Karnataka Congress: ಕಾಂಗ್ರೆಸ್ ಚುನಾವಣಾ ರಣತಂತ್ರ: ರಾಷ್ಟ್ರೀಯ ನಾಯಕರ ಪ್ರಚಾರಕ್ಕಾಗಿ ನಾಲ್ಕು ಕಡೆ ಬೃಹತ್ ಸಮಾವೇಶ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಪೂರ್ಣ ಸಜ್ಜಾಗಿರುವ ಪ್ರತಿಪಕ್ಷ ಕಾಂಗ್ರೆಸ್, ಭರಪೂರ ಚುನಾವಣಾ ಪ್ರಚಾರ ರಣತಂತ್ರವನ್ನು ಹೆಣೆದಿದೆ. ಪಕ್ಷದ ರಾಷ್ಟ್ರೀಯ ನಾಯಕರನ್ನು ಕರೆಯಿಸಿ, ರಾಜ್ಯದಲ್ಲಿ ನಾಲ್ಕು ಕಡೆಗಳಲ್ಲಿ ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕುರಿತಾದ ವಿಸ್ತೃತ ಮಾಹಿತಿ ಇಲ್ಲಿದೆ..
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಪೂರ್ಣ ಸಜ್ಜಾಗಿರುವ ಪ್ರತಿಪಕ್ಷ ಕಾಂಗ್ರೆಸ್, ಈ ಬಾರಿ ಶತಾಯಗತಾಯ ಅಧಿಕಾರ ಹಿಡಿಯಬೇಕೆಂಬ ಪಣದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದೆ. ತನ್ನ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳ ಈಡೇರಿಕೆಗೆ, ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆಲ್ಲುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಭರಪೂರ ಚುನಾವಣಾ ಪ್ರಚಾರ ರಣತಂತ್ರವನ್ನು ಹೆಣೆದಿರುವ ಕಾಂಗ್ರೆಸ್, ಪಕ್ಷದ ರಾಷ್ಟ್ರೀಯ ನಾಯಕರನ್ನು ಕರೆಯಿಸಿ ಪ್ರಚಾರ ನಡೆಸಲಿದೆ. ಇದಕ್ಕಾಗಿಯೇ ರಾಜ್ಯದಲ್ಲಿ ನಾಲ್ಕು ಕಡೆಗಳಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳಲಿದೆ. ಈ ಸಮಾವೇಶಗಳಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೀಪೇಶ್ ಭಾಘೇಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಅಷ್ಟೇ ಅಲ್ಲದೇ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ಖು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ, ಪಕ್ಷದ ಸ್ಟಾರ್ ಕ್ಯಾಂಪೇನರ್‌ಗಳಾಗಿ ರಾಜ್ಯಾದ್ಯಂತ ಪ್ರಚಾರ ಮಾಡಲಿದ್ದಾರೆ. ಆದರೆ ಅನಾರೋಗ್ಯದ ಕಾರಣದಿಂದಾಗಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರ್ನಾಟಕದಲ್ಲಿ ಈ ಬಾರಿ ಪ್ರಚಾರ ಮಾಡುವ ಸಾಧ್ಯತೆ ಕಡಿಮೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಹೀಗೆ ಒಟ್ಟು ನಾಲ್ಕು ಕಡೆ, ಬೃಹತ್ ರಾಜಕೀಯ ಸಮಾವೇಶಗಳನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕಾಗಿ ರಾಷ್ಟ್ರೀಯ ನಾಯಕರ ವೇಳಾಪಟ್ಟಿ ಸಿದ್ಧಪಡಿಸುತ್ತಿರುವ ಕಾಂಗ್ರೆಸ್, ಅವರ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುತ್ತಿದೆ.
ಮಾಜಿ ಐಎಎಸ್ ಅಧಿಕಾರಿ ಸಶಿಕಾಂತ್ ಸೆಂಥಿಲ್ ನೇತೃತ್ವದ ಕಾಂಗ್ರೆಸ್ ಪಕ್ಷದ ವಾರ್ ರೂಂಗೆ, ಈ ಸಮಾವೇಶಗಳ ರೂಪುರೇಷೆಗಳನ್ನು ಸಿದ್ಧಪಡಿಸುವ ಜವಾಬ್ದಾರಿ ವಹಿಸಲಾಗಿದೆ. ಸಮಾವೇಶದ ಸ್ವರೂಪ, ಸ್ಥಳ ಹಾಗೂ ದಿನಾಂಕವನ್ನು ಈ ವಾರ್ ರೂಂ ಸಮಿತಿ ನಿರ್ಧಾರ ಮಾಡಲಿದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಇದೇ ಏಪ್ರಿಲ್ 9 ರಂದು ಕೋಲಾರಕ್ಕೆ ಆಗಮಿಸಲಿದ್ದು, ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಜೈ ಭಾರತ್ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ, ರಾಷ್ಟ್ರೀಯ ನಾಯಕರ ಜೊತೆಗೂಡಿ ಕಾಂಗ್ರೆಸ್ ನಡೆಸುತ್ತಿರುವ ಮೊದಲ ಬಹಿರಂಗ ಸಮಾವೇಶ ಇದಾಗಲಿದೆ.
ಇನ್ನು ಮಹಿಳಾ ಮತದಾರರನ್ನು ಸೆಳೆಯಲು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಕಾ ಗಾಂಧಿ ಅವರ ಮೊರೆ ಹೋಗಿರುವ ಕಾಂಗ್ರೆಸ್, ಅವರ ನೇತೃತ್ವದಲ್ಲಿ ರಾಜ್ಯದ ಹಲವೆಡೆ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ. ಈಗಾಗಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ನಾ ನಾರಿ' ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಗಾಂಧಿ, ಇದೀಗ ಮತ್ತೆ ಪಕ್ಷದ ಸಮಾವೇಶಗಳಲ್ಲಿ ಭಾಗಿಯಾಗಲು ಕರ್ನಾಟಕಕ್ಕೆ ಬರುವುದು ಖಚಿತವಾಗಿದೆ.
ಆಡಳಿತಾರೂಢ ಬಿಜೆಪಿ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಹಲವು ಬಾರಿ ಕರ್ನಾಟಕಕ್ಕೆ ಕರೆಯಿಸಿಕೊಂಡಿದೆ. ಮುಂದಿನ ದಿನಗಳಲ್ಲೂ ಬಿಜೆಪಿಯ ಈ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ನಿಯಮಿತವಾಗಿ ಭೇಟಿ ನೀಡಲಿದ್ದಾರೆ.
ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆಯ ಸುನಾಮಿಯನ್ನು ಎದುರಿಸಬೇಕು ಎಂದು ಸ್ಪಷ್ಟವಾಗಿ ಅರಿತಿರುವ ಕಾಂಗ್ರೆಸ್, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರವೆಂಬಂತೆ ತನ್ನ ರಾಷ್ಟ್ರೀಯ ನಾಯಕರನ್ನು ಕರೆಯಿಸಿ ರಾಜ್ಯದ ನಾಲ್ಕು ಕಡೆ ಬೃಹತ್ ಸಮಾವೇಶ ನಡೆಸಲು ಮುಂದಾಗಿರುವುದು ರಾಜ್ಯದ ಜನರ ಗಮನ ಸೆಳೆದಿದೆ.