ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಚುನಾವಣೆ ಕಣದಲ್ಲಿ ಕಂಗನಾ ರನೌತ್‌; ಬಾಲಿವುಡ್‌ನಂತೆಯೇ ರಾಜಕಾರಣದಲ್ಲೂ ಛಾಪು ಮೂಡಿಸಬಲ್ಲರೇ - ವ್ಯಕ್ತಿ ವ್ಯಕಿತ್ವ ಅಂಕಣ

ಲೋಕಸಭಾ ಚುನಾವಣೆ ಕಣದಲ್ಲಿ ಕಂಗನಾ ರನೌತ್‌; ಬಾಲಿವುಡ್‌ನಂತೆಯೇ ರಾಜಕಾರಣದಲ್ಲೂ ಛಾಪು ಮೂಡಿಸಬಲ್ಲರೇ - ವ್ಯಕ್ತಿ ವ್ಯಕಿತ್ವ ಅಂಕಣ

ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಮಂಡಿ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಸುದ್ದಿಯಲ್ಲಿದ್ದಾರೆ. ರಾಜಕಾರಣಕ್ಕೆ ಇಳಿಯುವ ಮೊದಲೂ ಕಂಗನಾ ಸುದ್ದಿಯಲ್ಲಿದ್ದವರೇ. ಕಾರಣ ಅವರ ನೇರ ನಡೆ ನುಡಿ ಮತ್ತು ಮಹಿಳಾವಾದದ ಪ್ರಸ್ತುತಿ. ಕಂಗನಾ ಅವರ ಕಿರುಪರಿಚಯ ಈ ಸಲದ ವ್ಯಕ್ತಿ-ವ್ಯಕ್ತಿತ್ವ ಅಂಕಣದಲ್ಲಿದೆ.

ಲೋಕಸಭಾ ಚುನಾವಣೆ ಕಣದಲ್ಲಿ ಕಂಗನಾ ರನೌತ್‌ - ವ್ಯಕ್ತಿ ವ್ಯಕ್ತಿತ್ವ ಅಂಕಣ
ಲೋಕಸಭಾ ಚುನಾವಣೆ ಕಣದಲ್ಲಿ ಕಂಗನಾ ರನೌತ್‌ - ವ್ಯಕ್ತಿ ವ್ಯಕ್ತಿತ್ವ ಅಂಕಣ

ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಬಾಲಿವುಡ್ ನಟಿ ಕಂಗನಾ ರನೌತ್‌, ನೇತಾಜಿ ಸುಭಾಷ್‌ಚಂದ್ರ ಬೋಸ್ ಭಾರತದ ಪ್ರಥಮ ಪ್ರಧಾನಿ ಎಂದು ಹೇಳಿ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಎನ್‌ಡಿಟಿವಿಯ ಸ್ಟೋರಿಯ ತುಣಕನ್ನು ಟ್ವೀಟ್ ಮಾಡಿದ್ದಾರೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತ ಕಂಗನಾ ರನೌತ್ ಸಾಗುವ ಪರಿ ನೋಡಿದಾಗ ಅವರ ವ್ಯಕ್ತಿತ್ವದಲ್ಲಿ ಹೊಳಪು ಕಾಣಿಸುತ್ತದೆ. ಅದನ್ನು ಮೊಂಡುತನ ಎಂದಾದರೂ ಹೇಳಿ, ದಿಟ್ಟತನ ಎಂದಾದರೂ ಹೇಳಿ. ಎಷ್ಟೇ ಆದರೂ ಅದು ಅವರ ವ್ಯಕ್ತಿತ್ವದ ಭಾಗ.

