Empress Wu Profile: ಚೀನಾ ಸಾಮ್ರಾಜ್ಞಿ ವು ಸಾರ್ವಕಾಲಿಕ ಅತಿಶ್ರೀಮಂತೆಯಾ, ಯಾರು ಈ ರಾಣಿ ಮತ್ತು ಇತರೆ ಆಸಕ್ತಿದಾಯಕ ವಿಚಾರ ಹೀಗಿವೆ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Empress Wu Profile: ಚೀನಾ ಸಾಮ್ರಾಜ್ಞಿ ವು ಸಾರ್ವಕಾಲಿಕ ಅತಿಶ್ರೀಮಂತೆಯಾ, ಯಾರು ಈ ರಾಣಿ ಮತ್ತು ಇತರೆ ಆಸಕ್ತಿದಾಯಕ ವಿಚಾರ ಹೀಗಿವೆ ನೋಡಿ

Empress Wu Profile: ಚೀನಾ ಸಾಮ್ರಾಜ್ಞಿ ವು ಸಾರ್ವಕಾಲಿಕ ಅತಿಶ್ರೀಮಂತೆಯಾ, ಯಾರು ಈ ರಾಣಿ ಮತ್ತು ಇತರೆ ಆಸಕ್ತಿದಾಯಕ ವಿಚಾರ ಹೀಗಿವೆ ನೋಡಿ

Empress Wu Profile: ಕಳೆದ ವಾರ ಜಗತ್ತಿನ ಸಾರ್ವಕಾಲಿಕ ಅತಿಶ್ರೀಮಂತೆ ಎಂದು ಚೀನಾದ ಸಾಮ್ರಾಜ್ಞಿ ವು ಅವರ ಸಂಪತ್ತಿನ ವಿವರದ ಸುದ್ದಿ ವೈರಲ್‌ ಆಗಿತ್ತು. ಈ ಚೀನಾದ ಸಾಮ್ರಾಜ್ಞಿ ವು ಯಾರು, ಯಾವ ಅವಧಿಯಲ್ಲಿ ಆಳ್ವಿಕೆ ಮಾಡಿದ್ದು ಮತ್ತು ಇತರೆ ಆಸಕ್ತಿದಾಯಕ ವಿಚಾರಗಳಿರುವ ಪರಿಚಯ ಈ ಸಲದ ವ್ಯಕ್ತಿ ವ್ಯಕ್ತಿತ್ವದಲ್ಲಿದೆ.

ಸಾಮ್ರಾಜ್ಞಿ ವು ಝೆಟಿಯಾನ್‌ (ಬಲಕ್ಕೆ) ಮತ್ತು 2015ರ ಟಿವಿ ಸೀರಿಯಲ್‌ "ಎಂಪ್ರೆಸ್‌ ಆಫ್‌ ಚೀನಾ"ದಲ್ಲಿ ವು ಝೆಟಿಯಾನ್‌ ಪಾತ್ರದಲ್ಲಿ ಫ್ಯಾನ್‌ ಬಿಂಗ್‌ಬಿಂಗ್‌ (ಎಡಕ್ಕೆ)
ಸಾಮ್ರಾಜ್ಞಿ ವು ಝೆಟಿಯಾನ್‌ (ಬಲಕ್ಕೆ) ಮತ್ತು 2015ರ ಟಿವಿ ಸೀರಿಯಲ್‌ "ಎಂಪ್ರೆಸ್‌ ಆಫ್‌ ಚೀನಾ"ದಲ್ಲಿ ವು ಝೆಟಿಯಾನ್‌ ಪಾತ್ರದಲ್ಲಿ ಫ್ಯಾನ್‌ ಬಿಂಗ್‌ಬಿಂಗ್‌ (ಎಡಕ್ಕೆ) (ವಿಕಿಪೀಡಿಯಾ/ಹುನಾನ್‌ ಟಿವಿ)

