ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಶತ್ರುಗಳಿಗೆ ನಡುಕ, ಭಾರತಕ್ಕೆ ಪುಳಕ: ಸೇನೆಗೆ ಸೇರಲು ಸನ್ನದ್ಧವಾದ ನಾಗಾಸ್ತ್ರ-1 ಆತ್ಮಹತ್ಯಾ ಡ್ರೋನ್, ಏನಿದರ ವೈಶಿಷ್ಟ್ಯತೆ?

ಶತ್ರುಗಳಿಗೆ ನಡುಕ, ಭಾರತಕ್ಕೆ ಪುಳಕ: ಸೇನೆಗೆ ಸೇರಲು ಸನ್ನದ್ಧವಾದ ನಾಗಾಸ್ತ್ರ-1 ಆತ್ಮಹತ್ಯಾ ಡ್ರೋನ್, ಏನಿದರ ವೈಶಿಷ್ಟ್ಯತೆ?

ನಾಗಾಸ್ತ್ರ-1 ಡ್ರೋನ್ ಅನ್ನು ನಿಖರವಾದ ದಾಳಿ ನಡೆಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದ್ದು, ಜಿಪಿಎಸ್ ನಿರ್ದೇಶನದ ನೆರವಿನಿಂದ ಗುರಿಯ ಕೇವಲ 2 ಮೀಟರ್ ವ್ಯಾಪ್ತಿಯಲ್ಲಿ ನಿಖರ ದಾಳಿ ನಡೆಸಬಲ್ಲದು. ಮೇ 20ರಿಂದ 25ರ ನಡುವೆ ನಡೆದ ಯಶಸ್ವಿ ಪರೀಕ್ಷೆಯ ಬಳಿಕ, ಇಇಎಲ್ ಪುಲ್ಗಾವ್‌ನ ಆಯುಧ ಸಂಗ್ರಹಾಲಯಕ್ಕೆ 120 ಡ್ರೋನ್ ಆಯುಧಗಳನ್ನು ಪೂರೈಸಿದೆ. (ಬರಹ: ಗಿರೀಶ್‌ ಲಿಂಗಣ್ಣ)

ಶತ್ರುಗಳಿಗೆ ನಡುಕ, ಭಾರತಕ್ಕೆ ಪುಳಕ: ಸೇನೆಗೆ ಸೇರಲು ಸನ್ನದ್ಧವಾದ ನಾಗಾಸ್ತ್ರ-1 ಆತ್ಮಹತ್ಯಾ ಡ್ರೋನ್, ಏನಿದರ ವೈಶಿಷ್ಟ್ಯತೆ
ಶತ್ರುಗಳಿಗೆ ನಡುಕ, ಭಾರತಕ್ಕೆ ಪುಳಕ: ಸೇನೆಗೆ ಸೇರಲು ಸನ್ನದ್ಧವಾದ ನಾಗಾಸ್ತ್ರ-1 ಆತ್ಮಹತ್ಯಾ ಡ್ರೋನ್, ಏನಿದರ ವೈಶಿಷ್ಟ್ಯತೆ

Nagastra 1 Suicide Drones: ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವುದು ಭಾರತದ ಮುಂದಿನ ಮಹತ್ವಾಕಾಂಕ್ಷಿ ಗುರಿಯಾಗಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಭಾರತೀಯ ಸೇನೆ, ದೇಶೀಯವಾಗಿ ನಿರ್ಮಾಣಗೊಂಡಿರುವ, ನಾಗಾಸ್ತ್ರ-1 ಎಂಬ ಹೆಸರಿನ ಅಡ್ಡಾಡುವ ಆಯುಧವನ್ನು (ಲಾಯ್ಟರಿಂಗ್ ಮ್ಯುನಿಷನ್) ಸೇರ್ಪಡೆಗೊಳಿಸಲು ಸಿದ್ಧತೆ ನಡೆಸಿದೆ. ಆಧುನಿಕ ತಂತ್ರಜ್ಞಾನದ ನಾಗಾಸ್ತ್ರ-1 ಅನ್ನು 'ಆತ್ಮನಿರ್ಭರ ಭಾರತ' ಯೋಜನೆಯಡಿಯಲ್ಲಿ ನಾಗಪುರದ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಯ ಸಂಪೂರ್ಣ ಮಾಲೀಕತ್ವ ಹೊಂದಿರುವ ಎಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ (ಇಇಎಲ್) ಸಂಸ್ಥೆಗೆ ಭಾರತೀಯ ಸೇನೆ 480 ಡ್ರೋನ್‌ಗಳ ಖರೀದಿಗಾಗಿ ಆದೇಶ ಸಲ್ಲಿಸಿದೆ. ಭಾರತೀಯ ಸೇನೆ ತನ್ನ ತುರ್ತು ಖರೀದಿ ಯೋಜನೆಯಡಿಯಲ್ಲಿ ಡ್ರೋನ್‌ಗಳ ಖರೀದಿಗೆ ಮುಂದಾಗಿದೆ. ಮೇ 20ರಿಂದ 25ರ ನಡುವೆ ನಡೆದ ಯಶಸ್ವಿ ಪರೀಕ್ಷೆಯ ಬಳಿಕ, ಇಇಎಲ್ ಪುಲ್ಗಾವ್‌ನ ಆಯುಧ ಸಂಗ್ರಹಾಲಯಕ್ಕೆ 120 ಡ್ರೋನ್ ಆಯುಧಗಳನ್ನು ಪೂರೈಸಿದೆ.

