ಕನ್ನಡ ಸುದ್ದಿ  /  Nation And-world  /  Chinese Kali Temple In Kolkata: Kali Temple Serves Noodles, Chop Suey And Sticky Rice As Prasad

Chinese Kali Temple: ಭಾರತದಲ್ಲಿದೆ ಚೈನೀಸ್‌ ಕಾಳಿ ದೇಗುಲ, ದೇವಿಗೆ ಇಲ್ಲಿ ನೂಡಲ್ಸ್‌ ನೈವೇದ್ಯ, ಇದರ ಹಿಂದಿದೆ ಇಂಟ್ರಸ್ಟಿಂಗ್‌ ಸ್ಟೋರಿ

ಕೊಲ್ಕೊತ್ತಾದಲ್ಲಿರುವ ಕಾಳಿ ಮಾತಾ ದೇವಸ್ಥಾನವೂ ತನ್ನದೇ ಆದ ವಿನೂತನ ಪೂಜಾ ವಿಧಾನದಿಂದ ಹೆಸರುಗಳಿಸಿದೆ.

 Chinese Kali Temple: ಭಾರತದಲ್ಲಿದೆ ಚೈನೀಸ್‌ ಕಾಳಿ ದೇಗುಲ,  ದೇವಿಗೆ ಇಲ್ಲಿ ನೂಡಲ್ಸ್‌ ನೈವೇದ್ಯ, ಇದರ ಹಿಂದೆ ಇದೆ ಇಂಟ್ರಸ್ಟಿಂಗ್‌ ಸ್ಟೋರಿ
Chinese Kali Temple: ಭಾರತದಲ್ಲಿದೆ ಚೈನೀಸ್‌ ಕಾಳಿ ದೇಗುಲ, ದೇವಿಗೆ ಇಲ್ಲಿ ನೂಡಲ್ಸ್‌ ನೈವೇದ್ಯ, ಇದರ ಹಿಂದೆ ಇದೆ ಇಂಟ್ರಸ್ಟಿಂಗ್‌ ಸ್ಟೋರಿ (Photo: indianeagle)

ದೇಶದಲ್ಲಿ ಸಾವಿರಾರು ದೇವರು, ದೇವತೆಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಪ್ರತಿಯೊಂದು ದೇಗುಲವು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಇದು ಭಾರತದ ಬಹುಸಂಸ್ಕೃತಿಯ ವೈವಿಧ್ಯತೆಯ ಸಂಕೇತವೂ ಹೌದು. ಆಯಾ ಊರಿನ ಸಂಸೃತಿ, ಆಚಾರ ವಿಚಾರಗಳನ್ನು ದೇಗುಲಗಳ ಆಚರಣೆಗಳು ಪ್ರತಿಬಿಂಬಿಸುತ್ತವೆ.

ದೇವರಿಗೆ ಭಕ್ತರು ಹೃದಯಪೂರ್ವಕವಾಗಿ ಏನು ಬೇಕಾದರೂ ನೀಡಬಹುದು. ಬೇಡರ ಕಣ್ಣಪ್ಪನ್ನು ದೇವರಿಗೆ ತನ್ನ ಕಣ್ಣುಗಳನ್ನೇ ಕಿತ್ತುಕೊಟ್ಟಿರುವುದು ನೆನಪಿಗೆ ಬರಬಹುದು. ಇದೇ ರೀತಿ ದೇಶದಲ್ಲಿರುವ ದೇಗುಲಗಳ ಪೂಜಾ ಕ್ರಮಗಳಲ್ಲಿಯೂ ವೈವಿಧ್ಯತೆ ಕಾಣಬಹುದು.

ಭಾರತದಲ್ಲಿ ಕಾಳಿಮಾತೆಯ ದೇಗುಲಗಳು ಅಸಂಖ್ಯಾತ ಸಂಖ್ಯೆಯಲ್ಲಿ ಇವೆ. ಆದರೆ, ಕೊಲ್ಕೊತ್ತಾದಲ್ಲಿರುವ ಕಾಳಿ ಮಾತಾ ದೇವಸ್ಥಾನವೂ ತನ್ನದೇ ಆದ ವಿನೂತನ ಪೂಜಾ ವಿಧಾನದಿಂದ ಹೆಸರುಗಳಿಸಿದೆ.