ಅತಿಶ್ರೀಮಂತರ ವಿಚಾರ ಪದೇಪದೆ ಚರ್ಚೆಗೊಳಗಾಗುವಂಥದ್ದು. ಕಳೆದ ವಾರ ಕೂಡ ಇದು ಮುನ್ನೆಲೆಗೆ ಬಂದಿತ್ತು. ಆಗ ಕೇಳಿ ಬಂದ ಹೆಸರು ಚೀನಾದ ಸಾಮ್ರಾಜ್ಞಿ ವು (Empress Wu) . ಜಗತ್ತಿನ ಸಾರ್ವಕಾಲಿಕ ಅತಿಶ್ರೀಮಂತೆ ಈಕೆ ಎಂದು ಡಿಎನ್‌ಎ ಪ್ರಕಟಿಸಿದ್ದ "ವರ್ಲ್ಡ್ಸ್‌ ರಿಚ್ಚೆಸ್ಟ್‌ ವುಮನ್‌ ಎವರ್‌, ನಾಟ್‌ ಆನ್‌ ಇಂಡಿಯನ್‌, ಮಚ್‌ ರಿಚರ್‌ ದ್ಯಾನ್‌ ಮುಕೇಶ್‌ ಅಂಬಾನಿ, ಎಲೋನ್‌ ಮಸ್ಕ್‌, ಜೆಫ್‌ ಬೆಜೋಸ್‌, ಅದಾನಿ, ಶಿ ವಾಸ್‌ ಫ್ರಂ..." ಎಂಬ ವರದಿ ಬಿಂಬಿಸಿತ್ತು. ಈ ವರದಿಗೆ ಮೂಲ 2016ರಲ್ಲಿ ಮನಿ ಡಾಟ್‌ ಕಾಮ್‌ನಲ್ಲಿ ಪ್ರಕಟವಾಗಿದ್ದ ಮತ್ತೊಂದು "ದ 10 ರಿಚ್ಚೆಸ್ಟ್‌ ವುಮೆನ್‌ ಆಫ್‌ ಅಲ್‌ ಟೈಮ್‌" ವರದಿ. ಹಾಗಾದರೆ ಚೀನಾದ ಈ ಸಾಮ್ರಾಜ್ಞಿ ವು ಯಾರು? ಆಕೆಯ ಆಳ್ವಿಕೆ ಅವಧಿ ಯಾವಾಗ ಇತ್ತು ಎಂಬಿತ್ಯಾದಿ ಸಂದೇಹಗಳು ಕಾಡುವುದು ಸಹಜ. ಇದನ್ನು ನಿವಾರಿಸುವ ಪ್ರಯತ್ನವಾಗಿ ಈ ಸಲದ ವ್ಯಕ್ತಿ ವ್ಯಕ್ತಿತ್ವದಲ್ಲಿ ಸಾಮ್ರಾಜ್ಞಿ ವು ಅವರ ಪರಿಚಯ (Empress Wu Profile).

ಅತಿಶ್ರೀಮಂತರ ಸಂಪತ್ತು ಹೋಲಿಸುವಾಗೆಲ್ಲ ನೆನಪಾಗುವ ಹೆಸರು ಚೀನಾದ ಸಾಮ್ರಾಜ್ಞಿ ವು ಅವರದ್ದು. ವು ಝೆಟಿಯಾನ್‌ ಎಂಬುದು ಆಕೆಯ ಪೂರ್ಣ ಹೆಸರು. ಆಕೆಯ ಕಾಲಘಟ್ಟ 624 ರಿಂದ 705. ಈ ಸಂದರ್ಭದಲ್ಲಿ ಚೀನಾದ ಆರ್ಥಿಕ ಜಾಗತಿಕ ಜಿಡಿಪಿಯ ಶೇಕಡ 23ರಷ್ಟು ಇತ್ತು. ಆಕೆಯ ಸಂಪತ್ತು ಅಂದಾಜು ಈಗಿನ ಲೆಕ್ಕಾಚಾರ ಪ್ರಕಾರ 16 ಲಕ್ಷ ಕೋಟಿ ಅಮೆರಿಕನ್‌ ಡಾಲರ್‌ ಇರಬಹುದು ಎಂದು ಸೌತ್‌ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ವಿವರಿಸಿದೆ.