ಟ್ರೆಂಡಿಂಗ್​ ಸುದ್ದಿ

ಕಂಗನಾ ರನೌತ್‌ ಬಾಲಿವುಡ್ ಅಂಗಳದಲ್ಲಿ ಬಂಡಾಯದ ಬಾವುಟ ಹಾರಿಸುತ್ತಲೇ ತನ್ನ ವೃತ್ತಿ ಬದುಕು ರೂಪಿಸಿಕೊಂಡ ಚೆಲುವೆ. ಕಡಕ್‌ ನಡೆ ನುಡಿಗಳೊಂದಿಗೆ ಒಂದು ರೀತಿಯ ರೆಬೆಲ್ ವ್ಯಕ್ತಿತ್ವದೊಂದಿಗೆ ಗಮನ ಸೆಳೆಯುತ್ತಿರುವವರು ಕಂಗನಾ. 15 - 16ರ ಹರೆಯದಲ್ಲಿ ಅಪ್ಪನ ಇಚ್ಛೆಗೆ ವಿರುದ್ಧವಾಗಿ ಸಿನಿಮಾ ರಂಗದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಲು ಹಿಮಾಚಲ ಪ್ರದೇಶದ ಮಂಡಿ ಸಮೀಪದ ಹುಟ್ಟೂರನ್ನು ಬಿಟ್ಟು ಮುಂಬಯಿಗೆ ಪಯಣಿಸಿದ ಹೆಣ್ಮಗಳು ಇಂದು ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಜನಾದೇಶವನ್ನು ಬಯಸಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ತಮ್ಮದೇ ಛಾಪು ಒತ್ತಿರುವ ಕಂಗನಾ ರನೌತ್‌, ಸ್ವಜನಪಕ್ಷ ಪಾತದ ವಿರುದ್ಧ ಧ್ವನಿ ಎತ್ತಿದವರು. ಹೀರೋ ಕೇಂದ್ರಿತ ಚಿತ್ರ ಅಲ್ಲ, ಹೀರೋಯಿನ್ ಕೇಂದ್ರಿತ ಚಿತ್ರ ಎಂದು ಪ್ರತಿಪಾದಿಸುತ್ತ ಬಂದವರು. ಅವರ ಸ್ವಭಾವ, ಸ್ವಾಭಿಮಾನವನ್ನು ಪ್ರತಿಬಿಂಬಿಸುವ ರೀತಿಯಲ್ಲೇ ಆಕೆಯ ಮೊದಲ ಸಿನಿಮಾ “ಕ್ಲೀನ್” ಕೂಡ ಮೂಡಿರುವುದು ವಿಶೇಷ. ಸರಳವಾಗಿ ಹೇಳಬೇಕು ಎಂದರೆ ಅವರದ್ದು ಪ್ರವಾಹಕ್ಕೆ ಎದುರಾಗಿ ಈಜುವ ಗುಣಸ್ವಭಾವ.

ಕಂಗನಾ ಅವರ ಬದುಕು ಹೋರಾಟದ ಹಾದಿಯದ್ದು. ಇಪ್ಪತ್ತೊಂದು ವರ್ಷ ಹಿಂದಿನ ವಿಚಾರ. ಏನಾದರೂ ಸಾಧಿಸಬೇಕು ಎಂಬ ಛಲದೊಂದಿಗೆ ಮನೆಬಿಟ್ಟು ಬಂದ ಹೆಣ್ಮಗಳು, ಬಾಲಿವುಡ್‌ನಲ್ಲಿ ಬೆಳೆಯಬೇಕಾದರೆ ಗಾಡ್‌ಫಾದರ್ ಇರಲೇಬೇಕಾಗಿದ್ದ ಕಾಲಘಟ್ಟದಲ್ಲಿ ಅಲ್ಲಿನ ಅನೇಕ ಸವಾಲುಗಳನ್ನು ಎದುರಿಸಿ ಗೆದ್ದ ನಂತರ ಇಂದು ಈ ಪರಿ ದೇಶ ಗಮನಿಸುವಂತೆ ಬೆಳೆದಿದ್ದಾರೆ ಎಂದರೆ ಅದು ಗಮನಾರ್ಹ ವಿಚಾರವೇ.