ಟ್ರೆಂಡಿಂಗ್​ ಸುದ್ದಿ

ನಿಖರ ದಾಳಿ

ನಾಗಾಸ್ತ್ರ-1 ಡ್ರೋನ್ ಅನ್ನು ಅತ್ಯಂತ ನಿಖರವಾದ ದಾಳಿ ನಡೆಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದ್ದು, ಜಿಪಿಎಸ್ ನಿರ್ದೇಶನದ ನೆರವಿನಿಂದ ಗುರಿಯ ಕೇವಲ 2 ಮೀಟರ್ ವ್ಯಾಪ್ತಿಯಲ್ಲಿ ನಿಖರ ದಾಳಿ ನಡೆಸಬಲ್ಲದು.

ಕೊಂಡೊಯ್ಯಲು ಸುಲಭ: ಹಗುರವಾದ, ಸ್ಥಿರ ರೆಕ್ಕೆಗಳುಳ್ಳ ನಾಗಾಸ್ತ್ರ-1 ಇಲೆಕ್ಟ್ರಿಕ್ ಡ್ರೋನ್ ಅನ್ನು ಓರ್ವ ವ್ಯಕ್ತಿಯೇ ಕೊಂಡೊಯ್ಯಬಹುದಾಗಿದ್ದು, ಇದು ಕೇವಲ 9 ಕೆಜಿ ತೂಕ ಹೊಂದಿದೆ. ಇದು ಗರಿಷ್ಠ 30 ನಿಮಿಷಗಳಷ್ಟು ಕಾಲ ಹಾರಾಟ ನಡೆಸಬಲ್ಲದು.

ನಿಶ್ಯಬ್ದ ಕಾರ್ಯಾಚರಣೆ: ಡ್ರೋನ್ ಹೊಂದಿರುವ ಇಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯ ಕಾರಣದಿಂದ, ಇದು ಅತ್ಯಂತ ಕನಿಷ್ಠ ಪ್ರಮಾಣದ ಸದ್ದನ್ನು ಹೊರಹೊಮ್ಮಿಸುತ್ತದೆ. ಡ್ರೋನ್ 200 ಮೀಟರ್‌ಗಳಿಗಿಂತ ಎತ್ತರದಲ್ಲಿ ಹಾರಾಟ ನಡೆಸುವಾಗ ಅದನ್ನು ಗುರುತಿಸುವುದು ಶತ್ರುಗಳಿಗೆ ಕಷ್ಟಕರವಾಗುತ್ತದೆ.

ಕಣ್ಗಾವಲು ಮತ್ತು ಶಸ್ತ್ರ ಬಳಕೆ: ನಾಗಾಸ್ತ್ರ-1 ಡ್ರೋನ್ ಹಗಲು ಮತ್ತು ರಾತ್ರಿಯಲ್ಲಿ ಕಾರ್ಯಾಚರಿಸುವ ಕಣ್ಗಾವಲು ಕ್ಯಾಮರಾ ಹೊಂದಿದ್ದು, 1 ಕೆಜಿಯಷ್ಟು ಪ್ರಮಾಣದ ಸ್ಫೋಟಕ ಸಿಡಿತಲೆಯನ್ನು (ಫ್ರಾಗ್ಮೆಂಟಿಂಗ್ ವಾರ್‌ಹೆಡ್) ಹೊತ್ತೊಯ್ಯಬಲ್ಲದಾಗಿದೆ. ಇದು ಸಾಮಾನ್ಯ ಗುರಿಗಳನ್ನು (ಸಾಫ್ಟ್ ಸ್ಕಿನ್ ಟಾರ್ಗೆಟ್ಸ್) ನಾಶಪಡಿಸಲು ಸಮರ್ಥವಾಗಿದೆ.

