Electric Wheel Chair: ವಿಕಲಚೇತನರಿಗೆ ಸಿಹಿ ಸುದ್ದಿ, ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದೆ ನಿಲ್ಲುವ ವೀಲ್‌ಚೇರ್‌, ಏನಿದರ ವಿಶೇಷ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Electric Wheel Chair: ವಿಕಲಚೇತನರಿಗೆ ಸಿಹಿ ಸುದ್ದಿ, ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದೆ ನಿಲ್ಲುವ ವೀಲ್‌ಚೇರ್‌, ಏನಿದರ ವಿಶೇಷ

Electric Wheel Chair: ವಿಕಲಚೇತನರಿಗೆ ಸಿಹಿ ಸುದ್ದಿ, ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದೆ ನಿಲ್ಲುವ ವೀಲ್‌ಚೇರ್‌, ಏನಿದರ ವಿಶೇಷ

ಮದ್ರಾಸ್‌ ಐಐಟಿಯು ವಿಕಲಚೇತನರು ಬಳಸುವ ವೀಲ್‌ ಚೇರ್‌ ಅನ್ನು ಇನ್ನಷ್ಟು ಸುಧಾರಿತ ರೀತಿಯಲ್ಲಿ ಹೊರ ತಂದಿದೆ. ಇದರ ವಿಶೇಷ ಇಲ್ಲಿದೆ.ವರದಿ: ಪ್ರಿಯಾಂಕ ಗೌಡ, ಬೆಂಗಳೂರು

ಮದ್ರಾಸ್‌ ಐಐಟಿ ಅಭಿವೃದ್ದಿಪಡಿಸಿದ ವೀಲ್‌ ಚೇರ್‌
ಮದ್ರಾಸ್‌ ಐಐಟಿ ಅಭಿವೃದ್ದಿಪಡಿಸಿದ ವೀಲ್‌ ಚೇರ್‌

ಚೆನ್ನೈ: ಗಾಲಿ ಕುರ್ಚಿ ಅಥವಾ ವ್ಹೀಲ್ ಚೇರ್ ಗಳು ನಡೆಯಲು ಸಾಧ್ಯವಾಗದವರಿಗೆ ಬಹಳ ಉಪಯುಕ್ತ ಸಾಧನವಾಗಿದೆ. ಇದರಲ್ಲಿ ವಿದ್ಯುತ್ ಚಾಲಿತ ಗಾಲಿ ಕುರ್ಚಿಗಳು ಸಹ ಇದ್ದು, ಇವುಗಳನ್ನು ಯಾರ ಸಹಾಯವಿಲ್ಲದೇ ಕುಳಿತವರೇ ಬಟನ್ ಒತ್ತುವ ಮೂಲಕ ತಮಗೆ ಬೇಕಾದಲ್ಲಿಗೆ ಚಲಿಸಲು ಸಹಾಯಮಾಡುತ್ತದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರತಿಷ್ಠಿತ ಐಐಟಿ ಮದ್ರಾಸ್ ಸಂಸ್ಥೆಯು ವಿದ್ಯುತ್ ಚಾಲಿತ ನಿಂತುಕೊಳ್ಳುವ ಗಾಲಿ ಕುರ್ಚಿಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಬೆಂಗಳೂರು ಕೂಡ ನೆರವು ನೀಡುವ ಮೂಲಕ ಯೋಜನೆ ಸಾಕಾರಗೊಳ್ಳಲು ಸಹಕರಿಸಿರುವುದು ವಿಶೇಷ.

