Gulam Nabi Azad: ಕಾಂಗ್ರೆಸ್‌ನ್ನು ನಮ್ಮ ರಕ್ತ ಬಸಿದು ಕಟ್ಟಿದ್ದೇವು, ಆದರೆ.. ಕಣಿವೆ ಸೀಳಿದ ಆಜಾದ್‌ ಘರ್ಜನೆ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gulam Nabi Azad: ಕಾಂಗ್ರೆಸ್‌ನ್ನು ನಮ್ಮ ರಕ್ತ ಬಸಿದು ಕಟ್ಟಿದ್ದೇವು, ಆದರೆ.. ಕಣಿವೆ ಸೀಳಿದ ಆಜಾದ್‌ ಘರ್ಜನೆ!

Gulam Nabi Azad: ಕಾಂಗ್ರೆಸ್‌ನ್ನು ನಮ್ಮ ರಕ್ತ ಬಸಿದು ಕಟ್ಟಿದ್ದೇವು, ಆದರೆ.. ಕಣಿವೆ ಸೀಳಿದ ಆಜಾದ್‌ ಘರ್ಜನೆ!

ಇತ್ತೀಚಿಗಷ್ಟೇ ಕಾಂಗ್ರೆಸ್‌ ತೊರೆದಿರುವ ಗುಲಾಂ ನಬಿ ಆಜಾದ್‌, ಜಮ್ಮುವಿನಲ್ಲಿ ತಮ್ಮ ಬೆಂಬಲಿಗರ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಸ್ತುತ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಜಾದ್‌, ಕಾಂಗ್ರೆಸ್‌ ಪಕ್ಷ ಈಗ ಜನರ ಪಕ್ಷವಾಗಿ ಉಳಿದಿಲ್ಲ ಎಂದು ಕಿಡಿಕಾರಿದರು. ಜನರಿಂದ ದೂರವಾಗಿವ ಕಾಂಗ್ರೆಸ್‌ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಆಜಾದ್‌ ಹರಿಹಾಯ್ದರು.

<p>ಜಮ್ಮುವಿನಲ್ಲಿ ಆಜಾದ್‌ ಭಾಷಣ</p>
ಜಮ್ಮುವಿನಲ್ಲಿ ಆಜಾದ್‌ ಭಾಷಣ (ANI)

ಜಮ್ಮು: ಕಾಂಗ್ರೆಸ್‌ ಪಕ್ಷವನ್ನು ನನ್ನಂತಹ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು ನಮ್ಮ ರಕ್ತ ಬಸಿದು ಕಟ್ಟಿದ್ದೇವು. ಪ್ರತಿನಿತ್ಯ ಪ್ರಾಮಾಣಿಕ ಶ್ರಮ ಹಾಕುವ ಮೂಲಕ ಪಕ್ಷ ಸಂಘಟನೆಗೆ ನಮ್ಮ ಜೀವ ಮುಡುಪಾಗಿಟ್ಟಿದ್ದೇವು. ಕಾಂಗ್ರೆಸ್‌ ಪಕ್ಷ ನನ್ನಂತಹ ಲಕ್ಷಾಂತರ ಜನರ ರಕ್ತದಿಂದ ಕಟ್ಟಿದ ಪಕ್ಷವೇ ಹೊರತು, ಕಂಪ್ಯೂಟರ್‌ ಅಥವಾ ಟ್ವಿಟ್ಟರ್‌ನಿಂದ ಕಟ್ಟಿದ ಪಕ್ಷವಲ್ಲ ಎಂದು ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಹೇಳಿದ್ಧಾರೆ.

ಇತ್ತೀಚಿಗಷ್ಟೇ ಕಾಂಗ್ರೆಸ್‌ ತೊರೆದಿರುವ ಗುಲಾಂ ನಬಿ ಆಜಾದ್‌, ಜಮ್ಮುವಿನಲ್ಲಿ ತಮ್ಮ ಬೆಂಬಲಿಗರ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಸ್ತುತ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಜಾದ್‌, ಕಾಂಗ್ರೆಸ್‌ ಪಕ್ಷ ಈಗ ಜನರ ಪಕ್ಷವಾಗಿ ಉಳಿದಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಪಕ್ಷ ಈಗ ಕೇವಲ ಟ್ವೀಟ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಳಳಿಗೆ ಸಿಮೀತವಾದ ಪಕ್ಷವಾಗಿದೆ. ಜನರಿಂದ ದೂರವಾಗಿವ ಕಾಂಗ್ರೆಸ್‌ ಪಕ್ಷ ರಾಷ್ಟ್ರ ರಾಜಕಾರಣದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್‌ ಸರ್ವನಾಶಕ್ಕೆ ಆ ಪಕ್ಷದ ನಾಯಕತ್ವವೇ ಸಾಕು ಎಂದು ಗುಲಾಂ ನಬಿ ಆಜಾದ್‌ ಹರಿಹಾಯ್ದರು.

