ಕೆ ಅಣ್ಣಾಮಲೈಗೆ ಕೊಯಮತ್ತೂರಿನಲ್ಲಿ ಆರಂಭಿಕ ಹಿನ್ನಡೆ; ಲೋಕಸಭೆ ಚುನಾವಣೆ ಕಣದಲ್ಲಿ ಮಾಜಿ ಐಪಿಎಸ್ ಅಧಿಕಾರಿಗೆ ಸತ್ವ ಪರೀಕ್ಷೆ
Coimbatore Lok Sabha Election Results: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸು ಪಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಂಪಿ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿರುವ ಅಣ್ಣಾಮಲೈಗೆ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಹಿನ್ನೆಡೆಯಾಗಿದೆ.
Coimbatore Lok Sabha Election Results: ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸು ಪಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಂಪಿ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿರುವ ಅಣ್ಣಾಮಲೈಗೆ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಹಿನ್ನೆಡೆಯಾಗಿದೆ. ತಮಿಳುನಾಡು ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ಎರಡು ಡ್ರಾವಿಡ ಪಕ್ಷಗಳ ರಾಜಕೀಯ ರಣಾಂಗಣ. ಅಲ್ಲಿ ಭಾರತೀಯ ಜನತಾ ಪಕ್ಷವು ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರನ್ನು ಕಣಕ್ಕೆ ಇಳಿಸಿತ್ತು. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್ ಪ್ರಕಾರ ಕೆ ಅಣ್ಣಾಮಲೈಗೆ ಹಿನ್ನೆಡೆಯಾಗಿದೆ.
ಆರಂಭಿಕ ಹಂತದಲ್ಲಿ ಕೆ ಅಣ್ಣಾಮಲೈಗೆ 1852 ಮತಗಳು ದೊರಕಿವೆ. ಡಿಎಂಕೆಗೆ 5127 ಮತಗಳು ದೊರಕಿವೆ. ಎಐಎಡಿಎಂಕೆಗೆ 1541 ಮತಗಳು ದೊರಕಿವೆ. ಮುಂದಿನ ಹಂತದ ಮತಎಣಿಕೆಯಲ್ಲಿ ಅಂತರ ಹೆಚ್ಚಾಗುತ್ತದೆಯೋ, ಅಂತರ ಕಡಿಮೆಯಾಗುತ್ತದೆಯೋ ಅಥವಾ ಡಿಎಂಕೆಗಿಂತ ಬಿಜೆಪಿ ಹೆಚ್ಚು ಮತಗಳನ್ನು ಪಡೆಯುತ್ತದೆಯೇ ಎಂಬ ಕುತೂಹಲ ಕೆ ಅಣ್ಣಾಮಲೈ ಅಭಿಮಾನಿಗಳಲ್ಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಐ(ಎಂ)ನ ಪಿಆರ್ ನಟರಾಜನ್ ಅವರು 5,71,150 ಮತಗಳನ್ನು ಪಡೆದು ಗೆದ್ದಿದ್ದರು. ಆ ಸಮಯದಲ್ಲಿ ಬಿಜೆಪಿಯು 3,92,007 ಮತಗಳನ್ನು ಪಡೆದು ಸೋಲು ಅನುಭವಿಸಿತ್ತು.
ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಎಡಪಂಥೀಯ ಪಕ್ಷಗಳು ಪ್ರಮುಖವಾಗಿ ಸಿಪಿಐ(ಎಂ) ಗೆಲುವು ಪಡೆಯುತ್ತ ಬಂದಿದ್ದವು. ಈ ವರ್ಷ ಡಿಎಂಕೆ ತನ್ನ ಸ್ವಂತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಕೊಯಮತ್ತೂರಿನಲ್ಲಿ 1999ರಲ್ಲಿ ಬಿಜೆಪಿ ಗೆಲುವು ಪಡೆದಿತ್ತು. ಅದಾದ ಬಳಿಕ ಈಗ ಕೆ. ಅಣ್ಣಾಮಲೈ ಮೂಲಕ ಅದೃಷ್ಟಪರೀಕ್ಷೆಗೆ ಇಳಿದಿದೆ. ಆದರೆ, ಇಲ್ಲಿ ಡಿಎಂಕೆಯು 1996ರ ಬಳಿಕ ಗೆಲುವು ಪಡೆದಿರಲಿಲ್ಲ.
