Assembly Elections: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಇಲ್ಲಿದೆ ಲಿಸ್ಟ್​
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Assembly Elections: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಇಲ್ಲಿದೆ ಲಿಸ್ಟ್​

Assembly Elections: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಇಲ್ಲಿದೆ ಲಿಸ್ಟ್​

Assembly Elections 2023:ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಕಮಲ್​​ ನಾಥ್-ರೇವಂತ್​ ರೆಡ್ಡಿ-ಭೂಪೇಶ್ ಬಘೇಲ್
ಕಮಲ್​​ ನಾಥ್-ರೇವಂತ್​ ರೆಡ್ಡಿ-ಭೂಪೇಶ್ ಬಘೇಲ್

ನವದೆಹಲಿ: ಪಂಚರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಂದು ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ತೆಲಂಗಾಣ ವಿಧಾನಸಭೆ ಚುನಾವಣೆ

ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ 55 ಅಭ್ಯರ್ಥಿಗಳು ಇದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಎ. ರೇವಂತ್ ರೆಡ್ಡಿ ಅವರು ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುರ ರೇವಂತ್ ರೆಡ್ಡಿ ಅವರು ಮಲ್ಕಾಜಿಗಿರಿ ಕ್ಷೇತ್ರದ ಸಂಸದರಾಗಿದ್ದಾರೆ. ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಸ್ಪರ್ಧಿಸಿ ಗೆದ್ದಿದ್ದರು.

ಸಿಎಲ್​​ಪಿ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಮಧಿರಾ (ಎಸ್‌ಸಿ) ಕ್ಷೇತ್ರದಿಂದ ಹಾಗೂ ತುರುಪು ಜಯಪ್ರಕಾಶ್ ರೆಡ್ಡಿ ಸಂಗಾರೆಡ್ಡಿಯಿಂದ ಸ್ಪರ್ಧಿಸಲಿದ್ದಾರೆ. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಭದ್ರಕೋಟೆಯಾಗಿರುವ ಗಜ್ವೇಲ್‌ನಿಂದ ತುಮಕುಂಟಾ ನರಸಾ ರೆಡ್ಡಿ ಸ್ಪರ್ಧಿಸಲಿದ್ದಾರೆ. ಇತ್ತೀಚೆಗಷ್ಟೇ ಬಿಆರ್‌ಎಸ್‌ಗೆ ರಾಜೀನಾಮೆ ನೀಡಿದ ಮೈನಂಪಲ್ಲಿ ಹನುಮಂತ್‌ರಾವ್‌ಗೆ ಮಲ್ಕಾಜ್‌ಗಿರಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದ್ದು, ಅವರ ಪುತ್ರ ಮೈನಂಪಲ್ಲಿ ರೋಹಿತ್ ರಾವ್ ಮೇದಕ್​​ನಿಂದ ಟಿಕೆಟ್​ ನೀಡಲಾಗಿದೆ.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ

ಮಧ್ಯಪ್ರದೇಶ ಚುನಾವಣೆಗೆ ಕಾಂಗ್ರೆಸ್​ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯ ಕಾಂಗ್ರೆಸ್​ ಘಟಕದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಚಿಂದ್ವಾರಾ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ರಾಘೋಗಢ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಕಾಂಗ್ರೆಸ್​ ಗೆದ್ದು ಕಮಲ್​ ನಾಥ್​ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತಾದರೂ 2021ರಲ್ಲಿ 22 ಕಾಂಗ್ರೆಸ್ ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು. ಹೀಗಾಗಿ ಕಮಲ್ ನಾಥ್ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಈಗಾಗಲೇ ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಪೈಕಿ 136 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಛತ್ತೀಸ್‌ಗಢ ವಿಧಾನಸಭಾ ಚುನಾವಣೆ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ತನ್ನ ಮೊದಲ ಪಟ್ಟಿಯಲ್ಲಿ 30 ಅಭ್ಯರ್ಥಿಗಳಿಗೆ ಟಿಕೆಟ್​ ನೀಡಿದೆ. ಪಟಾನ್‌ ಕ್ಷೇತ್ರದಿಂದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಅಂಬಿಕಾಪುರದಿಂದ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್ ಅವರನ್ನು ಕಣಕ್ಕಿಳಿಸಿದೆ. ರಾಜನಂದಗಾಂವ್‌ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್​ ಗಿರೀಶ್ ದೇವಾಂಗನ್ ಅವರಿಗೆ ಟಿಕೆಟ್​​ ನೀಡಿದೆ.

2018 ರಲ್ಲಿ ಛತ್ತೀಸ್‌ಗಢದ 90 ವಿಧಾನಸಭಾ ಸ್ಥಾನಗಳಲ್ಲಿ 68 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು, 2000 ರಲ್ಲಿ ರಾಜ್ಯ ರಚನೆಯಾದ ನಂತರ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರವನ್ನು ರಚಿಸಿತು. ಬಿಜೆಪಿ ಈಗಾಗಲೇ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 85 ಜನರಿಗೆ ಟಿಕೆಟ್​ ನೀಡಿದೆ.

ಪಂಚರಾಜ್ಯ ಚುನಾವಣೆ

ಮಿಜೋರಾಂ ರಾಜ್ಯದಲ್ಲಿ ನವೆಂಬರ್‌ 7, ಛತ್ತೀಸಗಡ ರಾಜ್ಯದಲ್ಲಿ ನವೆಂಬರ್‌ 7 ಹಾಗೂ ನವೆಂಬರ್‌ 17ರಲ್ಲಿ ಎರಡು ಹಂತ, ಮಧ್ಯಪ್ರದೇಶದಲ್ಲಿ ನವೆಂಬರ್‌ 17, ರಾಜಸ್ತಾನದಲ್ಲಿ ನವೆಂಬರ್‌ 23, ತೆಲಂಗಾಣ ರಾಜ್ಯದಲ್ಲಿ ನವೆಂಬರ್‌ 30ರಂದು ಮತದಾನ ನಡೆಯಲಿದೆ. ಡಿಸೆಂಬರ್‌ 3ರಂದು ಮತ ಎಣಿಕೆ ನಡೆಯಲಿದೆ. ತೆಲಂಗಾಣ ವಿಧಾನಸಭೆಯ 119, ರಾಜಸ್ತಾನದ 200, ಮಧ್ಯಪ್ರದೇಶದ 230, ಛತ್ತೀಸಗಡ ರಾಜ್ಯದ 90 ಹಾಗೂ ಮಿಜೋರಾಂನ 40 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.