ಕನ್ನಡ ಸುದ್ದಿ  /  Nation And-world  /  Congress Will Get More Seats In Telangana Assembly Election Brs Loss 10 Percent Votes South First People Survey Rmy

ಬದಲಾವಣೆ ಬಯಸುತ್ತಿದಿಯಾ ತೆಲಂಗಾಣ? ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ; ಬಿಆರ್‌ಎಸ್‌ಗೆ 10 ರಷ್ಟು ಮತ ನಷ್ಟ; ಸೌತ್ ಫಸ್ಟ್ ಪೀಪಲ್ ಸಮೀಕ್ಷೆ ಪ್ರಕಟ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಸೌತ್ ಫಸ್ಟ್ ಪೀಪಲ್ಸ್ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು  ಸೌತ್ ಫಸ್ಟ್ ಪೀಪಲ್ ಪಲ್ಸ್ ಸಮೀಕ್ಷೆ ಹೇಳಿದೆ.
ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸೌತ್ ಫಸ್ಟ್ ಪೀಪಲ್ ಪಲ್ಸ್ ಸಮೀಕ್ಷೆ ಹೇಳಿದೆ.

ಹೈದರಾಬಾದ್: ಆಂಧ್ರಪ್ರದೇಶದಿಂದ ತೆಲಂಗಾಣ ಇಬ್ಭಾಗವಾದ ಬಳಿಕ ಅಂದರೆ ಕಳೆದ 10 ವರ್ಷಗಳಿಂದ ನೆರೆಯ ತೆಲಂಗಾಣದಲ್ಲಿ (Telangana) ಸಿಎಂ ಕೆ ಚಂದ್ರಶೇಖರ್ ರಾವ್ (CM K Chandrashekar Rao) ಅವರ ನೇತೃತ್ವದ ಬಿಆರ್‌ಎಸ್ (ಈ ಹಿಂದೆ ಟಿಆರ್‌ಎಸ್) ಸರ್ಕಾರ ಆಡಳಿತದಲ್ಲಿದೆ. ಆದರೆ ಯಾಕೋ ಏನೋ ಅಲ್ಲಿನ ಜನ ಬದಲಾವಣೆ ಬಯಸಿದಂತೆ ಕಾಣುತ್ತಿದೆ.

ತೆಲುಗು ರಾಷ್ಟ್ರದ ವಿಧಾನಸಭೆ ಚುನಾವಣೆಗೆ ಇನ್ನ ಮೂರು ದಿನಗಳು ಮಾತ್ರ ಬಾಕಿ ಇರುವ ಬೆನ್ನಲ್ಲೇ ಸೌತ್ ಫಸ್ಟ್-ಪೀಪಲ್ ಪಲ್ಸ್ ಸಮೀಕ್ಷೆ ಪ್ರಕಟವಾಗಿದೆ. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ, ಆಡಳಿತಾರೂಢ ಬಿಆರ್‌ಎಸ್ ಶೇಕಡಾ 10 ರಷ್ಟು ಮತಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸೌತ್ ಫಸ್ಟ್-ಪೀಪಲ್ ಪಲ್ಸ್ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ. ನವೆಂಬರ್ 30 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 57 ರಿಂದ 62 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಆರ್‌ಎಸ್‌ 41 ರಿಂದ 46 ಸ್ಥಾನಗಳಿಗೆ ಸೀಮಿತವಾಗಲಿದೆ, ಬಿಜೆಪಿ 3-6, ಎಐಎಂಐಎಂ ಪಕ್ಷ 6-7 ಹಾಗೂ ಇತರರು 1 ರಿಂದ 2 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ ಎಂದು ಸೌತ್ ಫಸ್ಟ್ ಸಮೀಕ್ಷೆಯಲ್ಲಿ ಹೇಳಿದೆ. ಬಿಆರ್‌ಎಸ್‌ಗಿಂತ ಕಾಂಗ್ರೆಸ್ ಶೇಕಡಾ 4 ರಷ್ಟು ಹೆಚ್ಚು ಮತಗಳನ್ನು ಪಡೆಯಲಿದೆ ಸಮೀಕ್ಷೆಯ ಮಾಹಿತಿ ಬಹಿರಂಗಪಡಿಸಿದೆ.

ಪಕ್ಷಗಳಿಗೆ ಶೇಕಡಾವಾರು ಮತಗಳು (ಅಂದಾಜು)