ಹೀಗಿತ್ತು ಕಂಗನಾ ರನೌತ್‌ ಬಾಲ್ಯ

ಬಾಲ್ಯದ ವಿಚಾರವನ್ನು ಕೆಲವು ಸಂದರ್ಶನಗಳಲ್ಲಿ ಕಂಗನಾ ಹೇಳಿಕೊಂಡಿದ್ದಾರೆ. ಅದರಂತೆ, ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಭಾಂಬ್ಲಾ (ಈಗ ಇದು ಸೂರಜ್‌ಪುರ) ಎಂಬಲ್ಲಿ 1987ರ ಮಾರ್ಚ್‌ 23 ರಂದು ಜನಿಸಿದರು. ರಜಪೂತ ಕುಟುಂಬಕ್ಕೆ ಸೇರಿದವರು. ತಾಯಿ ಆಶಾ ರನೌತ್‌ - ವೃತ್ತಿಯಲ್ಲಿ ಶಿಕ್ಷಕಿ. ತಂದೆ ಅಮರದೀಪ್ ರನೌತ್, ವ್ಯಾಪಾರಿ. ಅಕ್ಕ ರಂಗೋಲಿ ಚಂದೇಲ್‌ (2006ರಲ್ಲಿ ಇವರ ಮೇಲೆ ಆಸಿಡ್ ದಾಳಿ ಆಗಿತ್ತು), ತಮ್ಮ ಅಕ್ಷತ್‌. ಇನ್ನು ಮುತ್ತಾತ ಸರ್ಜೂ ಸಿಂಗ್ ರನೌತ್‌ ವಿಧಾನ ಸಭೆಯ ಸದಸ್ಯರಾಗಿದ್ದರು. ತಾತ ಐಎಎಸ್‌ ಅಧಿಕಾರಿ. ಭಾಂಬ್ಲಾದಲ್ಲಿ ದೊಡ್ಡ ಅರಮನೆ ಮಾದರಿಯ ಮನೆಯ ಕೂಡು ಕುಟುಂಬದಲ್ಲಿ ಬೆಳದವರು. ಹೀಗಾಗಿ ಬಾಲ್ಯ, “ಸರಳವಾಗಿತ್ತು ಮತ್ತು ಖುಷಿಯಿಂದ ಕೂಡಿತ್ತು” ಎಂದೇ ಹೇಳುತ್ತಾರೆ ಕಂಗನಾ.

ಆದರೆ, ಬೆಳೆದಂತೆಲ್ಲ ಮನಸ್ಸಿನಲ್ಲೊಂದು ಬಂಡೇಳುವ ಸ್ವಭಾವವೂ ಬೆಳೆದುಕೊಂಡುಬಿಟ್ಟಿತ್ತು. ಯಾವಾಗ ತಮ್ಮನಿಗೆ ಒಂದು ಪ್ಲಾಸ್ಟಿಕ್ ಗನ್‌ ಆಟಿಕೆ ಮತ್ತು ತನಗೆ ಬೊಂಬೆಯನ್ನು ತಂದಕೊಟ್ಟರೋ ಆಗ ಅದನ್ನು ಸ್ವೀಕರಿಸಲಿಲ್ಲ. ತಾರತಮ್ಯವನ್ನು ಪ್ರಶ್ನಿಸಿದ್ದೆ. ಅದೇ ರೀತಿ ಉಡುಪುಗಳ ವಿಚಾರಕ್ಕೆ ಬಂದರೂ ಅಷ್ಟೆ, ಎಲ್ಲರೂ ಧರಿಸುವಂಥ ಉಡುಪು ತನಗೆ ಬೇಡವಾಗಿತ್ತು. ನೆರೆಹೊರೆಯವರಿಗೆ ವಿಚಿತ್ರವೆನಿಸುವ ಉಡುಪು ಧರಿಸುತ್ತಿದ್ದೆ ಎಂದು ಕಂಗನಾ ರನೌತ್ ಹೇಳಿಕೊಂಡಿದ್ದಾರೆ.