ಕೊಯಮತ್ತೂರು ತಮಿಳುನಾಡಿನ ಪ್ರಮುಖ ನಗರವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಎಕ್ಸಿಟ್ ಪೋಲ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಕೊಯಮತ್ತೂರಿನಲ್ಲಿ ಪ್ರಬಲ ಪ್ರತಿಸ್ಪರ್ಧೆ ಇರುವ ಸೂಚನೆ ನೀಡಿತ್ತು. ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ಪಿ ರಾಜ್‌ಕುಮಾರ್ ಗೆಲುವಿನ ಕನಸಿನಲ್ಲಿದ್ದಾರೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಕೆ. ಅಣ್ಣಾಮಲೈ ಕೂಡ ಗೆಲುವು ಪಡೆಯುವ ಸಾಧ್ಯತೆ ಇರುವ ಅಭ್ಯರ್ಥಿ ಎನ್ನಲಾಗುತ್ತಿದೆ.
ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ. ಸುಮಾರು ಏಳು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಒಟ್ಟು ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ 2024 ನಡೆದಿತ್ತು. ಕೊಯಮತ್ತೂರು ಲೋಕಸಭಾ ಚುನಾವಣೆಯು ಮೊದಲ ಹಂತದಲ್ಲಿ ಏಪ್ರಿಲ್ 19ರಂದು ನಡೆದಿತ್ತು. ಗಣಪತಿ ರಾಜ್‌ಕುಮಾರ್ ಪಿ(ಡಿಎಂಕೆ), ಅಣ್ಣಾಮಲೈ ಕೆ (ಬಿಜೆಪಿ) ಮತ್ತು ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ) ಕಣದಲ್ಲಿದ್ದಾರೆ. ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಬಿಜೆಪಿ ಮುಖ್ಯಸ್ಥರು ಮತ್ತು ಪಕ್ಷದ ಫೈರ್‌ಬ್ರಾಂಡ್ ನಾಯಕ ಕೆ ಅಣ್ಣಾಮಲೈ ಸೋಲು ಅನುಭವಿಸಲಿದ್ದಾರೆ ಎಂದು ಮುನ್ನೋಟ ನೀಡಿದೆ. ಆದರೆ, ಈ ಸಮೀಕ್ಷೆಯನ್ನು ಕೆ ಅಣ್ಣಾಮಲೈ ತಿರಸ್ಕರಿಸಿದ್ದು, ಜೂನ್ 4ರಂದು ಅಚ್ಚರಿಯ ಫಲಿತಾಂಶ ಖಾತ್ರಿ ಎಂದಿದ್ದಾರೆ.
ಕೆ ಅಣ್ಣಾಮಲೈ ಪರಿಚಯ
2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ, 2013ರಲ್ಲಿ ಪೊಲೀಸ್ ಹುದ್ದೆಯನ್ನು ಅಲಂಕರಿಸುತ್ತಾರೆ. ಕರ್ನಾಟಕದಿಂದ ವೃತ್ತಿ ಜೀವನ ಆರಂಭಿಸಿದ್ದ ಇವರು ದಕ್ಷ ಅಧಿಕಾರಿಯಾಗಿದ್ದರು. ಅಲ್ಲದೆ, ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಇವರು ʼಕರ್ನಾಟಕದ ಸಿಂಗಂʼ ಎಂದೇ ಖ್ಯಾತಿ ಪಡೆದವರು. ಸುಮಾರು 8 ವರ್ಷಗಳ ಕಾಲ ಪೊಲೀಸ್ ಹುದ್ದೆಯಲ್ಲಿದ್ದು, ನಂತರ ಸ್ವಯಂ ನಿವೃತ್ತಿ ಘೋಷಿಸುತ್ತಾರೆ. ʼವಿ ದಿ ಲೀಡರ್ಸ್ʼ ಎಂಬ ಸಂಘಟನೆಯನ್ನು ಹುಟ್ಟು ಹಾಕುವ ಅಣ್ಣಾಮಲೈ ನಂತರ ರಾಜಕೀಯ ರಂಗ ಪ್ರವೇಶಿಸುತ್ತಾರೆ. 2020ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ, ಸದ್ಯ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಇದೀಗ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಅಣ್ಣಾಮಲೈ ಸಂಪೂರ್ಣ ಪ್ರೊಫೈಲ್ ಓದಿ.
ವಿಭಾಗ