ಕೊಲ್ಕೊತ್ತಾದ 12 ಕಿ.ಮೀ. ದೂರದಲ್ಲಿರುವ ಟಾಂಗ್ರಾ ನಗರದಲ್ಲಿರುವ ಈ ದೇವಸ್ಥಾನ ನಿರ್ಮಾತರು ಚೀನಿಯರು. ಈ ನಗರದಲ್ಲಿ ಇರುವವರು ಬಹುತೇಕರು ಚೀನಿಯರೇ. ಈನಗರಕ್ಕೆ ಚೀನಾ ಟೌನ್‌ ಎಂಬ ಹೆಸರೂ ಇದೆ.

ಈಗ ಭಾರತ ಮತ್ತು ಚೀನಾದ ನಡುವೆ ಗಡಿ ವಿವಾದ ಇರಬಹುದು. ಇಂಟರ್‌ನೆಟ್‌ ಮತ್ತು ಟೀವಿಗಳಲ್ಲಿ ಚೀನಾ ಭಾರತದ ನಡುವೆ ಸಂಘರ್ಷದ ಮಾಹಿತಿ ಪ್ರತಿದಿನ ಕಾಣಿಸಬಹುದು. ಆದರೆ, ಕೋಲ್ಕೊತ್ತಾದ ಈ ಚೀನಾ ಟೌನ್‌ನಲ್ಲಿ ಹಾಗೇನಿಲ್ಲ. ಇಲ್ಲಿರುವ ಚೀನಿಯರು ಕಾಳಿಮಾತೆಯ ಆರಾಧಕರು.

ಕೆಲವರ ಪ್ರಕಾರ ಸುಮಾರು 60 ವರ್ಷಗಳ ಹಿಂದೆ ಈ ನಗರದಲ್ಲಿ ಕಾಳಿ ದೇಗುಲವೇ ಇರಲಿಲ್ಲ. ಒಂದು ಮರದಡಿ ಕಪ್ಪು ಕಲ್ಲು ಇಟ್ಟು ಕಾಳಿ ಮಾತೆಯನ್ನು ಆರಾಧಿಸಲಾಗುತ್ತಿತ್ತು. ಅಲ್ಲಿನ ಸ್ಥಳೀಯರು ಪೂಜೆ ಸಲ್ಲಿಸುತ್ತಿದ್ದರು. ಈ ಕಾಳಿ ದೇಗುಲ ಚೀನಿ ಕಾಳಿ ದೇಗುಲವಾಗಿರುವುದರ ಹಿಂದೆ ಒಂದು ಕತೆಯಿದೆ.

ಒಮ್ಮೆ ಅಲ್ಲಿದ್ದ ಚೀನಿ ಬಾಲಕನಿಗೆ ಆರೋಗ್ಯ ಕೆಟ್ಟಿತ್ತಂತೆ. ಎಷ್ಟೇ ಔಷಧಗಳನ್ನು ಮಾಡಿದರೂ ಮಗು ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣಿಸಲಿಲ್ಲವಂತೆ. ಮಗುವಿಗೆ ಏನು ಕಾಯಿಲೆ ಎನ್ನುವುದನ್ನು ಪತ್ತೆಹಚ್ಚಲು ಯಾರಿಗೂ ಸಾಧ್ಯವಾಗಲ್ಲಿಲ್ಲವಂತೆ. ಆ ಚೀನಿ ಕುಟುಂಬವು ಆ ಮರದಡಿ ಇರುವ ಕಾಳಿ ಮಾತೆಗೆ ಪೂಜೆ ಸಲ್ಲಿಸಲು ಆರಂಭಿಸಿತು. ಆಗ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಾಣಲು ಆರಂಭಿಸಿತ್ತಂತೆ. ಪೂಜೆ ಪುನಸ್ಕಾರ ಮುಂದುವರಿದಂತೆ ಮಗು ಸಂಪೂರ್ಣ ಚೇತರಿಸಿಕೊಂಡಿತಂತೆ.

