ಸಮೀಕ್ಷೆಗಳನ್ನು ಹುಸಿ ಮಾಡಿದ ಛತ್ತೀಸ್ಗಢ ಮತದಾರ; ಕಾಂಗ್ರೆಸ್ ಸೋಲಿಗೆ ಕಾರಣವಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ
Chhattisgarh Assembly Election 2023 result: ಛತ್ತೀಸ್ಗಢದಲ್ಲಿ ಬಿಜೆಪಿ ಬೆಂಬಲಿಸಿದ ಬುಡಕಟ್ಟು-ಒಬಿಸಿ ಸಮುದಾಯಗಳು; ಸಮೀಕ್ಷೆಗಳನ್ನು ಹುಸಿ ಮಾಡಿದ ಛತ್ತೀಸ್ಗಢ ಮತದಾರ; ಕಾಂಗ್ರೆಸ್ ಸೋಲಿಗೆ ಕಾರಣವಾದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ- ಈ ಕುರಿತು ಎಚ್.ಮಾರುತಿ ಅವರ ವಿಶೇಷ ವರದಿ ಇಲ್ಲಿದೆ.

ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಮರು ಆಯ್ಕೆಯಾಗಲಿದೆ ಎಂದು ವಿಧಾನಸಭೆ ಚುನಾವಣೆ ಬಳಿಕ ಬಹುತೇಕ ಎಲ್ಲಾ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಈ ಭವಿಷ್ಯವಾಣಿಯನ್ನು ಬುಡಮೇಲು ಮಾಡಿರುವ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಛತ್ತೀಸ್ಗಢ ಬುಡಕಟ್ಟು ರಾಜ್ಯ. ಶೇ. 50ರಷ್ಟು ನಾಗರೀಕರು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯಗಳ ಜನರು. ಇಂತಹ ಬುಡಕಟ್ಟು ರಾಜ್ಯದಲ್ಲಿ ಪ್ರಬಲ ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿ ಮರಳಿ ಗದ್ದುಗೆ ಹಿಡಿಯುವುದು ಸುಲಭದ ಮಾತಲ್ಲ.
2018ರಲ್ಲಿ ಇಲ್ಲಿನ 90 ಸ್ಥಾನಗಳ ಪೈಕಿ ಕಾಂಗ್ರೆಸ್ 65 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಭಾರಿ ಬಹುಮತದ ಜಯ ಗಳಿಸಿತ್ತು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಕೇವಲ 15 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಈಗ ಫಲಿತಾಂಶ ಪುನರಾವರ್ತನೆಯಾಗಿದೆ.ಹಾಗೆಂದು ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಲಾಗದು. ಸ್ಥಾನಗಳ ಸಂಖ್ಯೆಯಲ್ಲಿ ಕಾಂಗ್ರೆಸ್ ಸೋತಿದ್ದರೂ ಶೇಕಡಾವಾರು ಮತಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿ ಶೇ.46.35 ರಷ್ಟು ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಶೇ.42.13 ರಷ್ಟು ಮತ ಗಳಿಸಿದೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸ್ವಚ್ಚ ದಕ್ಷ ಆಡಳಿತಕ್ಕಿಂತ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳು, ಸ್ವಜನ ಪಕ್ಷಪಾತದಂತಹ ವಿಷಯಗಳಿಗೆ ಸದ್ದು ಮಾಡಿದ್ದು ಹೆಚ್ಚು. ಇದೇ ಕಾರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಗೆಲುವಿಗೆ ಕಾರಣವಾಗಿರುವ ಅಂಶಗಳಿಗಿಂತ ಕಾಂಗ್ರೆಸ್ ಸೋಲಿಗೆ ಕಾರಣವಾಗಿರುವ ಅಂಶಗಳೇ ಹೆಚ್ಚು ಎಂದು ಬುಡಕಟ್ಟು ರಾಜ್ಯದ ಫಲಿತಾಂಶವನ್ನು ವಿಶ್ಲೇಷಿಸಬಹುದು.
ಮಹದೇವ್ ಬೆಟ್ಟಿಂಗ್ ಆಪ್ ಸುಮಾರು 508 ಕೋಟಿ ರೂ.ಗಳ ಹಗರಣ. ಈ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದ್ದು ಪ್ರಧಾನಿ ಮೋದಿ ಈ ಹಗರಣವನ್ನು ಸಮರ್ಥವಾಗಿ ಜನರ ಮುಂದೆ ತೆರದಿಟ್ಟಿದ್ದರು. ರೆಡ್ ಡೈರಿ ಅಥವಾ ಕೆಂಪು ಡೈರಿ ಮತ್ತೊಂದು ಹಗರಣ. 2020ರಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮನೆಯ ಮೇಲೆ ದಾಳಿ ನಡೆದಾಗ ಈ ಡೈರಿ ಸಿಕ್ಕಿತ್ತು. ಈ ಡೈರಿಯಲ್ಲಿ ಕೈ ಮುಖಂಡರಿಗೆ ಹಣ ಸಂದಾಯವಾಗಿರುವ ಬಗ್ಗೆ ದಾಖಲೆಗಳಿದ್ದವು.
