ಕನ್ನಡ ಸುದ್ದಿ  /  Nation And-world  /  Defamation Case Rahul Gandhi To Face 2nd Defamation Case Maharashtra Cm Bristles Over Savarkar Remark

Defamation case: ಎರಡನೇ ಮಾನಹಾನಿ ಕೇಸ್‌ ಎದುರಿಸಬೇಕಾಗ್ತದಾ ರಾಹುಲ್‌ ಗಾಂಧಿ; ಮಹಾರಾಷ್ಟ್ರ ಸಿಎಂ ಶಿಂಧೆ ಕೊಟ್ಟಿರೋ ಎಚ್ಚರಿಕೆಯ ಅರ್ಥವೇನು?

Defamation case: ʻಮೋದಿ ಸರ್‌ನೇಮ್‌ʼ ಕೇಸ್‌ನಲ್ಲಿ ಕ್ರಿಮಿನಲ್‌ ಮಾನಹಾನಿ ಪ್ರಕರಣ ಎದುರಿಸಿ ದೋಷಿ ಎನಿಸಿಕೊಂಡು ಸಂಸದ ಸ್ಥಾನದಿಂದ ಅನರ್ಹರಾದ ರಾಹುಲ್‌ ಗಾಂಧಿ ಈಗ ಎರಡನೇ ಮಾನಹಾನಿ ಪ್ರಕರಣ ಎದುರಿಸಲು ಸಜ್ಜಾಗಬೇಕಾಗಿದೆ. ಸ್ವಾತಂತ್ರ್ಯ ಸಮರ ವೀರ ವಿ.ಡಿ. ಸಾರ್ವಕರ್‌ ಕುರಿತಾದ ಅವರ ಹೇಳಿಕೆ ವಿರುದ್ಧ ಕೇಸ್‌ ದಾಖಲಿಸುವ ಸುಳಿವು ನೀಡಿದ್ದಾರೆ ಮಹಾರಾಷ್ಟ್ರ ಸಿಎಂ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ

ಹಿಂದುತ್ವವಾದಿ, ಸ್ವಾತಂತ್ರ್ಯ ಸಮರ ವೀರ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ʻಅವಹೇಳನʼ ಮಾಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೀಡಿದ ಹೇಳಿಕೆ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ರಾಹುಲ್‌ ಗಾಂಧಿ ವಿರುದ್ದ ಇನ್ನೊಂದು ಮಾನಹಾನಿ ಪ್ರಕರಣ ದಾಖಲಾಗುವ ಸುಳಿವು ಬಹಿರಂಗವಾಗಿದೆ.

ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಮಹಾರಾಷ್ಟ್ರ ಸಿಎಂ ಶಿಂಧೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಹಾರಾಷ್ಟ್ರದ ಆರಾಧ್ಯ ಮೂರ್ತಿಯನ್ನಷ್ಟೇ ಅಲ್ಲ, ದೇಶದ ಪಾಲಿನ ಪ್ರಾತಸ್ಮರಣೀಯರನ್ನು ಅವಮಾನಿಸಿದ್ದಾರೆ. ಈ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರನ್ನು ಎಷ್ಟು ಟೀಕಿಸಿದರೂ ಕಡಿಮೆಯೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದಲ್ಲದೆ, ಆಡಳಿತ ಪಕ್ಷದ ಸದಸ್ಯರು ರಾಹುಲ್‌ ಗಾಂಧಿ ಅವರ ಪೋಸ್ಟರ್‌ಗೆ ಚಪ್ಪಲಿಯಲ್ಲಿ ಹೊಡೆದ ವಿದ್ಯಮಾನ ಶುಕ್ರವಾರ ನಡೆದಿತ್ತು. ಇದು ವಿಧಾನಸಭೆಯಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು.

ಮಹರಾಷ್ಟ್ರ ವಿಧಾನಸಭೆಯಲ್ಲಿ ಏನಾಯಿತು?

ಕಳೆದ ವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷ ಪ್ರಾಯೋಜಿತ ನಿರ್ಣಯದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಶಿಂಧೆ, ರಾಹುಲ್‌ ಗಾಂಧಿ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಒಬಿಸಿ ಸಮುದಾಯ ಮತ್ತು ಹಿಂದುತ್ವದ ಪ್ರತಿಪಾದಕ ವಿ.ಡಿ.ಸಾವರ್ಕರ್‌ ಅವರನ್ನು ಅವಮಾನಿಸಿದ್ದಾರೆ. ಅವರು ʻಶಿಕ್ಷೆʼಗೊಳಗಾಗಬೇಕು ಎಂದು ಹೇಳಿದರು.

