಲಿ ಅವರಿಗೆ ನಂಬಿಕೆ ಇದೆ; ಜೊತೆಗೆ ವಿಶ್ವನಿಯಾಮಕನ ಆಶೀರ್ವಾದವೂ ಇರಲೆಂಬ ನಂಬಿಕೆಯಿದೆ. ಎರಡೂ ಸಮಾನಾಂತರ ರೇಖೆಗಳು. ಅಷ್ಟೆ.
ಹಾಗಂತ ಈ ಸ್ವಯಂಘೋಷಿತರಿಂದ ಇನ್ನು ಮುಂದೆ ಪರಂಪರೆಯ ಮೂದಲಿಕೆ ಆಗುವುದಿಲ್ಲ ಎಂಬ ಯಾವ ನಂಬಿಕೆಯೂ ನನಗಿಲ್ಲ; ಯಾಕಂದ್ರೆ ಆಟ್ಟಿಟ್ಯೂಡ್ ಬದಲಾಯಿಸೋದು ಕಷ್ಟ ಎಂಬ ಮೌಢ್ಯ ನನ್ನನ್ನು ಆವರಿಸಿದೆ!!
ಇವರ ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕೆ. ಸತ್ಯನಾರಾಯಣ ಅವರ ಕಾಮೆಂಟ್ ಹೀಗಿದೆ
ʼನೀವು ಬುದ್ಧಿವಂತರನ್ನು ಸಂಭಾಳಿಸಬಹುದು, ಹಾಗೆಯೇ ದಡ್ಡರ ಜೊತೆ ಮಾತನಾಡಿ ಗೆಲ್ಲಬಹುದು. ಆದರೆ ಈ ಎರಡರ ನಡುವೆ ಇರುವ ಅತಿಬುದ್ಧಿವಂತರನ್ನು ಖಂಡಿತ ಸಂಭಾಳಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಿಮ್ಮ ಅತಿ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಡಿʼ
ರಾಘವೇಂದ್ರ ಹೊನ್ನೆಸರ ಅವರ ಕಾಮೆಂಟ್ ಹೀಗಿದೆ
ʼವಿಜ್ಞಾನಿಗಳು ದೇವರನ್ನು ನಂಬಬಾರದು ಎಂದಿಲ್ಲ. ನಾನು ಆಗಾಗ ಹೆಬ್ಬಾಳದಲ್ಲಿರುವ ಬೇತೆಲ್ ಚರ್ಚ್‌ಗೆ ಹೋಗುವೆ. ಅಲ್ಲಿ ಕೆಲವು ಸಾರಿ ಉತ್ತಮ ವಿಜ್ಞಾನಿಗಳು, ಸಾಹಿತಿಗಳು, ರಾಜಕಾರಣಿಗಳು, ಕ್ರಿಶ್ಚಿಯನ್ ಎಂದು ಜೀಸಸ್ ಅನುಗ್ರಹದಿಂದ ಅನುಕೂಲ ಆಯಿತು ಎಂದು ಹೇಳುವುದನ್ನು ಕೇಳಿದ್ದೇನೆ. ಇದರಿಂದ ಅವರೆಲ್ಲ ದೇವರನ್ನು ನಂಬುವರು ಎಂದು ಕೇಳಿದ್ದೇನೆ. ನಮ್ಮಲ್ಲಿ ಬೋಗಸ್ ಬುದ್ದಿಜೀವಿಗಳು ನಮ್ಮವರನ್ನು ತಮ್ಮ ನಂಬಿಕೆಗಳಿಂದ ವಿಮುಖಗೊಳಿಸಲು ಹಾಗೆ ಮಾತಾಡ್ತಾರೆʼ
ಇನ್ನೂ ಹಲವರು ಬೇಳೂರು ಅವರ ಹೇಳಿಕೆಯನ್ನು ಸಮರ್ಥಿಸಿ ಕಾಮೆಂಟ್ ಮಾಡಿದ್ದಾರೆ.