ದೆಹಲಿಯ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12 ನೇ ತರಗತಿ ವಿದ್ಯಾರ್ಥಿ; ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳ 5 ಕುತೂಹಲಕಾರಿ ಅಂಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿಯ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12 ನೇ ತರಗತಿ ವಿದ್ಯಾರ್ಥಿ; ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳ 5 ಕುತೂಹಲಕಾರಿ ಅಂಶ

ದೆಹಲಿಯ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12 ನೇ ತರಗತಿ ವಿದ್ಯಾರ್ಥಿ; ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳ 5 ಕುತೂಹಲಕಾರಿ ಅಂಶ

Bomb Threat Hoax: ದೆಹಲಿಯಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ ಹೆಚ್ಛಾಗಿದೆ. ವಿವಿಧ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ಹುಸಿ ಬಾಂಬ್‌ ಬೆದರಿಕೆ ಪ್ರಕರಣಗಳ 5 ಕುತೂಹಲಕಾರಿ ಅಂಶಗಳ ವಿವರ ಇಲ್ಲಿದೆ.

ದೆಹಲಿ ಆರ್‌ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ಪೊಲೀಸ್ ಅಧಿಕಾರಿಗಳು ಶೋಧ ನಡೆಸಿದರು. ದೆಹಲಿಯ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12 ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ (ಕಡತ ಚಿತ್ರ)
ದೆಹಲಿ ಆರ್‌ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ಪೊಲೀಸ್ ಅಧಿಕಾರಿಗಳು ಶೋಧ ನಡೆಸಿದರು. ದೆಹಲಿಯ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12 ನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ (ಕಡತ ಚಿತ್ರ) (Screengrab/X/@ANI file)

Bomb Threat Hoax: ದೆಹಲಿಯ ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆಯ 23 ಇಮೇಲ್‌ಗಳನ್ನು ಕಳುಹಿಸಿ ಆತಂಕ ಸೃಷ್ಟಿಸಿದ್ದ 12ನೇ ತರಗತಿ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳ ಅವಧಿಯಲ್ಲಿ ಈ ಬಾಂಬ್‌ ಬೆದರಿಕೆ ಇಮೇಲ್‌ಗಳು ವಿವಿಧ ಶಾಲೆಗಳಿಗೆ ರವಾನೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾಗಿ ಎಎನ್ಐ ಸುದ್ದಿ ಸಂಸ್ಥೆ ತಿಳಿಸಿದೆ. ಈ ಸಂಬಂಧ ದೆಹಲಿ ಪೊಲೀಸ್ ವರಿಷ್ಠರು ಇಂದು (ಜನವರಿ 10) ಸುದ್ದಿಗೋಷ್ಠಿ ನಡೆಸಿದ ಉಳಿದ ವಿವರ ಬಹಿರಂಗಪಡಿಸಲಿದ್ಧಾರೆ ಎಂದು ವರದಿ ವಿವರಿಸಿದೆ.

ದೆಹಲಿಯ ಶಾಲೆಗಳಿಗೆ 23 ಬಾಂಬ್‌ ಬೆದರಿಕೆ ಇಮೇಲ್ ಕಳುಹಿಸಿದ 12 ನೇ ತರಗತಿ ವಿದ್ಯಾರ್ಥಿಯ ಬಂಧನ

ದೆಹಲಿಯ ವಿವಿಧ ಶಾಲೆಗಳಿಗೆ 23 ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿ ಆತಂಕಕ್ಕೆ ಕಾರಣವಾಗಿದ್ದ ಶಂಕಿತ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಆತ ತಾನು ಮಾಡಿಕೊಂಡಿರುವ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ ಎಂದು ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಶಾಲಾ ಪರೀಕ್ಷೆ ಬರೆಯಲು ಇಚ್ಛಿಸದ ಬಾಲಕ ಎಲ್ಲರಲ್ಲೂ ಭಯ ಮೂಡಿಸಿ ಪರೀಕ್ಷೆ ರದ್ದುಗೊಳಿಸುವುದಕ್ಕಾಗಿ ಈ ವಿಧಾನವನ್ನು ಅನುಸರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ದೆಹಲಿಯಲ್ಲಿ ಗುರುವಾರ (ಜನವರಿ 9) 10ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಇಮೇಲ್‌ಗಳು ಬಂದಿದೆ. ಹುಸಿ ಬಾಂಬ್ ಬೆದರಿಕೆ ಸರಣಿಯ ಭಾಗವಾಗಿ ಇದು ಮುಂದುವರಿದಿದೆ ಎಂದು ಪಿಟಿಐ ವರದಿ ಮಾಡಿದೆ.

