Unified Opposition: ತೃತೀಯ ರಂಗದಿಂದ ಬಿಜೆಪಿಗೆ ಅನುಕೂಲ: ಏಕೀಕೃತ ಮೈತ್ರಿಕೂಟಕ್ಕೆ ಕರೆ ನೀಡಿದ ಕಾಂಗ್ರೆಸ್
ತೃತೀಯ ರಂಗ ರಚನೆಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಕಾಂಗ್ರೆಸ್, ವಿರೋಧ ಪಕ್ಷಗಳ ಏಕೀಕೃತ ಮೈತ್ರಿಕೂಟ ರಚನೆಗೆ ಕರೆ ಕೊಟ್ಟಿದೆ. ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಮೂರು ದಿನಗಳ ಚಿಂತನ-ಮಂಥನ ಸಭೆಯಲ್ಲಿ, ಏಕೀಕೃತ ಮೈತ್ರಿಕೂಟಕ್ಕಾಗಿ ಕಾಂಗ್ರೆಸ್ ವಿಪಕ್ಷಗಳಲ್ಲಿ ಮನವಿ ಮಾಡಿದೆ. ಈ ಕುರಿತು ಇಲ್ಲಿದೆ ಮಾಹಿತಿ..
ರಾಯ್‌ಪುರ್: ತೃತೀಯ ರಂಗ ರಚನೆಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಕಾಂಗ್ರೆಸ್, ವಿರೋಧ ಪಕ್ಷಗಳ ಏಕೀಕೃತ ಮೈತ್ರಿಕೂಟ ರಚನೆಗೆ ಕರೆ ಕೊಟ್ಟಿದೆ. ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ದಲ್ಲಿ ನಡೆಯುತ್ತಿರುವ ಮೂರು ದಿನಗಳ ಚಿಂತನ-ಮಂಥನ ಸಭೆಯಲ್ಲಿ, ಏಕೀಕೃತ ಮೈತ್ರಿಕೂಟಕ್ಕಾಗಿ ಕಾಂಗ್ರೆಸ್ ವಿಪಕ್ಷಗಳಲ್ಲಿ ಮನವಿ ಮಾಡಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ತೃತೀಯ ರಂಗ ರಚನೆಗೆ ಕೆಲವು ಪ್ರಾದೇಶಿಕ ಪಕ್ಷಗಳು ಪ್ರಯತ್ನ ಪಡುತ್ತಿವೆ. ಆದರೆ ತೃತೀಯ ರಂಗ ರಚನೆಯಿಂದ, ಜಾತ್ಯಾತೀತ ಮತಗಳು ಒಡೆಯುತ್ತವೆ. ಇದರಿಂದ ಬಿಜೆಪಿಗೆ ರಾಜಕೀಯ ಲಾಭವಾಗುತ್ತದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಬೇಕಅದರೆ, ವಿರೋಧ ಪಕ್ಷಗಳ ಏಕೀಕೃತ ಮೈತ್ರಿಕೂಟ ರಚನೆಯೊಂದೇ ಮಾರ್ಗ. ಕಾಂಗ್ರೆಸ್ ಈ ಮೈತ್ರಿಕೂಟದ ನೇತೃತ್ವವಹಿಸಿಕೊಳ್ಳಲು ಸಿದ್ಧ ಎಂಬ ಸಂದೇಶವನ್ನು ರಾಯ್‌ಪುರ್‌ದಿಂದ ರವಾನಿಸಲಾಗಿದೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಒಂದೇ ಸೂರಿನಡಿ ಬರುವುದು ಇಂದಿನ ತುರ್ತು ಅವಶ್ಯ. ತೃತೀಯ ರಂಗ ರಚನೆಯಿಂದ ಬಿಜೆಪಿಗೆ ಅನುಕೂಲ ಮಾಡಿಕೊಡುವ ಬದಲು, ಏಕೀಕೃತ ಮೈತ್ರಿಕೂಟ ರಚನೆ ಮಾಡಿ ಬಿಜೆಪಿಉಯನ್ನು ಎದುರಿಸುವುದು ಸುಲಭವಾಗಲಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಈ ಹಿಂದೆಯೂ ತೃತೀಯ ರಂಗ ರಚನೆಯ ವಿಫಲ ಪ್ರಯತ್ನ ನಡೆಸಲಾಗಿದೆ. ಎಡಪಕ್ಷಗಳು ಹಾಗೂ ಕೆಲವು ಪ್ರಾದೇಶಿಕ ಪಕ್ಷಗಳು ತೃತೀಯ ರಂಗದ ಅಡಿಯಲ್ಲಿ ಚುನಾವಣೆಯನ್ನು ಎದುರಿಸಿವೆ. ಆದರೆ ಇದರಿಂದ ಯಾವುದೇ ಲಾಭಾವಾಗಿಲ್ಲ. ಜಾತ್ಯಾತೀತ ಮತಗಳ ವಿಭಜನೆ ಸಹಜವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಭಾರತದ ಪ್ರಜಾತಂತ್ರದ ದೃಷ್ಟಿಯಿಂದ 2024ರ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದರೆ, ಇದರಿಂದ ಆಗುವ ಅನಾಹುತಗಳು ಭಯ ಹುಟ್ಟಿಸುತ್ತವೆ. ಹೀಗಾಗಿ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಶಕ್ತಿಗಳು ಒಂದೇ ಸೂರಿನಡಿ ಬರುವುದು ಅತ್ಯಂತ ಅವಶ್ಯಕವಾಗಿದೆ ಎಂದು ಕಾಂಗ್ರೆಸ್ ಕರೆ ಕೊಟ್ಟಿದೆ.
ವಿರೋಧ ಪಕ್ಷಗಳ ಏಕೀಕೃತ ಮೈತ್ರಿಕೂಟಕ್ಕೆ ಯಾರು ನಾಯಕತ್ವವಹಿಸಬೇಕು ಎಂಬುದು ಸದ್ಯದ ಪ್ರಶ್ನೆ. ಇದನ್ನು ನಾವು ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು. ಕಾಂಗ್ರೆಸ್ ದೇಶದ ಮೂಲೆ ಮೂಲೆಯಲ್ಲೂ ಸಂಘಟನೆಯನ್ನು ಹೊಂದಿದ್ದು, ಕಾಂಗ್ರೆಸ್‌ನ್ನು ಹೊರಗಿಟ್ಟು ರಚನೆ ಮಾಡುವ ಯಾವುದೇ ಸಂಭಾವ್ಯ ಮೈತ್ರಿಕೂಟ ಯಶಸ್ವಿಯಾಗುವುದಿಲ್ಲ ಎಂಬುದನ್ನು ಸಮಾನ ಮನಸ್ಕ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮನವಿ ಮಾಡಿದೆ.
ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಮುಕ್ತ ಚರ್ಚೆಯ ಅವಶ್ಯಕತೆ ಇದೆ. ಕಾಂಗ್ರೆಸ್ ಇಂತಹ ಚರ್ಚೆಗಳಿಗೆ ಬಾಗಿಲನ್ನು ತೆರೆದಿದೆ. ಈ ಅವಕಾಶವನ್ನು ಬಳಸಿಕೊಂಡು ನಾವು ಒಂದು ಏಕೀಕೃತ ಮಹಾಮೈತ್ರಿ ರಚಿಸಿದರೆ, ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಕಾಂಗ್ರೆಸ್ ಮಾರ್ಮಿಕವಾಗಿ ಹೇಳಿದೆ.
"ಜಾತ್ಯತೀತ ಮತ್ತು ಸಮಾಜವಾದಿ ಶಕ್ತಿಗಳ ಏಕತೆ ಕಾಂಗ್ರೆಸ್ ಪಕ್ಷದ ಭವಿಷ್ಯದ ಹೆಗ್ಗುರುತಾಗಿದೆ. ಸಮಾನ ಮನಸ್ಕ ಜಾತ್ಯತೀತ ಶಕ್ತಿಗಳನ್ನು ಗುರುತಿಸಲು, ಸಜ್ಜುಗೊಳಿಸಲು ಮತ್ತು ಒಗ್ಗೂಡಿಸಲು ಕಾಂಗ್ರೆಸ್ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ನಮ್ಮ ಸಿದ್ಧಾಂತವನ್ನು ಒಪ್ಪುವ ಜಾತ್ಯತೀತ ಪ್ರಾದೇಶಿಕ ಶಕ್ತಿಗಳನ್ನು ನಾವು ಸೇರಿಸಿಕೊಳ್ಳಬೇಕು. ಸಾಮಾನ್ಯ ಸೈದ್ಧಾಂತಿಕ ಆಧಾರದ ಮೇಲೆ ಎನ್‌ಡಿಎಯನ್ನು ಎದುರಿಸಲು ಒಗ್ಗಟ್ಟಿನ ಪ್ರತಿಪಕ್ಷದ ತುರ್ತು ಅಗತ್ಯವಾಗಿದೆ. ಯಾವುದೇ ಮೂರನೇ ಶಕ್ತಿಯ ಹೊರಹೊಮ್ಮುವಿಕೆಯು, ಬಿಜೆಪಿ/ಎನ್‌ಡಿಎಗೆ ಲಾಭವನ್ನು ನೀಡುತ್ತದೆ..”ಎಂದು ಪಕ್ಷವು ತನ್ನ ನಿರ್ಣಯದಲ್ಲಿ ಹೇಳಿದೆ.
ಒಟ್ಟಿನಲ್ಲಿ 2024ರ ಲೋಕಸಭೆ ಚುನಾವಣೆಯನ್ನು ಒಂಟಿಯಾಗಿ ಎದುರಿಸದೇ, ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಏಕೀಕೃತ ಮೈತ್ರಿಕೂಟದೊಂದಿಗೆ ಹೋರಾಡುವ ಮುನ್ಸೂಚನೆಯನ್ನು ಕಾಂಗ್ರೆಸ್ ನೀಡಿದೆ ಎಂದು ಹೇಳಬಹುದು.