ಕನ್ನಡ ಸುದ್ದಿ  /  Nation And-world  /  Congress Reveals What After Bharat Jodo Yatra

Congress Meeting highlights: ಭಾರತ್ ಜೋಡೋ ಯಾತ್ರೆ ಬಳಿಕ ಕಾಂಗ್ರೆಸ್ ಪ್ಲಾನ್ ಏನು? 'ಕೈ'ಜೋಡಿಸಲು ಮುಂದಾದ ಕೈಪಕ್ಷ

ಸದ್ಯ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯ ಬಳಿಕ, ಕಾಂಗ್ರೆಸ್‌ ಮುಂದೇನು ಮಾಡಲಿದೆ ಎಂಬ ಬಗ್ಗೆ ಭಾರಿ ಕುತೂಹಲ ಮೂಡಿದೆ. ವಿವಿಧ ರಾಜ್ಯಗಳು ಸೇರಿದಂತೆ, ಮುಂದಿನ ಚುನಾವಣೆಯಲ್ಲಿ ಕೇಂದ್ರದಲ್ಲೂ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ತನ್ನ ಮುಂದಿರುವ ಎಲ್ಲಾ ಅವಕಾಶಗಳನ್ನು ಕೂಡಾ ಸಮಗ್ರವಾಗಿ ಬಳಸಿಕೊಳ್ಳಬೇಕಿದೆ.

ಪಕ್ಷದ ಹಿರಿಯ ಮುಖಂಡರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಪಕ್ಷದ ಹಿರಿಯ ಮುಖಂಡರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (PTI)

ನವದೆಹಲಿ: ಮುಂದಿನ ವರ್ಷದ ಫೆಬ್ರವರಿ ತಿಂಗಳ ದ್ವಿತೀಯಾರ್ಧದಲ್ಲಿ, ಮೂರು ದಿನಗಳ ಸಮಗ್ರ ಅಧಿವೇಶನ ನಡೆಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿದೆ. ಇಂದು ಪಕ್ಷದ ನೂತನ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ರಚಿಸಿದ ಉನ್ನತ ಸಮಿತಿಯ ಮೊದಲ ಸಭೆ ನಡೆಸಿದ್ದು, ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಚರ್ಚೆಯ ಪ್ರಮುಖ ಅಂಶಗಳಲ್ಲಿ ಸಮಗ್ರ ಅಧಿವೇಶನ ಕೂಡಾ ಒಂದು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಬಗ್ಗೆಯೂ, ಈ ಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ, ದೇಶದ ಹಳೆಯ ಪಕ್ಷದ ಹಿರಿಯ ನಾಯಕರ ನಡುವಿನ ಚರ್ಚೆಯ ಸಮಯದಲ್ಲಿ ಭಾರತ್‌ ಜೋಡೋ ಯಾತ್ರೆ ಪ್ರಮುಖ ವಿಷಯವಾಗಿತ್ತು.

ಸದ್ಯ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯ ಬಳಿಕ, ಕಾಂಗ್ರೆಸ್‌ ಮುಂದೇನು ಮಾಡಲಿದೆ ಎಂಬ ಬಗ್ಗೆ ಭಾರಿ ಕುತೂಹಲ ಮೂಡಿದೆ. ವಿವಿಧ ರಾಜ್ಯಗಳು ಸೇರಿದಂತೆ, ಮುಂದಿನ ಚುನಾವಣೆಯಲ್ಲಿ ಕೇಂದ್ರದಲ್ಲೂ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ತನ್ನ ಮುಂದಿರುವ ಎಲ್ಲಾ ಅವಕಾಶಗಳನ್ನು ಕೂಡಾ ಸಮಗ್ರವಾಗಿ ಬಳಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಯೋಜನೆ ಬಗ್ಗೆ ಶೀಘ್ರವಾಗಿ ಸಂಕಲ್ಪ ಮಾಡಬೇಕು.