ಕಂಗನಾ ರನೌತ್‌ ಚಂಡೀಗಢದ ಡಿಎವಿ ಸ್ಕೂಲ್‌ನಲ್ಲಿ ಓದಿದ್ದು, ವಿಜ್ಞಾನ ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡಿದ್ದರು. ಅಪ್ಪ ಅಮ್ಮನ ಒತ್ತಡಕ್ಕೆ ಡಾಕ್ಟರ್ ಆಗಬೇಕು ಎಂದುಕೊಂಡಿದ್ದರು. ಆದರೆ 12ನೇ ತರಗತಿಯಲ್ಲಿದ್ದಾಗ ಕೆಮೆಸ್ಟ್ರಿಯ ಯೂನಿಟ್‌ ಟೆಸ್ಟ್‌ನಲ್ಲಿ ಅನುತ್ತೀರ್ಣರಾದರು. ಆದಾಗ್ಯೂ, ಆಲ್‌ ಇಂಡಿಯಾ ಪ್ರೀ ಮೆಡಿಕಲ್ ಟೆಸ್ಟ್‌ ಎದುರಿಸಲು ಸಜ್ಜಾಗಬೇಕಾದ ಪರಿಸ್ಥಿತಿ ಇತ್ತು. ಆಗ ಮನಸ್ಸು ಮತ್ತೆ ಬಂಡೆದ್ದು, ತನ್ನ ಸ್ವಂತ ಅಭಿಪ್ರಾಯ, ಸ್ವಾತಂತ್ರ್ಯಕ್ಕೆ ಬೆಲೆ ಬೇಕು ಎಂದು ದೆಹಲಿಗೆ ಹೋಗಲು ನಿರ್ಧರಿಸಿದರು. ಆದರೆ ಮೆಡಿಕಲ್ ಶಿಕ್ಷಣ ಪಡೆಯುವುದಕ್ಕಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಕಂಗನಾ ನಿರ್ಧಾರಕ್ಕೆ ಮನೆಯವರ ಬೆಂಬಲ ಸಿಗಲಿಲ್ಲ.