ಕಳೆದ 5 ವರ್ಷಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿತ್ತು ಎಂದು ಹೇಳಲಾಗುತ್ತಿದೆ. 2021-22ರಲ್ಲಿ ನಡೆದ ಸರ್ಕಾರಿ ಉದ್ಯೋಗಗಳಿಗೆ ನಡೆದ ನೇಮಕಾತಿಯಲ್ಲಿ ಛತ್ತೀಸ್ಗಢ ಲೋಕಸೇವಾ ಆಯೋಗವು ರಾಜಕಾರಣಿ, ಅಧಿಕಾರಿಗಳು, ಮತ್ತು ಉದ್ಯಮಿಗಳ ಸಂಬಂಧಿಕರನ್ನು ಆಯ್ಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸುವಂತೆ ಸ್ಥಳೀಯ ಬಿಜೆಪಿ ಪ್ರಧಾನಿಗಳಿಗೆ ಪತ್ರ ಬರೆದಿತ್ತು.
ಪಕ್ಷಪಾತಕ್ಕೂ ಬಘೇಲ್ ಸರ್ಕಾರ ಕುಖ್ಯಾತಿ ಪಡೆದಿತ್ತು ಎನ್ನಲಾಗುತ್ತಿದೆ. ಈ ಸಂಬಂಧ ಬಿಜೆಪಿ 104 ಪುಟಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಿತ್ತು. ರಾಜ್ಯದ ಮೂರನೇ ಒಂದರಷ್ಟು ನಾಗರೀಕರು ಬುಡಕಟ್ಟು ಸಮುದಾಯಗಳಿಗೆ ಸೇರಿದವರಾಗಿದ್ದರೂ ಅವರ ಸಮಸ್ಯೆಗಳಿಗೆ ಕಾಂಗ್ರೆಸ್ ಸ್ಪಂದಿಸಿರಲಿಲ್ಲ ಎಂಬ ಆರೋಪವಿತ್ತು. ಬುಡಕಟ್ಟು ಜನರ ನೀರು, ಅರಣ್ಯ ಮತ್ತು ಭೂಮಿ ರಕ್ಷಣೆಗೆ ಭಘೇಲ್ ಸರ್ಕಾರ ಉದಾಸೀನ ಮಾಡಿತ್ತು ಎಂಬ ಕಾರಣಕ್ಕೆ ಇವರು ಬಿಜೆಪಿ ಕೈ ಹಿಡಿದಿದ್ದರು.
ಕಾಂಗ್ರೆಸ್ ಸರಕಾರ ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿಯೇ ಇಲ್ಲ ಎಂದು ಹೇಳುವಂತಿಲ್ಲ. ಬಜೆಟ್ನ ಬಹುತೇಕ ಅನುದಾನವನ್ನು ರೈತರ ಕಲ್ಯಾಣ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿತ್ತು. ಆದರೆ ನಗರ ಪ್ರದೇಶಗಳನ್ನು ನಿರ್ಲಕ್ಷಿಸಿತ್ತು. ನಗರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳೇ ಇರಲಿಲ್ಲ ಎಂದು ನಗರವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಮೀಸಲಾತಿಯನ್ನು ಶೇ.76ಕ್ಕೆ ಹೆಚ್ಚಿಸುವ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ಅಂಗೀಕರಿಸಿತ್ತು. ಆದರೆ ರಾಜ್ಯಪಾಲರು ಈ ಮಸೂದೆಗೆ ಅನುಮತಿ ನೀಡಿರಲಿಲ್ಲ. ಕಾಂಗ್ರೆಸ್ ಸೋಲಿಗೆ ಇದೂ ಒಂದು ಕಾರಣ ಎನ್ನಲಾಗುತ್ತಿದೆ.
ಮತದಾನಕ್ಕೆ ನಾಲ್ಕು ದಿನಗಳಿರುವಾಗ ಬಿಜೆಪಿ, ಮೋದಿ ಕಿ ಗ್ಯಾರಂಟಿ ಹೆಸರಿನಲ್ಲಿ ನೀಡಿದ ಭರವಸೆಗಳು ಹೆಚ್ಚಿನ ಸ್ಥಾನಗಳನ್ನು ತಂದುಕೊಟ್ಟಿವೆ. ರೂ.500 ಕ್ಕೆ ಒಂದು ಸಿಲಿಂಡರ್, ಮಹಿಳೆಗೆ ವಾರ್ಷಿಕ 12,000 ರೂಪಾಯಿ ಘೋಷಣೆ ಮಾಡಿದ್ದು ವರದಾನವಾಗಿ ಪರಿಣಮಿಸಿವೆ. ಸಿಎಂ ಬಘೇಲ್ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಪ್ರತಿತಂತ್ರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅರುಣ್ ಸಾವೋ ಅವರನ್ನು ನೇಮಿಸಿತ್ತು. ಇದೀಗ ಇವರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹೈ ವೋಲ್ಟೇಜ್ ಪ್ರಚಾರ ನಡೆಸಿತ್ತು. ಬಿಜೆಪಿ ಪ್ರಚಾರದ ಮುಂದೆ ಕಾಂಗ್ರೆಸ್ ಮಂಕಾಗಿತ್ತು. ಆದರೂ ಎಲ್ಲೋ ಒಂದು ಕಡೆ ಬುಡಕಟ್ಟು ಮತ್ತು ಒಬಿಸಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂಬ ಆತ್ಮವಿಶ್ವಾಸ ಕೈ ಪಡೆಗೆ ಮುಳುವಾಗಿದೆ.
ವರದಿ: ಎಚ್. ಮಾರುತಿ