Opposition Alliance: ನಿತೀಶ್‌, ಮಮತಾ, ಕೆಸಿಆರ್‌ ಜೊತೆಗಿನ ಭಿನ್ನಾಭಿಪ್ರಾಯ ಬಗೆಹರಿಸಲು ಮುಂದಾದ ಕಾಂಗ್ರೆಸ್:‌ ಏನು ಸಂದೇಶ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opposition Alliance: ನಿತೀಶ್‌, ಮಮತಾ, ಕೆಸಿಆರ್‌ ಜೊತೆಗಿನ ಭಿನ್ನಾಭಿಪ್ರಾಯ ಬಗೆಹರಿಸಲು ಮುಂದಾದ ಕಾಂಗ್ರೆಸ್:‌ ಏನು ಸಂದೇಶ?

Opposition Alliance: ನಿತೀಶ್‌, ಮಮತಾ, ಕೆಸಿಆರ್‌ ಜೊತೆಗಿನ ಭಿನ್ನಾಭಿಪ್ರಾಯ ಬಗೆಹರಿಸಲು ಮುಂದಾದ ಕಾಂಗ್ರೆಸ್:‌ ಏನು ಸಂದೇಶ?

2024ರ ಚುನಾವಣೆಗೆ ಮುನ್ನ ಬಿಜೆಪಿ ವಿರೋಧಿ ಮಹಾಮೈತ್ರಿಕೂಟ ರಚಿಸುವ ಕನಸು ಕಾಣುತ್ತಿರುವ ಕಾಂಗ್ರೆಸ್‌, ಇದಕ್ಕಾಗಿ ವಿರೋಧ ಪಕ್ಷಗಳ ಮನೆ ಬಾಗಿಲು ಬಡಿಯುವ ನಿರ್ಧಾರ ಮಾಡಿದೆ. ಇದಕ್ಕಾಗಿ ತನ್ನ ಮೇಲೆ ಮುನಿಸಿಕೊಂಡಿರುವ ವಿವಿಧ ರಾಜಕೀಯ ಪಕ್ಷಗಳೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಡಿ ಇಟ್ಟಿದೆ. ಈ ಕುರಿತು ಇಲ್ಲಿದೆ ಮಾಹಿತಿ..

ರಾಯ್‌ಪುರ್‌ ಕಾಂಗ್ರೆಸ್‌ ಸಭೆ
ರಾಯ್‌ಪುರ್‌ ಕಾಂಗ್ರೆಸ್‌ ಸಭೆ (PTI)

ರಾಯ್‌ಪುರ್: 2024ರ ಚುನಾವಣೆಗೆ ಮುನ್ನ ಬಿಜೆಪಿ ವಿರೋಧಿ ಮಹಾಮೈತ್ರಿಕೂಟ ರಚಿಸುವ ಕನಸು ಕಾಣುತ್ತಿರುವ ಕಾಂಗ್ರೆಸ್‌, ಇದಕ್ಕಾಗಿ ವಿರೋಧ ಪಕ್ಷಗಳ ಮನೆ ಬಾಗಿಲು ಬಡಿಯುವ ನಿರ್ಧಾರ ಮಾಡಿದೆ. ಇದಕ್ಕಾಗಿ ತನ್ನ ಮೇಲೆ ಮುನಿಸಿಕೊಂಡಿರುವ ವಿವಿಧ ರಾಜಕೀಯ ಪಕ್ಷಗಳೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳಲು ಕಾಂಗ್ರೆಸ್‌ ಮುಂದಡಿ ಇಟ್ಟಿದೆ.

ರಾಯ್‌ಪುರ್‌ದಲ್ಲಿ ಮಾತನಾಡಿರುವ ಕಾಂಗ್ರೆಸ್‌ನ ರಾಜಕೀಯ ವ್ಯವಹಾರಗಳ ಸಮಿತಿಯ ಅಧ್ಯಕ್ಷ ವೀರಪ್ಪ ಮೊಯ್ಲಿ, ಪಕ್ಷವು ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಅನುಸಂಧಾನಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

"ನಾವು ಸಮಸ್ಯೆಗಳನ್ನು ಬಗೆಹರಿಸುವತ್ತ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೇವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್‌ ಜೊತೆಗೆ ಮೈತ್ರಿಯ ಕುರಿತು ಮಾತನಾಡಲು ನಾವು ಸಿದ್ಧರಾಗಿದ್ದೇವೆ.." ಎಂದು ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.

"ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಒಂದಾಗಬೇಕಿರುವುದು ಇಂದಿನ ರಾಷ್ಟ್ರೀಯ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಅವರೂ ಕೂಡ ನಮ್ಮೊಂದಿಗೆ ಮುಕ್ತವಾಗಿ ಮಾತನಾಡಲಿದ್ದಾರೆ ಎಂಬ ಭರವಸೆ ಇದೆ.." ಎಂದು ವೀರಪ್ಪ ಮೊಯ್ಲಿ ಹೇಳಿರುವುದು ಗಮನ ಸೆಳೆದಿದೆ.

ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರ್‌ದಲ್ಲಿ ಮೂರು ದಿನಗಳ ಚಿಂತನ-ಮಂಥನ ಸಭೆಯನ್ನು ಕಾಂಗ್ರೆಸ್‌ ಹಮ್ಮಿಕೊಂಡಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಮಟ್ಟದ ಮಹಾಮೈತ್ರಿಕೂಟ ರಚನೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ವೀರಪ್ಪ ಮೊಯ್ಲಿ ಅವರಿಂದ ರಾಜಿ ಸಂಧಾನದ ಹೇಳಿಕೆ ಹೊರಬಿದ್ದಿದೆ.

" 2024ರಲ್ಲಿ ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್‌ ಪಕ್ಷ ಸಾಧ್ಯವಾದ ಎಲ್ಲಾ ಮಾರ್ಗಗಳನ್ನು ಅನುಸರಿಸುತ್ತದೆ. ಇದಕ್ಕಾಗಿ ಬಿಜೆಪಿ ವಿರೋಧಿ ಪಕ್ಷಗಳೊಂದಿಗೆ ನಾವು ಮಾತನಾಡಲು ಸಿದ್ಧರಾಗಿದ್ದೇವೆ. ನಾನು 60 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ. ನನಗೆ ಪಕ್ಷದ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಚೆನ್ನಾಗಿ ತಿಳಿದಿವೆ. ನಾವು ಒಟ್ಟಿಗೆ ಕೆಲಸ ಮಾಡಿದಾಗ ಮಾತ್ರ ಬಿಜೆಪಿಯನ್ನು ಎದುರಿಸಲು ಸಾಧ್ಯ.." ಎಂದು ವೀರಪ್ಪ ಮೊಯ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

ಕೇವಲ ಎರಡು ದಿನಗಳ ಹಿಂದೆ ಮೇಘಾಲಯದಲ್ಲಿ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ಟಿಎಂಸಿ ಪಕ್ಷ ಬಿಜೆಪಿಗೆ ನೆರವು ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಗೋವಾದಲ್ಲಿ ಬಿಜೆಪಿಗೆ ನೆರವಾಗಲೆಂದೇ ಟಿಎಂಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು ಎಂದು ರಾಹುಲ್‌ ಆರೋಪಿಸಿದ್ದರು. ಅಲ್ಲದೇ ಮೇಘಾಲಯದಲ್ಲೂ ಬಿಜೆಪಿಗೆ ನೆರವಾಗುವ ಉದ್ದೇಶದಿಂದಲೇ, ಟಿಎಂಸಿ ಚುನಾವಣೆಯಲ್ಲು ಸ್ಪರ್ಧಿಸುತ್ತಿದೆ ಎಂದು ರಾಹುಲ್‌ ಕಿಡಿಕಾರಿದ್ದರು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಿಂಸಾತ್ಮಕ ರಾಜಕಾರಣ ಮಾಡುತ್ತಿದೆ. ಈ ಹಿಂಸೆಯನ್ನು ಅದು ಮೇಘಾಲಯಕ್ಕೂ ವಿಸ್ತರಿಸಲು ಬಯಸುತ್ತಿದೆ. ಇದೇ ಕಾರಣಕ್ಕೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷ ಸ್ಪರ್ಧಿಸುತ್ತಿದೆ ಎಂದು ರಾಹುಲ್‌ ತೀವ್ರ ವಾಗ್ದಾಳಿ ನಡೆಸಿದ್ದರು.

ರಾಹುಲ್‌ ಗಾಂಧಿ ಅವರ ಈ ಹೇಳಿಕೆ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಕೆರಳಿಸಿತ್ತು. ರಾಹುಲ್‌ ಹೇಳಿಕೆಗೆ ಟ್ವೀಟ್‌ ಮೂಲಕ ಸೂಕ್ತ ತಿರುಗೇಟು ನೀಡಿದ್ದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ಕಾಂಗ್ರೆಸ್‌ ತನ್ನ ವೈಫಲ್ಯಗಖನ್ನು ಮುಚ್ಚಿಕೊಳ್ಳಲು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

"ಬಿಜೆಪಿಯನ್ನು ವಿರೋಧಿಸುವಲ್ಲಿ ಮತ್ತು ಚುನಾವಣೆಗಳಲ್ಲಿ ಸೋಲಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ, ಅವರ ಅಪ್ರಸ್ತುತತೆ, ಅಸಮರ್ಥತೆ ಮತ್ತು ಅಭದ್ರತೆ ಅವರನ್ನು ಭ್ರಮನಿರಸನಕ್ಕೆ ತಳ್ಳಿದೆ. ನಮ್ಮ ಮೇಲೆ ದಾಳಿ ಮಾಡುವ ಬದಲು‌, ಅವರ ದುರಭಿಮಾನದ ರಾಜಕಾರಣವನ್ನು ಮರುಪರಿಶೀಲಿಸುವಂತೆ ನಾನು ರಾಹುಲ್ ಗಾಂಧಿಗೆ ಒತ್ತಾಯಿಸುತ್ತೇನೆ. ನಮ್ಮ ಬೆಳವಣಿಗೆ ಹಣದಿಂದಲ್ಲ, ಅದು ಜನರ ಪ್ರೀತಿಯನ್ನು ಅವಲಂಬಿಸಿದೆ.." ಎಂದು ಅಭಿಷೇಕ್‌ ಬ್ಯಾನರ್ಜಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.