ಕನ್ನಡ ಸುದ್ದಿ  /  Nation And-world  /  Customs Find 7 Expensive Wristwatches On Passenger At Delhi Airport

Delhi: ಕಸ್ಟಮ್ಸ್‌ ಅಧಿಕಾರಿಗಳಿಂದ 7 ದುಬಾರಿ ವಾಚ್‌ ವಶ; ಒಂದರ ಬೆಲೆ ಬರೋಬ್ಬರಿ 27 ಕೋಟಿ ರೂಪಾಯಿ!

ಈ ಒಂದು ವಾಚ್‌ ಬೆಲೆ ಕೋಟಿಗಳಲ್ಲಿದ್ದು, ಉಳಿದ ವಾಚ್‌ ಲಕ್ಷ ಲಕ್ಷ ಬೆಲೆಬಾಳುತ್ತದೆ. ವಶಪಡಿಸಿಕೊಂಡ ಕೈಗಡಿಯಾರಗಳ ಒಟ್ಟು ಮೌಲ್ಯ 28.17 ಕೋಟಿ ರೂಪಾಯಿ ಎಂದು ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದಾರೆ.

ದುಬಾರಿ ವಾಚ್
ದುಬಾರಿ ವಾಚ್

ನವದೆಹಲಿ: ಚಿನ್ನ ಮತ್ತು ವಜ್ರ ಲೇಪಿತ ವಾಚ್ ಸೇರಿದಂತೆ ಒಟ್ಟು ಏಳು ದುಬಾರಿ ಕೈಗಡಿಯಾರಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಭಾರತೀಯ ಪ್ರಜೆಯನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ವಾಚ್‌ ಬೆಲೆ ಕೇಳಿದರೆ ನಿಮಗೆ ಅಚ್ಚರಿಯಾಗದಿರದು. ಜೇಕಬ್ ಆಂಡ್ ಕಂಪನಿಯ 27 ಕೋಟಿ ರೂಪಾಯಿ ಮೌಲ್ಯದ ಕಸ್ಟಮೈಸ್ಡ್‌ ಚಿನ್ನ ಮತ್ತು ವಜ್ರದ ವಾಚ್ ಕೂಡಾ ಇದರಲ್ಲಿ ಸೇರತ್ತು. ಇದನ್ನು ನೋಡಿ ಕಸ್ಟಮ್ಸ್‌ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಈ ಒಂದು ವಾಚ್‌ ಬೆಲೆ ಕೋಟಿಗಳಲ್ಲಿದ್ದು, ಉಳಿದ ವಾಚ್‌ ಲಕ್ಷ ಲಕ್ಷ ಬೆಲೆಬಾಳುತ್ತದೆ. ವಶಪಡಿಸಿಕೊಂಡ ಕೈಗಡಿಯಾರಗಳ ಒಟ್ಟು ಮೌಲ್ಯ 28.17 ಕೋಟಿ ರೂಪಾಯಿ ಎಂದು ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದಾರೆ.

ಅಕ್ಟೋಬರ್ 4ರಂದು ಎಮಿರೇಟ್ಸ್ ವಿಮಾನ ಇಕೆ 516ನಲ್ಲಿ ಪ್ರಯಾಣಿಕ ದುಬೈನಿಂದ ದೆಹಲಿಯಲ್ಲಿ ಬಂದಿಳಿದಾಗ ಆತನನ್ನು ಬಂಧಿಸಲಾಗಿದೆ.