ಅತಿಶ್ರೀಮಂತರ ಹೋಲಿಕೆ ವಿಚಾರ ಸಹಜವಾಗಿಯೇ ಶತಮಾನಗಳ ಮತ್ತು ವಿಭಿನ್ನ ಯುಗಗಳ ಕಾಲಾನುಕ್ರಮದಲ್ಲಿ ಈ ಸಾಮ್ರಾಜ್ಞಿಯ ಹೋಲಿಕೆ ಬಹಳ ಟ್ರಿಕ್ಕಿಯಾಗಿ ಕಣ್ಣಮುಂದೆ ನಿಲ್ಲುತ್ತವೆ. ಆದಾಗ್ಯೂ, ಆ ಕಾಲಘಟ್ಟದಲ್ಲಿ ಚೀನಾದ ಸಂಪತ್ತನ್ನು ಅಂದಾಜಿಸಿದರೆ, ಅದರ ಅಧಾರದಲ್ಲಿ ಸಾಮ್ರಾಜ್ಞಿ ವು ಜಗತ್ತಿನ ಸಾರ್ವಕಾಲಿಕ ಅತಿಶ್ರೀಮಂತೆ ಎಂದು ಸಮರ್ಥಿಸಬಹುದು ಎನ್ನುತ್ತಿವೆ ವರದಿಗಳು.

ಆಕೆಯ ಶ್ರೀಮಂತಿಕೆ, ಸಂಪತ್ತನ್ನು ಬದಿಗಿಟ್ಟು ನೋಡುವುದಾದರೆ, ಚೀನಾದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಆಕರ್ಷಕ ಮತ್ತು ಕುಟಿಲತೆಯನ್ನು ಕೂಡ ಹೊಂದಿರುವಂತಹ ಪ್ರಭಾವಿ ವ್ಯಕ್ತಿಯಾಗಿ ಗೋಚರಿಸುತ್ತಾಳೆ. ಆಕೆಯ ಕುರಿತಾದ ಕಥೆಗಳನ್ನು ನೀವು ನಂಬುವುದೇ ಆದರೆ, ಆಕೆ ಸ್ವಂತ ಮಕ್ಕಳ ಪೈಕಿ ಒಬ್ಬನ ಹತ್ಯೆ ಮಾಡಿದ್ದಾಳೆ. ತನಗಿಂತ ಮೊದಲು ಚಕ್ರವರ್ತಿಗಳಾಗಿದ್ದವರನ್ನು ಪದಚ್ಯುತಗೊಳಸಿದ್ದಳು. ರಹಸ್ಯ ಪೊಲೀಸ್‌ ಪಡೆಯ ನೆರವಿನೊಂದಿಗೆ ಕಟ್ಟುನಿಟ್ಟಿನ ರಾಜ್ಯಭಾರ ಮಾಡಿದವಳು.

ಆಕೆಯ ಬದುಕು ಬಹಳ ನಾಟಕೀಯತೆಗಳನ್ನು ಒಳಗೊಂಡಿರುವಂತೆ ಇದ್ದು, ಅಸಂಖ್ಯಾತ ಸಿನಿಮಾಗಳು, ಟಿವಿ ಸೀರಿಯಲ್‌ಗಳು ಆಕೆಯ ಕಥೆಗಳನ್ನಾಧರಿಸಿಯೇ ನಿರ್ಮಾಣವಾಗುತ್ತಿವೆ. ಪ್ರಸಾರವಾಗುತ್ತಿವೆ. ಇತ್ತೀಚಿನ ಗಮನಾರ್ಹ ಟಿವಿ ಸೀರಿಯಲ್‌ 2015ರ ಎಂಪ್ರೆಸ್‌ ಆಫ್‌ ಚೀನಾ. ಇದರಲ್ಲಿ ಫ್ಯಾನ್‌ ಬಿಂಗ್‌ಬಿಂಗ್‌ ನಟಿಸಿದ್ದು, ಜಗತ್ತಿನ ಗಮನ ಸೆಳೆದಿದೆ.