ಸಾಮಾನ್ಯವಾಗಿ ನಡೆಯಲು ಸಾಧ್ಯವಾಗದೆ ಗಾಲಿಕುರ್ಚಿಯಲ್ಲೇ ಕುಳಿತಿರುವವರಿಗೆ ತಾವೂ ನಿಂತುಕೊಳ್ಳಬೇಕು ಅನ್ನೋ ಆಸೆ ಇರುತ್ತದೆ. ಅದೆಷ್ಟೋ ಮಂದಿ ತಮಗೆ ನಿಂತುಕೊಳ್ಳುವಂತೆ ಆದರೂ ಸಾಕು ಅನ್ನೋ ಮನಸ್ಥಿತಿಯಲ್ಲಿರುತ್ತಾರೆ. ಅಂಥವರಿಗೆ ಸಹಾಯವಾಗುವಂತೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಮದ್ರಾಸ್ (ಐಐಟಿ ಮದ್ರಾಸ್) ಈ ವಿಭಿನ್ನ ನಿಯೋಸ್ಟ್ಯಾಂಡ್ ಗಾಲಿಕುರ್ಚಿಯನ್ನು ಅಭಿವೃದ್ಧಿಪಡಿಸಿದೆ.

ಒಂದು ಬಟನ್ ಒತ್ತಿದರೆ ಸಾಕು ನಿಯೋಸ್ಟ್ಯಾಂಡ್ ಗಾಲಿ ಕುರ್ಚಿಯು ಬಳಕೆದಾರರನ್ನು ಕುಳಿತುಕೊಳ್ಳುವ ಸ್ಥಾನದಿಂದ ನಿಂತಿರುವ ಸ್ಥಾನಕ್ಕೆ ಬದಲಾಯಿಸಲು ಸಾಧ್ಯವಾಗುತ್ತದೆ. ನಿಂತು ಮಾತನಾಡುವವರ ಬಳಿ ಅವರ ಕಣ್ಣಿನ ನೇರಕ್ಕೆ ನಿಂತೇ ಮಾತನಾಡಬಹುದು. ಕಾಫಿ ಅಥವಾ ಟೀ ಕುಡಿಯುತ್ತಾ ಆನಂದಿಸಬಹುದು. ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿರುವ ನಿಯೋಸ್ಟ್ಯಾಂಡ್ ಗಾಲಿಕುರ್ಚಿ, ಬಳಕೆದಾರರ ಅನುಕೂಲಕ್ಕಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ವಿದ್ಯುತ್ ಚಾಲಿತ ವ್ಹೀಲ್ ಚೇರ್ ಆಗಿದೆ.

ಬುಧವಾರದಂದು ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಈ ನಿಯೋಸ್ಟ್ಯಾಂಡ್ ಗಾಲಿಕುರ್ಚಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಐಐಟಿ ಮದ್ರಾಸ್‌ನ ಟಿಟಿಕೆ ಪುನರ್ವಸತಿ ಸಂಶೋಧನಾ ಕೇಂದ್ರ ಮತ್ತು ಸಾಧನ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾದ ಸುಜಾತಾ ಶ್ರೀನಿವಾಸನ್ ಅವರು ಈ ಯೋಜನೆಯನ್ನು ಮುನ್ನಡೆಸಿದವರು.

