Ravi Shankar Prasad: ಜನರಿಂದ ತಿರಸ್ಕೃತವಾಗಿರುವ "ಕಠಿಣ ಸತ್ಯ"ವನ್ನು ಅರಿಯುವಲ್ಲಿ ಸೋನಿಯಾ ವಿಫಲ: ಬಿಜೆಪಿ ತಿರುಗೇಟು!
ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡುತ್ತಾ, ಮೋದಿ ಸರ್ಕಾರ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದರು. ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಜನರಿಂದ ತಿರಸ್ಕೃತವಾಗಿರುವ "ಕಠಿಣ ಸತ್ಯ"ವನ್ನು ಅರಿಯುವಲ್ಲಿ ಸೋನಿಯಾ ಗಾಂಧಿ ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ.
ಛತ್ತೀಸ್‌ಗಢ ರಾಜಧಾನಿ ರಾಯ್‌ಪುರ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡುತ್ತಾ, ಮೋದಿ ಸರ್ಕಾರ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದರು. ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಜನರಿಂದ ತಿರಸ್ಕೃತವಾಗಿರುವ "ಕಠಿಣ ಸತ್ಯ"ವನ್ನು ಅರಿಯುವಲ್ಲಿ ಸೋನಿಯಾ ಗಾಂಧಿ ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ದೇಶದ ಜನರು ಕಾಂಗ್ರೆಸ್‌ಗೆ ಮತ ಹಾಕದ ಕಾರಣಕ್ಕೆ ಸೋನಿಯಾ ಗಾಂಧಿ ಅವರು ಚುನಾವಣಾ ಆಯೋಗವನ್ನು ಏಕೆ ದೂಷಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಸೋನಿಯಾ ಗಾಂಧಿ ಈ ಸಂಸ್ಥೆಗಳ ಸ್ವಾಯತ್ತತೆ ಮತ್ತು ಸಾಂಸ್ಥಿಕ ಗೌರವದ ಮೇಲಿನ ದಾಳಿ ಮಾಡಿದ್ದಾರೆ ಎಂದು ರವಿಶಂಕರ್ ಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಮಾಡಿದ ಭಾಷಣ ಹತಾಶೆಯಿಂದ ತುಂಬಿತ್ತು. ದೇಶದ ಜನ ತಮ್ಮನ್ನು ಏಕೆ ತಿರಸ್ಕಾರ ಮಾಡಿದ್ದಾರೆ ಎಂಬ ಅರಿವಿನ ಕೊರತೆ, ಸೋನಿಯಾ ಗಾಂಧಿ ಭಾಷಣದಲ್ಲಿ ಎದ್ದು ಕಾಣುತ್ತಿತ್ತು ಎಂದು ರವಿಶಂಕರ್ ಪ್ರಸಾದ್ ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ, ಸಮಾಜದ ವಿವಿಧ ವಿಭಾಗಗಳು ಅಭಿವೃದ್ಧಿಯ ಫಲವನ್ನು ಪಡೆದಿದ್ದಾರೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಮಹಿಳೆಯರು ಮತ್ತು ಮಧ್ಯಮ ವರ್ಗದವರು ಈ ಅಭಿವೃದ್ಧಿಯ ಸಮಾನ ಪಾಲುದಾರರಾಗಿದ್ದಾರೆ.
