ಆಸ್ಟ್ರೇಲಿಯಾಗೆ ಹಾರಿದ 2 ವರ್ಷದೊಳಗೆ ಭಾರತಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ ದಂಪತಿ; ಮೆಲ್ಬೋರ್ನ್‌ಗಿಂತ ಬೆಂಗಳೂರು ಬೆಸ್ಟ್‌ ಅಂತೆ-couple in australia wants to fly back india after 2 years of migration bengaluru is their preference social media jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಸ್ಟ್ರೇಲಿಯಾಗೆ ಹಾರಿದ 2 ವರ್ಷದೊಳಗೆ ಭಾರತಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ ದಂಪತಿ; ಮೆಲ್ಬೋರ್ನ್‌ಗಿಂತ ಬೆಂಗಳೂರು ಬೆಸ್ಟ್‌ ಅಂತೆ

ಆಸ್ಟ್ರೇಲಿಯಾಗೆ ಹಾರಿದ 2 ವರ್ಷದೊಳಗೆ ಭಾರತಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ ದಂಪತಿ; ಮೆಲ್ಬೋರ್ನ್‌ಗಿಂತ ಬೆಂಗಳೂರು ಬೆಸ್ಟ್‌ ಅಂತೆ

ಭಾರತದ ಮೂಲದ ದಂಪತಿಯೊಂದು ಆಸ್ಟ್ರೇಲಿಯಾಗೆ ತೆರಳಿದ 2 ವರ್ಷಗಳಲ್ಲೇ ಮತ್ತೆ ತವರಿಗೆ ಮರಳಲು ಯೋಜಿಸಿದ್ದಾರೆ. ಅವರ ಆದ್ಯತೆ ಪಟ್ಟಿಯಲ್ಲಿ ಬೆಂಗಳೂರು ನಗರವಿದೆ. ಆಸೀಸ್‌ನಲ್ಲಿ ಜೀವನ ವೆಚ್ಚ ಹೆಚ್ಚಿದ್ದು, ಅದಕ್ಕಿಂತ ಉದ್ಯಾನ ನಗರಿ ಬೆಸ್ಟ್‌ ಎಂದಿದ್ದಾರೆ.

ಆಸ್ಟ್ರೇಲಿಯಾಗೆ ಹಾರಿದ 2 ವರ್ಷದೊಳಗೆ ಬೆಂಗಳೂರಿಗೆ ಶಿಫ್ಟ್ ಆಗಲು ನಿರ್ಧರಿಸಿದ ದಂಪತಿ
ಆಸ್ಟ್ರೇಲಿಯಾಗೆ ಹಾರಿದ 2 ವರ್ಷದೊಳಗೆ ಬೆಂಗಳೂರಿಗೆ ಶಿಫ್ಟ್ ಆಗಲು ನಿರ್ಧರಿಸಿದ ದಂಪತಿ

ಸೌರಭ್ ಅರೋರಾ ಮತ್ತು ಅವರ ಪತ್ನಿ ಶುಭಾಂಗಿ ದತ್ತಾ ದಂಪತಿಯು, 2022ರಲ್ಲಿ ಭಾರತದ ಗುರುಗಾಂವ್ ನಗರ ತೊರೆದು ದೂರದ ಆಸ್ಟ್ರೇಲಿಯಾಗೆ ಹಾರಿದರು. ಭಾರತಕ್ಕಿಂತ ಉತ್ತಮ ಗುಣಮಟ್ಟದ ಜೀವನ ನಡೆಸುವ ಇರಾದೆ ಅವರದ್ದಾಗಿತ್ತು. ಎರಡು ವರ್ಷಗಳ ಕಾಲ ದ್ವೀಪರಾಷ್ಟ್ರದಲ್ಲಿ ನೆಲೆಸಿದರು. ಇದೀಗ ಅವರು ಮತ್ತೆ ತವರು ನೆಲಕ್ಕೆ ಮರಳಲು ಇರ್ಧರಿಸಿದ್ದಾರೆ. ಈ ಕುರಿತು ಲೈವ್ ಮಿಂಟ್ ಜೊತೆಗಿನ ಸಂಭಾಷಣೆಯಲ್ಲಿ ಮಾತನಾಡಿದ ಅನಿವಾಸಿ ದಂಪತಿಯು, ಭಾರತಕ್ಕೆ ಮರಳುವ ಇರಾದೆ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳೊಳಗೆ ಕಾಂಗರೂ ನಾಡನ್ನು ತೊರೆದು ತವರಿಗೆ ಮರಳುವ ನಿರ್ಧಾರಕ್ಕೆ ಬರಲು ಕಾರಣವೂ ಇದೆ.

