Amritpal Singh: ಅಮಿತ್ ಶಾ ಜತೆಗಿನ ಭೇಟಿ ಬಳಿಕವೇ ಅಮೃತ್‌ಪಾಲ್ ಸಿಂಗ್ ಬಂಧಿಸಲು ಮುಂದಾದ ಭಗವಂತ್ ಮಾನ್ ಸರ್ಕಾರ..
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಭೇಟಿ ಬಳಿಕವೇ ಪಂಜಾಬ್ ಸರ್ಕಾರ ಅಮೃತ್‌ಪಾಲ್ ಸಿಂಗ್ ಬಂಧಿಸಲು ಕ್ರಮ ಕೈಗೊಂಡಿದೆ ಎಂದು ವರದಿಗಳು ಹೇಳಿವೆ.
ಪಂಜಾಬ್: ಪರಾರಿಯಾಗಿರುವ ಖಲಿಸ್ತಾನ್ ಪರ ಸಂಘಟನೆ 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥ ಮತ್ತು ತೀವ್ರಗಾಮಿ ಸಿಖ್ ಬೋಧಕ ಅಮೃತ್‌ಪಾಲ್ ಸಿಂಗ್ನನ್ನು ಬಂಧಿಸಲು ಪಂಜಾಬ್ ಪೊಲೀಸರು ಬಲೆ ಬೀಸಿದ್ದು, ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಭೇಟಿ ಬಳಿಕವೇ ಪಂಜಾಬ್ ಸರ್ಕಾರ ಅಮೃತ್‌ಪಾಲ್ ಸಿಂಗ್ ಬಂಧಿಸಲು ಕ್ರಮ ಕೈಗೊಂಡಿದೆ ಎಂದು ವರದಿಗಳು ಹೇಳಿವೆ.
ಟ್ರೆಂಡಿಂಗ್ ಸುದ್ದಿ
ವರದಿಗಳ ಪ್ರಕಾರ ಮಾರ್ಚ್ 2 ರಂದು ಭಗವಂತ್ ಮಾನ್ ಅವರನ್ನು ಅಮಿತ್ ಶಾ ದೆಹಲಿಗೆ ಕರೆಯಿಸಿಕೊಂಡಿದ್ದರು. ಪ್ರತ್ಯೇಕತಾವಾದಿ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುತ್ತಿರುವ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಗವಂತ್ ಮಾನ್ಗೆ ಅಮಿತ್ ಶಾ ಸೂಚಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಾರ್ಚ್ 2 ರಂದು, ಭಗವಂತ್ ಮಾನ್ ಅವರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿರುವುದಾಗಿ ಮತ್ತು ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿರುವುದಾಗಿ ಟ್ವೀಟ್ ಮಾಡಿದ್ದರು. ಇದೇ ವಿಚಾರವಾಗಿ ಮಾನ್ ಪಂಜಾಬ್ ರಾಜ್ಯಪಾಲರನ್ನೂ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಅಮೃತ್‌ಪಾಲ್ ಸಿಂಗ್ ಬಂಧಿಸಲು ಪಂಜಾಬ್ ಸರ್ಕಾರ ಮುಂದಾಗಿದೆ.
ಅಮಿತ್ ಶಾ ಮತ್ತು ಭಗವಂತ್ ಮಾನ್ ಅವರಿಗೆ ಅಮೃತ್‌ಪಾಲ್ ಸಿಂಗ್ ಕೊಲೆ ಬೆದರಿಕೆ ಹಾಕಿದ್ದನು. ಹತ್ಯೆಗೀಡಾದ ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಸ್ಥಿತಿಯೇ ಅಮಿತ್ ಶಾ ಮತ್ತು ಭಗವಂತ್ ಮಾನ್ ಅವರಿಗೆ ಬರಲಿದೆ ಎಂದು ಎಚ್ಚರಿಕೆ ನೀಡಿದ್ದ. ಅಲ್ಲದೇ ಭಾರತದಿಂದ ಪ್ರತ್ಯೇಕತೆಯನ್ನು ಘೋಷಿಸುವ ಮತ್ತು ಖಲಿಸ್ತಾನವನ್ನು ರಚಿಸುವ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದನು.
ಪರಾರಿಯಾದ ಅಮೃತ್‌ಪಾಲ್ ಸಿಂಗ್
ಶನಿವಾರ ಜಲಂಧರ್ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಾರುಗಳಲ್ಲಿ ಅಮೃತ್‌ಪಾಲ್ ಸಿಂಗ್ ಹಾಗೂ ಅವರ ಸಹಚರರನ್ನು ಪೊಲೀಸರು ಬೆನ್ನೆಟ್ಟಿದ್ದರು. ಅಮೃತಪಾಲ್ ಸಿಂಗ್‌ನ 78 ಸಹಚರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಆದರೆ, ಪೊಲೀಸರ ಕೈಗೆ ಇನ್ನೇನು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲಿ ಅಮೃತಪಾಲ್ ಸಿಂಗ್ ಮಾತ್ರ ತಪ್ಪಿಸಿಕೊಂಡಿದ್ದರು. ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ 300ಕ್ಕೂ ಹೆಚ್ಚು ರೈಫಲ್ಗಳು, 373 ಸಜೀವ ಗುಂಡುಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಮೃತಪಾಲ್ ಸಿಂಗ್ ಬಂಧಿಸಲು ಪೊಲೀಸರು ರಾಜ್ಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ.