ಭಾರತದ ಮೊದಲ ನಿಲ್ಲಲ್ಪಡುವ ವಿದ್ಯುತ್ ಚಾಲಿತ ಗಾಲಿಕುರ್ಚಿ ನಿಯೋಸ್ಟ್ಯಾಂಡ್ ಸಾಧನದ ಅಭಿವೃದ್ಧಿಗೆ ಸುಜಾತಾ ಶ್ರೀನಿವಾಸನ್ ಕಾರಣರಾಗಿದ್ದಾರೆ. ಈ ಸಾಧನವನ್ನು ವಾಣಿಜ್ಯೀಕರಣಗೊಳಿಸಲಾಗಿದೆ. ಐಐಟಿ ಮದ್ರಾಸ್ ಇನ್ಕ್ಯುಬೇಟೆಡ್ ಸ್ಟಾರ್ಟ್-ಅಪ್ ನಿಯೋಮೋಷನ್ ಮೂಲಕ ಮಾರುಕಟ್ಟೆಗೆ ಕೊಂಡೊಯ್ಯಲು ತೀರ್ಮಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಯೋಸ್ಟ್ಯಾಂಡ್ ಗಾಲಿಕುರ್ಚಿಯು ಅದರ ವಿನ್ಯಾಸದೊಂದಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಇದು ಬಳಕೆದಾರರಿಗೆ ಸುದೀರ್ಘ ಗಂಟೆಗಳ ಕಾಲ ಕುಳಿತುಕೊಳ್ಳಲು ಮತ್ತು ಅಗತ್ಯವಿದ್ದಾಗ ಆರಾಮವಾಗಿ ನಿಲ್ಲಲು ಕೂಡ ಸಾಧ್ಯವಾಗಿಸಿದೆ. ಅಲ್ಲದೆ ಇದು ಆರೋಗ್ಯದ ತೊಂದರೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಬಳಕೆದಾರರು ಕುಳಿತುಕೊಂಡೇ ಇದ್ದಾಗ ನಿಂತುಕೊಳ್ಳುವಂತಹ ವಿಭಿನ್ನ ಪರಿಕರವಾಗಿದೆ. ಇದು ಬಳಕೆದಾರರ ಜೀವನದ ಗುಣಮಟ್ಟ ಮತ್ತು ತಮ್ಮ ಭಾಗವಹಿಸುವಿಕೆಯನ್ನು ಸುಧಾರಿಸಲು ಕೂಡ ಅನುವು ಮಾಡಿಕೊಡುತ್ತದೆ.

ವಾಸ್ತವವಾಗಿ ನಿಯೋಸ್ಟ್ಯಾಂಡ್‌ ವ್ಹೀಲ್ ಚೇರ್ ಯೋಜನೆಯನ್ನು ಟಾಟಾ ಎಲ್ಕ್ಸಿ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮದ ಅಡಿಯಲ್ಲಿ ಪ್ರಾಯೋಜಿಸಿದೆ. ಅಭಿವೃದ್ಧಿ ಮತ್ತು ವಿನ್ಯಾಸವನ್ನು ಐಐಟಿ ಮದ್ರಾಸ್ ಮತ್ತು ಟಿಟಿಕೆ ಸೆಂಟರ್ ಫಾರ್ ರಿಹ್ಯಾಬಿಲಿಟೇಶನ್ ರಿಸರ್ಚ್ ಅಂಡ್ ಡಿವೈಸ್ ಡೆವಲಪ್‌ಮೆಂಟ್ ನೇತೃತ್ವ ವಹಿಸಿದೆ. ಇದು ಈ ಉತ್ಪನ್ನವನ್ನು ಮಾರುಕಟ್ಟೆಗೆ ತರುವಲ್ಲಿ ಮುಂದಾಳತ್ವ ವಹಿಸಿದೆ ಎಂದು ಬ್ಯುಸಿನೆಸ್ ಲೈನ್ ವರದಿ ತಿಳಿಸಿದೆ.

ಈಗಾಗಲೇ ಹಲವು ರೀತಿಯ ವೀಲ್‌ಚೇರ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ಇದು ಮುಂದುವರೆದ, ತಂತ್ರಜ್ಞಾನವನ್ನು ಬಳಸಿ ರೂಪಿಸಿರುವ ಉಪಕರಣ. ಇದರಿಂದ ಬಳಸುವವರು ಸಕ್ರಿಯವಾಗಿರಲು ಇದು ನೆರವಾಗಲಿದೆ. ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಎಲ್ಲ ಕಡೆಯೂ ಮುಂದಿನ ದಿನಗಳಲ್ಲಿ ಸಿಗಲಿದೆ. ಇದಕ್ಕಾಗಿ ಕೆಲವು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿದೆ ಎನ್ನುವುದು ಉಪಕರಣದ ಸಂಶೋಧಕರ ನುಡಿ.

(ವರದಿ: ಪ್ರಿಯಾಂಕಗೌಡ, ಬೆಂಗಳೂರು)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.