ಕನ್ನಡ ಸುದ್ದಿ  /  Nation And-world  /  Congress Jabs Pm Modi Over Repeated Arrival Of Ambulance In Roadshow

PM Modi Roadshow: ಮೋದಿ ರೋಡ್‌ ಶೋ ರಾಜಕೀಯಕ್ಕೆ 'ಆಂಬುಲೆನ್ಸ್' ಎಂಟ್ರಿ; ಅದನ್ನು ಸ್ಟಾರ್ ಪ್ರಚಾರಕನನ್ನಾಗಿ ಮಾಡಿ ಎಂದ ಕಾಂಗ್ರೆಸ್!

ಮೋದಿ ಚುನಾವಣಾ ರ‍್ಯಾಲಿಗಳನ್ನು ನಡೆಸುವಾಗ, ಹಲವು ಬಾರಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿರುವ ಬಗ್ಗೆ ವರದಿಯಾಗಿತ್ತು. ರೋಡ್‌ ಶೋ ನಡೆಸುವ ವೇಳೆ ಪುನರಾವರ್ತಿತವಾಗಿ ಆಂಬುಲೆನ್ಸ್‌ ಬಂದಿರುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಟೀಕಿಸಿದೆ. ಅಷ್ಟೇ ಅಲ್ಲದೆ, ಆ ಆಂಬುಲೆನ್ಸ್‌ ಅನ್ನು ಬಿಜೆಪಿಯ ‘ಸ್ಟಾರ್ ಪ್ರಚಾರಕ’ನನ್ನಾಗಿ ಮಾಡಬೇಕು ಎಂದು ಕೈ ಪಕ್ಷ ಹೇಳಿದೆ.

ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರು ಗಂಟೆಗಳ ಮೆಗಾ ರೋಡ್‌ಶೋ ನಡೆಸಿದರು.
ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರು ಗಂಟೆಗಳ ಮೆಗಾ ರೋಡ್‌ಶೋ ನಡೆಸಿದರು. (ANI)

ಚುನಾವಣಾ ಅಖಾಡ ರಂಗೇರಿರುವ ಗುಜರಾತ್‌ನಲ್ಲಿ ಮೋದಿ ಮೇನಿಯಾ ಜೋರಾಗಿದೆ. ಈಗಾಗಲೇ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು, ಸೋಮವಾರ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನ ಅತಿ ದೊಡ್ಡ ನಗರ ಅಹಮದಾಬಾದ್‌ನಲ್ಲಿ ಮೆಗಾ ರೋಡ್ ಶೋ ನಡೆಸಿದ್ದಾರೆ.

ಮೊದಲ ಹಂತದ ಮತದಾನಕ್ಕೂ ಮುನ್ನ, ಈ ಹಿಂದೆ ಹಲವು ಬಾರಿ ಮೋದಿ ತವರು ರಾಜ್ಯಕ್ಕೆ ಬಂದು ಚುನಾವಣಾ ಪ್ರಚಾರ ನಡೆಸಿದ್ದಾರೆ. ಅಲ್ಲದೆ ಹಲವು ಬಾರಿ ರೋಡ್‌ ಶೋ ಕೂಡಾ ನಡೆಸಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಈಗ ಅದೇ ರೋಡ್‌ ಶೋ ಮುಂದಿಟ್ಟುಕೊಂಡಿರುವ ಪ್ರತಿಪಕ್ಷ ಕಾಂಗ್ರೆಸ್‌; ಮೋದಿ ಹಾಗೂ ಬಿಜೆಪಿ ಕಾಲೆಳೆದಿದೆ.

