DA Hike: 2025ರಲ್ಲಿ ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಕೇಂದ್ರ ಸರ್ಕಾರಿ ನೌಕರರು, ಜನವರಿಯಲ್ಲಿ ಏನಾಗಬಹುದು
DA Hike: ಹೊಸ ವರ್ಷದ ಹೊಸ್ತಿಲಲ್ಲಿ ಮತ್ತೆ ಡಿಎ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಕೇಂದ್ರ ಸರ್ಕಾರಿ ನೌಕರರು. ವಾಡಿಕೆಯಂತೆ ಜನವರಿಯಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಘೋಷಣೆಯಾಗಲಿದೆ. ಬಳಿಕ ಅದನ್ನು ಪೂರ್ವಾನ್ವಯಗೊಳಿಸಿ ಮಾರ್ಚ್ ತಿಂಗಳಲ್ಲಿ ಜಾರಿಗೊಳಿಸಲಾಗುತ್ತದೆ. ಇಲ್ಲಿದೆ ನಿರೀಕ್ಷೆ ಮತ್ತು ಲೆಕ್ಕಾಚಾರಗಳ ವಿವರ.
DA Hike: ಹೊಸ ವರ್ಷ ಹತ್ತಿರದಲ್ಲಿದೆ. 2025ರ ತುಟ್ಟಿ ಭತ್ಯೆ ಹೆಚ್ಚಳ (ಡಿಎ ಹೆಚ್ಚಳ)ಕ್ಕೆ ಕೇಂದ್ರ ಸರ್ಕಾರಿ ನೌಕರರು ಕಾತರರಾಗಿದ್ದಾರೆ. 2025ರ ಜನವರಿಯಲ್ಲಿ ಡಿಎ ಹೆಚ್ಚಳಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳು ನಡೆದು ಪರಿಷ್ಕರಣೆ ಎಷ್ಟು ಎಂಬ ಘೋಷಣೆಯಾಗುವುದು ವಾಡಿಕೆ. ವರ್ಷಕ್ಕೆ ಎರಡು ಸಲ ಡಿಎ ಹೆಚ್ಚಳ ಮಾಡಲಾಗುತ್ತಿದ್ದು, ಇದು ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ವೇತನದ ನಡುವೆ ಹೊಂದಾಣಿಕೆ ಮೂಡಿಸುವುದಕ್ಕಾಗಿ ಅನುಸರಿಸುವ ಉಪಕ್ರಮವಾಗಿದೆ.
ಜೀವನ ವೆಚ್ಚದಲ್ಲಿನ ಬದಲಾವಣೆಗಳನ್ನು ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ)ದ ಆಧಾರದ ಮೇಲೆ ತುಟ್ಟಿ ಭತ್ಯೆಯನ್ನು (ಡಿಎ) ವರ್ಷಕ್ಕೆ ಎರಡು ಬಾರಿ ಸರಿಹೊಂದಿಸಲಾಗುತ್ತದೆ. ಕೇಂದ್ರ ಸರ್ಕಾರವು ಎಐಸಿಪಿಐ ಡೇಟಾವನ್ನು ಎರಡು ಅವಧಿಗಳಿಗೆ ಅಂದರೆ, ಜನವರಿ-ಜೂನ್ ಮತ್ತು ಜುಲೈ-ಡಿಸೆಂಬರ್ ಅವಧಿಗೆ ಪರಿಶೀಲಿಸುತ್ತದೆ. ಕಳೆದ 12 ತಿಂಗಳ ಎಐಸಿಪಿಐ ದತ್ತಾಂಶ ಇಟ್ಟುಕೊಂಡು ಅದರ ಸರಾಸರಿ ಆಧಾರದ ಮೇಲೆ ಡಿಎ ಹೆಚ್ಚಳ ನಿರ್ಧರಿಸಿ ಪರಿಷ್ಕರಿಸಲಾಗುತ್ತದೆ. ಸರಿಯಾದ ಮೌಲ್ಯಮಾಪನದ ನಂತರ ಅಂತಿಮ ನಿರ್ಧಾರವನ್ನು ಸರ್ಕಾರ ಪ್ರಕಟಿಸುತ್ತದೆ.
ಡಿಎ ಹೆಚ್ಚಳ: ತುಟ್ಟಿ ಭತ್ಯೆ ಲೆಕ್ಕಾಚಾರದ ಸೂತ್ರ ಇದು
ಸಾಮಾನ್ಯ ಉದ್ಯೋಗಿಗಳ ತುಟ್ಟಿ ಭತ್ಯೆ ಅಥವಾ ಡಿಎ ಲೆಕ್ಕಾಚಾರ ಮಾಡುವ ಸೂತ್ರವು ಸರಳವಾಗಿದೆ. ಈ ಸೂತ್ರವನ್ನು ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ: ಡಿಎ ಶೇಕಡಾವಾರು = ((ಕಳೆದ 12 ತಿಂಗಳ ಸರಾಸರಿ ಎಐಸಿಪಿಐ - 115.76) / 115.76) x 100.