ಮಾಡೆಲಿಂಗ್, ನಾಟಕ, ಸಿನಿಮಾ ಕಡೆಗೆ ಕಂಗನಾ ಪಯಣ

ದೆಹಲಿಗೆ ಬಂದ ಕಂಗನಾಗೆ ಏನು ಮಾಡಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಆಗ ಎಲೈಟ್ ಮಾಡೆಲಿಂಗ್ ಏಜೆನ್ಸಿ ಆಕೆಯ ಬಾಹ್ಯನೋಟಕ್ಕೆ ಆಕರ್ಷಿತವಾಗಿ ಆ ಕಂಪನಿಗೆ ಮಾಡೆಲ್ ಆಗುವಂತೆ ಸಲಹೆ ನೀಡಿತು. ಕೆಲವು ಮಾಡೆಲಿಂಗ್ ಕೆಲಸಗಳಾದ ಬಳಿಕ ಅದರಲ್ಲಿ “ಸೃಜನಶೀಲ” ಕಾರ್ಯಕ್ಕೆ ಅವಕಾಶ ಇಲ್ಲ ಎಂದು ನಟನೆ ಕಡೆಗೆ ಗಮನಹರಿಸಿದರು. ಅಸ್ಮಿತಾ ಥಿಯೇಟರ್ ಗ್ರೂಪ್‌ಗೆ ಸೇರಿದರು. ಅಲ್ಲಿ ರಂಗ ನಿರ್ದೇಶಕ ಅರವಿಂದ್ ಗೌರ್ ಅವರಿಂದ ತರಬೇತಿ ಪಡೆದರು. ಗಿರೀಶ್ ಕಾರ್ನಾಡ್ ಅವರ ತಲೆದಂಡ ಸೇರಿ ಅನೇಕ ನಾಟಕಗಳ ವರ್ಕ್‌ಶಾಪ್‌ ಅನ್ನು ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಅವರು ನಡೆಸಿದಾಗ ಅದರಲ್ಲಿ ಕಂಗನಾ ಭಾಗಿಯಾದರು. ಅದೊಂದು ಸಲ ನಾಟಕ ನಡೆಯಬೇಕಾದರೆ, ನಾಟಕ ಪುರುಷ ಪಾತ್ರಧಾರಿ ಕಾಣದೇ ಇದ್ದಾಗ, ಕಂಗನಾ ತನ್ನ ಪಾತ್ರದ ಜೊತೆಗೆ ಆತನ ಪಾತ್ರವನ್ನೂ ನಿಭಾಯಿಸಿ ಗಮನಸೆಳೆದರು. ಪ್ರೇಕ್ಷಕರಿಂದ ಸಿಕ್ಕ ಸ್ಪಂದನೆ ಗಮನಿಸಿ, ಮುಂಬಯಿಗೆ ತೆರಳಿದರು. ಅಲ್ಲಿ ಆಶಾಚಂದ್ರ ಅವರ ಡ್ರಾಮಾ ಸ್ಕೂಲ್‌ನಲ್ಲಿ 4 ತಿಂಗಳ ಕೋರ್ಸ್‌ಗೆ ಸೇರಿದರು. ತಂದೆಯವರ ಹಣಕಾಸಿನ ನೆರವನ್ನು ನಿರಾಕರಿಸಿದ್ದ ಕಂಗನಾ, ಮುಂಬಯಿನಲ್ಲಿ ಬಹಳ ಕಷ್ಟಗಳನ್ನು ಎದುರಿಸಬೇಕಾಯಿತು. ಬ್ರೆಡ್ ಮತ್ತು ಉಪ್ಪಿನಕಾಯಿ ತಿಂದು ಎಲ್ಲೋ ಇದ್ದು ಬದುಕಬೇಕಾಯಿತು. ಮುಂದೆ ಇದೇ ವಿಚಾರ ಅಪ್ಪ - ಮಗಳ ಸಂಬಂಧ ಕೆಡಲು ಕೂಡ ಕಾರಣವಾಗಿದ್ದಕ್ಕೆ ಬಳಿಕ ವಿಷಾದಿಸಿದ್ದರು ಕಂಗನಾ.

ಹಾಗೆ 2004ರಲ್ಲಿ ಬಾಲಿವುಡ್ ಅಂಗಳದಲ್ಲಿ ತನ್ನ ವೃತ್ತಿ ಬದುಕು ಆರಂಭಿಸಿದ ಕಂಗನಾ, ತನು ವೆಡ್ಸ್ ಮನು ಸೇರಿ ಕೆಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಜಯಲಲಿತಾ, ಇಂದಿರಾ ಗಾಂಧಿ ಕಥಾಪಾತ್ರಗಳ ಬಯೋಪಿಕ್‌ನಲ್ಲೂ ಗಮನಸೆಳೆದಿದ್ದಾರೆ. ಚಲನಚಿತ್ರದಿಂದ ಸ್ತ್ರೀವಾದದವರೆಗಿನ ಸಮಸ್ಯೆಗಳ ಕುರಿತು ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ನೇರ ನುಡಿಗೆ ಅವರು ಹೆಸರುವಾಸಿ. ಅನುಪಮಾ ಚೋಪ್ರಾ ಆಯೋಜಿಸಿದ್ದ 2013 ರ ದೂರದರ್ಶನದ ಸಂದರ್ಶನದಲ್ಲಿ ಮಾತನಾಡಿದ ಕಂಗನಾ, ಬಾಲಿವುಡ್‌ನಲ್ಲಿ ಲಿಂಗ ಪಕ್ಷಪಾತ ಮತ್ತು ಸ್ವಜನಪಕ್ಷಪಾತದ ವಿರುದ್ಧ ಹೇಳಿದ ವಿಚಾರಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ತೆಹಲ್ಕಾದ ಸುನೈನಾ ಕುಮಾರ್ ಈ ವಿಚಾರವನ್ನು, “ಕುಕೀ ಕಟ್‌ ಮಾಡುವ ನಾಯಕಿಯರು ಇರುವ ಈ ಕಾಲಘಟ್ಟದಲ್ಲಿ ಕಂಗನಾ ರನೌತ್‌ ಮಾತ್ರ ನೇರ ಮತ್ತು ಪ್ರಾಮಾಣಿಕವಾಗಿ ಮಾತನಾಡುತ್ತಿದ್ದಾರೆ” ಎಂದು ಬರೆದಿದ್ದರು. ಬಾಲಿವುಡ್‌ ಅಂಗಳದಲ್ಲಿ ಯಾವುದೇ ಪೂರ್ವ ನಂಟು ಇಲ್ಲದೇ ಅಂದರೆ ಗಾಡ್‌ಫಾದರ್ ಇಲ್ಲದೆಯೇ ಸ್ಟಾರ್ ಪಟ್ಟಕ್ಕೇರಿದ ಕಂಗನಾರನ್ನು ಕಾವೇರಿ ಬಾಮ್ಜಾಯ್ ಅವರು "ಹೆಚ್ಚಿನ ಒಳಗಿನವರಿಗಿಂತ ಉತ್ತಮವಾಗಿ ಆಟವನ್ನು ಆಡಬಲ್ಲ ಶಾಶ್ವತ ಹೊರಗಿನವರು" ಎಂದು ವಿವರಿಸಿದ್ದಾರೆ.