ಮೋದಿ ಚುನಾವಣಾ ರ‍್ಯಾಲಿಗಳನ್ನು ನಡೆಸುವಾಗ, ಹಲವು ಬಾರಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿರುವ ಬಗ್ಗೆ ವರದಿಯಾಗಿತ್ತು. ರೋಡ್‌ ಶೋ ನಡೆಸುವ ವೇಳೆ ಪುನರಾವರ್ತಿತವಾಗಿ ಆಂಬುಲೆನ್ಸ್‌ ಬಂದಿರುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಟೀಕಿಸಿದೆ. ಅಷ್ಟೇ ಅಲ್ಲದೆ, ಆ ಆಂಬುಲೆನ್ಸ್‌ ಅನ್ನು ಬಿಜೆಪಿಯ ‘ಸ್ಟಾರ್ ಪ್ರಚಾರಕ’ನನ್ನಾಗಿ ಮಾಡಬೇಕು ಎಂದು ಕೈ ಪಕ್ಷ ಹೇಳಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ಯುವ ಕಾಂಗ್ರೆಸ್ (Indian Youth Congress)ನ ಮುಖ್ಯಸ್ಥ ಶ್ರೀನಿವಾಸ್ ಬಿವಿ, ತಮಗೆ 2 ಬೇಡಿಕೆಗಳಿವೆ ಎಂದು ಹೇಳಿದ್ದಾರೆ. ಅದರಲ್ಲಿ ಮೊದಲನೆಯದು, “ಪ್ರಧಾನಿಯವರ ಭದ್ರತೆ ವಿಚಾರದಲ್ಲಿ ಈ ಭಾರಿ ಭದ್ರತಾ ಲೋಪವನ್ನು ಯಾವುದೇ ಪಕ್ಷಪಾತವಿಲ್ಲದೆ ತನಿಖೆ ಮಾಡಬೇಕು. ಯಾಕೆಂದರೆ ಅವರು ಚುನಾವಣೆಯ ಸಮಯದಲ್ಲಿ ಎಲ್ಲಿಗೆ ಹೋದರೂ, ಆಂಬ್ಯುಲೆನ್ಸ್‌ಗಳು ಪ್ರತ್ಯಕ್ಷವಾಗುತ್ತವೆ. ಅದು ಕೂಡಾ ಯಾವುದೇ ಭದ್ರತಾ ತಪಾಸಣೆಯಿಲ್ಲದೆ. ಇದು ಕಾಕತಾಳೀಯವಂತೂ ಆಗಿರಲು ಸಾಧ್ಯವಿಲ್ಲ” ಎಂದು ಶ್ರೀನಿವಾಸ್ ಹೇಳಿದ್ದಾರೆ.

ಶ್ರೀನಿವಾಸ್ ಅವರ ಎರಡನೇ ಬೇಡಿಕೆಯೇ, ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಆಂಬ್ಯುಲೆನ್ಸ್ ಅನ್ನು ಕೂಡಾ ಸೇರಿಸಬೇಕು ಎಂಬುದಾಗಿದೆ.

ಗುರುವಾರ ಸಂಜೆ ಕೂಡಾ, ಮೋದಿ ಅವರ ತವರು ರಾಜ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿ ರೋಡ್‌ಶೋ ವೇಳೆ, ಪ್ರಧಾನಿಯ ಬೆಂಗಾವಲು ಪಡೆ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟಿತು. ರೋಡ್‌ ಶೋ ವೇಳೆ ಆಂಬ್ಯುಲೆನ್ಸ್‌ ಸಂಚಾರಕ್ಕೆ ಅನುಕೂಲವಾಗುವಂತೆ, ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ದಾರಿ ಮಾಡಿಕೊಟ್ಟಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಸನ್ನಿವೇಶ ನಡೆದಿವೆ. ಈಗ ಇದೇ ವಿಚಾರವನ್ನು ಹಿಡಿದುಕೊಂಡು, ಮೋದಿ ಪಕ್ಷದ ಕಾಲೆಳೆಯಲು ಕಾಂಗ್ರೆಸ್‌ ಮುಂದಾಗಿದೆ

