Chandrayaan 3: ಇಂಗ್ಲಿಷ್ ಬರದಿದ್ದರೆ ಕೀಳರಿಮೆ ಬೇಡ; ಅರ್ಥ ಮಾಡ್ಕೊಳಿ, ಚಂದ್ರನ ಮುಟ್ಟಿದವರು ಓದಿದ್ದು ಮಾತೃಭಾಷೆಯಲ್ಲೇ
ಆಗಸ್ಟ್ 23 ರಂದು ಭಾರತ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ಮೇಲೆ ಕಾಲಿರಿಸಿದೆ. ಇದಕ್ಕೆ ಕಾರಣರಾದ ಇಸ್ರೋ ವಿಜ್ಞಾನಿಗಳಲ್ಲಿ ಹಲವರು ತಮ್ಮ ಮಾತೃಭಾಷೆಯಲ್ಲಿ ಓದಿದವರು. ಅವರಲ್ಲಿ ಹಲವರ ಇಂಗ್ಲಿಷ್ ಕೂಡ ‘ಪಾಶ್’ ಅಲ್ಲ. ನಮ್ಮ ನಿಮ್ಮಂತೆಯೇ ಸಾಮಾನ್ಯ ಇಂಗ್ಲಿಷ್ ಮಾತನಾಡುತ್ತಾರೆ. ಅವರ ಸಾಧನೆಗೆ ಭಾಷೆ ಎಂದಿಗೂ ಅಡ್ಡಿಯಾಗಿಲ್ಲ.
ಆಗಸ್ಟ್ 23, ಭಾರತದ ಪಾಲಿನ ಅವಿಸ್ಮರಣೀಯ ದಿನ. ಭಾರತವು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡರ್‌ಗಳನ್ನು ಇಳಿಸಿದ ಹೆಮ್ಮೆ ಕ್ಷಣ, ದಿನ. ಚಂದ್ರಯಾನ-3 ಯಶಸ್ಸು ಕಂಡಿದೆ. ಆ ಮೂಲಕ ಭಾರತ ದೇಶ ಹಾಗೂ ಇಸ್ರೋ ವಿಜ್ಞಾನ ಮತ್ತ ಸಂಶೋಧನಾ ಕ್ಷೇತ್ರದಲ್ಲಿ ಇನ್ನೊಂದು ಮಹತ್ವದ ಮೈಲಿಗಲ್ಲನ್ನು ಇರಿಸಿದೆ. ಪ್ರಪಂಚದಲ್ಲೇ ಚಂದ್ರನ ದಕ್ಷಿಣ ಧ್ರುವ ಮೇಲೆ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ ಮೊದಲ ಹಾಗೂ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ನಾಲ್ಕನೇ ದೇಶ ಭಾರತವಾಗಿದೆ. ಆ ಮೂಲಕ ದೇಶದ ಹೆಮ್ಮೆಯನ್ನು ಉತ್ತುಂಗಕ್ಕೇರಿಸಿದವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು.
ಇಂದು ಭಾರತೀಯರು ಮಾತ್ರವಲ್ಲ, ಪ್ರಪಂಚದಾದ್ಯಂತ ಇಸ್ರೋ ವಿಜ್ಞಾನಿಗಳನ್ನು ಹಾಡಿ ಹೊಗಳುತ್ತಿದ್ದಾರೆ. ಅವರು ಮಾಡಿದ ಸಾಧನೆ ನಿಜಕ್ಕೂ ಅಸಾಮಾನ್ಯ, ಅದರಲ್ಲಿ ಎರಡು ಮಾತಿಲ್ಲ. ಚಂದ್ರಯಾನ ಯಶಸ್ಸಿನ ನಡುವೆ ಇದೀಗ ಇಸ್ರೋ ವಿಜ್ಞಾನಿಗಳ ಭಾಷೆ, ಮಾತು ಹಾಗೂ ಉಡುಗೆ ತೊಡುಗೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಇದು ಅನಾರೋಗ್ಯಕರ ಚರ್ಚೆಯಲ್ಲ, ಇದು ನಿಜಕ್ಕೂ ಆರೋಗ್ಯಕರ ಚರ್ಚೆ. ಇಸ್ರೋದಲ್ಲಿರುವ ವಿಜ್ಞಾನಿಗಳಲ್ಲಿ ಬಹುತೇಕರು ತಮ್ಮ ಮಾತೃಭಾಷೆಯಲ್ಲೇ ಓದಿದವರು. ಅಲ್ಲದೇ, ಅವರಲ್ಲಿ ಹಲವರು ನಮ್ಮ ನಿಮ್ಮಂತೆಯೇ ಸಾಮಾನ್ಯ ಕುಟುಂಬ ಹಿನ್ನೆಲೆಯಿಂದ ಬಂದವರು. ಆದರೆ ಅವರ ಸಾಧನೆ ಮಾತ್ರ ಬಹುದೊಡ್ಡದು.