ಕೇಂದ್ರ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಸ್ವಲ್ಪ ಹೊಂದಾಣಿಕೆಗಳಿವೆ. ಆದಾಗ್ಯೂ, ಮೂಲ ತತ್ತ್ವವು ಒಂದೇ ಆಗಿದ್ದು, ಕಳೆದ 12 ತಿಂಗಳ ಎಐಸಿಪಿಐ ದತ್ತಾಂಶ ಇಟ್ಟುಕೊಂಡು ಅದರ ಸರಾಸರಿ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ.
ವರ್ಷಕ್ಕೆ ಎರಡು ಸಲ ಡಿಎ ಹೆಚ್ಚಳ ಪ್ರಕಟ
ಕೇಂದ್ರ ಸರ್ಕಾರಿ ನೌಕರರ ಡಿಎ ಹೆಚ್ಚಳ ವರ್ಷಕ್ಕೆ ಎರಡು ಸಲ ನಡೆಯುತ್ತದೆ. ಜನವರಿಯಲ್ಲಿ ಡಿಎ ಪರಿಷ್ಕರಿಸಿ ಎಷ್ಟು ಶೇಕಡ ಹೆಚ್ಚಳ ಎಂದು ಪ್ರಕಟಿಸಿದರೆ, ಆ ಹೆಚ್ಚಳವು ಸಾಮಾನ್ಯವಾಗಿ ಹೋಲಿ ಹಬ್ಬದ ಹಿಂದೆ ಮುಂದೆ ಆಗಿ ಮಾರ್ಚ್ ತಿಂಗಳಲ್ಲಿ ಜಾರಿಯಾಗುತ್ತದೆ. ಹಾಗೆ ಜಾರಿಯಾಗುವಾಗ ಜನವರಿಯಿಂದ ಪೂರ್ವಾನ್ವಯವಾಗಿ ನೌಕರರ ಖಾತೆಗೆ ಜಮೆಯಾಗುತ್ತದೆ. ಅದೇ ರೀತಿ, ಜೂನ್ ತಿಂಗಳಲ್ಲಿ ಡಿಎ ಪರಿಷ್ಕರಣೆ ಘೋಷಣೆಯಾಗಿ ಅಕ್ಟೋಬರ್‌ನಲ್ಲಿ ಜಮೆಯಾಗುತ್ತದೆ.
ಕಳೆದ ವರ್ಷ ಡಿಎ ಹೆಚ್ಚಳ ಹೇಗಾಯಿತು, 2025ಕ್ಕೆ ನಿರೀಕ್ಷೆ ಎಷ್ಟು
ವಾಡಿಕೆಯಂತೆ ಈ ವರ್ಷ (2024) ಎರಡು ಬಾರಿ ಡಿಎ ಹೆಚ್ಚಳವಾಗಿದೆ. 2024ರ ಜನವರಿಯಲ್ಲಿ ಶೇಕಡ 4 ಡಿಎ ಹೆಚ್ಚಳ ಮಾಡಿದ್ದ ಕೇಂದ್ರ ಸರ್ಕಾರ ಅದನ್ನು ಮಾರ್ಚ್ ತಿಂಗಳಲ್ಲಿ ಜನವರಿಗೆ ಪೂರ್ವಾನ್ವಯ ಮಾಡಿ ಎಲ್ಲ ನೌಕರರಿಗೂ ಒದಗಿಸಿತ್ತು. ಅದರೊಂದಿಗೆ ಡಿಎ ಪ್ರಮಾಣವು ಮೂಲ ವೇತನದ ಶೇಕಡ 50ಕ್ಕೆ ತಲುಪಿತ್ತು. ಅದಾಗಿ, ಜೂನ್ ತಿಂಗಳಲ್ಲಿ ಮತ್ತೆ ಶೇಕಡ 3 ಡಿಎ ಹೆಚ್ಚಳ ಘೋಷಿಸಿತ್ತು. ಇದನ್ನು ಅಕ್ಟೋಬರ್ 16 ರಂದು ನೀಡಿದ್ದು, ಇದರೊಂದಿಗೆ ಡಿಎ ಪ್ರಮಾಣ ಶೇಕಡ 53 ತಲುಪಿತು. ಡಿಎ ಹೆಚ್ಚಳ ಅನ್ವಯವಾದಾಗ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು, ಪಿಂಚಣಿದಾರರಿಗೆ ಅನುಕೂಲವಾಗುತ್ತದೆ.
ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ, 2025ರ ಜನವರಿಯಲ್ಲಿ ಶೇಕಡ 3 ಡಿಎ ಹೆಚ್ಚಳ ಘೋಷಿಸುವ ಸಾಧ್ಯತೆಗಳಿವೆ. 2024ರ ಅಕ್ಟೋಬರ್‌ನಲ್ಲಿ ಎಐಸಿಪಿಐ 144.5 ತಲುಪಿದ್ದು, ಅದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರೊಂದಿಗೆ ಶೇಕಡ 3 ಡಿಎ ಹೆಚ್ಚಳವಾದರೆ ಮೂಲ ವೇತನದ ಶೇಕಡ 56ಕ್ಕೆ ಡಿಎ ಪ್ರಮಾಣ ತಲುಪಲಿದೆ. ಈ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಆರ್ಥಿಕ ಅಭಿವೃದ್ಧಿಗೆ ಅನುಕೂಲಕರವಾಗಿರಲಿದೆ.