ಸಾಮ್ರಾಜ್ಞಿ ವು ಅವರ ಹುಟ್ಟೂರು ಯಾವುದು

ವು ಝಾವೊ ಅಥವಾ ವು ಝೆಟಿಯಾನ್‌ ಅವರ ಹುಟ್ಟೂರಿನ ಕುರಿತು ನಿಖರ ಮಾಹಿತಿ ಇಲ್ಲ. ಬಹಳ ನಿಗೂಢವಾಗಿದೆ. ವರದಿಗಳು ಒಂದಕ್ಕೊಂದು ಪೂರಕವಾಗಿಲ್ಲ. ಕೆಲವು ಆಕೆ ಆಧುನಿಕ ಶಾಂಕ್ಸಿ ಪ್ರಾಂತ್ಯ ಸಿಚುವಾನ್‌ ಅಥವಾ ಶಾಂಕ್ಸಿಯಲ್ಲಿ ಜನಿಸಿರಬಹುದು ಎಂದು ಸೂಚಿಸುತ್ತವೆ. ಕೆಲವರ ಪ್ರಕಾರ ಆಕೆ ಚಾಂಗಿಯಾನ್‌ ಅಥವಾ ಈಗಿನ ಕ್ಸಿಯಾನ್‌ನಲ್ಲಿ ಜನಿಸಿದರು.

ಆಕೆಯ ತಂದೆ, ವು ಶಿಯು ಶ್ರೀಮಂತ ಮರದ ವ್ಯಾಪಾರಿ. ತಾಯಿ ಪ್ರಭಾವಿ ಯಾಂಗ್‌ ಕುಟುಂಬದವರು. ಸುಯಿ ಸಾಮ್ರಾಜ್ಯದ ಚಕ್ರವರ್ತಿ ಯಾಂಗ್‌ ಅವರು ಕೊನೆಗಾಲದಲ್ಲಿ ಇವರ ಮನೆಯಲ್ಲೇ ಇದ್ದರು. ಹೆಡಾಂಗ್‌ ಮತ್ತು ತೈಯುವಾನ್‌ನ ಉತ್ತರಾಧಿಕಾರಿ ನೇಮಕದಲ್ಲಿ ವು ಈ ಅರಸು ಕುಟುಂಬದ ಆಪ್ತವಲಯ ಸೇರಿದರು. ಲೀ ಯುವಾನ್‌ ಚಕ್ರವರ್ತಿ ಆದ ಬಳಿಕ ವು ಕುಟುಂಬಕ್ಕೆ ಆತ ಉದಾರವಾಗಿ ಹಣ, ಧಾನ್ಯ, ಭೂಮಿ ಮತ್ತು ಇತರೆ ಸಂಪತ್ತು ನೀಡಿದ್ದರು.

ವು ಝೆಟಿಯಾನ್‌ ಅಂತಃಪುರಕ್ಕೆ ಹೋಗಿ ಬಳಿಕ ಮಠ ಸೇರಿದ್ದು ಹೀಗೆ...

ವು ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದ ಕಾರಣ ಉತ್ತಮ ಶಿಕ್ಷಣವನ್ನೂ ಗಳಿಸಿದ್ದರು. ರಾಜಕೀಯ ಮತ್ತು ಇತರ ಸರ್ಕಾರಿ ವ್ಯವಹಾರಗಳು, ಬರವಣಿಗೆ, ಸಾಹಿತ್ಯ ಮತ್ತು ಸಂಗೀತದಂತಹ ಅನೇಕ ವಿಷಯಗಳ ಬಗ್ಗೆ ವೂ ಓದಿ ತಿಳಿದುಕೊಂಡರು. 14 ನೇ ವಯಸ್ಸಿನಲ್ಲಿ, ಟ್ಯಾಂಗ್‌ನ ಚಕ್ರವರ್ತಿ ತೈಜಾಂಗ್‌ನ ಸಾಮ್ರಾಜ್ಯಶಾಹಿ ಉಪಪತ್ನಿಯಾಗಿ ಅಂತ ಪುರ ಸೇರಿದರು. ಅಲ್ಲಿ ಆಕೆ ಒಂದು ರೀತಿಯ ಕಾರ್ಯದರ್ಶಿಯಾದಳು. ಈ ಅವಕಾಶವು ಆಕೆಗೆ ತನ್ನ ಶಿಕ್ಷಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು.ಆಕೆಗೆ ಕೈರೆನ್ ಎಂಬ ಬಿರುದು ಕೂಡ ಸಿಕ್ಕಿತು. ಈ ಬಿರುದು ಟ್ಯಾಂಗ್‌ನ ಒಂಬತ್ತು ಶ್ರೇಣಿ ವ್ಯವಸ್ಥೆಯಲ್ಲಿ ಐದನೇಯದು. ಪತ್ನಿಯರ ಪೈಕಿ ಒಬ್ಬರಿಗೆ ಈ ಬಿರುದು ಸಿಗುತ್ತದೆ. ಹಾಗೆ ಆಕೆ ರಾಜಾಡಳಿತದ ಪಡಸಾಲೆಯಲ್ಲಿ ಮುನ್ನುಗ್ಗತೊಡಗಿದಳು.

