ಕನ್ನಡ ಸುದ್ದಿ  /  Nation And-world  /  Congress Succeeds To Make Compromise Between Ashok Gehlot And Sachin Pilot In Rajasthan

Rajasthan Congress Crisis: ಅರೆ! ಮತ್ತೆ ಒಂದಾದ ಗೆಹ್ಲೋಟ್‌, ಪೈಲಟ್:‌ ರಾಹುಲ್‌ ಮೆಸೇಜ್ ತಲುಪಿದ್ದೇಗೆ ಫಟಾಫಟ್?‌

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ನಡುವೆ ಮತ್ತೆ ಸಂಧಾನ ಏರ್ಪಟ್ಟಿದೆ. ತಮ್ಮನ್ನು 'ಗದ್ದಾರ್'‌ (ದ್ರೋಹಿ) ಎಂದು ಕರೆದಿದ್ದ ಅಶೋಕ್‌ ಗೆಹ್ಲೋಟ್‌ ವಿರುದ್ಧ ತೊಡೆ ತಟ್ಟಿದ್ದ ಸಚಿನ್‌ ಪೈಲಟ್‌, ಇದೀಗ ಅದೇ ಗೆಹ್ಲೋಟ್‌ ಅವರ ಕೈಹಿಡಿದು ಕ್ಯಾಮರಾಗೆ ಪೋಸ್‌ ನೀಡಿದ್ದಾರೆ. ಭಾರತ್‌ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸುವ ಮೊದಲು ಇಬ್ಬರು ನಡುವೆ ಸಂಧಾನವೇರ್ಪಟ್ಟಿದ್ದು ಹೇಗೆ?

ಗೆಹ್ಲೋಟ್-ಪೈಲಟ್‌ ದೋಸ್ತಿ
ಗೆಹ್ಲೋಟ್-ಪೈಲಟ್‌ ದೋಸ್ತಿ (Verifed Twitter)

ಜೈಪುರ: 'ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..' ಎಂಬ ಗಾದೆ ಮಾತೊಂದಿದೆ. ಅದೇ ರೀತಿ ರಾಜಸ್ಥಾನ ಕಾಂಗ್ರೆಸ್‌ ಪಾಲಿಗೆ ಗಂಡ-ಹೆಂಡತಿಯಂತಾಗಿರುವ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಅದ್ಯಾವಾಗ ಜಗಳವಾಡುತ್ತಾರೋ, ಅದ್ಯಾವಾಗ ಒಂದಾಗುತ್ತಾರೋ ಯಾರಿಗೂ ತಿಳಿಯದಂತಾಗಿದೆ.

ಪರಸ್ಪರ ಮುನಿಸಿಕೊಂಡಾಗ ನಮ್ಮಂತ ವೈರಿಗಳು ಇಡೀ ಜಗತ್ತಿನಲ್ಲೇ ಇಲ್ಲ ಎಂಬಂತೆ ಅರಚುವ ಈ ಇಬ್ಬರೂ ನಾಯಕರು, ಮತ್ತೆ ಒಂದಾದಾಗ ನಮ್ಮಂತ ದೋಸ್ತಿಗಳೇ ಯಾರಿಲ್ಲ ಎಂದು ಪೋಸು ಕೊಡುತ್ತಾರೆ. ಇವರಿಬ್ಬರ ಜಗಳ ಬಿಡಿಸಿ ಸುಸ್ತಾಗಿರುವ ಕಾಂಗ್ರೆಸ್‌ ಹೈಕಮಾಂಡ್‌, ಸದ್ಯ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ಸಂಧಾನ ಮಾಡಿಸಿ ಕೈತೊಳೆದುಕೊಂಡಿದೆ.

ಹೌದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ನಡುವೆ ಮತ್ತೆ ಸಂಧಾನ ಏರ್ಪಟ್ಟಿದೆ. ತಮ್ಮನ್ನು 'ಗದ್ದಾರ್'‌ (ದ್ರೋಹಿ) ಎಂದು ಕರೆದಿದ್ದ ಅಶೋಕ್‌ ಗೆಹ್ಲೋಟ್‌ ವಿರುದ್ಧ ತೊಡೆ ತಟ್ಟಿದ್ದ ಸಚಿನ್‌ ಪೈಲಟ್‌, ಇದೀಗ ಅದೇ ಗೆಹ್ಲೋಟ್‌ ಅವರ ಕೈಹಿಡಿದು ಕ್ಯಾಮರಾಗೆ ಪೋಸ್‌ ನೀಡಿದ್ದಾರೆ.

ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಡಿಸೆಂಬರ್ 4 ರಂದು ರಾಜಸ್ಥಾನಕ್ಕೆ ಪ್ರವೇಶಿಸಲಿದ್ದು, ಅದಕ್ಕೂ ಮೊದಲೇ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವಿನ ವೈಮನಸ್ಸನ್ನು ಕೊನೆಗಾಣಿಸುವಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಯಶಸ್ವಿಯಾಗಿದೆ. ಸಂಧಾನಕಾರರಾಗಿ ಬಂದಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಗೋಪಾಲ್‌, ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಗೆಹ್ಲೋಟ್‌ ಹೇಳಿದ್ದೇನು?