ಕಸ್ಟಮ್ಸ್ ಕಾಯಿದೆಯ ಸೆಕ್ಷನ್ 135ರ ಅಡಿಯಲ್ಲಿ (ಸುಂಕದ ವಂಚನೆಗೆ ಸಂಬಂಧಿಸಿದ ಮೌಲ್ಯದ ತಪ್ಪು ಘೋಷಣೆ ಅಥವಾ ವಂಚನೆ ಅಥವಾ ಯಾವುದೇ ಕರ್ತವ್ಯದಿಂದ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಸಂಬಂಧಿಸಿದ) ನಡೆಸಿದ ಅಪರಾಧಗಳಿಗಾಗಿ ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಪರಾಧ ಸಾಬೀತಾಗಿ, ಸರಕುಗಳ ಮಾರುಕಟ್ಟೆ ಮಾಲ್ಯ 1 ಕೋಟಿ ರೂಪಾಯಿಯನ್ನು ಮೀರಿದರೆ ಆರೋಪಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಕಸ್ಟಮ್ಸ್ ಅಧಿಕಾರಿಗಳಿಂದ ಶಂಕಿತನನ್ನು ಗುರುತಿಸಲಾಗಿಲ್ಲ. ಪ್ರಯಾಣಿಕರ ವಿವರಗಳ ಆಧಾರದ ಮೇಲೆ ತಪಾಸಣೆಗಾಗಿ ಪ್ರತಿಯೊಬ್ಬರನ್ನು ನಿಲ್ಲಿಸಲಾಗಿತ್ತು. ಈ ವೇಳೆ ವ್ಯಕ್ತಿಯ ಲಗೇಜ್‌ನಲ್ಲಿದ್ದ ವಸ್ತುಗಳನ್ನು ತನಿಖೆ ಮಾಡಲಾಗಿದೆ. ಈ ವೇಳೆ ಅದರಲ್ಲಿ ಐದು ರೋಲೆಕ್ಸ್ ಆಯ್ಸ್ಟರ್ ವಾಚ್‌ಗಳು, ಪಿಯಾಗೆಟ್ ಲೈಮ್‌ಲೈಟ್ ಸ್ಟೆಲ್ಲಾ ವಾಚ್ ಮತ್ತು ಐಫೋನ್ 14 ಪ್ರೊ ಪತ್ತೆಯಾಗಿದೆ. ಇದನ್ನು ಹೊರತುಪಡಿಸಿ ವಜ್ರ ಹೊದಿಕೆಯ ಬ್ರೇಸ್‌ಲೆಟ್ ಕೂಡಾ ಸಿಕ್ಕಿದೆ. ಇದರಲ್ಲಿದ್ದ ರೋಲೆಕ್ಸ್ ವಾಚ್‌ಗಳು ತಲಾ 15 ಲಕ್ಷ ಮೌಲ್ಯದ್ದಾಗಿದ್ದು, ಪಿಯಾಜೆಟ್ ವಾಚ್‌ 30 ಲಕ್ಷ ರೂಪಾಯಿ ಮೌಲ್ಯದ್ದಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜೇಮ್ಸ್ & ಕಂಪನಿಗೆ ಸೇರಿದ ಕೈಯಿಂದ ರಚಿಸಲಾದ ಬಿಲಿಯನೇರ್ III ಕೈಗಡಿಯಾರ ಇದರಲ್ಲಿತ್ತು. ಕಂಪನಿಯ ವೆಬ್‌ಸೈಟ್ ಪ್ರಕಾರ, ಈ ಸೀಮಿತ ಆವೃತ್ತಿಯ ಕೇವಲ 18 ವಾಚ್‌ಗಳನ್ನು ಮಾತ್ರ ಈವರೆಗೆ ತಯಾರಿಸಲಾಗಿದೆ. ಇದು ಅತ್ಯಂತ ದುಬಾರಿ ವಾಚ್‌ ಆಗಿದೆ.

“ವಾಣಿಜ್ಯ ಅಥವಾ ಐಷಾರಾಮಿ ಸರಕುಗಳಲ್ಲಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಒಂದೇ ಬಾರಿ ವಶಪಡಿಸಿಕೊಂಡ ವಸ್ತುವಿನ ಮೌಲ್ಯದ ಪ್ರಕಾರ, ಇದು ಈ ವರೆಗಿನ ದೊಡ್ಡ ಮೊತ್ತದ ವಶವಾಗಿದೆ. ಈ ಮೌಲ್ಯವು ಒಂದೇ ಬಾರಿ ಸುಮಾರು 60 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳುವುದಕ್ಕೆ ಸಮಾನವಾಗಿದೆ” ಎಂದು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಕಮಿಷನರ್ ಜುಬೈರ್ ರಿಯಾಜ್ ಕಮಿಲಿ ಹೇಳಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಅದರ ನಡುವೆಯೂ ಕಸ್ಟಮ್ಸ್ ಅಧಿಕಾರಿಗಳು ಎಚ್ಚರ ವಹಿಸಿ ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದೆಹಲಿ ಕಸ್ಟಮ್ಸ್ ವಲಯದ ಮುಖ್ಯ ಆಯುಕ್ತ ಸುರ್ಜಿತ್ ಭುಜಬಲ್ ಹೇಳಿದ್ದಾರೆ.

IPL_Entry_Point

ವಿಭಾಗ