ಮುಂದೆ, ಚಕ್ರವರ್ತಿ ತೈಜಾಂಗ್ 649 ರಲ್ಲಿ ನಿಧನರಾದರು. ಚಕ್ರವರ್ತಿ ಜತೆಗಿನ ದಾಂಪತ್ಯದಲ್ಲಿ ವು ಝೆಟಿಯಾನ್‌ ಯಾವುದೇ ಮಕ್ಕಳನ್ನು ಪಡೆದಿರಲಿಲ್ಲವಾದ್ದರಿಂದ, ಸಂಪ್ರದಾಯದ ಪ್ರಕಾರ ಅವಳು ತೈಜಾಂಗ್‌ನ ಮರಣದ ನಂತರ ಶಾಶ್ವತವಾಗಿ ಬೌದ್ಧ ಮಠಕ್ಕೆ ಸೀಮಿತಳಾಗಿದ್ದಳು. ಈ ನಡುವೆ, ವು ಝೆಟಿಯಾನ್‌ ತೈಜಾಂಗ್‌ನ ಮಗ, ಹೊಸ ಚಕ್ರವರ್ತಿ ಗಾವೋಜಾಂಗ್‌ ಜತೆಗೆ ಸಂಬಂಧ ಹೊಂದಿದಳು ಎಂದು ಭಾವಿಸಲಾಗಿದೆ. ಒಂದೇ ವರ್ಷದಲ್ಲಿ ಆಕೆ ಮತ್ತೆ ಹೊಸ ರಾಜನ ಉಪಪತ್ನಿಯಾಳು.

ಮಠದಿಂದ ಮತ್ತೆ ಅಂತಃಪುರಕ್ಕೆ ತಲುಪಿದ ವು ಝೆಟಿಯಾನ್‌

ಅರಮನೆಗೆ ಹಿಂತಿರುಗಿ, ವು ಝೆಟಿಯಾನ್‌ ಪತ್ನಿಯಾಗಿ ತನ್ನ ಸ್ಥಾನವನ್ನು ಬಲಪಡಿಸಲು ಪ್ರಾರಂಭಿಸಿದಳು. ಸಾಮ್ರಾಜ್ಞಿ ವಾಂಗ್‌ನೊಂದಿಗೆ ತೀವ್ರ ಪೈಪೋಟಿ ವೇಗವಾಗಿ ಬೆಳೆಯಿತು. 654 ರಲ್ಲಿ, ವು ಝೆಟಿಯಾನ್‌ ಮಗಳಿಗೆ ಜನ್ಮ ನೀಡಿದಳು. ಆದರೆ ಆ ಮಗು ಬಹುಬೇಗ ಮೃತಪಟ್ಟಿತು. ಈ ಸಾವಿನ ಹಿಂದೆ ಸಾಮ್ರಾಜ್ಞಿ ವಾಂಗ್ ಇದ್ದಿರಬಹುದೆಂದು ಪುರಾವೆಗಳು ಸೂಚಿಸುತ್ತಿವೆ.

ಆದರೆ ಕೆಲವು ಇತಿಹಾಸಕಾರರು ವು ತನ್ನ ಸ್ವಂತ ಮಗಳನ್ನು ಸಾಮ್ರಾಜ್ಞಿ ವಾಂಗ್ ಅನ್ನು ರಾಜನಿಂದ ದೂರ ಮಾಡುವ ಸಲುವಾಗಿ ಕೊಂದಿದ್ದಾಳೆ ಎಂದು ನಂಬುತ್ತಾರೆ. ಆದಾಗ್ಯೂ ಇದಕ್ಕೆ ಯಾವುದೇ ದೃಢವಾದ ಪುರಾವೆ ಅಸ್ತಿತ್ವದಲ್ಲಿಲ್ಲ. ಒಂದು ವರ್ಷದ ನಂತರ ವು ಝೆಟಿಯಾನ್‌ ಅವರು ವಾಂಗ್ ಮತ್ತು ಆಕೆಯ ತಾಯಿ ವಾಮಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದಳು. ಇದು ವಾಂಗ್‌ ಪತನಕ್ಕೆ ಕಾರಣವಾಯಿತು.

