ಲೋಕಸಭಾ ಚುನಾವಣೆಗೆ ತಿರುಚಿರಾಪಳ್ಳಿಯ ಸ್ವತಂತ್ರ ಅಭ್ಯರ್ಥಿ ವಾಶ್‌ ವಾರಿಯರ್‌ ಪದ್ಮಶ್ರೀ ಎಸ್. ದಾಮೋದರನ್- ವ್ಯಕ್ತಿ ವ್ಯಕ್ತಿತ್ವ ಅಂಕಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಚುನಾವಣೆಗೆ ತಿರುಚಿರಾಪಳ್ಳಿಯ ಸ್ವತಂತ್ರ ಅಭ್ಯರ್ಥಿ ವಾಶ್‌ ವಾರಿಯರ್‌ ಪದ್ಮಶ್ರೀ ಎಸ್. ದಾಮೋದರನ್- ವ್ಯಕ್ತಿ ವ್ಯಕ್ತಿತ್ವ ಅಂಕಣ

ಲೋಕಸಭಾ ಚುನಾವಣೆಗೆ ತಿರುಚಿರಾಪಳ್ಳಿಯ ಸ್ವತಂತ್ರ ಅಭ್ಯರ್ಥಿ ವಾಶ್‌ ವಾರಿಯರ್‌ ಪದ್ಮಶ್ರೀ ಎಸ್. ದಾಮೋದರನ್- ವ್ಯಕ್ತಿ ವ್ಯಕ್ತಿತ್ವ ಅಂಕಣ

ಲೋಕಸಭಾ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪಕ್ಷಗಳ ಪ್ರತಿನಿಧಿಗಳಾದ ನೂರಾರು ಅಭ್ಯರ್ಥಿಗಳ ನಡುವೆ ಗಮನಸೆಳಯುವಂಥ ಸ್ವತಂತ್ರ ಅಭ್ಯರ್ಥಿಗಳೂ ಇದ್ದಾರೆ. ಲೋಕಸಭಾ ಚುನಾವಣೆಗೆ ತಿರುಚಿರಾಪಳ್ಳಿಯ ಸ್ವತಂತ್ರ ಅಭ್ಯರ್ಥಿ ಪದ್ಮಶ್ರೀ ಪುರಸ್ಕೃತ ಜನಸೇವಕ ಎಸ್. ದಾಮೋದರನ್ ಅಂಥವರ ಪೈಕಿ ಒಬ್ಬರು. ಅವರ ಕಿರು ಪರಿಚಯ ಈ ಸಲದ ವ್ಯಕ್ತಿ-ವ್ಯಕ್ತಿತ್ವ ಅಂಕಣದಲ್ಲಿದೆ.

ತಿರುಚಿರಾಪಳ್ಳಿಯ ಸ್ವತಂತ್ರ ಅಭ್ಯರ್ಥಿ ವಾಶ್‌ ವಾರಿಯರ್‌ ಪದ್ಮಶ್ರೀ ಎಸ್. ದಾಮೋದರನ್ ವ್ಯಕ್ತಿವ್ಯಕ್ತಿತ್ವ ಚಿತ್ರಣ.
ತಿರುಚಿರಾಪಳ್ಳಿಯ ಸ್ವತಂತ್ರ ಅಭ್ಯರ್ಥಿ ವಾಶ್‌ ವಾರಿಯರ್‌ ಪದ್ಮಶ್ರೀ ಎಸ್. ದಾಮೋದರನ್ ವ್ಯಕ್ತಿವ್ಯಕ್ತಿತ್ವ ಚಿತ್ರಣ.