ಕಾಂಗ್ರೆಸ್‌ - ಶೇಕಡಾ 42.5

ಬಿಆರ್‌ಎಸ್ - ಶೇಕಡಾ 37.6

ಬಿಜೆಪಿ - ಶೇಕಡಾ 13.3

ಎಐಎಂಎಐಎಂ - ಶೇಕಡಾ 0.9

ಇತರೆ - ಶೇಕಡಾ 5.8

ತೆಲಂಗಾಣಗದ 33 ಜಿಲ್ಲೆಗಳಲ್ಲಿ ಶೇಕಡಾವಾರು ಮತಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಸೌತ್ ಫಸ್ಟ್ ಸಮೀಕ್ಷೆ ಅಂದಾಜಿಸಿದೆ. ಕಾಂಗ್ರೆಸ್ ಶೇಕಡಾ 42.5 ಮತ್ತು ಬಿಆರ್‌ಎಸ್ ಶೇಕಡಾ 37.6 ರಷ್ಟು ಮತಗಳನ್ನು ಪಡೆಯಲಿದೆ. ಈ ಎರಡೂ ಪಕ್ಷಗಳ ನಡುವಿನ ಮತಗಳ ಶೇಕಡಾವಾರು ವ್ಯತ್ಯಾಸ ಶೇಕಡಾ 4.9 ರಷ್ಟಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್ 119 ಕ್ಷೇತ್ರಗಳ ಪೈಕಿ 88 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 19 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ. ಬಿಆರ್‌ಎಸ್ ಶೇಕಡಾ 46.9 ರಷ್ಟು ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇಕಡಾ 28.4 ರಷ್ಟು ಮತಗಳನ್ನ ಗಳಿಸಿತ್ತು. ಆದರೆ ಈ ಬಾರಿಯ ಚುನಾವಣೆ ಫಲಿತಾಂಶದಲ್ಲಿ ಸೌತ್ ಫಸ್ಟ್ ಸಮೀಕ್ಷೆಯ ಪ್ರಕಾರ ಬಿಆರ್‌ಎಸ್‌ ಶೇಕಡಾ 10 ರಷ್ಟು ಮತಗಳನ್ನು ಕಳೆದುಕೊಳ್ಳಲಿದೆ ಎಂದು ಹೇಳಿದೆ.

ಶೇಕಡಾವಾರು ಮತ ಹೆಚ್ಚಿಸಿಕೊಳ್ಳಲಿರುವ ಬಿಜೆಪಿ

ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ತೆಲಂಗಾಣದ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 7.1 ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿ ಶೇಕಡಾ 13.2 ರಷ್ಟು ಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಮಹಿಳೆಯರು ಸಿಎಂ ಕೆಸಿ ಚಂದ್ರಶೇಖರ್ ರಾವ್ ಅವರ ಪಕ್ಷಕ್ಕೆ ಬೆಂಬಲ ನೀಡಿದರೆ, ಪುರುಷರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

20 ರಿಂದ 35 ವರ್ಷದ ಯುವಕರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಹೆಚ್ಚಿನ ಒಲವಿದೆ ಎಂದು ಅಂದಾಜಿಸಲಾಗಿದೆ. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಬಿಆರ್‌ಎಸ್ ವಿಫಲವಾಗಿದೆ ಎಂದು ಅಲ್ಲಿನ ಯುವಕರು ಭಾವಿಸಿದ್ದಾರೆ. ಬಿಆರ್‌ಎಸ್‌ನ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಆಡಳಿತ ವಿರೋಧವನ್ನು ಎದುರಿಸುತ್ತಿದ್ದಾರೆ.

ಕೆ ಚಂದ್ರಶೇಖರ್ ರಾವ್‌ ಸಿಎಂ ಆಗಲು ಜನರ ಆಸಕ್ತಿ

ಅಭ್ಯರ್ಥಿಗಳನ್ನು ಬದಲಾಯಿಸದಿರುವುದು ಬಿಆರ್‌ಎಸ್‌ ಮೇಲೆ ಪರಿಣಾಮ ಬೀರಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಆದರೆ ಸಿಎಂ ವಿಚಾರದಲ್ಲಿ ಅಲ್ಲಿನ ಜನ ಸ್ವಲ್ಪ ಭಿನ್ನವಾಗಿ ಪ್ರತಿಕ್ರಿಯಿಸಿದ್ದು, ತೆಲಂಗಾಣದಲ್ಲಿ ಮುಂದಿನ ಸಿಎಂ ಯಾರಾಗಬೇಕೆಂಬ ಪ್ರಶ್ನೆಗೆ ಶೇಕಡಾ 40 ಮಂದಿ ಕೆಸಿಆರ್‌ ಹೆಸರನ್ನು ಸೂಚಿಸಿದ್ದಾರೆ. ಶೇಕಡಾ 22 ರಷ್ಟು ಮಂದಿ ಮಾತ್ರ ರೇವಂತ್ ರೆಡ್ಡಿ ಅವರ ಹೆಸರನ್ನು ಹೇಳಿದ್ದಾರೆ.

ಸಮೀಕ್ಷೆಗಳು ಏನೇ ಇರಲಿ. ನವೆಂಬರ್ 30 ರಂದು ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಪ್ರಕಟವಾಗಲಿರುವ ಫಲಿತಾಂಶದಲ್ಲಿ ಯಾರಿಗೆ ಜನ ಮಣೆ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಅಲ್ಲಿಯವರಿಗೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಎದೆಬಡಿತ ಜೋರಾಗಿಯೇ ಇರಲಿದೆ.