ವು ಝೆಟಿಯಾನ್‌ ಸಾಮ್ರಾಜ್ಞಿಯಾದುದು ಹೀಗೆ..

ವಾಂಗ್‌ ಅವರು ಸಾಮ್ರಾಜ್ಞಿ ಪಟ್ಟ ಕಳೆದುಕೊಂಡ ಕೂಡಲೇ ಸಹಜವಾಗಿಯೆ ವು ಝೆಟಿಯಾನ್‌ ಮೇಲೆ ಒಲವಿದ್ದ ಚಕ್ರವರ್ತಿ ಆಕೆಯನ್ನು ಸಾಮ್ರಾಜ್ಞಿಯನ್ನಾಗಿ ಮಾಡಿದ. ಹಾಗೆ 655ನೇ ಇಸವಿಯಲ್ಲಿ ವು ಝೆಟಿಯಾನ್‌, "ಎಂಪ್ರೆಸ್‌ ವು" ಪಟ್ಟಕ್ಕೇರಿದಳು.

ಇದಾಗಿ ಐದು ವರ್ಷಕ್ಕೆ ಚಕ್ರವರ್ತಿ ಗಾವೋಜಾಂಗ್‌ಗೆ ಅಸಾಧ್ಯ ತಲೆನೋವು ಕಾಣಿಸಿತು. ದೃಷ್ಟಿ ನಷ್ಟವೂ ಆಯಿತು. ಸಾಮಾನ್ಯವಾಗಿ ಇದು ಅಧಿಕ ರಕ್ತದೊತ್ತಡದಿಂದ ಸಂಭವಿಸುವಂಥದ್ದು ಎಂದು ಭಾವಿಸಲಾಗಿದೆ. ಹಾಗೆ ರಾಜ್ಯಭಾರ ಮಾಡಲು ಅಸಮರ್ಥನಾದ ಗಾವೋಜಾಂಗ್‌ ಪ್ರತಿಯೊಂದಕ್ಕು ವಿದ್ಯಾವಂತ ಪತ್ನಿ ವು ಕಡೆಗೆ ನೋಡತೊಡಗಿದೆ. ಆಕೆಯ ಸಲಹೆ ಪಡೆದು ರಾಜ್ಯಭಾರ ಮಾಡತೊಡಗಿದ.

ಈ ವಿದ್ಯಮಾನ ಸಾಮ್ರಾಜ್ಞಿ ವು ಅವರನ್ನು ವಿವಾದಕ್ಕೀಡುಮಾಡಿತು. ಸತ್ಯ ಏನೇ ಇದ್ದರೂ, ವು ಝೆಟಿಯಾನ್‌ ಬಹಳ ಪ್ರಭಾವಿ, ಅಧಿಕಾರಯುತವಾಗಿ ಬೆಳೆದಿದ್ದಳು ಎಂಬುದು ನಿರ್ವಿವಾದಿತ ವಿಚಾರ. ಆಡಳಿತ ಮತ್ತು ಅಧಿಕಾರದ ವಿಚಾರದಲ್ಲಿ ಆಕೆ ನಿರ್ದಯಿ ಆಗಿದ್ದಳು. 675ನೇ ಇಸವಿಯಲ್ಲಿ ಚಕ್ರವರ್ತಿ ಗಾವೋಜಾಂಗ್‌ ಅವರ ಹಿರಿಯ ಪುತ್ರ ಲಿ ಹಾಂಗ್‌ ನಿಧನರಾದರು. ಇದು ಅಧಿಕಾರಕ್ಕಾಗಿ ನಡೆದ ಸಂಚಿನ ಹಿನ್ನೆಲೆಯಲ್ಲಿ ಆಗಿರುವ ಸಾವು ಎಂದು ಹೇಳಲಾಗುತ್ತಿದೆ.