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ಅಬ್ಬರದ ಪ್ರಚಾರದ ನಡುವೆ, ಅಲ್ಲೊಬ್ಬ ಇಲ್ಲೊಬ್ಬ ಎಂಬಂತೆ ಪಕ್ಷೇತರ, ಸ್ವತಂತ್ರ ಅಭ್ಯರ್ಥಿಗಳು ಗಮನಸೆಳೆಯುತ್ತಾರೆ. ಇವರೆಲ್ಲ ಗೆಲ್ಲುವ ಪ್ರಮಾಣ ಕಡಿಮೆಯಾದರೂ, ಸ್ಪರ್ಧೆಯ ಉದ್ದೇಶ, ಪ್ರಚಾರ ವೈಖರಿ ಇತ್ಯಾದಿಗಳು ಅವರನ್ನು ಚುನಾವಣಾ ಇತಿಹಾಸದಲ್ಲಿ ದಾಖಲಾಗುವಂತೆ ಮಾಡುತ್ತದೆ. ತಮಿಳುನಾಡಿನ ತಿರುಚಿರಾಪಳ್ಳಿ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪದ್ಮಶ್ರೀ ಪುರಸ್ಕೃತರೊಬ್ಬರು ಸ್ಪರ್ಧಿಸಿದ್ದಾರೆ. ಕಳೆದವಾರ ಸಂತೆಯಲ್ಲಿ ಪ್ರಚಾರ ಮಾಡಿದ ಅವರು, ತರಕಾರಿ ಅಂಗಡಿ, ಹೂವಿನ ಅಂಗಡಿಗಳಲ್ಲಿ ಕುಳಿತು ಕೆಲ ಹೊತ್ತು ವ್ಯಾಪಾರ ಮಾಡುತ್ತ, ವ್ಯಾಪಾರಿಗಳೊಂದಿ ಮಾತನಾಡಿ ಮತಯಾಚನೆ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಈ ಪದ್ಮಶ್ರೀ ಪುರಸ್ಕೃತ ಅಭ್ಯರ್ಥಿ ಬೇರಾರೂ ಅಲ್ಲ, ತಿರುಚಿರಾಪಳ್ಳಿಯ ಎಸ್‌ ದಾಮೋದರನ್ (62). ಕಳೆದ 37 ವರ್ಷಗಳ ಅವಧಿಯಲ್ಲಿ 6 ಲಕ್ಷಕ್ಕೂ ಹೆಚ್ಚು ಟಾಯ್ಲೆಟ್ ಕಟ್ಟಿಸಿಕೊಟ್ಟ ಕೀರ್ತಿ ಅವರದ್ದು. ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿಗಳಾದ್ಯಂತ 600 ಕ್ಕೂ ಹೆಚ್ಚು ಹಳ್ಳಿಗಳು ಮತ್ತು 200 ನಗರ ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ವಾಶ್ (WASH - Water Sanitation and Hygiene) - ನೀರು, ನೈರ್ಮಲ್ಯ ಮತ್ತು ನೈರ್ಮಲ್ಯವನ್ನು ಖಚಿತಪಡಿಸಲು ಜೀವನದ ಮೂರು ದಶಕಗಳನ್ನು ಮೀಸಲಿಟ್ಟ ಬಗ್ಗೆ ದಾಮೋದರನ್ ಹೆಮ್ಮೆಪಡುತ್ತಾರೆ. ಅವರ ಈ ಕೆಲಸಕ್ಕಾಗಿಯೇ 2022ರ ಪದ್ಮಶ್ರೀ ಪ್ರಶಸ್ತಿ ಅವರನ್ನು ಅರಸಿಕೊಂಡುಬಂತು.

