ಕನ್ನಡ ಸುದ್ದಿ  /  Nation And-world  /  Delhi Crime: Man Chops Live-in Partner Into 35 Pieces, Bought Fridge To Store Body Parts

Shraddha murder case: ಪ್ರಿಯತಮೆಯನ್ನ 35 ತುಂಡುಗಳಾಗಿ ಕತ್ತರಿಸಿದ ಪ್ರೇಮಿ.. ದೇಹದ ಭಾಗಗಳನ್ನು ಸಂಗ್ರಹಿಸಲು ಫ್ರಿಡ್ಜ್​​ ಖರೀದಿಸಿದ್ದ ಭೂಪ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಕೊಲೆಯನ್ನು ಪೊಲೀಸರು ಇದೀಗ ಭೇದಿಸಿದ್ದಾರೆ. ಪ್ರೀತಿಸಿದವನನ್ನು ನಂಬಿ ಮನೆ ಬಿಟ್ಟು ಬಂದಿದ್ದ ಯುವತಿಯನ್ನು ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಹತ್ಯೆಯಾದ ಶ್ರದ್ಧಾ ವಾಕರ್​​
ಹತ್ಯೆಯಾದ ಶ್ರದ್ಧಾ ವಾಕರ್​​

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಕೊಲೆಯನ್ನು ಪೊಲೀಸರು ಇದೀಗ ಭೇದಿಸಿದ್ದಾರೆ. ಪ್ರೀತಿಸಿದವನನ್ನು ನಂಬಿ ಮನೆ ಬಿಟ್ಟು ಬಂದಿದ್ದ ಯುವತಿಯನ್ನು ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಅರಣ್ಯ ಪ್ರದೇಶ ಹಾಗೂ ಇತರ ಸ್ಥಳಗಳಲ್ಲಿ ಎಸೆದಿದ್ದಾನೆ ಈ ಭೂಪ. ಬಲಿಯಾದ ಯುವತಿಯನ್ನು ಶ್ರದ್ಧಾ ವಾಕರ್ (27)​ ಎಂದು ಹಾಗೂ ಕೊಲೆ ಮಾಡಿದ ಆರೋಪಿಯನ್ನು ಅಫ್ತಾಬ್ ಅಮೀನ್ ಪೂನಾವಲ್ಲಾ (28) ಎಂದು ಗುರುತಿಸಲಾಗಿದೆ. ಮೃತಳ ತಂದೆಯ ದೂರಿನ ಆಧಾರದ ಮೇಲೆ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಸಂಪೂರ್ಣ ವಿವರ

ಮಹಾರಾಷ್ಟ್ರದ ಪಾಲ್ಘರ್‌ ಮೂಲದ ಶ್ರದ್ಧಾ ಮುಂಬೈನಲ್ಲಿ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಡೇಟಿಂಗ್ ಅಪ್ಲಿಕೇಶನ್ ಮೂಲಕ ಅಫ್ತಾಬ್ ಹಾಗೂ ಶ್ರದ್ಧಾಗೆ ಪರಿಚಯವಾಗಿದೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರೂ ಮುಂಬೈನಲ್ಲಿ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ. ಈ ವಿಚಾರ ತಿಳಿದ ಶ್ರದ್ಧಾ ಪೋಷಕರು ವಿರೋಧ ವ್ಯಕ್ತಪಡಿಸಿ ಜಗಳವಾಡಿದ್ದಾರೆ. ಹೀಗಾಗಿ ಅಫ್ತಾಬ್ ಹಾಗೂ ಶ್ರದ್ಧಾ ಮುಂಬೈ ತೊರೆದು ದೆಹಲಿಯಲ್ಲಿ ವಾಸಿಸುತ್ತಿದ್ದರು.

