Delhi Elections 2025: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು, ಮತ ಎಣಿಕೆಗೆ ಸಿದ್ದತೆ, ಮಾಹಿತಿ ಎಲ್ಲಿ ಸಿಗಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Delhi Elections 2025: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು, ಮತ ಎಣಿಕೆಗೆ ಸಿದ್ದತೆ, ಮಾಹಿತಿ ಎಲ್ಲಿ ಸಿಗಲಿದೆ

Delhi Elections 2025: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು, ಮತ ಎಣಿಕೆಗೆ ಸಿದ್ದತೆ, ಮಾಹಿತಿ ಎಲ್ಲಿ ಸಿಗಲಿದೆ

Delhi Elections 2025: ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನದ ಬಳಿಕ ಈಗ ಮತ ಎಣಿಕೆ ಸಮಯ. ಶನಿವಾರ ಬೆಳಿಗ್ಗೆಯೇ ಮತ ಎಣಿಕೆ ಶುರುವಾಗಿ ಎರಡು ಗಂಟೆಯಲ್ಲಿಯೇ ದಿಕ್ಸೂಚಿ ಸಿಗಬಹುದು. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ತಿಳಿಯಲಿದೆ.

ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದೆ.
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದೆ.

ದೆಹಲಿ: ದೆಹಲಿ ವಿಧಾನಸಭೆಗೆ ಎರಡು ದಿನದ ಹಿಂದೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಫೆಬ್ರವರಿ 8 ರ ಶನಿವಾರ ಬೆಳಿಗ್ಗೆ ಶುರುವಾಗಲಿದ್ದು, ಮಧ್ಯಾಹ್ನದ ಹೊತ್ತಿಗೆ ನಿಚ್ಚಳ ಫಲಿತಾಂಶ ಹೊರ ಬೀಳಲಿದೆ. ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಇರಾದೆಯೊಂದಿಗೆ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ ಚುನಾವಣೆ ಎದುರಿಸಿದೆ. ಅಲ್ಲದೇ ಮತ್ತೊಮ್ಮೆ ದೆಹಲಿ ಗದ್ದುಗೆ ಹಿಡಿಯುವ ಉಮೇದಿನಲ್ಲಿದೆ. ಮೋದಿ ನಾಮಬಲದ ಜತೆಗೆ ಆಮ್‌ ಆದ್ಮಿ ಪಕ್ಷದ ಆಡಳಿತ ವಿರೋಧಿ ಅಲೆಯನ್ನು ನೆಚ್ಚಿಕೊಂಡು ಬಿಜೆಪಿ ಹಿಂದಿನ ಗತ ವೈಭವಕ್ಕೆ ಮರಳುವ ವಿಶ್ವಾಸದಲ್ಲಿದೆ. ಈ ಎರಡು ಪಕ್ಷಗಳ ನಡುವೆ ಸ್ಪರ್ಧೆಗೆ ಇಳಿದಿರುವ ಹಿಂದೆ ಸತತವಾಗಿ ದೆಹಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ ಕೂಡ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿದೆ.

ಮುಖ್ಯ ಚುನಾವಣಾಧಿಕಾರಿ ಆರ್. ಆಲಿಸ್ ವಾಜ್ ದೃಢಪಡಿಸಿದ ಪ್ರಕಾರ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) 70 ಸ್ಟ್ರಾಂಗ್ ರೂಮ್‌ಗಳಲ್ಲಿ ಇರಿಸಲಾಗಿದ್ದು, ಪ್ರತಿಯೊಂದನ್ನು ಒಂದು ವಿಧಾನಸಭಾ ಕ್ಷೇತ್ರಕ್ಕೆ ಗೊತ್ತುಪಡಿಸಲಾಗಿದೆ. ಎಲ್ಲಾ 19 ಸ್ಥಳಗಳಲ್ಲಿ ಬಹು ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಫೆಬ್ರವರಿ 8 ರಂದು ನಡೆಯುವ ಮತ ಎಣಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ದೆಹಲಿ ಚುನಾವಣಾ ಕಚೇರಿಯು ನಗರದಾದ್ಯಂತ 19 ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಬೆಳಿಗ್ಗೆ 8ಕ್ಕೆ ಮತ ಎಣಿಕೆ ಶುರುವಾಗಿ ಎರಡು ಗಂಟೆಯೊಳಗೆ ಫಲಿತಾಂಶದ ದಿಕ್ಸೂಚಿ ಸಿಗಬಹುದು. ನಿಚ್ಚಳ ಫಲಿತಾಂಶವೂ ಮಧ್ಯಾಹ್ನದ ಹೊತ್ತಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ.

