DeepSeek: ಲಿಯಾಂಗ್ ವೆನ್‌ಫೆಂಗ್ ಯಾರು? ಚಾಟ್‌ಜಿಪಿಟಿಯನ್ನು ಹಿಂದಿಕ್ಕಿದ ಎಐ ಆ್ಯಪ್‌ನ ಸೃಷ್ಟಿಕರ್ತ ; ಡೀಪ್‌ಸೀಕ್‌ಗೆ ಥರಗುಟ್ಟಿದ ಷೇರುಪೇಟೆ
DeepSeek AI: ಚೀನಾದ ಲಿಯಾಂಗ್ ವೆನ್‌ಫೆಂಗ್ ಸ್ಥಾಪಿಸಿದ ಡೀಪ್‌ಸೀಕ್ ಎಂಬ ಎಐ ಕಂಪನಿಯು ಅಮೆರಿಕದಲ್ಲಿ ಡೌನ್‌ಲೋಡ್‌ನಲ್ಲಿ ಉಚಿತ ಚಾಟ್‌ಜಿಪಿಟಿ ಅಪ್ಲಿಕೇಷನ್ ಅನ್ನು ಹಿಂದಿಕ್ಕಿದೆ. ಇದರಿಂದ ಅಮೆರಿಕದ ಷೇರುಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ವಿಶೇಷವಾಗಿ ಎನ್‌ವಿಡಿಯಾ ಷೇರುಗಳು ಶೇಕಡ 17ರಷ್ಟು ಕುಸಿದಿದೆ. ಲಿಯಾಂಗ್ ವೆನ್‌ಫೆಂಗ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಬೆಂಗಳೂರು: ಚೀನಾದ ಎಐ ಕಂಪನಿಯೊಂದರ ಪ್ರಾಬಲ್ಯಕ್ಕೆ ಅಮೆರಿಕದ ಷೇರುಪೇಟೆ ಬೆಚ್ಚಿ ಬಿದ್ದಿದೆ. ಅಮೆರಿಕದಲ್ಲಿ ಹೆಚ್ಚು ಜನರು ಡೌನ್‌ಲೋಡ್ ಮಾಡಿದ ಎಐ ಅಪ್ಲಿಕೇಷನ್‌ಗಳಲ್ಲಿ ಚೀನಾದ ಎಐ ಕಂಪನಿ ಡೀಪ್‌ಸೀಕ್ ಇದೀಗ ಉಚಿತ ಚಾಟ್‌ಜಿಪಿಟಿ ಅನ್ನು ಹಿಂದಿಕ್ಕಿದೆ. ಇದರಿಂದ ಅಮೆರಿಕದ ಷೇರುಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದೆ. ವಿಶೇಷವಾಗಿ ಎನ್‌ವಿಡಿಯಾ ಷೇರುಗಳು ಶೇಕಡ 17ರಷ್ಟು ಕುಸಿದಿದೆ.
ಲಿಯಾಂಗ್ ವೆನ್‌ಫೆಂಗ್ ಯಾರು?
40 ವರ್ಷದ ಲಿಯಾಂಗ್ ಒಬ್ಬ ಚೀನೀ ಉದ್ಯಮಿ. 2015ರಲ್ಲಿ ಝೆಜಿಯಾಂಗ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬಳಿಕ ಕ್ವಾಂಟಿಟೇಟಿವ್ ಹೆಡ್ಜ್ ಫಂಡ್, ಹೈಫ್ಲೈಯರ್ ಫಂಡ್ ಸಹಸ್ಥಾಪಕರಾದರು. ಹೈಫ್ಲೈಯರ್‌ನಲ್ಲಿ ಷೇರುಪೇಟೆಯ ಮಾರುಕಟ್ಟೆಯ ಟ್ರೆಂಡಿಂಗ್ ಊಹಿಸಲು ಮತ್ತು ಷೇರು ಹೂಡಿಕೆಗೆ ಸಹಾಯ ಮಾಡಲು ಎಐ ಬಳಸಿದರು.
2021ರಲ್ಲಿ ಜೋ ಬಿಡೆನ್ ನೇತೃತ್ವದ ಅಮೆರಿಕ ಸರ್ಕಾರವು ಚೀನಾಕ್ಕೆ ಎಐ ಚಿಪ್‌ಗಳ ಯುಎಸ್ ರಫ್ತುಗಳನ್ನು ನಿರ್ಬಂಧಿಸಿತ್ತು. ಅದಕ್ಕೂ ಮೊದಲೇ ಸಾವಿರಾರು ಎನ್‌ವಿಡಿಯಾ ಗ್ರಾಫಿಕ್ಸ್ ಪ್ರೊಸೆಸರ್‌ಗಳನ್ನು ಎಐ ಸೈಡ್ ಪ್ರಾಜೆಕ್ಟ್ ಆಗಿ ಖರೀದಿಸಲು ಲಿಯಾಂಗ್ ವೆನ್‌ಫೆಂಗ್ ಆರಂಭಿಸಿದ್ದರು. ಈತ ಯಾವುದೇ ಗುರಿ ಇಲ್ಲದೆ ಈ ರೀತಿಯ ಸೈಡ್ ಪ್ರಾಜೆಕ್ಟ್ ನಡೆಸುತ್ತಿದ್ದಾನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಇವನದ್ದು ವಿಲಕ್ಷಣ ಹವ್ಯಾಸ ಎಂದುಕೊಂಡಿದ್ದರು.