ದೆಹಲಿ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ; 5 ಕುತೂಹಲಕಾರಿ ಅಂಶ

1) ಹುಸಿ ಬಾಂಬ್‌ ಬೆದರಿಕೆಗೆ ಕಾರಣ: ದೆಹಲಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್‌ಗಳ ಹಿಂದೆ ಬಹುತೇಕ ವಿದ್ಯಾರ್ಥಿಗಳೇ ಇದ್ದಾರೆ. ಇತ್ತೀಚಿನ ಬೆದರಿಕೆ ಇಮೇಲ್‌ಗಳನ್ನು ಪರಿಶೀಲಿಸಿದಾಗ ಕನಿಷ್ಠ ಮೂರು ಶಾಲೆಗಳಿಗೆ ರವಾನೆಯಾಗಿರುವ ಇಮೇಲ್‌ಗಳು ಅದೇ ಶಾಲೆಯ ವಿದ್ಯಾರ್ಥಿಗಳು ಕಳುಹಿಸಿರುವಂಥದ್ದು. ಅವರಿಗೆ ಪರೀಕ್ಷೆ ಬರೆಯುವುದಕ್ಕೆ ಕಷ್ಟವಾದ ಕಾರಣ ಅದನ್ನು ತಪ್ಪಿಸಲು ಹಾಗೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2) ವಿದ್ಯಾರ್ಥಿಗಳ ಕೃತ್ಯ: ದೆಹಲಿಯ ರೋಹಿಣಿ ಪ್ರಶಾಂತ್ ವಿಹಾರ್ ಪಿವಿಆರ್ ಮಲ್ಟಿಪ್ಲೆಕ್ಸ್‌ನಲ್ಲಿ ನವೆಂಬರ್ 28 ರಂದು ಸಂಭವಿಸಿದ ನಿಗೂಢ ಸ್ಪೋಟದ ಮಾರನೇ ದಿನ ವೆಂಕಟೇಶ್ವರ ಗ್ಲೋಬಲ್ ಸ್ಕೂಲ್‌ ಸೇರಿ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ರವಾನೆಯಾಗಿದೆ. ಸಹೋದರರಿಬ್ಬರು ಪರೀಕ್ಷೆ ಮುಂದೂಡುವಂತೆ ಮಾಡಲು ಈ ರೀತಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

3) ಕೆಟ್ಟ ಪ್ರೇರಣೆ ಪಡೆಯುತ್ತಿರುವ ಮಕ್ಕಳು: ಪೊಲೀಸ್ ತನಿಖೆ ಬಳಿಕ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡು ಅವರನ್ನು ಸಮಾಲೋಚನೆಗೆ ಒಳಪಡಿಸಿದಾಗ, ಅನ್ಯ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ರವಾನೆಯಾದಾಗ ಪರೀಕ್ಷೆ ಮುಂದೂಡಲ್ಪಟ್ಟ ಘಟನೆಗಳಿಂದ ಅವರು ಪ್ರೇರಿತರಾಗಿರುವುದು ಗಮನಸೆಳೆಯಿತು. ಕೊನೆಗೆ ಪಾಲಕರಿಗೆ ಎಚ್ಚರಿಕೆ ನೀಡಿ ಮಕ್ಕಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾಗಿ ವರದಿ ಹೇಳಿದೆ.

4) ಬಾಂಬ್‌ ಬೆದರಿಕೆ ತನಿಖೆ: ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ದೂರು ಬಂದ ಕೂಡಲೇ ಪೊಲೀಸರು, ಬಾಂಬ್‌ ನಿಷ್ಕ್ರಿಯ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಪೂರ್ಣ ಪರಿಶೀಲನೆ ನಡೆಸುತ್ತಾರೆ. ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಎಂಬುದನ್ನು ಖಚಿತಪಡಿಸುತ್ತಾರೆ. ನಂತರ ಇಮೇಲ್ ಎಲ್ಲಿಂದ ಬಂತು ಎಂಬುದನ್ನು ಶೋಧಿಸುತ್ತಾರೆ. ಬಹುತೇಕ ಇಮೇಲ್‌ಗಳು ವಿಪಿಎನ್‌ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಮೂಲಕ ಕಳುಹಿಸಲಾಗಿದೆ. ಇದು ಅಪರಾಧಿಗಳ ಪತ್ತೆ ಹಚ್ಚುವಿಕೆಯನ್ನು ತಡೆಯುತ್ತದೆ. ಆದಾಗ್ಯೂ ಸುಧಾರಿತ ತಂತ್ರಗಳ ಮೂಲಕ ಅಪರಾಧಿಗಳ ಪತ್ತೆಗೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ.

5) ದೆಹಲಿಯಲ್ಲೇ ಹೆಚ್ಚು ಹುಸಿಬಾಂಬ್‌ ಬೆದರಿಕೆ: ದೆಹಲಿಯಲ್ಲಿ ಕಳೆದ 11 ತಿಂಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಎದುರಾಗಿತ್ತು. ಕಳೆದ ಮೇ ತಿಂಗಳಿಂದೀಚೆಗೆ ಡಿಸೆಂಬರ್ ತನಕ 50ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಇಮೇಲ್‌ಗಳು ಆಸ್ಪತ್ರೆ, ವಿಮಾನ ನಿಲ್ದಾಣ, ವಿಮಾನಯಾನ ಕಂಪನಿಗಳಿಗೂ ರವಾನೆಯಾಗಿದ್ದವು. 2024ರಲ್ಲಿ ದೆಹಲಿಯಲ್ಲಿ 200ಕ್ಕೂ ಹೆಚ್ಚು, ಬೆಂಗಳೂರಿನಲ್ಲಿ 8 ಹುಸಿ ಬಾಂಬ್ ಬೆದರಿಕೆ ಪ್ರಕರಣ ದಾಖಲಾಗಿದ್ದವು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.