Kannada News  /  Nation And-world  /  Congress President Contender Mallikarjun Kharge Quits Key Rajya Sabha Post
ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ)
ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ) (PTI)

Mallikarjun Kharge: ರಾಜ್ಯಸಭಾ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

01 October 2022, 13:22 ISTHT Kannada Desk
01 October 2022, 13:22 IST

ಅಕ್ಟೋಬರ್ 17 ರಂದು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಸೋನಿಯಾ ಗಾಂಧಿ ಅವರಿಗೆ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ಕಳುಹಿಸಿದ್ದಾರೆ. ಸೋನಿಯಾ ರಾಜ್ಯಸಭೆ ಪ್ರತಿಪಕ್ಷ ಸ್ಥಾನಕ್ಕೆ ನೂತನ ನಾಯಕನ ಹೆಸರನ್ನು ಸೂಚಿಸಲಿದ್ದಾರೆ.

ನವದೆಹಲಿ: ಅಕ್ಟೋಬರ್ 17 ರಂದು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮವನ್ನು ಖರ್ಗೆ ಪಾಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೋನಿಯಾ ಗಾಂಧಿ ಅವರಿಗೆ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ಕಳುಹಿಸಿದ್ದಾರೆ. ಸೋನಿಯಾ ಗಾಂಧಿ ಅವರು ನೂತನ ರಾಜ್ಯಸಭೆ ವಿಪಕ್ಷ ನಾಯಕನ ಹೆಸರನ್ನು ರಾಜ್ಯಸಭೆ ಅಧ್ಯಕ್ಷರಿಗೆ ಕಳುಹಿಸಿ ಕೊಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಿನ್ನೆ(ಸೆ.೩೦-ಶುಕ್ರವಾರ) ರಾತ್ರಿಯೇ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು, ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ. ಉದಯಪುರದಲ್ಲಿ ನಡೆದ ಕಾಂಗ್ರೆಸ್‌ ಚಿಂತನಾ ಶಿಬಿರದಲ್ಲಿ ಕೈಗೊಂಡ “ಒಬ್ಬ ವ್ಯಕ್ತಿ, ಒಂದು ಹುದ್ದೆ” ನಿಯಮಕ್ಕೆ ತಾವು ಬದ್ಧರಾಗಿರುವುದಾಗಿ ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಗಾಂಧಿ ಪರಿವಾರದ ಬೆಂಬಲಿತ ಅಭ್ಯರ್ಥಿಯಾಗಿರುವ 80 ವರ್ಷದ ಮಲ್ಲಿಕಾರ್ಜುನ ಖರ್ಗೆ, ಚುನಾವಣೆಯಲ್ಲಿ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರನ್ನು ಎದುರಿಸಲಿದ್ದಾರೆ. ಇಬ್ಬರ ಪೈಕಿ ಯಾರೇ ಅಭ್ಯರ್ಥಿಯಾದರೂ 25 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಮೊದಲ ಗಾಂಧಿಯೇತರ ಅಧ್ಯಕ್ಷರು ದೊರಕಲಿದ್ದಾರೆ. ಅಲ್ಲದೇ ಇಬ್ಬರೂ ನಾಯಕರು ದಕ್ಷಿಣ ಭಾರತದವರು ಎಂಬುದು ವಿಶೇಷ.

ಜಿ-23 ಭಿನ್ನಮತೀಯ ಗುಂಪಿನ ಪ್ರಮುಖ ಸದಸ್ಯ ಶಶಿ ತರೂರ್ ಅವರನ್ನು ನೇರ ಸ್ಪರ್ಧೆಯಲ್ಲಿ ಖರ್ಗೆ ಎದುರಿಸಲಿದ್ದಾರೆ. ಆದರೆ ಹಲವು ಜಿ-23 ನಾಯಕರು ಅಧಿಕೃತವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸುರುವುದು ಕುತೂಹಲ ಕೆರಳಿಸಿದೆ.

ಜಾರ್ಖಂಡ್‌ನ ಮಾಜಿ ಸಚಿವ ಕೆಎನ್‌ ತ್ರಿಪಾಠಿ ಕೂಡ ಮೂರನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ತ್ರಿಪಾಠಿ ಅವರು ನಾಮಕಾವಾಸ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಖರ್ಗೆ ಮತ್ತು ತರೂರ್‌ ನಡುವೆಯೇ ನೇರ ಸ್ಪರ್ಧೆ ಏರ್ಪಡಲಿದೆ ಎನ್ನಲಾಗಿದೆ. ಕಾಂಗ್ರೆಸ್‌ನ ಬಹುತೇಕ ನಾಯಕರ ಬೆಂಬಲ ಹೊಂದಿರುವ ಖರ್ಗೆ ಅವರೇ, ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಜಯ ಸಾಧಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ತಮ್ಮ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಕ್ತಕಂಠದಿಂದ ಹೊಗಳಿರುವ ತರೂರ್‌, ಅವರು ಕಾಂಗ್ರೆಸ್‌ನ ಭೀಷ್ಮ ಪಿತಾಮಹ ಇದ್ದಂತೆ ಎಂದು ಬಣ್ಣಿಸಿರುವುದು ಗಮನ ಸೆಳೆದಿದೆ. ನಾವು ಪ್ರತಿಸ್ಪರ್ಧಿಗಳಲ್ಲ, ನಮ್ಮ ನಡುವೆ ಸೌಹಾರ್ದ ಸ್ಪರ್ಧೆ ನಡೆಯಲಿದೆ ಎಂದು ಶಶಿ ತರೂರ್‌ ಈಗಗಾಲೇ ಸ್ಪಷ್ಟಪಡಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕೂಡ ಶಶಿ ತರೂರ್‌ ಅವರ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದು, ಚುನಾವಣೆಯಲ್ಲಿ ಯಾರೇ ಗೆದ್ದರೂ, ಕಾಂಗ್ರೆಸ್‌ ಬೆಳವಣಿಗೆಗೆ ಅದು ಪೂರಕವಾಗಲಿದೆ ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಖರ್ಗೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಅವರು ಗಾಂದಿ ಪರಿವಾರದ ಅಣತಿಯಂತೆಯೇ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ವಿರುದ್ಧವಾಗಿ ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ, ಹೈಕಮಾಂಡ್‌ ಸಂಸ್ಕೃತಿಯನ್ನು ಬದಲಾಯಿಸುವುದಾಗಿ ಶಶಿ ತರೂರ್‌ ಹೇಳಿರುವುದು ಗಮನ ಸೆಳೆದಿದೆ.

ಸದ್ಯ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಖರ್ಗೆ ರಾಜೀನಾಮೆ ನೀಡಿದ್ದು, ಸೋನಿಯಾ ಗಾಂಧಿ ನೂತನ ರಾಜ್ಯಸಭೆ ಪ್ರತಿಪಕ್ಷ ನಾಯಕನ ಹೆಸರನ್ನು ಶೀಘ್ರದಲ್ಲೇ ಘೋಷಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್‌ ಶೀಘ್ರದಲ್ಲೇ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ದೇಶದ ಎಲ್ಲಾ ಪ್ರದೇಶ ಕಾಂಗ್ರೆಸ್‌ ಸಮಿತಿಗಳಿಗೆ ಇಬ್ಬರೂ ನಾಯಕರು ಭೇಟಿ ನೀಡಲಿದ್ದಾರೆ.