"ಮೊದಲ ಬಾರಿಗೆ ಭೇಟಿಯಾದ ಸಂದರ್ಭದಲ್ಲಿ ತಮ್ಮದೇ ಆದ ಎಐ ಮಾಡೆಲ್‌ಗಳಿಗೆ ತರಬೇತಿ ನೀಡಲು 10,000-ಚಿಪ್ ಕ್ಲಸ್ಟರ್ ನಿರ್ಮಿಸುವ ಕುರಿತು ಮಾತನಾಡಿದ್ದರು. ವಿಲಕ್ಷಣ ಕೇಶ ವಿನ್ಯಾಸ ಹೊಂದಿರುವ ದಡ್ಡ ವ್ಯಕ್ತಿಯಂತೆ ಕಾಣಿಸಿದ್ದರು. ನಾವು ಆಗ ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ" ಎದು ಎಂದು ಲಿಯಾಂಗ್‌ನ ಪಾಲುದಾರರೊಬ್ಬರು ಹೇಳಿದ್ದಾರೆ" ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ. "ನಾನು ಇದನ್ನು ಮಾಡು ಬಯಸುವೆ. ಇದು ದೊಡ್ಡ ಗೇಮ್ ಚೇಂಜರ್ ಆಗಿರಲಿದೆ ಎಂದು ಹೇಳುವುದನ್ನು ಹೊರತುಪಡಿಸಿ ಇವರಿಗೆ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಲು ಸಾಧ್ಯವಾಗಿರಲಿಲ್ಲ. ಬೈಟ್‌ಡ್ಯಾನ್ಸ್ ಮತ್ತು ಅಲಿಬಾಬಾದಂತಹ ದೈತ್ಯರಿಂದ ಮಾತ್ರ ಇದು ಸಾಧ್ಯ ಎಂದುಕೊಂಡಿದ್ದೇವು" ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಈ ಪ್ರಾಜೆಕ್ಟ್ ಅನ್ನು ಲಿಯಾಂಗ್ ಅವರ ಸೈಡ್ ಪ್ರಾಜೆಕ್ಟ್ ಎಂದು ಪರಿಗಣಿಸಲಾಗಿತ್ತು. ಆದರೆ, ಲಿಯಾಂಗ್ ಇದಕ್ಕೆ ಸಂಬಂಧಪಟ್ಟ ರಿಸರ್ಚ್‌ಗೆ ಸಾಕಷ್ಟು ಗಮನ ಹರಿಸಿದ್ದರು. ಚೀನಾದ ಯೂನಿವರ್ಸಿಟಿಗಳಿಗೆ ಪ್ರತಿಭಾನ್ವಿತರನ್ನು ನೇಮಕ ಮಾಡಲು ಡೀಪ್‌ಸೀಕ್ ನೆರವಾಗಬಹುದು ಎಂದುಕೊಂಡರು. ಇತ್ತೀಚೆಗೆ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ವಿವಿಧ ಮೆಷಿನ್ ಲರ್ನಿಂಗ್ ಅಪ್ಲಿಕೇಷನ್‌ಗಳ ಕಾರ್ಯವನ್ನು ಡೀಪ್‌ಸೀಕ್ ಎಐ ಆರಂಭಿಸಿದೆ. ಅಂದರೆ, ಚಾಟ್‌ಜಿಪಿಟಿಯಂತೆ ಇದು ಕಾರ್ಯನಿರ್ವಹಿಸುತ್ತದೆ.
ಅಮೆರಿಕದ ಮಾರುಕಟ್ಟೆ ಮೇಲೆ ಪ್ರಭಾವ
ಡೀಪ್‌ಸೀಕ್‌ಗೆ ಅಮೆರಿಕದ ಮಾರುಕಟ್ಟೆ ಭಯಗೊಂಡಂತೆ ಇದೆ. ವಿಶೇಷವಾಗಿ ಎನ್‌ವಿಡಿಯಾದಂತಹ ಬಿಗ್‌ಟೆಕ್ ಷೇರುಗಳು ಕುಸಿದಿವೆ. ಎನ್‌ವಿಡಿಯಾ ಷೇರುಗಳು ಶೇಕಡ 17ರಷ್ಟು ಕುಸಿತ ಕಂಡಿದೆ. ನಾಸ್ಡಾಕ್ ಕಾಂಪೋಸಿಟ್ ಷೇರುಪೇಟೆ ಶೇಕಡ 5ರಷ್ಟು ಕುಸಿತ ಕಂಡಿದೆ.
