World environment day: ಪ್ಲಾಸ್ಟಿಕ್ ಮಾಲಿನ್ಯ ಮೆಟ್ಟಿ ನಿಲ್ಲೋಣ, ವಿಶ್ವ ಪರಿಸರ ದಿನದಂದು ನೆನಪಿನಲ್ಲಿಟ್ಟುಕೊಳ್ಳಬೇಕಾದ 15 ವಿಷಯಗಳು
ಪ್ರತಿ ವರ್ಷ ಜೂನ್ 5 ಅನ್ನು ವಿಶ್ವ ಪರಿಸರ ದಿನ (World environment day) ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ . ಪ್ಲಾಸ್ಟಿಕ್ ಮಾಲಿನ್ಯ ಮೆಟ್ಟಿ ನಿಲ್ಲೋಣ (Beat Plastic Pollution) ಎನ್ನುವುದು ಈ ವರ್ಷದ ಥೀಮ್. ಈ ದಿನದ ಇತಿಹಾಸ, ಮಹತ್ವ ಇತ್ಯಾದಿಗಳು ಒಳಗೊಂಡಂತೆ ಎಲ್ಲರೂ ತಿಳಿದಿರಬೇಕಾದ ಹದಿನೈದು ವಿಷಯಗಳು ಇಲ್ಲಿವೆ.
World environment day: ಪ್ಲಾಸ್ಟಿಕ್ ಮಾಲಿನ್ಯ ಮೆಟ್ಟಿ ನಿಲ್ಲೋಣ, ವಿಶ್ವ ಪರಿಸರ ದಿನದಂದು ನೆನಪಿನಲ್ಲಿಟ್ಟುಕೊಳ್ಳಬೇಕಾದ 15 ವಿಷಯಗಳು
ಭೂಮಿ ಮತ್ತು ಪರಿಸರವನ್ನು ಸಂರಕ್ಷಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 5 ಅನ್ನು ವಿಶ್ವ ಪರಿಸರ ದಿನ (World environment day) ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ . 2023 ರಲ್ಲಿ 51 ನೇ ವರ್ಷದ ವಿಶ್ವ ಪರಿಸರ ದಿನಾಚರಣೆ ನಡೆಯುತ್ತಿದೆ. ಈ ವರ್ಷದ ಆಚರಣೆಯನ್ನು " ಪ್ಲಾಸ್ಟಿಕ್ ಮಾಲಿನ್ಯ ಮೆಟ್ಟಿ ನಿಲ್ಲೋಣ " (Beat Plastic Pollution) ಎಂಬ ಥೀಮ್ ದೊಂದಿಗೆ ಆಚರಣೆ ಮಾಡಲಾಗುತ್ತದೆ. ಪರಿಸರ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಲು ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಯೋಜಿಸಲಾಗುತ್ತದೆ. ಪರಿಸರ ಸಂರಕ್ಷಣೆ ಕುರಿತು ಕಾಳಜಿ ಮೂಡಿಸಲು ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದ ಘೋಷಣೆ ನೀಡಲಾಗುತ್ತದೆ.
- ಜೂನ್ 5, 1973 ರಂದು, ಮೊದಲ ವಿಶ್ವ ಪರಿಸರ ದಿನ ಆಚರಣೆಗೆ ನಾಂದಿ ಮತ್ತು ಮೊದಲ ವಿಶ್ವ ಪರಿಸರ ದಿನ ಆಚರಣೆ.
- ವಿಶ್ವ ಪರಿಸರ ದಿನಕ್ಕೆಂದೇ ಪ್ರತ್ಯೇಕ ಗೀತೆಯನ್ನು 2013 ರಲ್ಲಿ ನವದೆಹಲಿಯಲ್ಲಿ ರಚಿಸಲಾಗಿದೆ
- 100 ಕ್ಕೂ ಹೆಚ್ಚು ದೇಶಗಳು ಸಾರ್ವಜನಿಕ ರಜಾ ರಜೆ ಘೋಷಣೆ ಮಾಡಿವೆ
- ಆಹಾರ ವ್ಯರ್ಥವನ್ನು ಕಡಿಮೆ ಮಾಡುವುದರಿಂದ ಜಾಗತಿಕ ಇಂಗಾಲದ ಹೊರ ಸೂಸುವಿಕೆಯನ್ನು 14% ರಷ್ಟು ನಿಯಂತ್ರಿಸಲು ಸಹಾಯ ಮಾಡುತ್ತದೆ
- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವನ್ನು ರಚಿಸುವ ನಿರ್ಣಯವನ್ನು ಜೂನ್ 5, 1972 ರಂದು ಅಂಗೀಕರಿಸಲಾಗಿದೆ.