ಬಾಹಾಕ್ಯಾಶ, ಸಂಶೋಧನೆ, ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವುದು ಎಂಬ ಕಲ್ಪನೆ ನಮ್ಮ ತಲೆಯಲ್ಲಿ ಬಂದಾಕ್ಷಣ ನಮ್ಮ ಯೋಚನೆಗಳು ಸಾಗುವ ರೀತಿಯೇ ಬೇರೆ. ವಿಜ್ಞಾನಿಗಳು ಎಂದರೆ ಹೈಫೈ ಇಂಗ್ಲಿಷ್, ದಪ್ಪ ಅಂಚಿನ ಕನ್ನಡಕ, ಕೋಟು ಧರಿಸಿ, ಗಂಭೀರ ಮುಖಭಾವ ಹೊತ್ತು ಓಡಾಡುವವರು ಎಂಬ ಕಲ್ಪನೆ ಮೂಡುತ್ತದೆ, ಮಾತ್ರವಲ್ಲ ಬಹಳ ಹಿಂದಿನಿಂದಲೂ ವಿಜ್ಞಾನಿಗಳ ವಿಚಾರದಲ್ಲಿ ಈ ಅಂಶಗಳು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆದರೆ ಖಂಡಿತ ಇದು ನಿಜವಲ್ಲ. ಅವರು ಕೂಡ ನಮ್ಮ ನಿಮ್ಮಂತೆಯೇ ಸಾಮಾನ್ಯ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮಾಧ್ಯಮದಲ್ಲೇ ಓದಿ ಉದ್ಯೋಗ ಗಿಟ್ಟಿಸಿಕೊಂಡವರು. ಅವರಲ್ಲಿ ಹಲವು ವಿಜ್ಞಾನಿಗಳು ನಮ್ಮ ನಿಮ್ಮಂತೆಯೇ ಸಾಮಾನ್ಯ ಇಂಗ್ಲಿಷ್ ಮಾತನಾಡುತ್ತಾರೆ. ಆದರೆ ಅವರು ಭೂಮಿಯನ್ನು ಬಿಟ್ಟು ಅನ್ಯಗ್ರಹವಾದ ಚಂದ್ರನಲ್ಲಿಗೆ ರಾಕೆಟ್ ಉಡಾವಣೆ ಮಾಡಿ, ಅಲ್ಲಿ ಲ್ಯಾಂಡರ್‌ಗಳನ್ನು ಇಳಿಸುವಲ್ಲಿ ಯಶಸ್ಸು ಗಳಿಸಿದ್ದಾರೆ. ಅಂದರೆ ಇಲ್ಲಿ ಮುಖ್ಯವಾಗಿದ್ದು ವಿಜ್ಞಾನಿಗಳ ಪ್ರತಿಭೆ, ಜ್ಞಾನ ಹಾಗೂ ತಂತ್ರಜ್ಞಾನಗಳ ಮೇಲೆ ಅವರಿಗಿದ್ದ ಪಾಂಡಿತ್ಯವೇ ಹೊರತು ಇಂಗ್ಲಿಷ್ ಭಾಷೆಯಲ್ಲ.
