Zero-click hack: ಯಾವುದೇ ಲಿಂಕ್ ಕ್ಲಿಕ್ ಮಾಡದಿದ್ರೂ ನಿಮ್ಮ ಫೋನ್ ಹ್ಯಾಕ್ ಆಗಬಹುದು, ವಾಟ್ಸಪ್‌ನಿಂದ ಬಳಕೆದಾರರಿಗೆ ಎಚ್ಚರಿಕೆ
Zero-click hack: ಯಾವುದೇ ಲಿಂಕ್ ಕ್ಲಿಕ್ ಮಾಡದೆ ಇದ್ದರೂ ಬಳಕೆದಾರರ ಮೊಬೈಲ್ ಫೋನ್ ಹ್ಯಾಕ್ ಮಾಡುವ ಸೈಬರ್ ದಾಳಿಯ ಕುರಿತು ವಾಟ್ಸಪ್ ಮಾಹಿತಿ ನೀಡಿದೆ. ಹ್ಯಾಕರ್‌ಗಳು ಝೀರೋ ಕ್ಲಿಕ್ ಹ್ಯಾಕ್ ತಂತ್ರ ಬಳಸಿರುವುದು ಆತಂಕಕ್ಕೆ ಕಾರಣವಾಗಿದೆ. ವಾಟ್ಸಪ್ ಬಳಕೆದಾರರು ಯಾವುದೇ ದುರುದ್ದೇಶಪೂರಿತ ಲಿಂಕ್ ಕ್ಲಿಕ್ ಮಾಡದೆ ಇದ್ದರೂ ಸೈಬರ್ ದಾಳಿಗೆ ತುತ್ತಾಗಬಹುದು.

ವಾಟ್ಸಪ್‌ನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಹಣ, ಖಾಸಗಿ ಡೇಟಾ ಕಳೆದುಕೊಳ್ಳುವ ಸಂಗತಿ ನಿಮಗೆ ಗೊತ್ತಿರಬಹುದು. ಪ್ರತಿನಿತ್ಯ ಹ್ಯಾಕರ್‌ಗಳು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡಿಕೊಂಡು ಸಾವಿರಾರು, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರ ಸುದ್ದಿಗಳು ಪ್ರತಿನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಹಿಂದೂಸ್ತಾನ್ ಟೈಮ್ಸ್ ಕನ್ನಡವು ಸೈಬರ್ ವಂಚಕರ ಕುರಿತು ಓದುಗರಲ್ಲಿ ಜಾಗೃತಿ ಮೂಡಿಸಲು ಡಿಜಿಟಲ್ ಜಾಗೃತಿ ಲೇಖನ ಸರಣಿಯನ್ನೇ ಆರಂಭಿಸಿತ್ತು. ವಾಟ್ಸಪ್‌ನಲ್ಲಿ ಕಾಣಿಸುವ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ, ಐಫೋನ್ ಗೆಲ್ಲಿ ಇತ್ಯಾದಿ ಆಮಿಷ ತೋರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಸದಾ ಜನರನ್ನು ಎಚ್ಚರಿಸಿದರೂ ಆನ್‌ಲೈನ್ ವಂಚನೆ ಕಡಿಮೆಯಾಗಿಲ್ಲ. ಇದೀಗ ಬಂದ ಸುದ್ದಿ ಪ್ರಕಾರ ಹ್ಯಾಕರ್‌ಗಳು ಯಾವುದೇ ಲಿಂಕ್ ಮಾಡಿಸದೆಯೂ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಬಹುದಂತೆ. ಈ ಕುರಿತು ಬಳಕೆದಾರರಿಗೆ ವಾಟ್ಸಪ್ ಎಚ್ಚರಿಕೆ ನೀಡಿದೆ.
ಲಿಂಕ್ ಕ್ಲಿಕ್ ಮಾಡದಿದ್ರೂ ಹ್ಯಾಕ್
ಒಂದು ಡಜನ್ ದೇಶಗಳ ಸುಮಾರು 90 ವಾಟ್ಸಪ್ ಬಳಕೆದಾರರ ವಾಟ್ಸಪ್ ಅನ್ನು ಸ್ಪೈವೇರ್ ಬಳಸಿ ಹ್ಯಾಕರ್‌ಗಳು ಟಾರ್ಗೆಟ್ ಮಾಡಿದ್ದಾರೆ ಎಂದು ವಾಟ್ಸಪ್ ತಿಳಿಸಿದೆ. ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಗುರಿಯಾಗಿಸಿ ಈ ಸೈಬರ್ ದಾಳಿ ಮಾಡಲಾಗಿದೆ. ಪ್ಯಾರಾಗಾನ್ ಸೊಲ್ಯೂಷನ್ಸ್ ಒಡೆತನದ ಹ್ಯಾಕಿಂಗ್ ಟೂಲ್ ಗುರಿಯಾಗಿಸಿಕೊಂಡು ಈ ಸೈಬರ್ ದಾಳಿ ನಡೆಸಿದೆ. ಪ್ಯಾರಾಗಾನ್ ಸೊಲ್ಯೂಷನ್ಸ್ ಎನ್ನುವುದು ಇಸ್ರೇಲ್ ಮೂಲದ ಹ್ಯಾಕಿಂಗ್ ತಂತ್ರಾಂಶಗಳ ಸ್ಪೆಷಲಿಸ್ಟ್ ಕಂಪನಿಯಾಗಿದೆ.
