ಛತೀಸ್‌ಗಢದಲ್ಲಿ ರಮಣ್ ಸಿಂಗ್‌ಗೆ ಗೆಲುವು; 15 ವರ್ಷ ಸಿಎಂ ಆಗಿದ್ದ ಆಯುರ್ವೇದ ಪದವೀಧರ ರಮಣ್ ಸಿಂಗ್ ಕುರಿತ 10 ಆಸಕ್ತಿದಾಯಕ ವಿಷಯಗಳಿವು
Chhattisgarh Assembly Elections: ಛತೀಸ್‌ಗಢದಲ್ಲಿ ಬಿಜೆಪಿ ಗೆಲುವಿನ ನಗೆಬೀರಿದೆ. ಈ ಗೆಲುವು ವೈಯಕ್ತಿಕವಾಗಿ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್‌ಗೂ ದೊಡ್ಡ ಗೆಲುವಾಗಿದೆ. 2018ರಲ್ಲಿ ಕಾಂಗ್ರೆಸ್ ವಿರುದ್ಧ ಸೋಲು ಅನುಭವಿಸಿದ್ದ ಇವರು ಇದಕ್ಕೂ ಮುನ್ನ ಛತೀಸ್‌ಗಢದಲ್ಲಿ 15 ವರ್ಷ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು.

ಬೆಂಗಳೂರು: ಛತೀಸ್‌ಗಢದಲ್ಲಿ ಆಡಳಿತರೂಢ ಕಾಂಗ್ರೆಸ್‌ಗೆ ಸೋಲಾಗಿದೆ. 2018ರ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದ್ದ ಬಿಜೆಪಿಗೆ ಬಹುಮತ ದೊರಕಿದೆ. ಈ ಗೆಲುವು ಮೋದಿ ಮತ್ತು ಬಿಜೆಪಿಯ ಗೆಲುವು ಎಂದು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. ಬಿಜೆಪಿ ಮುಖಂಡ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಕುರಿತು ತಿಳಿದುಕೊಳ್ಳಬೇಕಾದ 10 ಅಂಶಗಳು ಇಲ್ಲಿವೆ.
ರಮಣ್ ಸಿಂಗ್ ಕುರಿತ 10 ಆಸಕ್ತಿದಾಯಕ ವಿಷಯಗಳಿವು
1. 1952ರ ಅಕ್ಟೋಬರ್ 15ರಂದು ಜನಿಸಿದ ರಮಣ್ ಸಿಂಗ್ ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018ರಲ್ಲಿ ಕಾಂಗ್ರೆಸ್ ವಿರುದ್ಧ ಸೋತ ಬಳಿಕ, 2019ರಿಂದ ಇವರು ಈ ಹುದ್ದೆಯಲ್ಲಿದ್ದಾರೆ.
2. ರಮಣ್ ಸಿಂಗ್ ಅವರು ಛತ್ತೀಸ್‌ಗಢ ವಿಧಾನಸಭಾ ಕ್ಷೇತ್ರದಲ್ಲಿ ರಾಜನಂದಗಾಂವ್ ಕ್ಷೇತ್ರವನ್ನು 2008ರಿಂದ ಪ್ರತಿನಿಧಿಸುತ್ತಿದ್ದರು. 2004ರಿಂದ 2008ರವರೆಗೆ ಡೊಂಗರಗಾವ್ ಅನ್ನು ಪ್ರತಿನಿಧಿಸುತ್ತಿದ್ದರು. ಸತತ 3 ವಿಧಾನಸಭಾ ಚುನಾವಣೆಗಳಲ್ಲಿ (2008, 2013 ಮತ್ತು 2018 ರಲ್ಲಿ) ರಾಜನಂದಗಾಂವ್ ಕ್ಷೇತ್ರದಿಂದ ಗೆದ್ದಿದ್ದಾರೆ.