ಕಳೆದ ಬಾರಿ ಇಸ್ರೋ ಮುಖ್ಯಸ್ಥರಾಗಿದ್ದ ಕೆ. ಶಿವನ್ ಅವರಾಗಲಿ, ಈ ಬಾರಿ ಮುಖ್ಯಸ್ಥರಾಗಿದ್ದ ಎಸ್. ಸೋಮನಾಥ್ ಅವರಾಗಲಿ ಭಾಷಣ ಮಾಡುವಾಗ ಸದಾ ಇಂಗ್ಲಿಷ್‌ನಲ್ಲೇ ಮಾತನಾಡಿದ್ದರು, ಹೊರತು ಅವರದ್ದು ಹೈಫೈ ಇಂಗ್ಲಿಷ್ ಅಲ್ಲ.
ವಿಜ್ಞಾನಕ್ಕೂ ಇಂಗ್ಲಿಷ್ ಭಾಷೆಗೂ ನಂಟಿಲ್ಲ
ವಿಜ್ಞಾನ ಕಲಿಯಲು ಇಂಗ್ಲಿಷ್ ಭಾಷೆ ಚೆನ್ನಾಗಿ ಅರಿತಿರಬೇಕು, ನಾನು ಕನ್ನಡ ಮೀಡಿಯಂನಲ್ಲಿ ಓದಿದ ಕಾರಣದಿಂದ ನನಗೆ ಸೈನ್ಸ್ ಅಥವಾ ವಿಜ್ಞಾನ ಕಷ್ಟವಾಯಿತು ಎಂದು ಹೇಳುವ ಹಲವರನ್ನು ಕಂಡಿದ್ದೇವೆ. ಆದರೆ ವಿಜ್ಞಾನವನ್ನು ಕಲಿಯಲು ಖಂಡಿತ ಭಾಷೆಯ ಅಗತ್ಯವಿಲ್ಲ. ಇಂಗ್ಲಿಷ್ ಕೇವಲ ಒಂದು ಸಂವಹನ ಭಾಷೆಯಷ್ಟೇ. ವಿಜ್ಞಾನದಲ್ಲಿ ಥಿಯರಿಗಳು ಇಂಗ್ಲಿಷ್‌ನಲ್ಲಿ ಇರುವುದು ನಿಜ, ಆದರೆ ಪ್ರಾಯೋಗಿಕ ವಿಜ್ಞಾನಕ್ಕೆ ಭಾಷೆಯ ಅಗತ್ಯ ಖಂಡಿತ ಇಲ್ಲ. ವಿಜ್ಞಾನ ಎನ್ನುವುದು ಪ್ರಯೋಗಶಾಲೆ, ಸಂಪೂರ್ಣ ವಿಜ್ಞಾನದ ಜಗತ್ತು ಸಾಗುವುದು ಪ್ರಯೋಗದ ಮೇಲೆಯೆ. ಹಾಗಾದರೆ ಪ್ರಾಯೋಗಿಕ ಅಧ್ಯಯನಕ್ಕೆ ಭಾಷೆ ಏಕೆ ಬೇಕು ಹೇಳಿ. ಹಾಗಾಗಿ ವಿಜ್ಞಾನ, ಸಂಶೋಧನೆ, ವಿಜ್ಞಾನಿಗಳ ವಿಚಾರದಲ್ಲಿ ನಮ್ಮ ನಿಲುವು ಖಂಡಿತ ಬದಲಾಗಬೇಕು.
ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕೆ ಇಸ್ರೋದ ವಿಜ್ಞಾನಿಗಳು ಹಿಂದೇಟು ಹಾಕಿದ್ದರೆ ಇಂದು ಚಂದ್ರನಲ್ಲಿ ಭಾರತಾಂಬೆಯ ಪತಾಕೆಯನ್ನು ಹಾರಿಸಲು ಸಾಧ್ಯವಾಗುತ್ತಿತ್ತೇ? ಚಂದ್ರಯಾನದಂತಹ ಹಲವು ಅನ್ವೇಷಣೆ, ಸಾಧನೆಗಳಿಗೆ ಭಾಷೆಯೇ ಮೂಲವಾಗಿದ್ದರೆ ಇಂದು ಭಾರತ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತೇ ಎಂದು ನಾವೆಲ್ಲರೂ ಖಂಡಿತ ಯೋಚಿಸಬೇಕು.