ಮೂರೂವರೆ ದಶಕಕ್ಕೂ ಹೆಚ್ಚಿನ ಈ ಅವಧಿಯಲ್ಲಿ, ದಾಮೋದರನ್ ಅವರು "ಗ್ರಾಮಾಲಯ" ಎಂಬ ತಮ್ಮ ಎನ್‌ಜಿಒ ಮೂಲಕ 6 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಗೃಹ ಶೌಚಾಲಯಗಳನ್ನು ಮತ್ತು 500 ಶಾಲಾ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಋತುಸ್ರಾವದ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವ ವಿಷಯದಲ್ಲೂ ಜಾಗೃತಿ ಮೂಡಿಸುವಲ್ಲಿ ದಾಮೋದರನ್‌ ಪರಿಣಾಮಕಾರಿ ಕೆಲಸ ಮಾಡಿದ್ದಾರೆ. ಇದು ದಕ್ಷಿಣ ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರ ನೈರ್ಮಲ್ಯ ಅಭ್ಯಾಸದ ಮೇಲೆ ಪರಿಣಾಮ ಬೀರಿದೆ ಎಂಬುದು ಅವರ ಕೆಲಸದ ಹೆಗ್ಗಳಿಕೆ. ಈ ವಿಚಾರವನ್ನು ಅವರು ಎನ್‌ಡಿಟಿವಿ ಜೊತೆಗೆ ಹಂಚಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧೆ ಮತ್ತು ದೂರದೃಷ್ಟಿಯ ಕನಸು

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವಾಗಲೇ ಅಂದರೆ 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದರು. ತಮಿಳುನಾಡಿನವರಾದ ಎಸ್ ದಾಮೋದರನ್‌ ರಾಜಕಾರಣದಲ್ಲಿ ತಮ್ಮನ್ನು ಗುರುತಿಸಿಕೊಂಡಂತೆ ಇಲ್ಲ. ಇದೇ ವೇಳೆ ಬಿಜೆಪಿ ತಮಿಳುನಾಡಿನಲ್ಲಿ ನೆಲೆ ಭದ್ರಗೊಳಿಸುವುದಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೆ, ಎಸ್ ದಾಮೋದರನ್ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೇ, ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿರುವುದು ವಿಶೇಷ.

ಈ ತಿರುಚಿರಾಪಳ್ಳಿ ಕ್ಷೇತ್ರದಲ್ಲಿ 1952ರಲ್ಲಿ ಸ್ವತಂತ್ರ ಅಭ್ಯರ್ಥಿ ಡಾ.ಇ.ಪಿ.ಮಥುರಾಮ್‌ ಗೆಲುವು ಕಂಡದ್ದು ಬಿಟ್ಟರೆ, ಇನ್ಯಾವ ಸ್ವತಂತ್ರ ಅಭ್ಯರ್ಥಿಯೂ ಗೆಲುವು ಕಂಡಿಲ್ಲ. 1957, 1984,1989, 1991 ಮತ್ತು 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಕಂಡಿತ್ತು. 1998, 1999ರಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿತ್ತು. ಉಳಿದಂತೆ ಎಡ ಪಕ್ಷಗಳು ಮೂರು ಸಲ ಗೆಲುವು ದಾಖಲಿಸಿವೆ. ಉಳಿದಂತೆ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಈ ಬಾರಿ ಕಣದಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನಿಂದ ಕರುಪ್ಪಯ್ಯ, ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂನಿಂದ ಸೆಂಥಿಲ್‌ನಾಥನ್, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂನಿಂದ ದುರೈ ವೈಕೋ ಮತ್ತು ನಾಮ್ ತಮಿಳರ್ ಕಚ್ಚಿಯಿಂದ ಟಿ ರಾಜೇಶ್ ಪ್ರಮುಖ ಅಭ್ಯರ್ಥಿಗಳಾಗಿ ಗೋಚರಿಸಿದ್ದಾರೆ.