ಪ್ರಾಮಾಣಿಕ ಆಡಳಿತ ಮತ್ತು ವಿತರಣೆಯಿಂದಾಗಿ ಇದು ಸಂಭವಿಸಿದೆ ಎಂದು ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಇಂದು ಅತ್ಯಂತ ಗುರುತಿಸಲ್ಪಟ್ಟ ಜಾಗತಿಕ ಶಕ್ತಿಯಾಗಿ ಮಾರ್ಪಟ್ಟಿದೆ. ಭಾರತವನ್ನು ಈಗ ಎಲ್ಲರೂ ಗೌರವಿಸುತ್ತಾರೆ. ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸ್ವಚ್ಛ ಆಡಳಿತ ಕಾರಣ ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ಇದೇ ಅಭಿಪ್ರಾಯವನ್ನು ಹೊರಹಾಕಿರುವ ಬಿಜೆಪಿ ಮುಖ್ಯ ವಕ್ತಾರ ಅನಿಲ್ ಬಲುನಿ, ಕಾಂಗ್ರೆಸ್ ಸಮಾವೇಶವು ಅದರ ಹತಾಶೆ, ನಕಾರಾತ್ಮಕತೆ ಮತ್ತು ಕೆಟ್ಟ ಇಚ್ಛೆಯನ್ನು ಸಂಕೇತಿಸುತ್ತದೆ ಎಂದು ಹರಿಹಾಯ್ದಿದ್ದಾರೆ. ಮೋದಿಯವರ ನಾಯಕತ್ವದಲ್ಲಿ ಭಾರತವು ವಿಶ್ವದ ಪ್ರಕಾಶಮಾನ ನಕ್ಷತ್ರದಂತೆ ಮಿಂಚುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ದೇಶದ "ಕತ್ತಲ ಚುಕ್ಕೆ"ಯಾಗಿದೆ ಎಂದು ಬಲೂನಿ ಅಪಹಾಸ್ಯ ಮಾಡಿದ್ದಾರೆ.
ಜನರು ಪದೇ ಪದೇ ತಿರಸ್ಕರಿಸುತ್ತಿರುವುದು ವಿರೋಧ ಪಕ್ಷವನ್ನು ಹತಾಶೆಯ ಆಳಕ್ಕೆ ಕೊಂಡೊಯ್ದಿದೆ. ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಅತಿರೇಕದ ಭ್ರಷ್ಟಾಚಾರ, ಕ್ರೋನಿ ಕ್ಯಾಪಿಟಲಿಸಂ ಮತ್ತು ಕುಟುಂಬ ಆಡಳಿತವನ್ನು ಜನರು ತಿರಸ್ಕರಿಸಿದ್ದಾರೆ. ಈ ಸತ್ಯವನ್ನು ಅರಗಿಸಿಕೊಳ್ಳಲು ಸೋನಿಯಾ ಗಾಂಧಿ ಅವರಿಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸಭೆಯಲ್ಲಿ ಪ್ರಾಮಾಣಿಕ ಆತ್ಮಾವಲೋಕನ ಕಂಡುಬರಲಿಲ್ಲ ಎಂದು ಅನಿಲ್ ಬಲೂನಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ 85ನೇ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಕಾಂಗ್ರೆಸ್ ಮತ್ತು ದೇಶಕ್ಕೆ ಇದು ವಿಶೇಷವಾಗಿ ಸವಾಲಿನ ಸಮಯ ಎಂದು ಹೇಳಿದ್ದರು.
"ಪ್ರಧಾನಿ ಮೋದಿ ಮತ್ತು ಬಿಜೆಪಿ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನು ವಶಪಡಿಸಿಕೊಂಡಿದೆ. ಬಿಜೆಪಿ ದ್ವೇಷದ ಬೆಂಕಿಯನ್ನು ಹೆಚ್ಚಿಸುತ್ತಿದೆ. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಕೆಟ್ಟದಾಗಿ ಗುರಿಯಾಗಿಸುತ್ತಿದೆ.." ಎಂದು ಸೋನಿಯಾ ಗಾಂಧಿ ಆರೋಪಿಸಿದ್ದರು.
ಇದೇ ವೇಳೆ ಸೋನಿಯಾ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯೊಂದಿಗೆ ನಾನು ನನ್ನ ರಾಜಕೀಯ ಪಯಣವನ್ನು ಅಂತ್ಯಗೊಳಿಸಲು ಬಯಸುತ್ತೇನೆ ಎಂದು ಹೇಳಿದ್ದು ಗಮನ ಸೆಳೆದಿದೆ.
ವಿಭಾಗ