3. ರಮಣ್ ಸಿಂಗ್ ಅವರು ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿಯಾಗಿ ದೀರ್ಘಕಾಲ ಆಳ್ವಿಕೆ ನಡೆಸಿದ ಎರಡನೇ ಮುಖ್ಯಮಂತ್ರಿ. ಇವರು 2003ರಿಂದ 2018ರವರೆಗೆ 15 ವರ್ಷಗಳ ಕಾಲ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
4. 1999 ರಲ್ಲಿ ಅವರು ಛತ್ತೀಸ್‌ಗಢದ ರಾಜನಂದಗಾಂವ್ ಕ್ಷೇತ್ರದಿಂದ 13 ನೇ ಲೋಕಸಭೆಗೆ ಆಯ್ಕೆಯಾದರು. ವಾಜಪೇಯಿ ಸರಕಾರದಲ್ಲಿ ಇವರು 1999ರಿಂದ 2003ರವರೆಗೆ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರಾಗಿದ್ದರು. 1999 ರಿಂದ 2003 ರವರೆಗೆ ರಾಜನಂದಗಾಂವ್‌ನಿಂದ ಲೋಕಸಭೆಯ ಸದಸ್ಯ ಮತ್ತು 1990 ರಿಂದ 1998 ರವರೆಗೆ ಕವರ್ಧಾದಿಂದ ಮಧ್ಯಪ್ರದೇಶ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
5. ಕವರ್ಧಾದಲ್ಲಿ ವಕೀಲರಾದ ವಿಘ್ನಹರನ್ ಸಿಂಗ್ ಠಾಕೂರ್ ಮತ್ತು ಸುಧಾ ಸಿಂಗ್‌ರ ಮಗನಾದ ರಮಣ್ ಸಿಂಗ್ ಅವರು 1972 ರಲ್ಲಿ ಬೆಮೆಟಾರಾ ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. 1975 ರಲ್ಲಿ ಅವರು ರಾಯ್‌ಪುರದ ಸರ್ಕಾರಿ ಆಯುರ್ವೇದಿಕ್ ಕಾಲೇಜಿನಲ್ಲಿ ಆಯುರ್ವೇದಿಕ್ ಮೆಡಿಸಿನ್ ಅನ್ನು ಅಧ್ಯಯನ ಮಾಡಿದರು. ಆಯುರ್ವೇದ ಓದಿರುವ ಇವರು ಬಳಿಕ ರಾಜಕೀಯ ರಂಗಕ್ಕೆ ಪ್ರವೇಶಿಸಿದರು.
6. ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳನ್ನು ಸುಧಾರಿಸುವ ಕಾರ್ಯಕ್ರಮಗಳಿಂದ ಇವು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ಛತ್ತೀಸ್‌ಗಢದಲ್ಲಿ ತಂದ ಸುಧಾರಣೆಯನ್ನು ವಿಶ್ವಸಂಸ್ಥೆ ಗುರುತಿಸಿತ್ತು.
7. 2002 ರಲ್ಲಿ ಛತ್ತೀಸ್‌ಗಢದಲ್ಲಿ ನಕ್ಸಲೀಯ ಸಂಘಟನೆಗಳನ್ನು ನಿಷೇಧಿಸಿದರು. ನಕ್ಸಲ್ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರು.
8. ಛತ್ತೀಸ್‌ಗಢದಲ್ಲಿ ಅಭಿವೃದ್ಧಿಪರ್ವ ಆರಂಭವಾಗಲು ಹಲವು ಕೊಡುಗೆಗಳನ್ನು ನೀಡಿದ್ದಾರೆ. ಜನರಿಗೆ ಉಚಿತ ಶೂಗಳನ್ನು ನೀಡುವ ಚರಣ್ ಪಾದುಕಾ ಯೋಜನೆ, ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಉಚಿತ ಬೈಸಿಕಲ್ ನೀಡುವ ಸರಸ್ವತಿ ಸೈಕಲ್ ಯೋಜನೆ, ಮುಖ್ಯ ಮಂತ್ರಿ ತೀರ್ಥ ಯಾತ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಪರಿಚಯಿಸಿದ್ದಾರೆ.
9. ರಮಣ್ ಸಿಂಗ್ ಅವರು ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಅವಾರ್ಡ್, ನ್ಯಾಷನಲ್ ಇ-ಗವರ್ನೆನ್ಸ್ ಅವಾರ್ಡ್, ಡಾ. ಎಪಿಜೆ ಅಬ್ದುಲ್ ಕಲಾಂ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ದೊರಕಿವೆ.
10. ಹೀಗೆ ಹದಿನೈದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ರಮಣ್ ಸಿಂಗ್ ಸರಕಾರವು 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಪಡೆಯಿತು. ಡಿಸೆಂಬರ್ 11, 2018ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದೀಗ ಐದು ವರ್ಷಗಳ ಬಳಿಕ ಮತ್ತೆ ಮುಖ್ಯಮಂತ್ರಿ ಸ್ಥಾನ ಏರುವ ಸಿದ್ಧತೆಯಲ್ಲಿದ್ದಾರೆ.