ತಮ್ಮ ವಿಶಿಷ್ಟ ಅಭಿಯಾನದ ಕುರಿತು ಪ್ರತಿಕ್ರಿಯಿಸಿರುವ ಎಸ್ ದಾಮೋದರನ್‌,"ನನ್ನ ಸಂಸದೀಯ ಕ್ಷೇತ್ರಕ್ಕೆ ಒಳಪಡುವ ಗಾಂಧಿ ಮಾರ್ಕೆಟ್ ಪ್ರದೇಶದಲ್ಲಿ ಪ್ರಚಾರ ಶುರುಮಾಡಿದ್ದೇನೆ. ಹೋದಲ್ಲೆಲ್ಲಾ ಅದ್ಭುತ ಸ್ವಾಗತ ದೊರೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, "ಕ್ಷೇತ್ರದಲ್ಲಿ ಗೆಲುವು ಕಂಡರೆ, ತಿರುಚ್ಚಿಯನ್ನು ಸ್ವಚ್ಛ ಮತ್ತು ಹಸಿರು ನಗರವನ್ನಾಗಿ ಮಾಡಲು ಕೆಲಸ ಮಾಡಬೇಕು. ವಾಣಿಜ್ಯ ದೃಷ್ಟಿಯಿಂದಲೂ ತಿರುಚ್ಚಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಇಲ್ಲಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಆಗಬೇಕಿದೆ. ಫ್ಲೈಓವರ್, ರಿಂಗ್ ರೋಡ್‌ಗಳ ನಿರ್ಮಾಣವಾಗಬೇಕಾಗಿದೆ" ಎಂದು ಕ್ಷೇತ್ರದ ಅಭಿವೃದ್ಧಿಯ ಕನಸುಗಳನ್ನು ಬಿತ್ತುತ್ತಿದ್ದಾರೆ.

ವಾಶ್ ವಾರಿಯರ್‌ ಎಸ್. ದಾಮೋದರನ್ ಯಾರು

ತಿರುಚ್ಚಿ ಲೋಕಸಭಾ ಚುನಾವಣಾ ಕಣದಲ್ಲಿರುವ ಎಸ್ ದಾಮೋದರ್ ಯಾರು? ಎಎನ್‌ಐ ಜೊತೆಗೆ ಮಾತನಾಡುತ್ತ ಅವರು ಹೇಳಿರುವುದಿಷ್ಟು-

"ನಾನು ತಿರುಚ್ಚಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ. ನಾನು ಮಣ್ಣಿನ ಮಗ. ನಾನು ತಿರುಚ್ಚಿ ನಗರಕ್ಕೆ ಸೇರಿದವನು. 21ನೇ ವಯಸ್ಸಿನಲ್ಲೇ ವೃತ್ತಿ ಜೀವನ ಶುರುಮಾಡಿದೆ. ಈಗ 62 ವರ್ಷ ವಯಸ್ಸು. ನಾನು ನೈರ್ಮಲ್ಯ ಸಂಸ್ಥೆಯಲ್ಲಿ ಸಹಾಯಕ ಸೇವಾ ಸ್ವಯಂಸೇವಕನಾಗಿ 4 ದಶಕಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿದ್ದೇನೆ. 60 ನೇ ವಯಸ್ಸಿನಲ್ಲಿ, ನೈರ್ಮಲ್ಯ ಕ್ಷೇತ್ರದಲ್ಲಿ ನನ್ನ ಕೆಲಸಕ್ಕಾಗಿ ನಾನು ಅಂದಿನ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದೇನೆ. ನಾನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ನನ್ನ 21 ನೇ ವಯಸ್ಸಿನಲ್ಲಿ ರಾಜೀವ್ ಗಾಂಧಿ ಭಾರತದ ಪ್ರಧಾನಿಯಾಗಿದ್ದಾಗ ನನ್ನ ಸಮಾಜ ಸೇವೆಯನ್ನು ಪ್ರಾರಂಭಿಸಿದೆ. ನನ್ನ ಜೀವಿತಾವಧಿಯಲ್ಲಿ ನಾನು ಒಂಬತ್ತು ಪ್ರಧಾನ ಮಂತ್ರಿಗಳನ್ನು ಅವರ ಕೆಲಸ ಕಾರ್ಯಗಳನ್ನು ಕಂಡಿದ್ದೇನೆ. ನಾನು ಎಲ್ಲಾ ಕೇಂದ್ರ ಪ್ರಾಯೋಜಿತ ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮಗಳ ಅಡಿಯಲ್ಲಿ ಕೆಲಸ ಮಾಡಿದ್ದೇನೆ. ಪ್ರತಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿದ್ದೇನೆ" ಎಂದು ಹೇಳುತ್ತ ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದಾರೆ ಎಸ್ ದಾಮೋದರನ್‌.

