ಕನ್ನಡ ಸುದ್ದಿ  /  Nation And-world  /  Covid Cases Rising In India Center Letter To 8 States Including Karnataka For Increase Basic Facilities In Hospitals Rmy

Covid Alert: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ; ಆಸ್ಪತ್ರೆಗಳ ಮೂಲಭೂತ ಸೌಲಭ್ಯ ಹೆಚ್ಚಿಸಲು ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರ ಪತ್ರ

ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದಿದ್ದು, ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವಂತೆ ಸೂಚಿಸಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 8 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವಂತೆ ಸೂಚಿಸಿದೆ. (ಫೋಟೋ-ANI)
ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 8 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದ್ದು, ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವಂತೆ ಸೂಚಿಸಿದೆ. (ಫೋಟೋ-ANI)

ದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ (Covid cases) ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಮೂಡಿಸುತ್ತಿದೆ. ಈ ಸಂಬಂಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ (Karnataka) ಸೇರಿದಂತೆ 8 ರಾಜ್ಯಗಳಿಗೆ ಕೇಂದ್ರ ಸರ್ಕಾರ (Central Govt) ಪತ್ರ ಬರೆದಿದ್ದಾರೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಂಟು ರಾಜ್ಯಗಳಿಗೆ ಪತ್ರ ಬರೆದು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿರುವ ಈ ರಾಜ್ಯಗಳಲ್ಲಿ ಆಸ್ಪತ್ರೆ ಮೂಲಸೌಕರ್ಯ ಸುಧಾರಿಸುವುದು ಹಾಗೂ ಕಣ್ಗಾವಲು ಕ್ರಮಗಳನ್ನು ಹೆಚ್ಚಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕ, ನೆರೆಯ ತಮಿಳುನಾಡು, ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಕೇರಳ ಹಾಗೂ ಹರಿಯಾಣಕ್ಕೆ ಪತ್ರ ಬರೆದಿರುವ ಭೂಷಣ್ ಅವರು, ಸಾಂಕ್ರಾಮಿಕ ರೋಗವು ದೂರವಾಗಿಲ್ಲ, ಸೋಂಕು ಹರಡುವುದನ್ನು ನಿಯಂತ್ರಿಸುವುದು ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ್ದಾರೆ.

ತೀವ್ರ ಉಸಿರಾಟದ ಸೋಂಕು (SARI) ಮತ್ತು ಇನ್ಫ್ಲುಯೆನ್ಸ ತರಹದ ಅನಾರೋಗ್ಯ (ILI) ವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು, ಪರೀಕ್ಷೆಯನ್ನು ಹೆಚ್ಚಿಸಲು, ಜೀನೋಮ್ ಹೆಚ್ಚಿನ ಮಾದರಿಗಳನ್ನು ಸಂಗ್ರಹಿಸುವುದು ಹಾಗೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.

ಸಾಂಕ್ರಾಮಿಕ ರೋಗ ಕೋವಿಡ್ ಇನ್ನೂ ಮುಗಿದಿಲ್ಲ. ಯಾವುದೇ ಮಟ್ಟದಲ್ಲಿ ಸಡಿಲತೆಯ ವಿರುದ್ಧ ನಾವು ಜಾಗರೂಕರಾಗಿರಬೇಕು. ಸಾಂಕ್ರಾಮಿಕ ನಿರ್ವಹಣೆಯಲ್ಲಿ ಇಲ್ಲಿಯವರೆಗೆ ಮಾಡಿದ ಎಲ್ಲಾ ಯಶಸ್ವಿ ಕಾರ್ಯಗಳನ್ನು ಇದು ಮೀರಬಹುದು. ಹೀಗಾಗಿ ರಾಜ್ಯಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಯಾವುದೇ ಉದಯೋನ್ಮುಖ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ದೇಶದಲ್ಲಿ ಒಂದೇ ದಿನದಲ್ಲಿ 11,692 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 28 ಮಂದಿ ಸೋಂಕಿಗೆ ಬಲಿಯಾಗಿರುವ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಇಂದು (ಏ.21, ಶುಕ್ರವಾರ) ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 66,170 ಇದೆ. ದೈನಂದಿನ ಪಾಸಿಟಿವ್ ದರವು ಶೇ. 5.09ಕ್ಕೆ ತಲುಪಿದೆ. ವಾರದ ಪಾಸಿಟಿವ್ ದರ ಶೇ. 5.33 ರಷ್ಟು ಇದೆ. ಹೆಚ್ಚು ಪಾಸಿಟಿವ್ ಪ್ರಕರಣಗಳ ಕಂಡು ಬರುತ್ತಿರುವ ಪ್ರದೇಶಗಳ ಮೇಲೆ ಕೇಂದ್ರೀಕರಿಸಲು ಭೂಷಣ್ ಸಲಹೆ ನೀಡಿದ್ದಾರೆ.

ಆಸ್ಪತ್ರೆಯ ಸನ್ನದ್ಧತೆಯನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ ಅಗತ್ಯ ಔಷಧಗಳು, ಸಲಕರಣೆಗಳ ಸಾಕಷ್ಟು ಸರಬರಾಜು ನಿರ್ವಹಿಸಬೇಕು. INSACOG ನೆಟ್‌ವರ್ಕ್ ಆಫ್ ಲ್ಯಾಬೋರೇಟರಿಗಳ ಮೂಲಕ ಸಂಪೂರ್ಣ ಜೀನೋಮಿಕ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾದ ಕೋವಿಡ್-19-ಪಾಸಿಟಿವ್ ಮಾದರಿಗಳ ಸಂಖ್ಯೆಯನ್ನು ಹೆಚ್ಚಿಸಿ, ವಿಶೇಷವಾಗಿ ಸಮುದಾಯದಲ್ಲಿ ಪತ್ತೆಯಾದ ಪ್ರಕರಣಗಳ ಬಗ್ಗೆ ನಿಗಾವಹಿಸಬೇಕಂದು ಹೇಳಿದ್ದಾರೆ.

ಆಸ್ಪತ್ರೆಯ ಮೂಲಸೌಕರ್ಯಗಳ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಿ. ಅಗತ್ಯ ಔಷಧಗಳು, ಉಪಕರಣಗಳು ಹಾಗೂ ತರಬೇತಿ ಪಡೆದ ಮಾನವ ಸಂಪನ್ಮೂಲ ಲಭ್ಯತೆಯನ್ನು ಕಾಪಾಡಿಕೊಳ್ಳಿ ಎಂದು ಭೂಷಣ್ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ವಿಭಾಗ