ಫ್ರಾಗ್ಮೆಂಟಿಂಗ್ ವಾರ್‌ಹೆಡ್ ಎನ್ನುವುದು ಸ್ಫೋಟಗೊಂಡ ಬಳಿಕ ಸಣ್ಣಪುಟ್ಟ ತುಣುಕುಗಳಾಗಿ ವಿಭಜನೆಗೊಳ್ಳುವಂತಹ ಸ್ಫೋಟಕವಾಗಿದೆ. ಸಾಫ್ಟ್ ಸ್ಕಿನ್ ಟಾರ್ಗೆಟ್ಸ್ ಎಂದರೆ ಸ್ಫೋಟಕಗಳು ಅಥವಾ ಚೂಪಾದ ಚೂರುಗಳಿಂದ ನಾಶಗೊಳ್ಳುವ ಗುರಿಗಳು.

ಸುಸೈಡ್ ಡ್ರೋನ್

ಗಮನಾರ್ಹ ವಿಚಾರವೆಂದರೆ, ಲಾಯ್ಟರಿಂಗ್ ಮ್ಯುನಿಷನ್‌ಗಳನ್ನು ಆತ್ಮಹತ್ಯಾ ಡ್ರೋನ್‌ಗಳೆಂದೂ (ಸುಸೈಡ್ ಡ್ರೋನ್) ಕರೆಯಲಾಗುತ್ತದೆ. ಇವುಗಳು ಒಂದು ಬಾರಿ ಮಾತ್ರವೇ ಪ್ರಯೋಗಿಸಬಲ್ಲ ಆಯುಧಗಳಾಗಿದ್ದು, ನೇರವಾಗಿ ತಮ್ಮ ಗುರಿಯೆಡೆಗೆ ಸಾಗಿ, ತಮ್ಮನ್ನು ತಾವು ಸ್ಫೋಟಿಸಿಕೊಳ್ಳುತ್ತವೆ. ಈ ಡ್ರೋನ್‌ಗಳು ತಮ್ಮ ಗುರಿಯ ಮೇಲ್ಭಾಗದಲ್ಲಿ ವೃತ್ತಾಕಾರದಲ್ಲಿ ಚಲಿಸುತ್ತಾ, ದಾಳಿ ನಡೆಸಲು ಸೂಕ್ತ ಸಮಯಕ್ಕೆ ಕಾಯಬಲ್ಲವು. ಇವುಗಳನ್ನು ಸರಿಯಾದ ಗುರಿಯನ್ನು ಗುರುತಿಸುವ ತನಕ ಮೇಲ್ಭಾಗದಲ್ಲಿ ಅಡ್ಡಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅವಕಾಶ ಸಿಕ್ಕ ತಕ್ಷಣವೇ ಗುರಿಯ ಮೇಲೆ ದಾಳಿ ನಡೆಸುತ್ತವೆ.

ಮರಳಿ ಕರೆಯುವುದು ಮತ್ತು ಮರುಬಳಕೆ: ಒಂದು ವೇಳೆ ಗುರಿಯನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಅಥವಾ ದಾಳಿ ಯೋಜನೆಯನ್ನು ರದ್ದುಗೊಳಿಸಿದರೆ, ಗಾಳಿಯಲ್ಲಿ ಅಡ್ಡಾಡುವ ಡ್ರೋನ್ ಅನ್ನು ಮರಳಿ ಹಿಂದಕ್ಕೆ ಕರೆಸಿಕೊಳ್ಳಬಹುದು. ಇದು ಹಗುರವಾಗಿ ಲ್ಯಾಂಡಿಂಗ್ ನಡೆಸಲು ಅನುಕೂಲಕರವಾದ ಪ್ಯಾರಾಶೂಟ್ ರಿಕವರಿ ವ್ಯವಸ್ಥೆಯನ್ನು ಹೊಂದಿದೆ. ಇದರಿಂದಾಗಿ ಡ್ರೋನ್ ಮರುಬಳಕೆಗೆ ಲಭ್ಯವಾಗುತ್ತದೆ.

ದಾಳಿ ಯೋಜನೆಯನ್ನು ರದ್ದುಗೊಳಿಸುವ, ಹಿಂದಕ್ಕೆ ಕರೆಸಿಕೊಳ್ಳುವ ಮತ್ತು ಮರುಬಳಕೆ ಮಾಡುವ ನಾಗಾಸ್ತ್ರ-1ರ ಸಾಮರ್ಥ್ಯ ಇದನ್ನು ಇತರ ಅಭಿವೃದ್ಧಿ ಹೊಂದಿರುವ ದೇಶಗಳು ನಿರ್ಮಿಸಿರುವ ಡ್ರೋನ್ ವ್ಯವಸ್ಥೆಗಳಿಂದ ವಿಶಿಷ್ಟವಾಗಿಸಿದೆ.