ಅಪರಾಧ ಮತ್ತು ರಾಷ್ಟ್ರೀಯ ಬಧ್ರತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವವರಂತೆ ಸೋಗು ಹಾಕಿಕೊಂಡವರಿಗೆ ಪ್ಯಾರಾಗಾನ್ ಸ್ಪೈವೇರ್ ಮಾರಾಟ ಮಾಡಲಾಗುತ್ತಿದೆ. ಈ ರೀತಿ ಸೈಬರ್ ದಾಳಿಗೆ ಒಳಗಾದ ಜನರ ಸಾಧನಗಳ ಸುರಕ್ಷತೆಗೆ ಧಕ್ಕೆಯಾಗಿರಬಹುದು ಎಂದು ವಾಟ್ಸಪ್ ಖಚಿತಗೊಳಿಸಿದೆ. ಸುಮಾರು 90 ಬಳಕೆದಾರರ ವಾಟ್ಸಪ್ ಹ್ಯಾಕ್ ಮಾಡಿರುವುದನ್ನು ನಾವು ಗುರುತಿಸಿದ್ದೇವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ವಾಟ್ಸಪ್ ತಿಳಿಸಿದೆ.
ಝೀರೋ ಕ್ಲಿಕ್ ಹ್ಯಾಕ್
ಹ್ಯಾಕರ್‌ಗಳು ಝೀರೋ ಕ್ಲಿಕ್ ಹ್ಯಾಕ್ ತಂತ್ರ ಬಳಸಿರುವುದು ಆತಂಕಕ್ಕೆ ಕಾರಣವಾಗಿದೆ. ಝೀರೋ ಕ್ಲಿಕ್ ಹ್ಯಾಕ್ ಎಂದರೆ ವಾಟ್ಸಪ್ ಬಳಕೆದಾರರು ಯಾವುದೇ ದುರುದ್ದೇಶಪೂರಿತ ಲಿಂಕ್ ಅನ್ನು ಕ್ಲಿಕ್ ಮಾಡದೆ ಇದ್ದರೂ ಸೈಬರ್ ದಾಳಿಗೆ ತುತ್ತಾಗುವುದು. ದಾಳಿಗೆ ಒಳಗಾಗುವ ವಾಟ್ಸಪ್ ಬಳಕೆದಾರರ ಜತೆ ಯಾವುದೇ ಸಂವಹನ ನಡೆಸದೆಯೂ ಅವರ ಸಾಧನಗಳನ್ನು ಟಾರ್ಗೆಟ್ ಮಾಡಲು ಹ್ಯಾಕರ್‌ಗಳಿಗೆ ಸಾಧ್ಯವಾಗುತ್ತದೆ ಎಂದು ಸೈಬರ್ ತಜ್ಞರು ಹೇಳಿದ್ದಾರೆ. ಯಾವುದೇ ತಪ್ಪು ಮಾಡದೆ ಇದ್ದರೂ ಇಲ್ಲಿ ಕೆಲವರು ಬಲಿಪಶುಗಳಾಗಬಹುದು.
ಹ್ಯಾಕರ್‌ಗಳು ನಿರ್ದಿಷ್ಟ ವ್ಯಕ್ತಿಗಳಿಗೆ ದುರುದ್ದೇಶಪೂರಿತ ಎಲೆಕ್ಟ್ರಾನಿಕ್ ದಾಖಲೆಗಳನ್ನು ಕಳುಹಿಸುತ್ತಾರೆ. ಈ ದಾಖಲೆಯನ್ನು ವಾಟ್ಸಪ್ ಬಳಕೆದಾರ ತೆರೆಯಬೇಕಿಲ್ಲ, ಮುಟ್ಟಬೇಕಿಲ್ಲ ಅಥವಾ ಯಾವುದೇ ಕ್ರಮ ಕೈಗೊಳ್ಳಬೇಕಾಗಿಲ್ಲ. ಈ ರೀತಿ ಯಾರ ಸಾಧನಕ್ಕೆ ಇಂತಹ ದುರುದ್ದೇಶಪೂರಿತ ಎಲೆಕ್ಟ್ರಾನಿಕ್ ದಾಖಲೆ ರವಾನೆಯಾಗುತ್ತದೆಯೋ ಅವರ ಮೊಬೈಲ್ ಅನ್ನು ಹ್ಯಾಕರ್‌ಗಳು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದು ಎಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ವಾಟ್ಸಪ್ ತಿಳಿಸಿದೆ.
ನಿರ್ದಿಷ್ಟವಾಗಿ ಯಾರನ್ನು ಗುರಿ ಮಾಡಲಾಗುತ್ತದೆ ಎಂದು ತಿಳಿಸಲು ವಾಟ್ಸಪ್ ನಿರಾಕರಿಸಿದೆ. ಸುಮಾರು ಹನ್ನೆರಡು ದೇಶಗಳ 90 ಜನರ ವಾಟ್ಸಪ್ ಖಾತೆ ಮೇಲೆ ಪರಿಣಾಮ ಬೀರಿದೆ. ಇದರಲ್ಲಿ ಯುರೋಪ್‌ನ ಸಾಕಷ್ಟು ಜನರು ಇದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ, ಪತ್ರಕರ್ತರನ್ನು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಗುರಿಯಾಗಿಸಿಕೊಂಡು ಈ ಸೈಬರ್ ದಾಳಿ ನಡೆಯುತ್ತಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.