- ವಿಶ್ವಸಂಸ್ಥೆ ವರದಿಯ ಪ್ರಕಾರ, ಪ್ರಸ್ತುತ ಜನಸಂಖ್ಯೆಯ ಬೆಳವಣಿಗೆ ಮತ್ತು ಬಳಕೆಯ ದರದೊಂದಿಗೆ, 2050 ರ ವೇಳೆಗೆ ಮೂರು ಗ್ರಹಗಳ ಅವಶ್ಯಕತೆ ಕಂಡು ಬರುತ್ತದೆ
- ಅರವತ್ತು, ಎಪ್ಪತ್ತರ ದಶಕದಲ್ಲಿ ಪ್ರಕೃತಿಯ ವಿನಾಶ ಹೆಚ್ಚಾದಂತೆ ಪರಿಸರ ರಕ್ಷಣೆಗೆ ಒತ್ತಡ ಹೆಚ್ಚಿತು. ಈ ನಿಟ್ಟಿನಲ್ಲಿ 1972 ರಲ್ಲಿ, ಜೂನ್ 5 ರಿಂದ 16 ರವರೆಗೆ ನಡೆದ ಮಾನವ ಪರಿಸರದ ಮೇಲಿನ ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ, ವಿಶ್ವಸಂಸ್ಥೆಯು ಪರಿಸರದ ಮೇಲೆ ನಡೆಯುತ್ತಿರುವ ವಿಪರೀತ ಎನ್ನಬಹುದಾದ ಶೋಷಣೆ, ಪರಿಣಾಮ ಮತ್ತು ಪರಿಸ್ಥಿತಿಯ ಸುಧಾರಣೆಗೆ ಅಗತ್ಯವಾದ ಕ್ರಮಗಳ ಕುರಿತು ಚರ್ಚೆಗಳನ್ನು ನಡೆಸಿತು. ಅಂತಿಮವಾಗಿ ಪ್ರತಿ ವರ್ಷ ಜೂನ್ 5 ಅನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.
- ಮೊದಲ ವಿಶ್ವ ಪರಿಸರ ದಿನವನ್ನು 1973 ರಲ್ಲಿ "ಒಂದೇ ಭೂಮಿ" ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ಆಚರಿಸಲಾಯಿತು.
- ಸಾಗರ ಮಾಲಿನ್ಯ, ಪ್ಲಾಸ್ಟಿಕ್ ಮಾಲಿನ್ಯ, ವಾಯು ಮಾಲಿನ್ಯ, ಅಧಿಕ ಜನಸಂಖ್ಯೆ, ಸುಸ್ಥಿರ ಬಳಕೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ, ಆಹಾರ ಭದ್ರತೆ, ಅಕ್ರಮ ವನ್ಯಜೀವಿ ವ್ಯಾಪಾರ ಮತ್ತು ಸಮುದ್ರ ಮಟ್ಟ ಹೆಚ್ಚಳದಂತಹ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಗುರಿಯಾಗಿದೆ.
- ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳು, ಸಂಘ ಸಂಸ್ಥೆಗಳು, ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು, ಪರಿಸರ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳ ಕಡೆಗೆ ಪ್ರಪಂಚದಾದ್ಯಂತದ ಜನರ ಗಮನವನ್ನು ಸೆಳೆಯುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಆಚರಿಸುತ್ತವೆ.
- ಜಗತ್ತಿನಾದ್ಯಂತ ಪ್ರತಿ ವರ್ಷ 430 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಉತ್ಪಾದಿಸಲಾಗುತ್ತದೆ, ಅದರಲ್ಲಿ ಅರ್ಧದಷ್ಟನ್ನು ಒಮ್ಮೆ ಮಾತ್ರ ಬಳಸಲು ಸಾಧ್ಯವಾಗುತ್ತದೆ. ಅದರಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಮರುಬಳಕೆ ಮಾಡಲಾಗುತ್ತದೆ.