ದೇಶೀಯ ಅಭಿವೃದ್ಧಿ: ಬೆಂಗಳೂರಿನ ಜಿ಼-ಮೋಷನ್ ಅಟಾನಮಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಜೊತೆಗಿನ ಸಹಯೋಗದೊಡನೆ ಇಇಎಲ್ ನಾಗಾಸ್ತ್ರ-1 ಡ್ರೋನ್ ಅಭಿವೃದ್ಧಿ ಪಡಿಸಿದೆ. ನಾಗಾಸ್ತ್ರ-1ನಲ್ಲಿ 75%ದಷ್ಟು ಸ್ಥಳೀಯವಾಗಿ ನಿರ್ಮಿಸಿರುವ ಬಿಡಿಭಾಗಗಳನ್ನು ಬಳಸಲಾಗಿದೆ.

ಸುಲಭವಾಗಿ ಒಯ್ಯಬಲ್ಲ ಆಯುಧ ವ್ಯವಸ್ಥೆ

ನಾಗಾಸ್ತ್ರ-1 ಆಯುಧ ವ್ಯವಸ್ಥೆ ಸುಲಭವಾಗಿ ಸಾಗಿಸಬಲ್ಲ ರೀತಿಯದ್ದಾಗಿದೆ. ಸಂಪೂರ್ಣ ನಾಗಾಸ್ತ್ರ-1 ವ್ಯವಸ್ಥೆ 30 ಕೆಜಿಗಳಷ್ಟು ತೂಕ ಹೊಂದಿದ್ದು, ಎರಡು ಬೆನ್ನು ಚೀಲಗಳಲ್ಲಿ ಒಯ್ಯಬಲ್ಲದಾಗಿದೆ. ಇದರ ಬಿಡಿ ಭಾಗಗಳಲ್ಲಿ ಗ್ರೌಂಡ್ ಕಂಟ್ರೋಲ್ ಸಿಸ್ಟಮ್, ಸಂವಹನ ನಿಯಂತ್ರಣ, ಪೇಲೋಡ್, ನ್ಯುಮಾಟಿಕ್ ಲಾಂಚರ್‌ಗಳು ಸೇರಿವೆ.

ನಾಗಾಸ್ತ್ರ-1ರ ಯಶಸ್ಸು ಮಿಲಿಟರಿ ಕಾರ್ಯಾಚರಣೆಗಳನ್ನು ಇನ್ನಷ್ಟು ಹೆಚ್ಚಿಸಬಲ್ಲ ಡ್ರೋನ್ ತಂತ್ರಜ್ಞಾನದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಅರ್ಮೇನಿಯಾ, ಅಜರ್‌ಬೈಜಾನ್, ಸಿರಿಯಾ, ಸೌದಿ ಅರೇಬಿಯಾ, ರಷ್ಯಾ ಮತ್ತು ಉಕ್ರೇನ್‌ನಲ್ಲಿನ ಇತ್ತೀಚಿನ ಕಾರ್ಯಾಚರಣೆಗಳಲ್ಲಿ ಡ್ರೋನ್‌ಗಳು ಮಹತ್ತರ ಪಾತ್ರ ವಹಿಸಿವೆ. ಭಾರತದ ಉತ್ತರದ ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿ ಘಟನೆಗಳು ಹೆಚ್ಚಾಗುತ್ತಿದ್ದು, ಇದಕ್ಕಾಗಿ ಸ್ವದೇಶೀ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು ಅತ್ಯಂತ ಅವಶ್ಯಕವಾಗಿದೆ.

ಭಾರತದಲ್ಲಿರುವ ಬಹುತೇಕ ಉದ್ಯಮಗಳ ಬಳಿ ಯುದ್ಧಕ್ಕಾಗಿ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ನಿರ್ಮಿಸುವ ಪ್ರಾವೀಣ್ಯತೆಯಿಲ್ಲ. ಆದರೆ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆ ವಿವಿಧ ರೀತಿಯ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ನಿರ್ಮಿಸುವ ಸವಾಲನ್ನು ಕೈಗೆತ್ತಿಕೊಂಡಿದೆ. ನಾಗಾಸ್ತ್ರ-1ರ ಯಶಸ್ಸು ಈ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆಯಾಗಿದೆ. ಈ ಅಭಿವೃದ್ಧಿ, ಯುದ್ಧರಂಗದಲ್ಲಿ ಯುಎವಿಗಳನ್ನು ಶಕ್ತಿಶಾಲಿ ಆಯುಧವಾಗಿ ಬಳಸುವ ಭಾರತದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ.

(ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)