DK Shivakumar: ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್‌ಗೆ ದುಬೈ ತೆರಳಲು ದೆಹಲಿ ಕೋರ್ಟ್ ಅನುಮತಿ, ಷರತ್ತು ಅನ್ವಯ
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಬಹುದೊಡ್ಡ ರಿಲೀಫ್ ಸಿಕ್ಕಿದೆ. ಅವರ ವಿದೇಶ ಪ್ರವಾಸಕ್ಕೆ ಕೋರ್ಟ್ ಅನುಮತಿ ನೀಡಿದೆ.
ನವದೆಹಲಿ: ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೊಡ್ಡ ರಿಲೀಫ್ ಸಿಕ್ಕಿದ್ದು, ಅವರ ವಿದೇಶ ಪ್ರವಾಸಕ್ಕೆ ದೆಹಲಿ ಕೋರ್ಟ್ (Delhi court) ಅನುಮತಿ ನೀಡಿದೆ.
ವಿಶೇಷ ನ್ಯಾಯಮೂರ್ತಿ ವಿಕಾಸ್ ಧುಲ್ ಅವರು ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಬಳಿಕ ಈ ತೀರ್ಪು ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರು, ದುಬೈನಲ್ಲಿ ನವೆಂಬರ್ 29ರಿಂದ ಡಿಸೆಂಬರ್ 3ರ ತನಕ ಹವಾಮಾನ ಕುರಿತ ಶೃಂಗಕ್ಕೆ ತೆರಳಬೇಕಾಗಿದೆ. ಅದಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ದುಬೈನಲ್ಲಿ ನಡೆಯಲಿರುವ ಸಿಇಒಪಿ28 ಸ್ಥಳೀಯ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅವರನ್ನು ಸಿಇಪಿ 28ರ ನಿಯೋಜಿತ ಅಧ್ಯಕ್ಷ ಡಾ ಸುಲ್ತಾನ್ ಅಹ್ಮದ್ ಅಲ್ ಜಾಬರ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಹವಾಮಾನ ಮಹತ್ವಾಕಾಂಕ್ಷೆ ಮತ್ತು ಪರಿಹಾರದ ಕುರಿತ ವಿಶೇಷ ಪ್ರತಿನಿಧಿ ಮೈಕೆಲ್ ಆರ್ ಬ್ಲೂಮ್‌ಬರ್ಗ್ ಅವರು ಆಹ್ವಾನಿಸಿದ್ದಾರೆ. ಇದು ವಿಶ್ವಸಂಸ್ಥೆಯು ಆಯೋಜಿಸುವ ವಾರ್ಷಿಕ ಅಂತರಾಷ್ಟ್ರೀಯ ಹವಾಮಾನ ಶೃಂಗಸಭೆ ಎಂದು ಅರ್ಜಿಯಲ್ಲಿ ಅವರು ತಿಳಿಸಿದ್ದಾರೆ.
ತೀರ್ಪಿನಲ್ಲಿ ಜಡ್ಜ್ ಏನು ಹೇಳಿದ್ರು..
“ಭಾರತದ ಸಂವಿಧಾನದ 21 ನೇ ವಿಧಿಯ ಪ್ರಕಾರ ವಿದೇಶಕ್ಕೆ ಪ್ರಯಾಣಿಸುವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಆದಾಗ್ಯೂ, ಅಂತಹ ಹಕ್ಕು ಅನಿಯಂತ್ರಿತವಾಗಿಲ್ಲ. ಸಮಂಜಸ ನಿರ್ಬಂಧವನ್ನು ಅದರ ಮೇಲೆ ವಿಧಿಸಬಹುದು. ಆರೋಪಿಯು ತಲೆಮರೆಸಿಕೊಳ್ಳುವ ಸಾಧ್ಯತೆ ಮತ್ತು ವಿಚಾರಣೆಗೆ ಹಾಜರಾಗದೇ ಇರಬಹುದು ಎಂಬ ಸಂದೇಹ ಇರುವಲ್ಲಿ ನಿರ್ಬಂಧ ವಿಧಿಸುವುದಕ್ಕೆ ಅವಕಾಶ ಇದೆ” ಎಂದು ನ್ಯಾಯಮೂರ್ತಿಗಳು ನವೆಂಬರ್ 25 ರಂದು ನೀಡಿದ ಆದೇಶದಲ್ಲಿ ಹೇಳಿದರು.
“ಸದ್ಯದ ಸನ್ನಿವೇಶ ಮತ್ತು ವಾಸ್ತವಾಂಶಗಳನ್ನು ಪರಿಗಣಿಸಿಕೊಂಡು ಅರ್ಜಿದಾರರ ಅರ್ಜಿಯ ಮನವಿಯನ್ನು ಪುರಸ್ಕರಿಸುವುದಕ್ಕೆ ಅಡ್ಡಿ ಇಲ್ಲ. ಹೀಗಾಗಿ ಡಿಕೆ ಶಿವಕುಮಾರ್ ಸಲ್ಲಿಸಿದ ಅರ್ಜಿಯಂತೆ ಅವರ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಲಾಗತ್ತದೆ. ಇದರಂತೆ ಅವರು 2023ರ ನವೆಂಬರ್ 29ಕ್ಕೆ ದುಬೈಗೆ ತೆರಳಿ ಅಲ್ಲಿಂದ ಡಿಸೆಂಬರ್ 3ಕ್ಕೆ ಭಾರತಕ್ಕೆ ಬರವ ತನಕ ಈ ಅನುಮತಿ ಜಾರಿಯಲ್ಲಿರುತ್ತದೆ” ಎಂದು ನ್ಯಾಯಪೀಠ ಹೇಳಿದೆ.