ರಾಷ್ಟ್ರೀಯತೆಯ ಮೂಲಕ ರಾಜಕೀಯಕ್ಕೆ ಕಂಗನಾ ಪ್ರವೇಶ

ಅಂದ ಹಾಗೆ ಕಂಗನಾಗೆ ತನ್ನ ನಟನೆಗಾಗಿ ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. 2020 ರಲ್ಲಿ, ಕಂಗನಾ ಅವರು ಮಣಿಕರ್ಣಿಕಾ ಫಿಲ್ಮ್ಸ್ ಎಂಬ ತಮ್ಮದೇ ಆದ ನಿರ್ಮಾಣ ಕಂಪನಿ ಪ್ರಾರಂಭಿಸಿದರು. ಅದರಲ್ಲಿ ಅವರು ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್‌ಗೆ ಬಾಲಿವುಡ್‌ ಒಂದು ದಿಶೆಯಲ್ಲಿ ಸಾಗುತ್ತಿರಬೇಕಾದರೆ ಕಂಗನಾ ಮಾತ್ರ ವಿರುದ್ಧ ದಿಕ್ಕಿನಲ್ಲಿ ಈಜುತ್ತಿದ್ದರು. ಕಳೆದ ಕೆಲವು ವರ್ಷಗಳಿಂದೀಚೆಗೆ ಅವರ ನಡೆ, ನುಡಿಯನ್ನು ಗಮನಿಸಿದಾಗ ಅದು ರಾಷ್ಟ್ರೀಯತೆ, ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವದ ಕಡೆಗೇ ಇತ್ತು. ಅವರು ಆಯ್ಕೆ ಮಾಡಿಕೊಂಡ ಚಿತ್ರಗಳ ಕಥಾವಸ್ತು ಎಲ್ಲವೂ ರಾಷ್ಟ್ರೀಯತೆಗೆ ಸಂಬಂಧಿಸಿದ್ದೇ ಆಗಿದ್ದವು. ತನಗೆ ತಾನೇ ಸವಾಲು ಒಡ್ಡಿಕೊಂಡು ಮುನ್ನಡೆಯುವ ಛಾತಿ ಕಂಗನಾರದ್ದು.