ಬಳಿಕ ಅಲ್ಲಿನ ದೇವಿ ಕಾಳಿಯನ್ನು ಚೀನಿಯರು ಅಲ್ಲಿ ಆರಾಧಿಸಲು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಮುಖ್ಯವಾಗಿ ಚೀನಿಯರ ಸಹಕಾರದಿಂದ ಅಲ್ಲಿ ಕಾಳಿ ಮಾತೆಯ ದೇವಾಲಯ ತಲೆಯಿತ್ತಿತ್ತು. ಆ ದೇವಾಲಯ ಚೈನೀಸ್‌ ಕಾಲಿ ಮಾ ಟೆಂಪಲ್‌ ಎಂದೇ ಪ್ರಶಿದ್ಧವಾಯಿತು.

ಹಲವು ವರ್ಷಗಳಿಂದ ಇಲ್ಲಿ ಚೀನಿಯರು ಮತ್ತು ಭಾರತೀಯರು ಸಹೋದರತೆಯಿಂದ ಬಾಳುತ್ತಿದ್ದಾರೆ. ಒಟ್ಟಾಗಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿರುವ ಚೀನಿಯರು ತಮ್ಮ ಚಪ್ಪಲಿಗಳನ್ನು ಕಳಚಿಟ್ಟುದೇಗುಲ ಪ್ರವೇಶಿಸುತ್ತಾರೆ. ವಿಶೇಷವೆಂದರೆ ಇಲ್ಲಿಗೆ ಬರುವ ಭಕ್ತರಿಗೆ ಪ್ರಸಾದವಾಗಿ ನೀಡುವುದು ನೂಡಲ್ಸ್‌ ಅನ್ನು. ಚೀನಿಯರಿಗೆ ನೂಡಲ್ಸ್‌ ಇಷ್ಟವಾಗಿರುವುದರಿಂದ ಈ ಕಾಳಿ ದೇಗುಲದಲ್ಲಿ ಅದೇ ಪ್ರಸಾದವಾಗಿದೆ. ಪ್ರಸಾದವಾಗಿ ನೂಡಲ್ಸ್‌ ಜತೆಗೆ ಚೀನಿ ಅಕ್ಕಿಯ ಅನ್ನ ಮತ್ತು ಚಾಪ್‌ ಸೂಯ್ಸ್‌ ಕೂಡ ನೀಡುತ್ತಾರಂತೆ.

ವಿಮಾನ, ರೈಲು ಅಥವಾ ಬಸ್‌ ಮೂಲಕ ಕೊಲ್ಕೊತ್ತಾಕ್ಕೆ ಬಂದವರು ಅಲ್ಲಿಂದ 12 ಕಿ.ಮೀ.ದೂರದಲ್ಲಿರುವ ಟಾಂಗ್ರಾ ನಗರವನ್ನು ಸಾರ್ವಜನಿಕ ಸಾರಿಗೆ ಬಳಸಿ ಸುಲಭವಾಗಿ ತಲುಪಬಹುದಾಗಿದೆ. ಎಂದಾದರೂ ಕೊಲ್ಕೊತ್ತಾಕ್ಕೆ ಭೇಟಿ ನೀಡಿದರೆ ಸಾಧ್ಯವಾದರೆ ಟಾಂಗ್ರಾ ನಗರಕ್ಕೆ ಹೋಗಿ ಕಾಳಿ ದೇವಿಗೆ ನಮಿಸಿ ಬನ್ನಿ, ನೂಡಲ್ಸ್‌ ಪ್ರಸಾದ ಸವಿಯಲು ಮರೆಯಬೇಡಿ.

IPL_Entry_Point