ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು; ಬಿಜೆಪಿ ನಾಯಕರ ನಡುವೆ ಹೆಚ್ಚಾಗಿದೆ ಪೈಪೋಟಿ, ರೇಸ್‌ನಲ್ಲಿದ್ದಾರೆ ಈ 5 ನಾಯಕರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು; ಬಿಜೆಪಿ ನಾಯಕರ ನಡುವೆ ಹೆಚ್ಚಾಗಿದೆ ಪೈಪೋಟಿ, ರೇಸ್‌ನಲ್ಲಿದ್ದಾರೆ ಈ 5 ನಾಯಕರು

ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು; ಬಿಜೆಪಿ ನಾಯಕರ ನಡುವೆ ಹೆಚ್ಚಾಗಿದೆ ಪೈಪೋಟಿ, ರೇಸ್‌ನಲ್ಲಿದ್ದಾರೆ ಈ 5 ನಾಯಕರು

Delhi CM Hunt: ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು, ಬಿಜೆಪಿ ನಾಯಕರ ನಡುವೆ ಪೈಪೋಟಿ ಹೆಚ್ಚಾಗಿದೆ. ಸದ್ಯ 5 ಬಿಜೆಪಿ ನಾಯಕರು ರೇಸ್‌ನಲ್ಲಿದ್ದಾರೆ. ಒಬ್ಬ ಸಂಸದೆ ಹೆಸರು ಕೂಡ ಪಟ್ಟಿಯಲ್ಲಿರುವುದು ವಿಶೇಷ.

ನವದೆಹಲಿ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿದ ಪರ್ವೇಶ್ ವರ್ಮಾ, ಮೋದಿ ಅವರ ಭಾವ ಚಿತ್ರ ಹಿಡಿದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕ್ಷಣ. ದೆಹಲಿಯ ಮುಂದಿನ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇವರೂ ಇದ್ದಾರೆ.
ನವದೆಹಲಿ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಭೂತಪೂರ್ವ ಗೆಲುವು ದಾಖಲಿಸಿದ ಪರ್ವೇಶ್ ವರ್ಮಾ, ಮೋದಿ ಅವರ ಭಾವ ಚಿತ್ರ ಹಿಡಿದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕ್ಷಣ. ದೆಹಲಿಯ ಮುಂದಿನ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇವರೂ ಇದ್ದಾರೆ. (PTI)

Delhi CM Hunt: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಬಿಜೆಪಿ 45ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿದೆ. 3 ಸಲ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್‌ ಅವರನ್ನು 4089 ಮತಗಳ ಅಂತರದಲ್ಲಿ ಸೋಲಿಸಿದ ಪರ್ವೇಶ್ ವರ್ಮಾ ಈಗ ಎಲ್ಲರ ಗಮನಸೆಳೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಆದಾಗ್ಯೂ, ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಿಲ್ಲ. ಶಾಸಕಾಂಗ ಪಕ್ಷದ ಸದಸ್ಯರು ಒಟ್ಟಾಗಿ ಪಕ್ಷದ ವರಿಷ್ಠರ ತೀರ್ಮಾನವನ್ನು ಅನುಷ್ಠಾನಗೊಳಿಸಬೇಕು. ಆದರೆ, ಈಗ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಬಿಜೆಪಿಯ ನಾಯಕರ ನಡುವೆ ಪೈಪೋಟಿ ಶುರುವಾಗಿದೆ.

ದೆಹಲಿಯ ಮುಖ್ಯಮಂತ್ರಿ ಯಾರು; ರೇಸ್‌ನಲ್ಲಿದ್ದಾರೆ ಬಿಜೆಪಿಯ ಈ 5 ನಾಯಕರು

1) ಪರ್ವೇಶ್ ವರ್ಮಾ: ನವದೆಹಲಿ ಕ್ಷೇತ್ರದಲ್ಲಿ ಎಎಪಿ ಮುಖ್ಯಸ್ಥ, 3 ಸಲ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು 4089 ಮತಗಳ ಅಂತರದಲ್ಲಿ ಸೋಲಿಸಿದ ಪರ್ವೇಶ್ ವರ್ಮಾ ಎಲ್ಲರ ಗಮನಸೆಳೆದಿದ್ದಾರೆ. ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಪ್ರಬಲ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಪರ್ವೇಶ್ ಶರ್ಮಾ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಪರ್ವೇಶ್ ವರ್ಮಾ ಅವರು ನವದೆಹಲಿಯ ರಾಜಕಾರಣದಲ್ಲಿ ಪ್ರಭಾವಿ ಕುಟುಂಬದವರು.

ಪರ್ವೇಶ್ ವರ್ಮಾ ಅವರು ದೆಹಲಿಯಲ್ಲೇ ಹುಟ್ಟಿ ಬೆಳೆದವರು. ಎಂಬಿಎ ಪದವಿ ಹೊಂದಿರುವ ವರ್ಮಾ, ದೆಹಲಿ ವಿಧಾನ ಸಭೆಗೆ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಆದರೆ, 2014ರಲ್ಲಿ, 2019ರಲ್ಲಿ ಲೋಕಸಭೆಗೆ ಸ್ಪರ್ಧಿಸಿ 10 ವರ್ಷ ಸಂಸದರಾಗಿದ್ದರು. 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. 2025ರ ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಈಗ ಅದು ಫಲ ನೀಡಿದೆ.