ಮತ್ತೆ ಕೆಲವು ವರ್ಷಗಳ ಬಳಿಕ ಚಕ್ರವರ್ತಿ ಮತ್ತು ಸಾಮ್ರಾಜ್ಞಿ ವು ಝೆಟಿಯಾನ್‌ ನಂಬಿಕಸ್ಥ ಎನಿಸಿಕೊಂಡ ಷಾಮನ್‌ ಮಿಂಗ್‌ ಜೋಂಗ್ಯಾನ್‌ ಸಾವು ಸಂಭವಿಸಿದೆ. ಚಕ್ರವರ್ತಿಯ ಎರಡನೇ ಪುತ್ರ ಲಿ ಕ್ಸಿಯಾನ್‌ ಮೇಲೆ ಈ ಕೊಲೆ ಆರೋಪ ಮತ್ತು ದೇಶದ್ರೋಹದ ಆರೋಪ ಬಂತು. ಅಲ್ಲಿಗೆ ಆತ ಉತ್ತರಾಧಿಕಾರಿ ಎಂಬ ಸ್ಥಾನಮಾನ ಕಳೆದುಕೊಂಡ. ಅಲ್ಲಿ ವು ಝೆಟಿಯಾನ್‌ ಮತ್ತಷ್ಟು ಪ್ರಭಾವಿಯಾಗಿ ಬೆಳೆದಳು. ಪ್ರಚಂಡ ದಕ್ಷತೆ ಮತ್ತು ಸಾಮರ್ಥ್ಯದೊಂದಿಗೆ ಸಾಮ್ರಾಜ್ಯವನ್ನು ನಡೆಸುತ್ತಿರುವ ಕೀರ್ತಿಗೆ ಪಾತ್ರಳಾದಳು. ಆಗಾಗ್ಗೆ ಸರಿಯಾದ ಕಾರ್ಯಗಳಿಗಾಗಿ ಸರಿಯಾದ ವ್ಯಕ್ತಿಗಳನ್ನು ಆಯ್ಕೆಮಾಡುತ್ತಾಳೆ ಮತ್ತು ಅವಳ ನಿರ್ಣಾಯಕ ಪಾತ್ರವು ಜನರ ಪ್ರೀತಿಯಲ್ಲದಿದ್ದರೂ ಗೌರವವನ್ನು ಗಳಿಸುವುದಕ್ಕೆ ನೆರವಾಗಿದೆ.

ಚಕ್ರವರ್ತಿ ಗಾವೋಜಾಂಗ್‌ ನಿಧನ ಮತ್ತು ನಂತರದ ಬೆಳವಣಿಗೆ

ಚಕ್ರವರ್ತಿ ಗಾವೋಜಾಂಗ್ 683 ರಲ್ಲಿ ನಿಧನರಾದರು. ಇದೇ ವೇಳೆ ಲಿ ಝೆ ಚಕ್ರವರ್ತಿ ಆದಾಗ, ವು ಝೆಟಿಯಾನ್‌ ತನ್ನ ಅಧಿಕಾರವನ್ನು ಸಾಮ್ರಾಜ್ಞಿ ಪಡೆದ ವರದಕ್ಷಿಣೆ ಎಂಬ ಹೆಸರಿನಲ್ಲಿ ಉಳಿಸಿಕೊಂಡಳು. ಲಿ ಝೆ ತಕ್ಷಣವೇ ಸಿಂಹಾಸನವನ್ನು ಏರಬೇಕಾಗಿದ್ದರೂ, ರಾಜ್ಯದ ಎಲ್ಲಾ ವಿಷಯಗಳ ಬಗ್ಗೆ ತನ್ನ ತಾಯಿಯೊಂದಿಗೆ ಸಮಾಲೋಚಿಸಲು ಮತ್ತು ಅವರ ಅನುಮೋದನೆಯನ್ನು ಪಡೆಯಬೇಕೆಂದು ಗಾವೊಜಾಂಗ್‌ ಕೊನೆಯದಾಗಿ ಹೇಳಿರುವ ಉಲ್ಲೇಖ ಗಮನಸೆಳೆಯುತ್ತದೆ.