ರಾಹುಲ್‌ ಗಾಂಧಿ ತಪ್ಪಿತಸ್ಥ ಎಂದು ಘೋಷಿಸಲ್ಪಟ್ಟರು. ಶಿಕ್ಷೆಯೂ ಘೋಷಣೆ ಆಗಿದೆ. ಇದರೊಂದಿಗೆ ತನ್ನಿಂತಾನೇ ಅವರು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹರಾಗಿದ್ದಾರೆ. ಇಷ್ಟಾಗ್ಯೂ ಅವರು, ಕ್ಷಮೆ ಕೇಳುವುದಕ್ಕೆ ತಾನು ಸಾವರ್ಕರ್‌ ಅಲ್ಲ ಎಂದು ಹೇಳುತ್ತ ವಿ.ಡಿ.ಸಾವರ್ಕರ್‌ ಅವರನ್ನು ಅವಮಾನಿಸುವುದನ್ನು ಮುಂದುವರಿಸಿದ್ದಾರೆ. ಯಾರು ರಾಹುಲ್‌ ಗಾಂಧಿ ಅವರನ್ನು ಸಾವರ್ಕರ್‌ ಎಂದು ಪರಿಗಣಿಸಿದ್ದಾರೆ? ರಾಹುಲ್‌ ಗಾಂಧಿಗೆ ಶಿಕ್ಷೆ ಸಿಗಬೇಕು ಎಂದು ಶಿಂಧೆ ಅಸೆಂಬ್ಲಿಯಲ್ಲಿ ಹೇಳಿದ್ದರು.

ರಾಹುಲ್‌ ಗಾಂಧಿ ಮಾತಿನ ವರಸೆ ಇದೇ ರೀತಿ ಮುಂದುವರಿಯುತ್ತಿದೆ. ಇದನ್ನು ಹೀಗೆಯೇ ಮುಂದುವರಿಸಿದರೆ, ಮುಂದೆ ಅವರಿಗೆ ರಸ್ತೆಗೆ ಇಳಿಯಲಾಗದ ಪರಿಸ್ಥಿತಿ ಉಂಟಾಗಬಹುದು ಎಂದು ಶಿಂಧೆ ಎಚ್ಚರಿಸಿದರು.

ರಾಹುಲ್‌ ಗಾಂಧಿ ಶನಿವಾರ ಹೇಳಿದ್ದೇನು?

ರಾಹುಲ್‌ ಗಾಂಧಿ ಶನಿವಾರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ "ಕ್ಷಮೆಯಾಚಿಸಿದ್ದರೆ ಶಿಕ್ಷೆ ಮತ್ತು ಅನರ್ಹತೆಯಿಂದ ಪಾರಾಗಬಹುದಿಲ್ಲʼ ಎಂಬ ಪ್ರಶ್ನೆ ಉತ್ತರಿಸುತ್ತ, ಮತ್ತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಅದರ ಸೈದ್ಧಾಂತಿಕ ಪಾಲಕ ಆರ್‌ಎಸ್‌ಎಸ್‌ನ ವಿರುದ್ಧ ವಾಗ್ದಾಳಿ ನಡೆಸಿದರು.

“ನಾನು ಸಾವರ್ಕರ್‌ ಅಲ್ಲ, ನನ್ನ ಹೆಸರು ಗಾಂಧಿ. ಗಾಂಧಿಗಳು ಯಾರ ಬಳಿಯೂ ಕ್ಷಮೆಯಾಚಿಸುವುದಿಲ್ಲ” ಎಂದು ನವದೆಹಲಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತ ರಾಹುಲ್‌ ಗಾಂಧಿ ಭಾವಾವೇಶದಲ್ಲಿ ಹೇಳಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ, ರಾಹುಲ್‌ ಗಾಂಧಿ ತಮ್ಮ ಮಹಾರಾಷ್ಟ್ರದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಸಾವರ್ಕರ್ ಅವರು ಅಂಡಮಾನ್ ಸೆಲ್ಯುಲಾರ್ ಜೈಲಿನಿಂದ ಬಿಡುಗಡೆ ಹೊಂದಲು ಕ್ಷಮಾದಾನ ಅರ್ಜಿ ಬರೆದಿದ್ದರು. ಬಳಿಕ ಬ್ರಿಟಿಷರಿಂದ ಪಿಂಚಣಿಯನ್ನೂ ಸ್ವೀಕರಿಸಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಸಹಾಯ ಮಾಡಿದ್ದರು ಎಂದು ಹೇಳಿದ್ದರು.

IPL_Entry_Point