ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ; 31 ನಕ್ಸಲರ ಹತ್ಯೆಗೈದ ಭದ್ರತಾ ಪಡೆ, ಇಬ್ಬರು ಪೊಲೀಸರು ಹುತಾತ್ಮ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ; 31 ನಕ್ಸಲರ ಹತ್ಯೆಗೈದ ಭದ್ರತಾ ಪಡೆ, ಇಬ್ಬರು ಪೊಲೀಸರು ಹುತಾತ್ಮ

ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ; 31 ನಕ್ಸಲರ ಹತ್ಯೆಗೈದ ಭದ್ರತಾ ಪಡೆ, ಇಬ್ಬರು ಪೊಲೀಸರು ಹುತಾತ್ಮ

ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ 31ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಭದ್ರತಾ ಪಡೆಯ ಇಬ್ಬರು ಪೊಲೀಸರು ಕೂಡಾ ಪ್ರಾಣ ಚೆಲ್ಲಿದ್ದಾರೆ.

ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ; 31  ನಕ್ಸಲರ ಹತ್ಯೆಗೈದ ಭದ್ರತಾ ಪಡೆ
ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ; 31 ನಕ್ಸಲರ ಹತ್ಯೆಗೈದ ಭದ್ರತಾ ಪಡೆ (PTI/File)

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 31ಮಂದಿ ನಕ್ಸಲರು ಹತ್ಯೆಗೀಡಾಗಿದ್ದಾರೆ. ಇದೇ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ಭಾನುವಾರ (ಫೆ.9) ತಿಳಿಸಿದ್ದಾರೆ. ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಪ್ರಾರಂಭಿಸಿದ ಕಾರ್ಯಾಚರಣೆಯಲ್ಲಿ ಇತ್ತೀಚೆಗಷ್ಟೇ 8 ನಕ್ಸಲರು ಹತ್ಯೆಗೀಡಾಗಿದ್ದರು. ಅದಾದ ಒಂದು ವಾರದೊಳಗೆ ಮತ್ತೊಂದು ಎನ್‌ಕೌಂಟರ್ ನಡೆದಿದೆ. ಒಂದು ವರ್ಷದೊಳಗೆ ದೇಶದಲ್ಲಿ ನಕ್ಸಲರನ್ನು ನಿರ್ನಾಮ ಮಾಡುತ್ತೇವೆ ಎಂದು ಗೃಹ ಸಚಿವ ಅಮಿತ್‌ ಶಾ ಕೆಲವೇ ದಿನಗಳ ಹಿಂದೆ ಪ್ರತಿಜ್ಞೆ ಮಾಡಿದ್ದರು. ಅದರ ಬೆನ್ನಲ್ಲೇ ಈ ಎನ್‌ಕೌಂಟರ್‌ ನಡೆದಿದೆ.

ಈ ಪ್ರದೇಶದಲ್ಲಿ ನಕ್ಸಲರ ಉಪಸ್ಥಿತಿ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಶುಕ್ರವಾರ (ಫೆ.7) ಪ್ರಾರಂಭಿಸಲಾದ ಕಾರ್ಯಾಚರಣೆಯಲ್ಲಿ ಜಿಲ್ಲಾ ಮೀಸಲು ಪಡೆ ಮತ್ತು ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆಯ ಸಿಬ್ಬಂದಿ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಜನವರಿ 31ರಂದು ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಗುಂಡಿನ ಚಕಮಕಿ ನಡೆದಿತ್ತು. 8 ನಕ್ಸಲರು ಸಾವನ್ನಪ್ಪಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಶಪಥ ಮಾಡಿದ್ದ ಅಮಿತ್‌ ಶಾ

ಇದೇ ಬಿಜಾಪುರದಲ್ಲಿ ನಕ್ಸಲರು ಐಇಡಿ ಬಳಸಿ ವಾಹನವನ್ನು ಸ್ಫೋಟಿಸಿದ ಘಟನೆ ನಡೆದಿತ್ತು. ಘಟನೆಯಲ್ಲಿ ಜಿಲ್ಲಾ ಮೀಸಲು ಪಡೆಯ 8 ಮಂದಿ ಜವಾನರು ಮತ್ತು ಒಬ್ಬ ಚಾಲಕ ಪ್ರಾಣ ಕಳೆದುಕೊಂಡಿದ್ದರು. ಅದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನವರಿ 6ರಂದು ಮಾತನಾಡಿ, 2026ರ ವೇಳೆಗೆ ದೇಶದಲ್ಲಿ ನಕ್ಸಲಿಸಂ ಕೊನೆಗೊಳಿಸುವ ಶಪಥ ಮಾಡಿದ್ದರು. ಕೇಂದ್ರ ಸರ್ಕಾರದ ಪ್ರತಿಜ್ಞೆಗೆ ಅನುಗುಣವಾಗಿ ಭದ್ರತಾ ಕಾರ್ಯಾಚರಣೆಗಳು ನಡೆದಿವೆ.

ನಕ್ಷಲರು ನಡೆಸಿದ ದಾಳಿಯು, ಕಳೆದ ಎರಡು ವರ್ಷಗಳಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ನಕ್ಸಲರು ನಡೆಸಿದ ಅತಿದೊಡ್ಡ ದಾಳಿಯಾಗಿದೆ ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 2023ರ ಏಪ್ರಿಲ್ 26ರಂದು, ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬೆಂಗಾವಲು ವಾಹನದ ಜೊತೆಗಿದ್ದ ವಾಹನವನ್ನು ನಕ್ಸಲರು ಸ್ಫೋಟಿಸಿದ್ದರು. ಘಟನೆಯಲ್ಲಿ ಹತ್ತು ಪೊಲೀಸ್ ಸಿಬ್ಬಂದಿ ಮತ್ತು ಚಾಲಕ ಸಾವನ್ನಪ್ಪಿದ್ದರು.

ಸುದೀರ್ಘ ಕಾರ್ಯಾಚರಣೆ

ಆರಂಭದಲ್ಲಿ 12 ನಕ್ಷಲರ ಹತ್ಯೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ, ಕಾರ್ಯಾಚರಣೆಯು ಸುದೀರ್ಘ ಅವಧಿಗೆ ಮುಂದುವರೆದಿದ್ದು, ಮಧ್ಯಾಹ್ನ 1:50ರ ವೇಳೆಗೆ 31ಮಂದಿ ನಕ್ಸಲರ ಹತ್ಯೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.