Controversy: ಸುಭಾಷ್ಚಂದ್ರ ಬೋಸರ ಹತ್ಯೆ ಮಾಡ್ಸಿದ್ದು ಗಾಂಧೀಜಿ ಎಂದ ಬಿಜೆಪಿ ಸಂಸದ!ಯಾರಿವರು?
ಸುಭಾಷ್ ಚಂದ್ರ ಬೋಸ್ ಅವರನ್ನು ಗಾಂಧೀಜಿಯೇ ಹತ್ಯೆ ಮಾಡಿಸಿದ್ದು ಎಂದು ರಾಜಸ್ಥಾನದ ಜುಂಜುನು ಜಿಲ್ಲೆಯ ಬಿಜೆಪಿ ಸಂಸದ ನರೇಂದ್ರ ಕುಮಾರ್ ಖಿಚಡ್ ಹೇಳಿದ್ದಾರೆ. ಹೇಳಿಕೆಯ ವೀಡಿಯೋ ವೈರಲ್ ಆದ ನಂತರ ಸಂಸದ ಖಿಚಡ್ “ಸ್ಲಿಪ್ ಟಂಗ್” ಎಂದು ಸ್ಪಷ್ಟಪಡಿಸಿದ್ದಾರೆ.

ಜೈಪುರ: ರಾಜಕೀಯ ನಾಯಕರು, ಚುನಾಯಿತ ಜನಪ್ರತಿನಿಧಿಗಳು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹೊಸದೇನಲ್ಲ. ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಅಧ್ಯಯನ ಮಾಡದೇ ಇರುವ ಕಾರಣ ಚಾರಿತ್ರಿಕ ವಿಚಾರಗಳ ಬಗ್ಗೆಯೂ ಲಘುವಾಗಿ ಮಾತನಾಡಿ ವಿವಾದ ಸೃಷ್ಟಿಸುವುದು ಕೂಡ ಹೊಸದಲ್ಲ. ಆದರೆ, ಸುಭಾಷ್‌ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ವಿಚಾರವಾಗಿ ರಾಜಸ್ಥಾನದ ಬಿಜೆಪಿ ಸಂಸದ ನೀಡಿದ ಹೇಳಿಕೆ ಬಹುಬೇಗ ವೈರಲ್ ಆಗಿಬಿಟ್ಟಿತು.
ಸುಭಾಷ್‌ಚಂದ್ರ ಬೋಸ್ ಅವರನ್ನು ಗಾಂಧೀಜಿಯೇ ಹತ್ಯೆ ಮಾಡಿದ್ದಾರೆ ಎಂದು ರಾಜಸ್ಥಾನ ಜುಂಜುನು ಜಿಲ್ಲೆಯ ಬಿಜೆಪಿ ಸಂಸದ ನರೇಂದ್ರ ಕುಮಾರ್ ಖಿಚಡ್ ಹೇಳಿದ್ದರು. ಈ ಹೇಳಿಕೆಯ ವಿಡಿಯೋ ವೈರಲ್ ಆದ ನಂತರ ಸಂಸದ ಖಿಚಡ್ “ಸ್ಲಿಪ್ ಟಂಗ್” ಎಂದು ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.
ಈ ವಿಡಿಯೋವನ್ನು ದೃಢೀಕರಿಸುವ ಕೆಲಸವನ್ನು ವರದಿ ಮಾಡಿಲ್ಲ. ಆದರೂ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ, ಸಂಸದ ಖಿಚಡ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನಾನು ಮಹಾತ್ಮ ಗಾಂಧಿ ಅವರನ್ನು ಗೌರವಿಸುತ್ತೇನೆ. ಅವರ ಫೋಟೋವನ್ನು ಕಚೇರಿಯಲ್ಲಿ ಇರಿಸಲಾಗಿದೆ ಎಂದೂ ಹೇಳಿದ್ದರು.
ವಾಸ್ತವವಾಗಿ, ಸಂಸದ ನರೇಂದ್ರ ಕುಮಾರ್ ಖಿಚಡ್ ಅವರು ಜೂನ್ 25 ರಂದು ಬಾಕ್ರಾ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಷಿಯೋಲಾಲ್ ಖಿಚಡ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮದಲ್ಲಿ ಸಂಸದರು, ಮಹಾತ್ಮ ಗಾಂಧೀಜಿಯವರು ಸುಭಾಷ್ ಚಂದ್ರ ಬೋಸ್ ಅವರ ಹತ್ಯೆ ಮಾಡಿಸಿದ್ದಾರೆ ಎಂದು ಹೇಳಿದ್ದರು.
ತಂದೆಯನ್ನು ಕೊಂದು ಮಗ ಆಳುವುದು ರಾಜ ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂದೂ ಸಂಸದರು ಹೇಳುತ್ತಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಾಲದಲ್ಲೂ ಈ ಭಾವನೆ ಇತ್ತು. ಅಂದು ಯಾರಾದರೂ ಒಬ್ಬರೇ ಪ್ರಧಾನಿಯಾಗಬೇಕಿತ್ತು, ಗಾಂಧಿಯವರು ಬೋಸ್ ಅವರನ್ನು ಚುನಾವಣೆಗೆ ಒಪ್ಪಿಸಿದರು. ಆದರೆ ಅವರನ್ನು ಕೊಲ್ಲಲಾಯಿತು ಎಂದು ಖಿಚಡ್ ವಿವರಿಸಿದ್ದರು.
ವಿಡಿಯೋ ಹೊರಬಿದ್ದ ಬೆನ್ನಲ್ಲೇ ಸಂಸದರ ಈ ಹೇಳಿಕೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಹೇಳಿಕೆ ವಿವಾದಕ್ಕೆ ಈಡಾದ ಕಾರಣ ಖಿಚಡ್ ಈ ಬಗ್ಗೆ ವಿವರಣೆ ನೀಡಿದ್ದಾರೆ
ವಿಸ್ತೃತ ವಿವರಣೆ ನೀಡಿದ ಸಂಸದ
ನಾನು ನಿಜವಾಗಿಯೂ ಹೇಳಲು ಉದ್ದೇಶಿಸಿದ್ದು ಅದಲ್ಲ. ಅದು ಉದ್ದೇಶ ಪೂರ್ವಕ ನೀಡಿದ ಹೇಳಿಕೆ ಅಲ್ಲ. ಬಾಯಿ ತಪ್ಪಿ ಬಂದ ಮಾತು ಅದು ಎಂದು ಸಂಸದ ಖಚಿಡ್ ವಿಸ್ತೃತವಾದ ವಿವರಣೆಯೊಂದಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಸ್ವಾತಂತ್ರ್ಯದ ನಂತರ ಸುಭಾಷ್ ಚಂದ್ರ ಬೋಸ್ ಅವರು ದೇಶದ ಮೊದಲ ಪ್ರಧಾನ ಮಂತ್ರಿ ಆಗಬೇಕಿತ್ತು ಎಂದು ನಾನು ಹೇಳಲು ಬಯಸಿದ್ದೆ. ಗಾಂಧಿ ಬಯಸಿದ್ದರೆ ಸುಭಾಷ್ ಚಂದ್ರ ಬೋಸ್ ಪ್ರಧಾನ ಮಂತ್ರಿ ಆಗಬಹುದಿತ್ತು. ಆದರೆ ಗಾಂಧಿಯವರ ಒಲವು ಜವಾಹರಲಾಲ್ ನೆಹರೂ ಅವರ ಕಡೆಗಿತ್ತು. ನಾನು ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ, ಸುಭಾಷ್ ಚಂದ್ರ ಬೋಸ್ ಅವರನ್ನು ಪ್ರಧಾನಿಯನ್ನಾಗಿಸಲು ಗಾಂಧಿಯಿಂದಲೇ ಸಾಧ್ಯವಾಗಲಿಲ್ಲ. ಗಾಂಧಿಯವರು ಸುಭಾಷ್ ಚಂದ್ರ ಬೋಸ್ ಅವರನ್ನು ರಾಜಕೀಯವಾಗಿ ಕೊಂದರು ಎಂದು ಹೇಳಲು ಹೊರಟಿದ್ದೆ. ಗಾಂಧೀಜಿಯೇ ಬೋಸ್ ಅವರನ್ನು ಕೊಂದರು ಎಂದು ಹೇಳುವುದು ಉದ್ದೇಶವಾಗಿರಲಿಲ್ಲ ಎಂದು ವಿವರಣೆ ನೀಡಿದ್ದಾರೆ.
ಹೇಳಿಕೆಯನ್ನು ತಿರುಚಿದರೆಂದ ಸಂಸದ
ವಿವಾದ ತಾರಕಕ್ಕೇರುತ್ತಿದ್ದಂತೆ ಸಂಸದ ನರೇಂದ್ರ ಕುಮಾರ್ ಖಿಚಾರ್, ನಾನು ಹೇಳಿದ ಮಾತುಗಳ ಅರ್ಥವನ್ನು ಬೇರೆಯೇ ರೀತಿ ತಿರುಚಿ ಪ್ರಸ್ತುತಪಡಿಸಲಾಗಿದೆ ಎಂದರು. ಮಹಾತ್ಮ ಗಾಂಧಿ ನಮ್ಮ ರಾಷ್ಟ್ರದ ಪಿತಾಮಹ. ಅಂತಹ ಯಾವುದೇ ಪದಗಳು ನನ್ನ ಬಾಯಿಯಿಂದ ತಪ್ಪಿಹೋಗಿ ಬಂದಿದ್ದರೆ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾವು ಮಹಾತ್ಮ ಗಾಂಧಿಯವರ ತತ್ತ್ವಗಳನ್ನು ಅನುಸರಿಸುವವರು. ನಾವು ದೇಶಭಕ್ತರು, ಮಹಾತ್ಮ ಗಾಂಧಿಯವರ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ ಎಂದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದರು.

ವಿಭಾಗ