ಹಾತ್ ಸೆ ಹಾತ್ ಜೋಡೋ ಅಭಿಯಾನ

“ನಾವು ಜನವರಿ 26ರಿಂದ‌ ಮತ್ತೊಂದು ಬೃಹತ್ ಅಭಿಯಾನವನ್ನು ನಡೆಸಲು ನಿರ್ಧರಿಸಿದ್ದೇವೆ. ಅದುವೇ ‘ಹಾತ್ ಸೆ ಹಾತ್ ಜೋಡೋ ಅಭಿಯಾನ’. ಇದು ಎರಡು ತಿಂಗಳ ಅಭಿಯಾನವಾಗಿದ್ದು, ಇದರ ಅಡಿಯಲ್ಲಿ ಬ್ಲಾಕ್ ಮಟ್ಟದ ಪಾದಯಾತ್ರೆ ನಡೆಯಲಿದೆ. ಈ ಅವಧಿಯಲ್ಲಿ ರಾಹುಲ್ ಗಾಂಧಿಯವರಿಂದ ಪತ್ರ ಮತ್ತು ಮೋದಿ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಅನ್ನು ಪಕ್ಷವು ಹಸ್ತಾಂತರಿಸಲಿದೆ. ಈ ಯಾತ್ರೆಯಲ್ಲಿ ನಾವು ವಿಶೇಷವಾಗಿ ಯುವ ಜನತೆಯನ್ನು ಸಂಪರ್ಕಿಸುವತ್ತ ಗಮನ ಹರಿಸುತ್ತೇವೆ” ಎಂದು ಪಕ್ಷದ ನಾಯಕ ಕೆಸಿ ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುವಜನತೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ಗಮನಹರಿಸಲಾಗುವುದು ಎಂದು ಜೈರಾಮ್ ರಮೇಶ್ ಅವರು ಸಭೆಯಲ್ಲಿ ಹೇಳಿದ್ದಾರೆ. “ಇಂದು ಸಂಜೆ, ಭಾರತ್ ಜೋಡೋ ಯಾತ್ರೆಯು ರಾಜಸ್ಥಾನವನ್ನು ಪ್ರವೇಶಿಸಲಿದೆ. ಇಲ್ಲಿಯವರೆಗೆ ಏಳು ರಾಜ್ಯಗಳಲ್ಲಿ ವ್ಯಾಪಿಸಿದ ಈ ಯಾತ್ರೆ 2,500 ಕಿಮೀ ಕ್ರಮಿಸಿದೆ. ಇನ್ನೂ ಸುಮಾರು 1,100 ಕಿಲೋಮೀಟರ್‌ ಬಾಕಿ ಇವೆ,” ಎಂದು ಅವರು ಒತ್ತಿ ಹೇಳಿದರು.

ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತದ ಮುಕುಟ ಕಾಶ್ಮೀರದವರೆಗೆ ಈ ಯಾತ್ರೆ ಸಾಗಲಿದೆ. 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರೊಂದಿಗೆ ಪಕ್ಷದ ಸಂಪರ್ಕವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಈ ಯಾತ್ರೆ ಹೊಂದಿದೆ.

ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ, ಹಾಗೆಯೇ ಮಹಾರಾಷ್ಟ್ರ ಬಳಿಕ ಈಗ ಮಧ್ಯಪ್ರದೇಶದ ಮೂಲಕ ಯಾತ್ರೆ ಮುಂದುವರೆದಿದೆ.

“ಸಭೆಯ ಸಮಯದಲ್ಲಿ, ಭಾರತ್ ಜೋಡೋ ಯಾತ್ರೆಯ ನಂತರ ಮುಂದೇನು ಎಂಬುದರ ಕುರಿತು ನಾವು ಸುದೀರ್ಘ ಚರ್ಚೆ ನಡೆಸಿದ್ದೇವೆ. ಅದರಂತೆಯೇ ‘ಹಾತ್ ಸೆ ಹಾತ್ ಜೋಡೋ’ ವಿಶೇಷ ಕಾರ್ಯಕ್ರಮವನ್ನು ಯೋಜಿಸಲಾಗಿದೆ. ಇದನ್ನು ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾಡಲಾಗುವುದು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಾಧನೆಗಳನ್ನು ಎತ್ತಿ ತೋರಿಸಲಿದ್ದಾರೆ” ಎಂದು ಸಭೆಯ ಬಳಿಕ ಜೈರಾಮ್ ರಮೇಶ್ ತಿಳಿಸಿದರು.

IPL_Entry_Point