2) ವಿಜೇಂದರ್ ಗುಪ್ತಾ: ಬಿಜೆಪಿಯ ಹಾಲಿ ಶಾಸಕ, ದೆಹಲಿ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ವಿಜೇಂದರ್ ಗುಪ್ತಾ ಅವರು ಈ ಬಾರಿಯೂ ರೋಹಿಣಿ ಕ್ಷೇತ್ರದಿಂದ ಪುನಃ ಗೆಲುವು ಕಂಡಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಪ್ರದೀಪ್ ಮಿತ್ತಲ್ ಅವರನ್ನು ಸೋಲಿಸಿದ್ದು, ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿದ್ದಾರೆ.

ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಮತ್ತು ಅವರ ಪತ್ನಿ
ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಮತ್ತು ಅವರ ಪತ್ನಿ (@Gupta_vijender)

ವಿಜೇಂದರ್ ಗುಪ್ತಾ ಅವರು ಸತತ ಮೂರನೆ ಬಾರಿಗೆ ಗೆಲುವು ಕಂಡಿದ್ದಾರೆ. 2015 ಮತ್ತು 2020ರ ಚುನಾವಣೆಯಲ್ಲೂ ಈ ಕ್ಷೇತ್ರದಿಂದ ಗೆಲುವು ಕಂಡಿದ್ದರು. ದೆಹಲಿಯ ಬಿಜೆಪಿ ಅಧ್ಯಕ್ಷರಾಗಿ ಕೂಡ ಹೊಣೆಗಾರಿಕೆ ನಿರ್ವಹಿಸಿದ್ದ ಅವರು ಅನುಭವಿ ರಾಜಕಾರಣಿ. ಹೀಗಾಗಿ ಮುಖ್ಯಮಂತ್ರಿ ಸ್ಥಾನದ ಪೈಪೋಟಿಯಲ್ಲಿದ್ದಾರೆ.

3) ವೀರೇಂದ್ರ ಸಚ್‌ದೇವಾ: ದೆಹಲಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷರಾಗಿರುವ ವೀರೇಂದ್ರ ಸಚ್‌ದೇವಾ ನಾಯಕತ್ವದಲ್ಲಿ ಈಗ ಬಿಜೆಪಿ ಅಧಿಕಾರ ಗದ್ದುಗೆ ತಲುಪಿದೆ. ವೀರೇಂದ್ರ ಸಚ್‌ದೇವಾ ಅವರು 2023ರ ಮಾರ್ಚ್ 23 ರಂದು ಪಕ್ಷದ ರಾಜ್ಯ ಅಧ್ಯಕ್ಷನ ಹೊಣೆಗಾರಿಕೆ ವಹಿಸಿಕೊಂಡರು. ವಹಿಸಿಕೊಂಡರು. ಪಕ್ಷದ ಗೆಲುವಿನ ಬಳಿಕ ಮುಖ್ಯಮಂತ್ರಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಕೇಂದ್ರದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದು ಉತ್ತರಿಸಿದ್ದಾರೆ. ದೆಹಲಿ ಒಲಿಂಪಿಕ್ಸ್‌ನ ಉಪಾಧ್ಯಕ್ಷರಾಗಿ, ಆರ್ಚರಿ ಅಸೋಸಿಯೇಷನ್‌ನ ಸೆಕ್ರೆಟರಿ ಜನರಲ್ ಆಗಿ ಕೂಡ ಅವರು ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ.

4) ಹರೀಶ್ ಖುರಾನಾ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೋತಿ ನಗರದಿಂದ ಸ್ಪರ್ಧಿಸಿದ ಹರೀಶ್ ಖುರಾನಾ ತನ್ನ ಚುನಾವಣಾ ಚೊಚ್ಚಲ ಚುನಾವಣೆಯಲ್ಲಿ ಎಎಪಿಯ ಶಿವಾಚರನ್ ಗೋಯೆಲ್ ಅವರನ್ನು ಸೋಲಿಸಿದ್ದಾರೆ. ದೆಹಲಿಯ ಮಾಜಿ ಸಿಎಂ ಮದನ್ ಲಾಲ್ ಖುರಾನಾ (1993-1996) ಅವರ ಪುತ್ರ ಹರೀಶ್ ಖುರಾನಾ. ಅವರು ಬಿಜೆಪಿಯ ದೆಹಲಿ ಘಟಕದಲ್ಲಿ ಪ್ರಮುಖ ಹೊಣೆಗಾರಿಕೆಗಳನ್ನು ವಿಶೇಷವಾಗಿ, ಕಾರ್ಯದರ್ಶಿ, ಸಾರ್ವಜನಿಕ ಸಂಪರ್ಕ ಸೆಲ್ ಕನ್ವೀನರ್ ಮತ್ತು ಪಕ್ಷದ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ.

5) ಬಾನ್ಸುರಿ ಸ್ವರಾಜ್‌: ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್‌. ಸದ್ಯ ಮೊದಲ ಸಲ ಸಂಸದರಾಗಿದ್ದು, ಸುಷ್ಮಾ ಸ್ವರಾಜ್ ಪುತ್ರಿ ಎಂಬ ಕಾರಣಕ್ಕೆ ಮಹಿಳಾ ಕೋಟಾ ಇದ್ದರೆ ಮುಖ್ಯಮಂತ್ರಿಯಾಗಬಹುದು ಎಂದು ಹೇಳಲಾಗುತ್ತಿದೆ. ಬಾನ್ಸುರಿ ಸ್ವರಾಜ್ ಅವರು ಅಟಲ್ ಬಿಹಾರಿ ವಾಜಪೇಯಿ, ಎಲ್‌ಕೆ ಆಡ್ವಾಣಿ ಅವರು ಪ್ರತಿನಿಧಿಸಿದ್ದ ನವದೆಹಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.