ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿ; ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿ; ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿ; ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿ ಎಂದು ಅಲಹಾಬಾದ್ ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. ವಾರಾಣಸಿ ನ್ಯಾಯಾಲಯವು ಜನವರಿ 31ರಂದು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಾದ 'ವ್ಯಾಸ್ ಜೀ ಕಾ ತೆಹಖಾನಾ'ದಲ್ಲಿ ಹಿಂದೂ ಕಡೆಯವರು ಪ್ರಾರ್ಥನೆ ಸಲ್ಲಿಸಬಹುದು ಎಂದು ತೀರ್ಪು ನೀಡಿತ್ತು.

ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿ ಎಂದು ಸೋಮವಾರ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. (ಪೂಜೆಯ ಕಡತ ಚಿತ್ರ)
ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆ ಮುಂದುವರಿಯಲಿ ಎಂದು ಸೋಮವಾರ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. (ಪೂಜೆಯ ಕಡತ ಚಿತ್ರ) (HT News)

ಲಖನೌ: ಜ್ಞಾನವಾಪಿ ಮಸೀದಿ ಸಂಕೀರ್ಣದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಹಿಂದೂಗಳಿಗೆ ಅವಕಾಶ ನೀಡಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್, “ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಮತ್ತು ಸಂಬಂಧಪಟ್ಟ ಪಕ್ಷಗಳ ವಾದಗಳನ್ನು ಪರಿಗಣಿಸಿದ ನಂತರ, ವಾರಣಾಸಿಯ ಡಿಎಂ ಅವರನ್ನು ಆಸ್ತಿ ಸ್ವೀಕಾರಕಾರರಾಗಿ ನೇಮಕ ಮಾಡಿ ಜಿಲ್ಲಾ ನ್ಯಾಯಾಧೀಶರು ಜನವರಿ 17ರಂದು ಪ್ರಕಟಿಸಿದ ತೀರ್ಪು ಮತ್ತು ವ್ಯಾಸ್ ಜೀ ಕಾ ತೆಹಖಾನಾದಲ್ಲಿ ಪೂಜೆ ಸಲ್ಲಿಸಬಹುದು ಎಂದು ಜನವರಿ 31ರಂದು ನೀಡಿದ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಯಾವುದೇ ಅವಕಾಶ ಕಾಣುತ್ತಿಲ್ಲ” ಎಂದು ಈ ತೀರ್ಪು ನೀಡಿದ್ದಾರೆ

ಅಲಹಾಬಾದ್ ಹೈಕೋರ್ಟ್‌ ತೀರ್ಪು; ಪರಿಣಾಮ ಮತ್ತು ಪ್ರತಿಕ್ರಿಯೆ

ವಕೀಲ ಪ್ರಭಾಶ್, ಇದು ಸನಾತನ ಧರ್ಮದ ದೊಡ್ಡ ಗೆಲುವು ಎಂದು ಹೇಳಿದ್ದಾರೆ. "ಜಿಲ್ಲಾ ನ್ಯಾಯಾಧೀಶರ ಆದೇಶದ ವಿರುದ್ಧ ಮುಸ್ಲಿಂ ಕಡೆಯವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ... ಇದರರ್ಥ ಪೂಜೆಯು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ 'ತೆಹ್ಖಾನಾ'ದ ರಿಸೀವರ್ ಆಗಿ ಮುಂದುವರಿಯುತ್ತಾರೆ... ಅವರು (ಮುಸ್ಲಿಂ ಕಡೆಯವರು) ನಿರ್ಧಾರದ ಮರುಪರಿಶೀಲನೆಗೆ ಹೋಗಬಹುದು. ಪೂಜೆ ಮುಂದುವರಿಯುತ್ತದೆ" ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದರು.

ಹಿಂದೂ ಪರ ಮತ್ತೊಬ್ಬ ವಕೀಲ ವಿಷ್ಣು ಶಂಕರ್ ಜೈನ್, "ಜನವರಿ 17 ಮತ್ತು 31 ರ ಆದೇಶದ ವಿರುದ್ಧ ಅಂಜುಮನ್ ಇಂತೇಜಾಮಿಯಾ ಸಲ್ಲಿಸಿದ್ದ ಮೊದಲ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಜಾಗೊಳಿಸಿದೆ. ಇದರ ಪರಿಣಾಮವೆಂದರೆ ಜ್ಞಾನವಾಪಿ ಸಂಕೀರ್ಣದ 'ವ್ಯಾಸ್ ಜೀ ಕಾ ತೆಹಖಾನಾ'ದಲ್ಲಿ ನಡೆಯುತ್ತಿರುವ ಪೂಜೆ ಮುಂದುವರಿಯುತ್ತದೆ. ಅಂಜುಮನ್ ಇಂತೇಜಾಮಿಯಾ ಸುಪ್ರೀಂ ಕೋರ್ಟ್‌ಗೆ ಹೋಗು ಸಾಧ್ಯತೆ ಇದೆ. ಆಗ ನಾವು ನಮ್ಮ ಕೇವಿಯಟ್ ಅನ್ನು ಉನ್ನತ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ" ಎಂದು ಹೇಳಿದರು.