ದಂಪತಿ ಹೇಳುವ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಉತ್ತಮ ಗುಣಮಟ್ಟದ ಜೀವನವನ್ನು ಹೇಗೋ ಕಂಡುಕೊಂಡಿದ್ದಾರೆ. ಆದರೆ ಅವರ ದುಡಿಮೆ, ಮಾಡಿದ ಉಳಿತಾಯ ಎಲ್ಲವೂ ಜೀವನ ನಿರ್ವಹಣೆಗೆ ಹೋಗುತ್ತಿದೆ. ಕಾಂಗರೂ ನಾಡಲ್ಲಿ ಖರ್ಚು ಹೆಚ್ಚಾಗಿರುವುದರಿಂದ, ಜೀವನ ನಿರ್ವಹಣೆ ಕಷ್ಟ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕುಟುಂಬ ಸದಸ್ಯರನ್ನೆಲ್ಲಾ ಬಿಟ್ಟು ಆಸ್ಟ್ರೇಲಿಯಾದಲ್ಲಿ ಬದುಕು ಕಟ್ಟಿಕೊಳ್ಳುವಾಗ ಸಹಜವಾಗಿಯೇ ಒಂಟಿತನವು ದಂಪತಿಯನ್ನು ಕಾಡಿದೆ. ಇದಲ್ಲದೆ ಆಸೀಸ್‌ನ ಪ್ರಮುಖ ನಗರಗಳಲ್ಲಿ ಒಂದಾದ ಮೆಲ್ಬೋರ್ನ್‌ನಲ್ಲಿ ಆರೋಗ್ಯ ಸೇವೆಗಳಿಗಾಗಿ ವಿಪರೀತ ಖರ್ಚಾಗುತ್ತದೆ. ಜೊತೆಗೆ ಭಾರತಕ್ಕಿಂತ ಜೀವನ ವೆಚ್ಚ ಹೆಚ್ಚು. ಹೀಗಾಗಿ ಹೆಚ್ಚು ಖರ್ಚು ವೆಚ್ಚಗಳಿಂದ ಬಳಲಿರುವ ಸೌರಭ್ ಅರೋರಾ ಮತ್ತು ಶುಭಾಂಗಿ ದತ್ತಾ ಈಗ ಭಾರತದ ನಗರಗಳಲ್ಲಿಯೇ ನೆಲೆಕಂಡುಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ.

ಕುಟುಂಬವನ್ನು ಮಿಸ್‌ ಮಾಡಿಕೊಳ್ಳುತ್ತೇವೆ

"ನಾವು ಇಲ್ಲಿ ನಮ್ಮ ಕುಟುಂಬವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ಆ ಕೊರತೆ ಯಾವತ್ತೂ ನಮ್ಮನ್ನು ಕಾಡುತ್ತದೆ. ಆಸ್ಟ್ರೇಲಿಯಾ ಒಂದು ಏಕಾಂಗಿ ದೇಶ ಎಂದು ಭಾಸವಾಗುತ್ತದೆ. ನಾವು ಭಾರತಕ್ಕೆ ಹಿಂತಿರುಗಲು ಬಯಸುವುದಕ್ಕೆ ಪ್ರಮುಖ ಕಾರಣ ಇದು" ಎಂದು ಸೌರಭ್ ಲೈವ್ ಮಿಂಟ್‌ಗೆ ತಿಳಿಸಿದ್ದಾರೆ. ಮೆಲ್ಬೋರ್ನ್‌ಗೆ ತೆರಳಿದ ನಂತರ ಜೀವನ ವೆಚ್ಚವೂ ಹೆಚ್ಚಾಗಿದೆ ಎಂದು ಟೆಕ್ ವೃತ್ತಿಪರರು ವಿವರಿಸಿದ್ದಾರೆ. ಹೀಗಾಗಿ ಭಾರತಕ್ಕೆ ಮರಳುವುದು ದಂಪತಿಯ ನಿರ್ಧಾರ. ಸದ್ಯ ಇವರ ಆಯ್ಕೆ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ.

ಭಾರತಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾದಲ್ಲಿ ನಿವ್ವಳ ಆದಾಯದ ಶೇಕಡಾವಾರು ಜೀವನ ವೆಚ್ಚ ಹೆಚ್ಚು. “ನಾವು ನಮ್ಮ ಮನೆಯ ಒಟ್ಟಾರೆ‌ ಆದಾಯದ ಸುಮಾರು 80 ಪ್ರತಿಶತವನ್ನು ಇಲ್ಲಿ ಖರ್ಚು ಮಾಡುತ್ತೇವೆ. ಇದೇ ಪ್ರಮಾಣವು ಭಾರತದಲ್ಲಿ 30 ಶೇಕಡಕ್ಕಿಂತ ಕಡಿಮೆ ಇದ್ದವು. ಅದರಲ್ಲಿ ಮನೆ ಬಾಡಿಗೆ ಕೂಡಾ ಸೇರುತ್ತದೆ” ಎಂದು ಅವರು ಹೇಳಿದ್ದಾರೆ

ಜೀವನಶೈಲಿಯೇ ಬದಲು

ಆಸ್ಟ್ರೇಲಿಯಾಕ್ಕೆ ತೆರಳಿದಾಗಿನಿಂದ, ರಜಾದಿನಗಳು, ಹೊರಗೆ ತಿನ್ನುವುದು ಮತ್ತು ಸಾಮಾನ್ಯ ಮನರಂಜನೆಗೂ ಕೂಡಾ ದಂಪತಿ ಪೂರ್ಣವಿರಾಮ ಇಟ್ಟಿದ್ದಾರೆ. ತರಕಾರಿ, ಅಡುಗೆ ಎಣ್ಣೆ ಮುಂತಾದ ಅಗತ್ಯ ವಸ್ತುಗಳ ಬೆಲೆ ಮೆಲ್ಬೋರ್ನ್‌ನಲ್ಲಿ 100-300 ಪ್ರತಿಶತ ಹೆಚ್ಚಾಗಿದೆ ಎಂದು ಸೌರಭ್ ಹೇಳುತ್ತಾರೆ.

ವೃತ್ತಿಯಲ್ಲಿ ಎಚ್‌ಆರ್‌ ಆಗಿರುವ ಶುಭಾಂಗಿ, ಕಡಿಮೆ ಸಂಬಳದ ಉದ್ಯೋಗಕ್ಕೆ ಹೊಂದಿಕೊಳ್ಳಬೇಕಾಗಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟ ಎಂದು ಸೌರಭ್ ಹೇಳುತ್ತಾರೆ. “ಶುಭಾಂಗಿಗೆ ಹೆಚ್ಚಿನ ಆಯ್ಕೆಗಳಿಲ್ಲದ ಕಾರಣ ಕಡಿಮೆ ಸಂಬಳದ ಕೆಲಸವನ್ನೇ ಒಪ್ಪಿಕೊಂಡು ಮಾಡುತ್ತಿದ್ದಾರೆ. ಇಲ್ಲಿ ಟೆಕ್ ಉದ್ಯೋಗಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ಇತರ ಉದ್ಯಮಗಳಲ್ಲಿ ಸ್ಥಳೀಯ ಶಿಕ್ಷಣ ಮತ್ತು ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಬೇರೆ ಆಯ್ಕೆ ಇಲ್ಲದೆ ಜೀವನಶೈಲಿಯನ್ನು ಕೆಳದರ್ಜೆಗೆ ಇಳಿಸಬೇಕಾಗಿದೆ. ಉಳಿತಾಯಕ್ಕೆ ಹೊಡೆತ ಬಿದ್ದಿದ್ದು, ತೃಪ್ತಿಯಿಲ್ಲದ ಸಾಮಾನ್ಯ ಜೀವನವನ್ನು ನಡೆಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.