ವಿಜ್ಞಾನಿಗಳಾಗಬೇಕು ಎಂದರೆ ಆಕ್ಸ್‌ಫರ್ಡ್, ಸ್ಟಾಕ್‌ಹೋಮ್ ವಿಶ್ವವಿದ್ಯಾಲಯಗಳಲ್ಲೇ ಓದಬೇಕು ಎಂಬುದೂ ಇಲ್ಲ. ಪೋಸ್ಟ್ ಡಾಕ್ ಮಾಡಿದವರಷ್ಟೇ ವಿಜ್ಞಾನಿಗಳಾವುದು ಎಂಬ ನಿಯಮವೂ ಇಲ್ಲ. ಸ್ನಾತಕೋತ್ತರ ಪದವಿ ಓದಿದವನು ವಿಜ್ಞಾನಿಯಾಗಬಹುದು. ಆದರೆ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದ ಕುರಿತು ಆಳವಾದ ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯ.
ಮಾತೃಭಾಷೆಯಲ್ಲಿ ಓದಿದವರು ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕೆ ಎಂದಿಗೂ ಕೀಳರಿಮೆ ಇರಿಸಿಕೊಳ್ಳಬೇಡಿ. ಒಮ್ಮೆ ಇಸ್ರೋ ವಿಜ್ಞಾನಿಗಳು ಚಂದ್ರಯಾನವನ್ನು ನೆನಪಿಸಿಕೊಳ್ಳಿ. ಭಾರತ ದೇಶದ ಮುಕುಟಕ್ಕೆ ಇನ್ನೊಂದು ಗರಿ ಮೂಡಿಸಿದ ಹೆಮ್ಮೆ ಇಸ್ರೋದಲ್ಲಿ ಸಂಸ್ಥೆಯ ವಿಜ್ಞಾನಿಗಳು ಓದಿದ್ದು ಮಾತೃಭಾಷೆಯಲ್ಲೇ ಎಂಬುದನ್ನು ಮರೆಯದಿರಿ.
ಈ ವಿಷಯವಾಗಿ ರಂಗಸ್ವಾಮಿ ಮೂಕನಹಳ್ಳಿಯವರು ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇವರ ಬರಹಕ್ಕೆ ಹಲವರು ಕಾಮೆಂಟ್ ಮಾಡಿದ್ದು, ವಿಜ್ಞಾನಕ್ಕೆ ಇಂಗ್ಲಿಷ್ ಭಾಷೆ ಮುಖ್ಯವಲ್ಲ ಎಂಬುದನ್ನೇ ಹೇಳಿದ್ದಾರೆ.
ರಂಗಸ್ವಾಮಿ ಮೂಕನಹಳ್ಳಿ ಬರಹ
ಇಸ್ರೋ ವಿಜ್ಞಾನಿಗಳ ಭಾಷಣ ಕೇಳಿದಿರಾ ? ಇಂಗ್ಲಿಷ್ , ಹಿಂದಿ ಎರಡೂ ಪರವಾಗಿಲ್ಲ , ಓಕೆ . ಅರ್ಥ ಸಿಂಪಲ್ , ಮಾತೃ ಭಾಷೆಯಲ್ಲಿ ಓದಿದವರು ಅವರೆಲ್ಲಾ ! ಕನ್ನಡ , ತೆಲುಗು , ತಮಿಳು , ಮಲಯಾಳಂ ಮಾಧ್ಯಮದಲ್ಲಿ ಓದಿ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇಂಗ್ಲಿಷ್ ಬೇಕು, ಬರದಿದ್ದರೆ ಕೀಳರಿಮೆ ಬೇಡ.