ಇದೆಲ್ಲವನ್ನೂ ಗಮನಿಸಿದ್ದ ಬಿಜೆಪಿ ಈ ಬಾರಿ, ಅವರನ್ನು ಹಿಮಾಚಲದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಆರಿಸಿದೆ. ಬಾಲಿವುಡ್ ಅಂಗಳ ಪ್ರವೇಶಿಸಬೇಕಾದರೆ ಹೊಸಬರಾಗಿದ್ದ ಕಂಗನಾ, ಅದರ ಒಳಗಿನವರಾಗದೇ ಅಲ್ಲಿ ತನ್ನದೇ ಛಾಪು ಮೂಡಿಸಿದರು. ಈಗ ರಾಜಕೀಯದ ಕಡೆಗೆ ಹೊರಳಿದ್ದಾರೆ. ಮಂಡಿಯಲ್ಲಿ ಜನಸಾಮಾನ್ಯ ನಡುವೆ ಸಾಮಾನ್ಯರಂತೆ ಬದುಕುತ್ತ, ಪ್ರಧಾನಿ ಮೋದಿಯವರ ಆಶೋತ್ತರ ನಡೆಸಿಕೊಡಬೇಕೆಂಬ ಸಂಕಲ್ಪದೊಂದಿಗೆ ತನ್ನ ಹುಟ್ಟೂರಿನಿಂದಲೇ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ''ನಾನು ಸಿನಿಮಾ ನಟಿ ಎಂಬ ಭಾವನೆ ಬೇಡ. ನಿಮ್ಮ ಮನೆಮಗಳು, ಸೋದರಿ ಎಂದೇ ಗುರುತಿಸಿ. ಜೀವನ ನಿರ್ವಹಣೆಗಾಗಿ ದೂರ ತೆರಳಿ ಈಗ ವಾಪಸ್ ಬಂದವಳು ಎಂದೇ ತಿಳಿಯಿರಿ" ಎನ್ನುತ್ತ ಜನಮನ ಸೆಳೆಯುತ್ತಿದ್ದಾರೆ.

ಮಂಡಿಯಲ್ಲಿ ಕಂಗನಾರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿದ್ದರ ಹಿಂದೆ ಒಂದು ಲೆಕ್ಕಾಚಾರವೂ ಇದೆ. ಆ ಕ್ಷೇತ್ರದಲ್ಲಿ 2021ರಲ್ಲಿ ನಡೆದ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವೀರಭದ್ರ ಸಿಂಗ್‌ ನಿಧನದ ಬಳಿಕ ಸಂತಾಪದ ಅಲೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿತ್ತು. ಈ ಬಾರಿ ಆ ಕ್ಷೇತ್ರ ಗೆಲ್ಲಲೇಬೇಕು ಎಂಬ ಲೆಕ್ಕಾಚಾರದೊಂದಿಗೆ ಕಂಗನಾರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಕಂಗನಾ ಮಂಡಿ ಜಿಲ್ಲೆಯ ಮನೆಮಗಳು. ಅಷ್ಟೇ ಅಲ್ಲ ಸೆಲೆಬ್ರಿಟಿ. ಪ್ರಧಾನಿ ಮೋದಿಯವರ ಕಟ್ಟಾ ಅಭಿಮಾನಿ. ಹಿಂದುತ್ವ, ದೇಶಪ್ರೇಮದ ವಿಚಾರದಲ್ಲಿ ಕಂಗನಾ ರಾಜಿಮಾಡಿಕೊಂಡವರಲ್ಲ ಎಂಬುದೇ ಪ್ಲಸ್ ಪಾಯಿಂಟ್‌. ಇವೆಲ್ಲದಕ್ಕೂ ಮಿಗಿಲಾಗಿ ಅವರ ವ್ಯಕ್ತಿತ್ವ ಜನರ ಮೇಲೊಂದು ಛಾಪು ಬೀರತೊಡಗಿದೆ. ಈಗ ಬಾಲಿವುಡ್‌ನಂತೆಯೇ ರಾಜಕಾರಣದಲ್ಲೂ, ರಾಜಕಾರಣಿಗಳಿಗಿಂತಲೂ ಸೊಗಸಾದ ರಾಜಕಾರಣ ಮಾಡಿ ತನ್ನ ಛಾಪು ಮೂಡಿಸುವರೇ ಎಂಬುದು ಸದ್ಯದ ಕುತೂಹಲ.

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

IPL_Entry_Point