- ಅಂದಾಜು 19-23 ಮಿಲಿಯನ್ ಟನ್ ಪ್ಲಾಸ್ಟಿಕ್ ಪ್ರತಿ ವರ್ಷ ಸಮುದ್ರ, ನದಿ ಮತ್ತು ಇತರ ಜಲ ಮೂಲಗಳನ್ನು ಸೇರುತ್ತದೆ.
- ಮೈಕ್ರೋಪ್ಲಾಸ್ಟಿಕ್ಸ್, 5 ಮಿಮೀ ವ್ಯಾಸದವರೆಗಿನ ಸಣ್ಣ ಪ್ಲಾಸ್ಟಿಕ್ ಕಣಗಳು, ಆಹಾರ, ನೀರು ಮತ್ತು ಗಾಳಿಯಲ್ಲಿ ಸೇರಿ ಹೋಗುತ್ತವೆ ಭೂ ಗ್ರಹದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ವರ್ಷಕ್ಕೆ 50,000 ಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಾನೆ ಎಂದು ಅಂದಾಜು ಮಾಡಲಾಗಿದೆ.
- ಏಕ ಬಳಕೆಯ ಪ್ಲಾಸ್ಟಿಕ್ ಮಾನವನ ಆರೋಗ್ಯ ಮತ್ತು ಜೀವವೈವಿಧ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಪರ್ವತದ ತುದಿಯಿಂದ ಸಾಗರ ತಳದವರೆಗಿನ ಪ್ರತಿಯೊಂದು ಪರಿಸರ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತದೆ.
- ಈ ಸಮಸ್ಯೆಯನ್ನು ನಿಭಾಯಿಸಲು ಲಭ್ಯವಿರುವ ವಿಜ್ಞಾನ ಮತ್ತು ಪರಿಹಾರಗಳೊಂದಿಗೆ, ಸರ್ಕಾರಗಳು, ಎನ್ ಜಿ ಒ ಗಳು ಕ್ರಮ ಜರುಗಿಸಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಆಗದಿದ್ದರೆ ಮಾನವ ಮತ್ತು ಪ್ರಾಣಿ ಸಂಕುಲ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಿಜ್ಞಾನ ಈ ಪ್ರಮಾಣದಲ್ಲಿ ಆವಿಷ್ಕಾರಗೊಂಡಿರುವಾಗ ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಮತ್ತೊಂದು ವಸ್ತುವನ್ನು ಕಂಡುಕೊಳ್ಳಲು ಸಾಧ್ಯ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಈಗಲೇ ಪ್ಲಾಸ್ಟಿಕ್ ಮುಕ್ತ ಊರು, ಜಿಲ್ಲೆ, ರಾಜ್ಯ ದೇಶ ಮತ್ತು ಜಗತ್ತನ್ನು ನಿರ್ಮಾಣ ಮಾಡಲು ದಿಟ್ಟ ಹೆಜ್ಜೆ ಇಡದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು. ಈ ವರ್ಷದ ವಿಶ್ವ ಪರಿಸರ ದಿನದ ಪ್ರಾಮುಖ್ಯತೆಯೂ ಇದೇ ಆಗಿದೆ.
ವಿಶ್ವ ಪರಿಸರ ದಿನದ ನುಡಿಮುತ್ತುಗಳು
ತನ್ನ ಮಣ್ಣನ್ನು ನಾಶಪಡಿಸಿ ಕೊಳ್ಳುವ ರಾಷ್ಟ್ರವು ತನ್ನನ್ನು ತಾನೇ ನಾಶ ಪಡಿಸಿಕೊಳ್ಳುತ್ತದೆ. - ಫ್ರಾಂಕ್ಲಿನ್ ಡಿ ರೂಸ್ ವೆಲ್ಟ್
ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ. ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಯನ್ನಲ್ಲ- ಮಹಾತ್ಮಾ ಗಾಂಧಿ
ಲೇಖನ: ಎಚ್. ಮಾರುತಿ
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.