ಜನವರಿ 31 ರಂದು ವಾರಾಣಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಾದ 'ವ್ಯಾಸ್ ತೆಹಖಾನಾ'ದಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸಬಹುದು ಎಂದು ತೀರ್ಪು ನೀಡಿತ್ತು. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಾಮನಿರ್ದೇಶನ ಮಾಡಿದ 'ಪೂಜೆ' ಮತ್ತು 'ಪೂಜಾರಿ' ಗೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶನ ನೀಡಿತ್ತು.

ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದ್ ಸಮಿತಿಯು ವಾರಣಾಸಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಫೆಬ್ರವರಿ 1 ರಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಮಸೀದಿ ಸಮಿತಿಯ ಮನವಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಸ್ವಲ್ಪ ಸಮಯದ ನಂತರ ಈ ಬೆಳವಣಿಗೆ ಸಂಭವಿಸಿದೆ.

ವಿಶೇಷವೆಂದರೆ, ಮಸೀದಿಯ ನೆಲಮಾಳಿಗೆಯಲ್ಲಿ ನಾಲ್ಕು 'ತೆಹಖಾನಾಗಳು' (ನೆಲಮಾಳಿಗೆಗಳು) ಇವೆ, ಅವುಗಳಲ್ಲಿ ಒಂದು ಇನ್ನೂ ವ್ಯಾಸರ ಕುಟುಂಬದ ವಶದಲ್ಲಿದೆ, ಅವರು ಅಲ್ಲಿ ವಾಸಿಸುತ್ತಿದ್ದರು. ಆದಾಗ್ಯೂ, ಮಸೀದಿ ಸಮಿತಿಯ ಪ್ರಕಾರ, 'ವ್ಯಾಸ್ ಜೀ ಕಾ ತೆಹಖಾನಾ' ಮಸೀದಿ ಆವರಣದ ಒಂದು ಭಾಗವಾಗಿ ಅವರ ವಶದಲ್ಲಿದೆ ಮತ್ತು ವ್ಯಾಸ್ ಕುಟುಂಬ ಅಥವಾ ಬೇರೆ ಯಾರಿಗೂ ತೆಹ್ಖಾನಾದೊಳಗೆ ಪೂಜಿಸುವ ಯಾವುದೇ ಹಕ್ಕಿಲ್ಲ.

ಏತನ್ಮಧ್ಯೆ, ವ್ಯಾಸರ ಕುಟುಂಬವು 1993 ರವರೆಗೆ ನೆಲಮಾಳಿಗೆಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸುತ್ತಿತ್ತು, ಆದರೆ ರಾಜ್ಯ ಸರ್ಕಾರದ ನಿರ್ದೇಶನಕ್ಕೆ ಅನುಸಾರವಾಗಿ ಅವರು ಅದನ್ನು ನಿಲ್ಲಿಸಬೇಕಾಯಿತು ಎಂದು ಹಿಂದೂ ಪರ ವಕೀಲರು ಹೇಳಿದ್ದಾರೆ.

ನ್ಯಾಯಾಧೀಶರು ನಿವೃತ್ತಿಯ ಮೊದಲು ನೀಡಿದ ತೀರ್ಪು; ಓವೈಸಿ ಖಂಡನೆ

ವಾರಣಾಸಿ ಮಸೀದಿಯೊಳಗೆ ಹಿಂದೂ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ತೀರ್ಪನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಖಂಡಿಸಿದ್ದಾರೆ.

"ನ್ಯಾಯಾಧೀಶರು ನಿವೃತ್ತಿಗೆ ಮೊದಲು ಸೇವಾವಧಿಯ ಕೊನೆಯ ದಿನ ಈ ತೀರ್ಪು ನೀಡಿದ್ಧಾರೆ. ನ್ಯಾಯಾಧೀಶರು ಜನವರಿ 17 ರಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ರಿಸೀವರ್ ಆಗಿ ನೇಮಿಸಿದರು. ಅಂತಿಮವಾಗಿ ಅವರು ನೇರವಾಗಿ ತೀರ್ಪು ನೀಡಿದ್ದಾರೆ. 1993 ರಿಂದ ಯಾವುದೇ ಪ್ರಾರ್ಥನೆ ಸಲ್ಲಿಸಲಾಗಿಲ್ಲ ಎಂದು ಅವರು ಹೇಳಿದರು. 30 ವರ್ಷಗಳು ಕಳೆದಿವೆ. ಒಳಗೆ ವಿಗ್ರಹವಿದೆ ಎಂದು ಅವರಿಗೆ ಹೇಗೆ ಗೊತ್ತು? ಇದು ಪೂಜಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗಿದೆ... ಅವರು 7 ದಿನಗಳಲ್ಲಿ ಗ್ರಿಲ್ ಗಳನ್ನು ತೆರೆಯಲು ಆದೇಶಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಬೇಕಿತ್ತು. ಇದು ತಪ್ಪು ನಿರ್ಧಾರ" ಎಂದು ಓವೈಸಿ ಹೇಳಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.