ಬೆಂಗಾವಲು ವಾಹನವನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನವನ್ನು ಅನುಮತಿಸದ ಮಾರ್ಗದಲ್ಲಿ, ಆಂಬುಲೆನ್ಸ್‌ ಹೇಗೆ ಬಂದಿತು ಎಂದು ಟ್ವಿಟರ್‌ನಲ್ಲಿ ಹಲವರು ಪ್ರಶ್ನಿಸಿದ್ದಾರೆ. ಭಾರತದ ಪ್ರಧಾನ ಮಂತ್ರಿಯ ಭದ್ರತೆ ನೋಡಿಕೊಳ್ಳುವ ವಿಶೇಷ ರಕ್ಷಣಾ ಗುಂಪು (SPG), ಪ್ರಧಾನಿಯವರ ವಾಹನವು ಚಲಿಸುವ ಮಾರ್ಗವನ್ನು ಕೂಡಾ ಸ್ಯಾನಿಟೈಸ್‌ ಮಾಡುತ್ತದೆ. ಹೀಗಾಗಿ ಬೇರೆ ವಾಹನಕ್ಕೆ ಅನುಮತಿ ಇಲ್ಲದಿದ್ದರೂ, ಆಂಬುಲೆನ್ಸ್‌ ಪುನರಾವರ್ತಿತವಾಗಿ ಬರುತ್ತಿರುವುದಕ್ಕೆ ಕಾಂಗ್ರೆಸ್‌ ಪ್ರಶ್ನೆ ಎತ್ತಿದೆ.

ಗುಜರಾತ್‌ ವಿಧಾನಸಭೆ ಚುನಾವಣೆಗೆ ನಿನ್ನೆ(ಡಿ.01-ಗುರುವಾರ) ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಡಿ.05(ಸೋಮವಾರ)ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಮಧ್ಯೆ ಪ್ರಧಾನಿ ಮೋದಿ, ಅಹಮದಾಬಾದ್‌ನಲ್ಲಿ ನಿನ್ನೆ ಸಂಜೆ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಒಟ್ಟು 50 ಕಿ.ಮೀ ದೂರ ಕ್ರಮಿಸಿದ ಈ 'ಮೆಗಾ ರೋಡ್ ಶೋ', ದೇಶದ ರಾಜಕೀಯ ಇತಿಹಾಸದಲ್ಲೇ ನಾಯಕರೊಬ್ಬರು ಕೈಗೊಂಡ ಅತ್ಯಂತ ಬೃಹತ್‌ ರೋಡ್‌ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಧಾನಿ ಮೋದಿ ಕೈಗೊಂಡ 'ಮೆಗಾ ರೋಡ್ ಶೋ'ನಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುವ 16 ಕ್ಷೇತ್ರಗಳು ಬರುತ್ತವೆ. ನರೋಡಾ ಗಾಮ್‌ನಿಂದ ಆರಂಭವಾದ ಈ 'ಮೆಗಾ ರೋಡ್ ಶೋ', ಥಕ್ಕರ್‌ಬಾಪನಗರ, ಬಾಪುನಗರ್, ನಿಕೋಲ್, ಅಮರೈವಾಡಿ, ಮಣಿನಗರ, ಡ್ಯಾನಿಲಿಂಬ್ಡಾ, ಜಮಾಲ್‌ಪುರ್ ಖಾಡಿಯಾ, ಎಲಿಸ್‌ಬ್ರಿಡ್ಜ್, ವೆಜಲ್‌ಪುರ್, ಘಟ್ಲೋಡಿಯಾ, ನರನ್‌ಪುರ್ ಮತ್ತು ಸಬರಮತಿ ಸೇರಿದಂತೆ‌ ಒಟ್ಟು 16 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದೆ. ಈ 'ಮೆಗಾ ರೋಡ್ ಶೋ' ದಕ್ಷಿಣ ಗಾಂಧಿನಗರದಲ್ಲಿ ಮುಕ್ತಾಯಗೊಂಡಿದೆ.

IPL_Entry_Point