ತಮಿಳುನಾಡಿನ ತಿರುಚಿರಾಪಳ್ಳಿಯ ಚೋಳರ ರಾಜಧಾನಿಯಾಗಿದ್ದ ವೊರೈಯೂರ್‌ ಎಸ್ ದಾಮೋದರನ್ ಅವರ ಹುಟ್ಟೂರು. ಅವರು ಗ್ರಾಮಾಲಯ ಎಂಬ ಎನ್‌ಜಿಒದ ಸಂಸ್ಥಾಪಕ ಮತ್ತುಸಿಇಒ. ತಮಿಳುನಾಡಿನ ತಾಂಡವಂಪಟ್ಟಿಯನ್ನು ಶೇಕಡ 100 ಬಯಲುಶೌಚ ಮುಕ್ತ ಗ್ರಾಮವನ್ನಾಗಿ ಮಾಡಿ, ದೇಶದ ಮೊದಲ ಬಯಲು ಶೌಚ ಮುಕ್ತ ಗ್ರಾಮವೆಂಬ ಕೀರ್ತಿಗೆ ಭಾಜನರಾಗುವಂತೆ ಮಾಡಿದವರು. ತಿರುಚಿರಾಪಳ್ಳಿ ಸಿಟಿ ಕಾರ್ಪೊರೇಶನ್‌ನ ಬೆಂಬಲದೊಂದಿಗೆ ಭಾರತದ ಮೊದಲ ಕೊಳೆಗೇರಿ ಕಾಳಮಂಡೈ ಅನ್ನು ಬಯಲು ಶೌಚ ಮುಕ್ತ ವಲಯ ಎಂದು ಘೋಷಿಸುವಲ್ಲಿ ನೆರವಾದವರು. ನಗರದ ಕೊಳೆಗೇರಿಗಳು, ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಿಗೆ ಸೂಕ್ತವಾದ ನವೀನ ಶಿಶು ಸ್ನೇಹಿ ಶೌಚಾಲಯ ಮಾದರಿಗಳನ್ನು ಅವರು ವಿನ್ಯಾಸಗೊಳಿಸಿದ್ದಾರೆ. ಭಾರತ ಸರ್ಕಾರ, ನವದೆಹಲಿಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಅನುಮೋದಿತ ರಾಷ್ಟ್ರೀಯ ಪ್ರಮುಖ ಸಂಪನ್ಮೂಲ ಕೇಂದ್ರವಾಗಿ ಗ್ರಾಮಾಲಯವು ಕೆಲಸ ಮಾಡುತ್ತಿದೆ.

ಇಂತಹ ಸಾಧಕ ಎಸ್ ದಾಮೋದರನ್‌ ಈ ಬಾರಿ ಲೋಕಸಭಾ ಚುನಾವಣೆಗೆ ತಿರುಚಿರಾಪಳ್ಳಿಯಿಂದ ಸ್ಪರ್ಧಿಸಿದ್ದು, ಅವರಿಗೆ ಚುನಾವಣಾ ಆಯೋಗ ಗ್ಯಾಸ್‌ ಸ್ಟವ್ ಚಿಹ್ನೆ ನೀಡಿದೆ. ತಮ್ಮ ನಾಲ್ಕು ದಶಕದ ಸಾಮಾಜಿಕ ಬದುಕಿನ ಪ್ರಭಾವ, ಪರಿಣಾಮವನ್ನು ರಾಜಕೀಯವಾಗಿ ಅಳೆದು ನೋಡಲು ಅವರು ಮುಂದಾಗಿರುವಂತಿದೆ. ಏಪ್ರಿಲ್ 19ಕ್ಕೆ ಇಲ್ಲಿ ಚುನಾವಣೆ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಂದು ಎಲ್ಲವೂ ಸ್ಪಷ್ಟವಾಗಲಿದೆ.

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.