ಬೇಷರತ್ ಅನುಮತಿ ಅಲ್ಲ, ಕೆಲವು ಷರತ್ತುಗಳಿವೆ..
ಕರ್ನಾಟಕದ ಉಪಮುಖ್ಯಮಂತ್ರಿ, ಎಂಟು ಸಲ ಶಾಸಕರಾಗಿರುವ ಡಿಕೆ ಶಿವಕುಮಾರ್, ಅವರು ಭಾರತದಿಂದ ಪರಾರಿಯಾಗುವ ಸಾಧ್ಯತೆ ಕಡಿಮೆ ಇರುವ ಕಾರಣ ಅವರಿಗೆ ವಿದೇಶ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ. ಆದರೆ ಕೆಲವು ಷರತ್ತುಗಳನ್ನು ನ್ಯಾಯಪೀಠ ವಿಧಿಸಿದೆ.
- ದುಬೈಗೆ ತೆರಳುವ ಮೊದಲು ಅವರು 5 ಲಕ್ಷ ರೂಪಾಯಿ ಠೇವಣಿಯನ್ನು ಕೋರ್ಟ್‌ಗೆ ಕಟ್ಟಬೇಕು.
- ಪ್ರಯಾಣದ ಸಂಪೂರ್ಣ ಮಾಹಿತಿಯನ್ನು ಕೋರ್ಟ್‌ಗೆ ಒಪ್ಪಿಸಬೇಕು.
- ಸಂಪರ್ಕ ಸಂಖ್ಯೆ ದೂರವಾಣಿ ಅಥವಾ ಮೊಬೈಲ್ ನಂಬರ್ ಒದಗಿಸಬೇಕು.
- ಅಕ್ರಮ ಹಣ ವರ್ಗಾವಣೆ ಕೇಸಿಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳನ್ನು ಸಂಪರ್ಕಿಸುವುದು, ಅವರಿಗೆ ಬೆದರಿಕೆ ಒಡ್ಡುವುದು, ಪ್ರಭಾವ ಬೀರುವುದು ಮುಂತಾದ ಕೆಲಸ ಮಾಡಬಾರದು.
ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದ ಕೇಸ್
ಡಿಕೆ ಶಿವಕುಮಾರ್ ಅವರಿಗೆ 2019 ರ ಅಕ್ಟೋಬರ್ 23 ರಂದು ದೆಹಲಿ ಹೈಕೋರ್ಟ್, ನ್ಯಾಯಾಲಯದ ಅನುಮತಿಯಿಲ್ಲದೆ ಅವರು ದೇಶವನ್ನು ತೊರೆಯಬಾರದು ಎಂಬ ಷರತ್ತಿನೊಂದಿಗೆ ಜಾಮೀನು ನೀಡಿತ್ತು.
ಅವರು ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಇದಕ್ಕೂ ಮೊದಲು ಡಿಕೆ ಶಿವಕುಮಾರ್ ಅನೇಕ ಸಲ ವಿದೇಶ ಪ್ರವಾಸ ಮಾಡಿದ್ದಾರೆ. ಭಾರತಕ್ಕೆ ವಾಪಸಾಗಿದ್ದಾರೆ. ಅವರು ಆ ರೀತಿಯಲ್ಲಿ ಅಪಾಯಕಾರಿ ಅಲ್ಲ ಎಂದು ಪ್ರತಿಪಾದಿಸಲಾಗಿದೆ. ಅವರಿಗೆ ಅಪರಾಧ ಚರಿತ್ರೆ ಕೂಡ ಇಲ್ಲ ಎಂದು ಹೇಳಲಾಗಿದೆ.
ಆದಾಗ್ಯೂ, ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಗೆ ಜಾರಿ ನಿರ್ದೇಶನಾಲಯ ಆಕ್ಷೇಪಣೆ ವ್ಯಕ್ತಪಡಿಸಿತ್ತು.
ಆದಾಯ ತೆರಿಗೆ ಇಲಾಖೆಯು 2018 ರಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ತೆರಿಗೆ ವಂಚನೆ ಮತ್ತು 'ಹವಾಲಾ' ವಹಿವಾಟಿನ ಆರೋಪದ ಮೇಲೆ ಸಲ್ಲಿಸಿದ ಚಾರ್ಜ್ ಶೀಟ್ ಆಧರಿಸಿದ ಕೇಸ್ ಇದು.
ಆದಾಯ ತೆರಿಗೆ ಇಲಾಖೆಯು ಶಿವಕುಮಾರ್ ಮತ್ತು ಅವರ ಸಹವರ್ತಿ ಎಸ್ ಕೆ ಶರ್ಮಾ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪ ಹೊರಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ.