ಐಸಿಎಸ್‌ಇ 10ನೇ ತರಗತಿ ಫಲಿತಾಂಶ; ಶೇ 99.09 ವಿದ್ಯಾರ್ಥಿಗಳು ಉತ್ತೀರ್ಣ, ಹುಡುಗಿಯರದ್ದೇ ಮೇಲುಗೈ
ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (CISCE) ಐಸಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ಇಂದು (ಏಪ್ರಿಲ್ 30) ಪ್ರಕಟ ಮಾಡಿದ್ದು, ಈ ಬಾರಿ ಶೇ 99.09 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಐಸಿಎಸ್‌ಇ 10ನೇ ತರಗತಿ ಹಾಗೂ ಐಎಸ್‌ಸಿ 12ನೇ ತರಗತಿ ಒಟ್ಟಾರೆ ಫಲಿತಾಂಶ ವಿವರ ಇಲ್ಲಿದೆ.

ನವದೆಹಲಿ: ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಇಂದು (ಏಪ್ರಿಲ್ 30) ಐಸಿಎಸ್‌ಇ ಮತ್ತು ಐಎಸ್‌ಸಿ ಫಲಿತಾಂಶಗಳನ್ನು ಪ್ರಕಟ ಮಾಡಿದೆ. ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಐಸಿಎಸ್‌ಸಿಇ ಯ ಅಧಿಕೃತ ವೆಬ್‌ಸೈಟ್ cisce.org ನಲ್ಲಿ ಫಲಿತಾಂಶ ಪರಿಶೀಲಿಸಬಹುದು. results.cisce.org ಈ ವೆಬ್‌ಸೈಟ್‌ನಲ್ಲೂ ಫಲಿತಾಂಶ ನೋಡಬಹುದು.
ಈ ವರ್ಷ ಐಸಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ. 99.09 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಐಎಸ್‌ಸಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ 99.02 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ತಿಳಿಸಿದೆ.
ಒಟ್ಟು 2,52,557 ಅಭ್ಯರ್ಥಿಗಳು ಐಸಿಎಸ್ಇ ಪರೀಕ್ಷೆ ಬರೆದಿದ್ದು, ಅದರಲ್ಲಿ 2,50,249 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದೇ ರೀತಿ, 99,551 ವಿದ್ಯಾರ್ಥಿಗಳು ಐಎಸ್ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ 98,578 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಐಸಿಎಸ್‌ಇ ಪರೀಕ್ಷೆಯಲ್ಲಿ ಹುಡುಗಿಯರು ಹುಡುಗರಿಗಿಂತ ಉತ್ತಮ ಸಾಧನೆ ಮಾಡಿದ್ದಾರೆ. ಶೇ 99.37 ರಷ್ಟು ಹುಡುಗಿಯರ ಉತ್ತೀರ್ಣರಾಗಿದ್ದರೆ, ಶೇ 98.84 ರಷ್ಟು ಹುಡುಗರು ಉತ್ತೀರ್ಣರಾಗಿದ್ದಾರೆ.
ಐಎಸ್‌ಇ 12ನೇ ತರಗತಿ ಫಲಿತಾಂಶದಲ್ಲೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 99.45 ರಷ್ಟು ಹುಡುಗಿಯರು ಉತ್ತೀರ್ಣರಾಗಿದ್ದರೆ, ಹುಡುಗರ ಉತ್ತೀರ್ಣ ಪ್ರಮಾಣ ಶೇ. 98.64 ರಷ್ಟಿದೆ.
CISCE 10ನೇ ತರಗತಿಯ ಫಲಿತಾಂಶಗಳನ್ನು ಡಿಜಿಲಾಕರ್ ಪೋರ್ಟಲ್‌ನಲ್ಲಿಯೂ ನೋಡಬಹುದು. ಅಭ್ಯರ್ಥಿಗಳು ಫಲಿತಾಂಶಗಳನ್ನು ಪರಿಶೀಲಿಸಲು results.digilocker.gov.in ಗೆ ಭೇಟಿ ನೀಡಬೇಕು.
10 ನೇ ತರಗತಿ ಅಥವಾ ICSE ಬೋರ್ಡ್ ಪರೀಕ್ಷೆಗಳು ಫೆಬ್ರವರಿ 18 ರಂದು ಪ್ರಾರಂಭವಾಗಿ ಮಾರ್ಚ್ 27, 2025 ರಂದು ಮುಕ್ತಾಯಗೊಂಡವು. 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 13 ರಂದು ಪ್ರಾರಂಭವಾಗಿ ಏಪ್ರಿಲ್ 5, 2025 ರಂದು ಮುಕ್ತಾಯಗೊಂಡವು.
ರಿಸಲ್ಟ್ ನೋಡುವುದು ಹೇಗೆ?
ಫಲಿತಾಂಶ ಅಧಿಕೃತವಾಗಿ ಘೋಷಣೆಯಾದ ನಂತರ results.cisce.org. ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
ನಂತರ ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಎಂದಿರುವಲ್ಲಿ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ಯೂನಿಕ್ ಐಡಿ, ಇಂಡೆಕ್ಸ್ ನಂಬರ್ ಹಾಗೂ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ.
ನಂತರ ರಿಸ್ಟಲ್ ಡಿಸ್‌ಪ್ಲೇ ಮೇಲೆ ಬಂದಿರುತ್ತದೆ.
ಅದನ್ನು ಡೌನ್‌ಲೋಡ್ ಹಾಗೂ ಸೇವ್ ಮಾಡಿಕೊಳ್ಳಬಹುದು.