ದೆಹಲಿಯ ಒಂದೂವರೆ ಕೋಟಿ ಮತದಾರರಲ್ಲಿ ಶೇ. 60 ಕ್ಕೂ ಹೆಚ್ಚು ಜನರು ಚಲಾಯಿಸಿದ ಮತಗಳನ್ನು ಹೊಂದಿರುವ ಇವಿಎಂಗಳನ್ನು ಬುಧವಾರ ಮತದಾನ ಮುಗಿದ ಸ್ವಲ್ಪ ಸಮಯದ ನಂತರ ಮತಗಟ್ಟೆಗಳಿಂದ ಸ್ಟ್ರಾಂಗ್ ರೂಮ್‌ಗಳಿಗೆ ಕಠಿಣ ಭದ್ರತೆಯಲ್ಲಿ ಸಾಗಿಸಲಾಯಿತು. ಎಣಿಕೆ ಸಿಬ್ಬಂದಿ ಮತ್ತು ಭದ್ರತಾ ಪಡೆಗಳ ನಿಕಟ ಮೇಲ್ವಿಚಾರಣೆಯಲ್ಲಿ ಶನಿವಾರ ಯಂತ್ರಗಳನ್ನು ವ್ಯವಸ್ಥಿತವಾಗಿ ಎಣಿಕೆಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ 70 ಕ್ಷೇತ್ರಗಳಿಗೆ ಒಂದೇ ಹಂತದ ಮತದಾನ ನಡೆದಿದೆ. ಶೇ. 60.44 ರಷ್ಟು ಮತದಾನವೂ ಆಗಿದೆ. ಇದರಲ್ಲಿ ನವದೆಹಲಿ ಭಾಗದಲ್ಲಿ ಶೇ. 56.41, ಜಂಗ್‌ಪುರ ಪ್ರದೇಶದಲ್ಲಿ ಶೇ. 57.42, ಕಲ್ಕಾಜಿ ಭಾಗದಲ್ಲಿ ಶೇ 54.59ರಷ್ಟು ಮತದಾನವಾಗಿದೆ. ಫೆಬ್ರವರಿ 8 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಒಟ್ಟು 1.56 ಕೋಟಿ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾದರೂ ಒಂದು ಕೋಟಿ ಯಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಣದಲ್ಲಿ 699 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಶನಿವಾರ ಅವರ ಮತ ಭವಿಷ್ಯ ಹೊರಬೀಳಲಿದೆ. ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.

ಸತತ ಎರಡು ಬಾರಿ ಭಾರೀ ಬಹುಮತದೊಂದಿಗೆ ಆಮ್‌ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರ ಹಿಡಿದಿದೆ. ಈ ಬಾರಿ ಆಮ್‌ ಆದ್ಮಿ ಹಾಗೂ ಬಿಜೆಪಿ ಪಕ್ಷಗಳು ಸರಳ ಬಹುಮತ ಪಡೆಯುವ ಲೆಕ್ಕಾಚಾರದಲ್ಲಿವೆ. ಆದರೆ ಚುನಾವಣೋತ್ತರ ಚುನಾವಣೆ ಫಲಿತಾಂಶದ ಲೆಕ್ಕಾಚಾರದ ಪ್ರಕಾರ ಬಿಜೆಪಿ ಸರಳ ಬಹುಮತ ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಹಲವು ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಯನು ಪ್ರಕಟಿಸಿವೆ.

ಮತದಾನ ಎಣಿಕೆಯ ನಿಖರ ಮಾಹಿತಿಯನ್ನು ಹಿಂದೂಸ್ತಾನ್‌ ಟೈಮ್ಸ್ ಕನ್ನಡ ಲೈವ್‌ ಬ್ಲಾಗ್‌ ಮೂಲಕ ನೀಡಲಿದೆ. ದೆಹಲಿ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ‘ಹಿಂದೂಸ್ತಾನ್‌ ಟೈಮ್ಸ್‌’ ಲೈವ್‌ ಬ್ಲಾಗ್‌ನಲ್ಲಿಯೂ ಪಡೆಯಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.