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು, ಸಚಿನ್‌ ಪೈಲಟ್‌ ಅವರನ್ನು 'ಗದ್ದಾರ್'‌ (ದ್ರೋಹಿ) ಎಂದು ಕರೆದಿದ್ದರು. ಸಚಿನ್‌ ಪೈಲಟ್‌ ರಾಜಸ್ಥಾನ ಕಾಂಗ್ರೆಸ್‌ ಘಟಕದ ಐಕ್ಯತೆಯನ್ನು ಮುರಿಯಲು ಬಯಸಿದ್ದಾರೆ ಎಂದೂ ಗೆಹ್ಲೋಟ್‌ ಕಿಡಿಕಾರಿದ್ದರು.

ಪೈಲಟ್‌ ಪ್ರತಿಕ್ರಿಯೆ ಏನು?

ತಮ್ಮನ್ನು 'ಗದ್ದಾರ್'‌ (ದ್ರೋಹಿ) ಎಂದು ಕರೆದ ಅಶೋಕ್‌ ಗೆಹ್ಲೋಟ್‌ ವಿರುದ್ಧ ತಿರುಗಿ ಬಿದ್ದ ಸಚಿನ್‌ ಪೈಲಟ್‌, ಕಾಂಗ್ರೆಸ್‌ ಈಗಲೂ ಅವರ ವಿರುದ್ದ ಕ್ರಮ ಕೈಗೊಳ್ಳದೇ ಹೋದರೆ ಬಹಳ ಕಷ್ಟವಾಗಲಿದೆ ಎಂದು ಎಚ್ಚರಿಸಿದ್ದರು.

ಕಾಂಗ್ರೆಸ್‌ ಮಾಡಿದ್ದೇನು?

ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಅವರ ನಡುವಿನ ಗುದ್ದಾಟದಿಂದ ರೋಸಿ ಹೋಗಿರುವ ಕಾಂಗ್ರೆಸ್‌ ಹೈಕಮಾಂಡ್‌, ಆರಂಭದಲ್ಲಿ ಈ ವಿಷಯದಲ್ಲಿ ಮೌನವಾಗಿತ್ತು, ಆದರೆ ಯಾವಾಗ ಸಚೊನ್‌ ಪೈಲಟ್‌ ಒತ್ತಡ ಹೆಚ್ಚಾಯಿತೋ ಆಗ ಅಶೋಕ್‌ ಗೆಹ್ಲೋಟ್‌ ಅವರಿಗೆ ಎಚ್ಚರಿಕೆ ನೀಡುವ 'ಧೈರ್ಯ'‌ ತೋರಿತು.

ಸದ್ಯ ಮಧ್ಯಪ್ರದೇಶದಲ್ಲಿರುವ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ, ಡಿಸೆಂಬರ್ 4 ರಂದು ರಾಜಸ್ಥಾನಕ್ಕೆ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಘಟಕದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ರವಾನಿಸುವ ಅನಿವಾರ್ಯತೆಗೆ ಕಾಂಗ್ರೆಸ್‌ ಸಿಲುಕಿದೆ.

ಒಂದಾದ ಗೆಹ್ಲೋಟ್‌, ಪೈಲಟ್‌ ಹೇಳಿದ್ದೇನು?

"ಪಕ್ಷವು ನಮಗೆ ಸರ್ವಶ್ರೇಷ್ಠವಾಗಿದೆ. ಪಕ್ಷವು ತನ್ನ ಗತವೈಭವವನ್ನು ಮರಳಿ ಪಡೆಯಬೇಕೆಂದು ನಾವು ಬಯಸುತ್ತೇವೆ. ದೇಶದಲ್ಲಿ ಉದ್ವಿಗ್ನ ವಾತಾವರಣವಿದ್ದು, ಕೋಮು ಸೌಹಾರ್ದತೆಗಾಗಿ ರಾಹುಲ್‌ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೋ ಯಾತ್ರೆಯನ್ನು ರಾಜಸ್ಥಾನದಲ್ಲಿ ನಾವು ಯಶಸ್ವಿಗೊಳಿಸುತ್ತೇವೆ.." ಎಂದು ಅಶೋಕ್‌ ಗೆಹ್ಲೋಟ್‌ ಮತ್ತ ಸಚಿನ್‌ ಪೈಲಟ್ ಒಂದೇ ಧ್ವನಿಯಲ್ಲಿ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌, "ರಾಹುಲ್ ಗಾಂಧಿಯವರು ತಮ್ಮ 12 ದಿನಗಳ ರಾಜ್ಯ ಪ್ರವಾಸವನ್ನು ಪ್ರಾರಂಭಿಸುವ ಮುನ್ನವೇ, ರಾಜಸ್ಥಾನದಲ್ಲಿ ಪಕ್ಷದ ಇಬ್ಬರು ಉನ್ನತ ನಾಯಕರು ಒಗ್ಗಟ್ಟಾಗಿದ್ದಾರೆ.." ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ರಾಜಸ್ಥಾನದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟನ್ನು ಸದ್ಯ ಕಾಂಗ್ರೆಸ್‌ ಹೈಕಮಾಂಡ್‌ ತಣ್ಣಗಾಗಿಸಿದೆಯಾದರೂ, ಗೆಹ್ಲೋಟ್‌ ಮತ್ತು ಪೈಲಟ್‌ ನಡುವಣ ವೈಮನಸ್ಸು ಮತ್ತೆ ಸ್ಪೋಟಿಸಲೂಬಹುದು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

IPL_Entry_Point

ವಿಭಾಗ