ಆದಾಗ್ಯೂ, ಹೊಸ ಚಕ್ರವರ್ತಿಯ ಹೆಂಡತಿ ತನ್ನದೇ ಆದ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಳು ಮತ್ತು ತಕ್ಷಣವೇ ತನ್ನ ಅತ್ತೆಯೊಂದಿಗೆ ಘರ್ಷಣೆಗೆ ಇಳಿದಳು. ಇದಾಗಿ, ತಿಂಗಳ ಒಳಗೆ ಹೊಸ ಚಕ್ರವರ್ತಿ ಪದಚ್ಯುತನಾಗಿದ್ದ. ಅಲ್ಲದೆ ಆತನನ್ನು ಕುಟುಂಬ ಸಮೇತ ಗಡಿಪಾರು ಮಾಡಲಾಗಿತ್ತು.

ಹದಿನೈದು ವರ್ಷ ಕಾಲ ಆಳ್ವಿಕೆ ನಡೆಸಿದ ವು ಝೆಟಿಯಾನ್‌

ಈ ಬೆಳವಣಿಗೆಯ ನಂತರ ವು ಝೆಟಿಯಾನ್‌ನ ಕೊನೆಯ ಪುತ್ರ ಚಕ್ರವರ್ತಿಯಾಗಿ ಅಧಿಕಾರ ಸ್ವೀಕರಿಸಿದ. ಆದರೆ ಇಷ್ಟಾಗುವ ಹೊತ್ತಿಗೆ ವು ಝೆಟಿಯಾನ್‌ ಆಡಳಿತಸೂತ್ರ ಸಂಪೂರ್ಣ ತನ್ನ ವಶದಲ್ಲಿಟ್ಟುಕೊಂಡಿದ್ದಳು. ಕುತಂತ್ರದ ಮೂಲಕ, ವು ಝೆಟಿಯಾನ್‌ 15 ವರ್ಷ ಕಾಲ ಸಾಮ್ರಾಜ್ಞಿಯಾಗಿ ಆಳ್ವಿಕೆ ನಡೆಸಲು ಸಾಧ್ಯವಾಯಿತು. ಅಂತಿಮವಾಗಿ ಆಕೆ 705 ರಲ್ಲಿ ಅನಾರೋಗ್ಯಕ್ಕೆ ಈಡಾದ ಸಂದರ್ಭದಲ್ಲಿ ಪ್ರತಿಸ್ಪರ್ಧಿಗಳು ಆಕೆಯನ್ನು ಪದಚ್ಯುತಿಗೊಳಿಸಿ, ಅಧಿಕಾರ ವಶಪಡಿಸಿಕೊಂಡರು.

ಆಕೆಯ ಆಳ್ವಿಕೆಯ 15 ವರ್ಷ ಚೀನಾ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದಿದೆ. ಚೀನೀ ಸಾಮ್ರಾಜ್ಯವನ್ನು ಆಕೆ ಮಿಲಿಟರಿ ಅಧಿಕಾರಿಗಳ ಪ್ರಾಬಲ್ಯದಿಂದ ವಿದ್ವತ್ಪೂರ್ಣ ಗಣ್ಯರ ನೆರವಿನೊಂದಿಗೆ ಮುನ್ನಡೆಸಿದ್ದರು. ಸಮಾಜದ ವ್ಯವಸ್ಥೆಯನ್ನು ಮರುರೂಪಿಸಿದ್ದರು. ಆಕೆಯ ಆಳ್ವಿಕೆಯು ಸಮೃದ್ಧವಾಗಿತ್ತು ಮತ್ತು ಅವಳು ನಿಯಂತ್ರಿಸುತ್ತಿದ್ದ ಚೀನಾದ ಸಂಪತ್ತು ಗಮನಾರ್ಹವಾಗಿ ಬೆಳೆಯಿತು ಎಂಬ ಉಲ್ಲೇಖವಿದೆ.

ಉಮೇಶ್‌ ಕುಮಾರ್‌ ಶಿಮ್ಲಡ್ಕ

(ಸಾಮ್ರಾಜ್ಞಿ ವು ಝೆಟಿಯಾಂಗ್‌ ಅವರ ವ್ಯಕ್ತಿ ವ್ಯಕ್ತಿತ್ವ (Vyakti Vyaktitva) ದ ಲೇಖನದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಯೇ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗಳಿಗೆ ಪ್ರತಿಕ್ರಿಯೆ ಇ-ಮೇಲ್​ ಕಳುಹಿಸಬಹುದು.)

ಇನ್ನಷ್ಟು ಅಂಕಣ ಬರಹಗಳನ್ನು ಓದುವುದಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.