ಬಾಹ್ಯಾಕಾಶ ವಿಜ್ಞಾನದ ಅರಿವು ಸಾಕು: ದುಗು ಲಕ್ಷ್ಮಣ್
ರಂಗಸ್ವಾಮಿ ಮೂಕನಹಳ್ಳಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು ಈ ವಿಚಾರ ಒಪ್ಪಿಕೊಂಡಿದ್ದಾರೆ. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ್ ಪ್ರತಿಕ್ರಿಯಿಸಿ, ‘ಬಾಹ್ಯಾಕಾಶ ಸಂಶೋಧನೆ ಪ್ರಯೋಗಗಳಿಗೆ ಬಾಹ್ಯಾಕಾಶ ವಿಜ್ಞಾನದ ಅರಿವು ಇದ್ದರೆ ಸಾಕು. ಇಂಗ್ಲಿಷ್ ಭಾಷೆ ಚೆನ್ನಾಗಿ ಬರಬೇಕೆಂದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ವಿಜ್ಞಾನಿಗಳೆಂದರೆ ಟೈ, ಸೂಟುಬೂಟು,ಠುಸ್ ಪುಸ್ ಇಂಗ್ಲಿಷ್ ಮಾತಾಡುವ ಕಲೆ ಗೊತ್ತಿರಬೇಕಿಲ್ಲ ಎಂಬುದಕ್ಕೆ ನಿನ್ನೆ ಬೆಂಗಳೂರು ಇಸ್ರೋ ನಿಯಂತ್ರಣ ಕಚೇರಿಯಲ್ಲಿ ಕೊನೆಯ ಕ್ಷಣದ ಕಾತರಕ್ಕಾಗಿ ,ಕುತೂಹಲಕ್ಕಾಗಿ ಸಾಧಾರಣ, ಮಾಮೂಲಿ ಉಡುಗೆ ತೊಡುಗೆ ಧರಿಸಿ, ಅಷ್ಟೇ ಸಹಜವಾಗಿ ಕಾಣಿಸಿಕೊಂಡ ವಿಜ್ಞಾನಿಗಳ ತಂಡವೇ ಸಾಕ್ಷಿ. ಇಡೀ ತಂಡ ಒಂದು ಅನ್ಯೋನ್ಯ ಕುಟುಂಬದ ಸದಸ್ಯರಂತೆ ಕಂಡುಬಂದಿದ್ದು ಇನ್ನೊಂದು ಗಮನಾರ್ಹ ಸಂಗತಿ. ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಓದಿದ್ದು, ಮಾಸ್ಟರ್ ಡಿಗ್ರಿ ಮಾಡಿದ್ದು ಎಲ್ಲ ಭಾರತದಲ್ಲೇ. ಕೇರಳ ಮತ್ತು ಬೆಂಗಳೂರಿನಲ್ಲೇ. ದೂರದ ಕೇಂಬ್ರಿಡ್ಜ್,ಆಕ್ಸ್ಫರ್ಡ್ ಇತ್ಯಾದಿ ಯಾವ ಹೋರದೇಶದ ಯೂನಿವರ್ಸಿಟಿ ಗಳಿಗೆ ಹೋಗಿ ಕಲಿಯಲಿಲ್ಲ. ಭಾರತದಲ್ಲೇ ಉನ್ನತ ಜ್ಞಾನ ವಿಜ್ಞಾನ ಪಡೆಯಬಹುದು ಎಂಬುದು ಸಾಬೀತಾದಂತಾಯಿತಲ್ಲವೇ?ಮಾತೆತ್ತಿದರೆ ತಮ್ಮ ಮಕ್ಕಳನ್ನು ಉನ್ನತ ಅಧ್ಯಯನಕ್ಕೆ ವಿದೇಶಗಳಿಗೆ ಅಟ್ಟುವ, ಅನಂತರ ಅವರೆಲ್ಲ ಎಲ್ಲಿ ಕಳೆದುಹೋಗುತ್ತಾರೆ ಎಂಬುದರ ಬಗ್ಗೆ ತಲೆ ಯನ್ನೇ ಕೆಡಿಸಿಕೊಳ್ಳದ ಪೋಷಕರು ಇಸ್ರೋ ಸಾಧನೆಯಿಂದ ಒಂದಿಷ್ಟಾದರೂ ಪಾಠ ಕಳಿತುಕೊಳ್ಳುವುದು ಒಳಿತು’ ಎಂದು ಕಿವಿಮಾತು ಹೇಳಿದ್ದಾರೆ.