ಅಮೃತ್‌ಪಾಲ್ ಸಿಂಗ್ ಬಹಿರಂಗ ಹೇಳಿಕೆ
ಖಲಿಸ್ತಾನ ರಚನೆಯ ಅಂತಿಮ ಗುರಿಯನ್ನು ಸಾಧಿಸಲು ಸಿಖ್ ಯುವಕರು, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳ ವಿರುದ್ಧ ಸಶಸ್ತ್ರ ದಂಗೆಯನ್ನು ಆರಂಭಿಸಬೇಕು ಎಂದು ಅಮೃತ್‌ಪಾಲ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾನೆ. ಮೋಗಾ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಸಿಖ್ ಅಲ್ಲದ ಸರ್ಕಾರಗಳಿಗೆ ಪಂಜಾಬ್‌ನ ಜನರನ್ನು ಆಳುವ ಹಕ್ಕು ಇಲ್ಲ ಮತ್ತು ಪಂಜಾಬ್‌ನ ಜನರನ್ನು ಸಿಖ್ಖರು ಮಾತ್ರ ಆಳಬೇಕು ಎಂದು ಅಮೃತ್‌ಪಾಲ್ ಸಿಂಗ್ ಹೇಳಿದ್ದ.
ಪಂಜಾಬ್ ಪೊಲೀಸರ ಜತೆ ಸೇರಿ ಅಮೃತ್‌ಪಾಲ್ ಸಿಂಗ್ ಇರುವಿಕೆಗೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಕೇಂದ್ರ ಗುಪ್ತಚರ ಇಲಾಖೆ, ಅಮೃತ್‌ಪಾಲ್ ಸಿಂಗ್‌ಗೆ ಪಾಕಿಸ್ತಾನದ ಬಾಹ್ಯ ಗುಪ್ತಚರ ಇಲಾಖೆ ಐಎಸ್‌ಐ ನೆರವು ನೀಡುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ.
ಕಳೆದ ತಿಂಗಳು ಅಮೃತ್‌ಪಾಲ್ ಸಿಂಗ್‌ನ ನಿಕಟ ಸಹಚರರಾದ ವಾರಿಸ್ ಪಂಜಾಬ್ ದೇ ನಾಯಕ ಮತ್ತು ಖಲಿಸ್ತಾನ ಮುಖಂಡ ಲವ್‌ಪ್ರೀತ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದರು. ಆತ ಅಮೃತಸರ ವಿಮಾನ ನಿಲ್ದಾಣದ ಮೂಲಕ ಎಸ್ಕೇಪ್ ಆಗಲು ಪ್ರಯತ್ನಿಸಿದಾಗ ಪೊಲೀಸರು ಬಂಧಿಸಿದ್ದರು. ಆ ಬಳಿಕ ಪಂಜಾಬ್‌ನಲ್ಲಿ ಖಲಿಸ್ತಾನ ಹೋರಾಟ ಭುಗಿಲೆದ್ದಿತ್ತು. ಲವ್‌ಪ್ರೀತ್ ಸಿಂಗ್ ಬಂಧನ ವಿರೋಧಿಸಿ ಅಮೃತ್‌ಪಾಲ್ ಸಿಂಗ್ ನೇತೃತ್ವದಲ್ಲಿ ಪ್ರತಿಭಟನೆ, ಹೋರಾಟ ತೀವ್ರಗೊಂಡಿತ್ತು. ವಾರಿಸ್ ಪಂಜಾಬ್ ದೇ ಸಂಘಟನೆಯ ಕಾರ್ಯಕರ್ತರು ಖಡ್ಗ, ಬಂದೂಕು, ದೊಣ್ಣೆ ಹಿಡಿದುಕೊಂಡು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು.
ಪ್ರತಿಭಟನೆಗೆ ಹೆದರಿದ ಪಂಜಾಬ್‌ನ ಆಮ್ ಆದ್ಮಿ ಸರ್ಕಾರವು ಅಜ್ನಾಲಾ ನ್ಯಾಯಾಲಯದ ಆದೇಶದ ನಂತರ ಫೆಬ್ರವರಿ 24 ರಂದು ಆರೋಪಿ ಲವ್‌ಪ್ರೀತ್ ತೂಫಾನ್ನನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ಜನರ ಬೆದರಿಕೆಗೆ ಮಣಿದು ಆರೋಪಿಯನ್ನು ಬಿಡುಗಡೆ ಮಾಡಿರುವ ಆಮ್ ಆದ್ಮಿ ಕ್ರಮದ ಕುರಿತು ಸಾಕಷ್ಟು ಟೀಕೆಗಳೂ ಎದ್ದಿದ್ದವು.