ಇದೇ ವೇಳೆ ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ಬಗ್ಗೆಯೂ ಕುಹುಕವಾಡಿದ ಆಜಾದ್. ಈಗ ಕಾಂಗ್ರೆಸ್‌ ನಾಯಕರು ಜೈಲಿಗೆ ಹೋಗುತ್ತಾರೆ. ಕಮಿಷನರ್‌ಗಳಿಗೆ ತಮ್ಮ ಹೆಸರು ಮೊದಲೇ ಬರೆದುಕೊಟ್ಟು, ಕೇವಲ ಒಂದೇ ಗಂಟೆಯಲ್ಲಿ ಬಿಡುಗಡೆಯಾಗಿ ಬರುತ್ತಾರೆ. ಇದು ಆ ಪಕ್ಷದಸ ಹೋರಾಟದ ಪರಿ. ಇದೇ ಕಾರಣಕ್ಕೆ ಕಾಂಗ್ರೆಸ್‌ ದೇಶದಲ್ಲಿ ಬೆಳವಣಿಗೆಯಾಗುತ್ತಿಲ್ಲ ಎಂದು ಆಜಾದ್‌ ಆರೋಪಿಸಿದರು.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ವಿರೋಧಿಸಿ, ಕಾಂಗ್ರೆಸ್‌ ನಿರೀಕ್ಷಿತ ಹೋರಾಟವನ್ನೇ ಮಾಡಲಿಲ್ಲ. ಇದು ಕಣಿವೆಯ ಜನತೆಗೆ ಬಗೆದ ದ್ರೋಹ ಎಂದೇ ನಾನು ಭಾವಿಸುತ್ತೇನೆ. ಕಾಂಗ್ರೆಸ್‌ ಇದುವರೆಗೂ ವಿಶೇಷ ಸ್ಥಾನಮಾನ ರದ್ದತಿ ವಿರುದ್ಧ ಗಟ್ಟಿಯಾದ ಧ್ವನಿಯನ್ನೇ ಎತ್ತಿಲ್ಲ ಎಂದು ಗುಲಾಂ ನಬಿ ಆಜಾದ್‌ ತೀವ್ರ ಅಸಮಾಧಾನ ಹೊರಹಾಕಿದರು.

ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತು ನಾನು ಪಕ್ಷ ತೊರೆಯುವ ನಿರ್ಧಾರ ಮಾಡಿದೆ. ನನ್ನ ರಾಜೀನಾಮೆ ಪತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ನ ಹಲವು ನಾಯಕರು ನನ್ನ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ಅಶಂಗಳಿಗೆ ಅಸಮಾಧಾನ ಹೊರಹಾಕಿದ್ದಾರೆ. ನಾನು ಅವರ ಅನಿವಾರ್ಯತೆಯನ್ನು ಅರಿತುಕೊಳ್ಳಬಲ್ಲೆ. ಆದರೆ ನಾನು ಪತ್ರದಲ್ಲಿ ಉಲ್ಲೇಖಿಸಿದ ಎಲ್ಲಾ ಅಂಶಗಳೂ ಸತ್ಯ ಎಂದು ಆಜಾದ್‌ ನುಡಿದರು.

ನಾನು ಹೊಸ ಪಕ್ಷ ಸ್ಥಾಪನೆ ಮುಂದಾಗಿದ್ದೇನೆ. ಕಣಿವೆಯ ಜನರ ಆಶೋತ್ತರಗಳಿಗೆ ಧ್ವನಿಯಾಗುವ ಆಶಯದೊಂದಿಗೆ ಈ ನಿರ್ಧಾರ ಕೈಗೊಂಡಿದ್ದೇನೆ. ಸದ್ಯ ಪಕ್ಷದ ಹೆಸರು, ಚಿಹ್ನೆ ಮತ್ತು ಧ್ವಜದ ಬಗ್ಗೆ ಏನೂ ತೀರ್ಮಾನವಾಗಿಲ್ಲ. ಕಣಿವೆಯ ಜನರೇ ಇದನ್ನು ನಿರ್ಧರಿಸುತ್ತಾರೆ. ನನ್ನ ಪಕ್ಷಕ್ಕೆ ಸ್ವದೇಶಿ ಹೆಸರನ್ನು ಇಡಲು ನಾನು ಬಯಸಿದ್ದೇನೆ. ಏಕೆಂದರೆ ಸ್ವದೇಶಿ ಹೆಸರು ಎಲ್ಲರಿಗೂ ಬೇಗ ಅರ್ಥವಾಗುತ್ತದೆ ಎಂದು ಗುಲಾಂ ನಬಿ ಆಜಾದ್‌ ಹೇಳಿದರು.

ನಾವು ರಚಿಸಲಿರುವ ಹೊಸ ರಾಜಕೀಯ ಪಕ್ಷ ಎಲ್ಲರನ್ನೂ ಒಳಗೊಳ್ಳುವ ಜಾತ್ಯಾತೀತ ಪಕ್ಷವಾಗಲಿದೆ. ಕಣಿವೆಗೆ ಈ ಮೊದಲು ನೀಡಲಾಗಿದ್ದ ವಿಶೇಷ ಸ್ಥಾನಮಾನ ಮರಳಿ ಕೊಡಬೇಕು ಎಂಬುದು ತಮ್ಮ ಪಕ್ಷದ ಪ್ರಾಥಮಿಕ ಬೇಡಿಕೆಯಾಗಲಿದೆ ಎಂದು ಆಜಾದ್‌ ಇದೇ ವೇಳೆ ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ ಕಾಂಗ್ರೆಸ್‌ನ ಬೆಲೆ ಏರಿಕೆ ವಿರುದ್ಧದ ಬೃಹತ್‌ ಸಮಾವೇಶದ ದಿನವೇ ಜಮ್ಮುವಿನಲ್ಲಿ ಗುಲಾಂ ನಬಿ ಆಜಾದ್‌ ತಮ್ಮ ಬೆಂಬಲಿಗರ ಬೃಹತ್‌ ಸಮಾವೇಶ ಏರ್ಪಡಿಸಿದ್ದು, ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕತ್ವವನ್ನು ತರಾಟೆಗೆ ತೆಗದದುಕೊಂಡಿದ್ದು ರಾಷ್ಟ್ರದ ಗಮನ ಸೆಳೆದಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.