ಒಟ್ಟು ಮೂರು ವರ್ಷಗಳಿಂದ ಇಬ್ಬರು ಲಿವಿಂಗ್​ ಟುಗೆದರ್​ನಲ್ಲಿದ್ದರು. ಇಬ್ಬರೂ ದೆಹಲಿಗೆ ಸ್ಥಳಾಂತರಗೊಂಡ ನಂತರ, ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲು ಶುರು ಮಾಡಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. 2022ರ ಮೇ 18 ರಂದು ಇದೇ ವಿಚಾರಕ್ಕೆ ನಡೆದ ಜಗಳ ತಾರಕಕ್ಕೇರಿದೆ. ಆಕೆಯ ಕತ್ತು ಹಿಸುಕಿದ ಅಫ್ತಾಬ್, ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಹೊಸ ಫ್ರಿಡ್ಜ್​ ಖರೀದಿಸಿ ಅವಳ ದೇಹದ ಭಾಗಗಳನ್ನು ಅದರಲ್ಲಿ ಸಂಗ್ರಹಿಸಿಟ್ಟಿದ್ದಾನೆ. 18 ದಿನಗಳ ನಂತರ ರಾತ್ರಿ ಸಮಯದಲ್ಲಿ ಅದನ್ನು ಕಾಡು ಪ್ರದೇಶ ಸೇರಿದಂತೆ ಇತರೆಡೆ ಎಸೆದಿದ್ದಾನೆ ಎಂದು ದಕ್ಷಿಣ ದೆಹಲಿಯ ಹೆಚ್ಚುವರಿ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.

ಶ್ರದ್ಧಾ ಹತ್ಯೆ ಮಾಡುವ ಮೊದಲು ಡೆಕ್ಸ್ಟರ್ ಸೇರಿದಂತೆ ಹಲವು ಕ್ರೈಂ ಸಿನಿಮಾಗಳು ಮತ್ತು ಕ್ರೈಂ ವೆಬ್ ಸೀರೀಸ್‌ಗಳನ್ನು ಆರೋಪಿ ವೀಕ್ಷಿಸಿದ್ದ. ಶ್ರದ್ಧಾಗಿಂತ ಮುಂಚೆಯೇ ಅಫ್ತಾಬ್ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದ ಎಂದು ದೆಹಲಿ ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.

ಕಳೆದ ಎರಡೂವರೆ ತಿಂಗಳಿನಿಂದ ಶ್ರದ್ಧಾಳೊಂದಿಗೆ ಯಾವುದೇ ಸಂಪರ್ಕವಿಲ್ಲ ಮತ್ತು ಆಕೆಯ ಮೊಬೈಲ್ ಸಂಖ್ಯೆಯೂ ಸ್ವಿಚ್ ಆಫ್ ಆಗಿದೆ ಎಂದು ಸಂತ್ರಸ್ತೆಯ ಸ್ನೇಹಿತೆ ಸೆಪ್ಟೆಂಬರ್‌ನಲ್ಲಿ ಆಕೆಯ ಕುಟುಂಬಕ್ಕೆ ತಿಳಿಸಿದ್ದರು. ಆಕೆಯ ಕುಟುಂಬವು ಆಕೆಯ ಸೋಷಿಯಲ್​ ಮೀಡಿಯಾವನ್ನು ಪರಿಶೀಲಿಸಿದಾಗ ಆಕೆಯಿಂದ ಯಾವುದೇ ಅಪ್​ಡೇಟ್​ ಇಲ್ಲದಿದ್ದನ್ನು ಗಮನಿಸಿದ್ದಾರೆ. ಶ್ರದ್ಧಾ ತಂದೆ ವಿಕಾಶ್ ಮದನ್ ವಾಕರ್ ಮುಂಬೈ ಪೊಲೀಸರನ್ನು ಸಂಪರ್ಕಿಸಿ ಮಗಳು ಕಾಣೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದರು.

ಸಂತ್ರಸ್ತೆಯ ಕೊನೆಯ ಫೋನ್​ಕಾಲ್​ ಲೊಕೇಶನ್​ ದೆಹಲಿ ಆಗಿದ್ದರಿಂದ ಪ್ರಕರಣವನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಸಂತ್ರಸ್ತೆಯ ತಂದೆ ಅಫ್ತಾಬ್ ಜೊತೆ ತನ್ನ ಮಗಳ ಸಂಬಂಧದ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು. ತನಿಖೆಯ ವೇಳೆ ಅಫ್ತಾಬ್ ಹಾಗೂ ಶ್ರದ್ಧಾ ದೆಹಲಿಯ ಛತ್ತರ್ ಪುರ್ ಪಹಾಡಿ ಪ್ರದೇಶದಲ್ಲಿ ಬಾಡಿಗೆಗೆ ಅಪಾರ್ಟ್​ಮೆಂಟ್​ವೊಂದರಲ್ಲಿ ವಾಸಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಇದೀಗ ಆರೋಪಿ ಅಫ್ತಾಬ್​ನನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 302 ಮತ್ತು 201ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ, ತನ್ನನ್ನು ಮದುವೆಗೆ ಶ್ರದ್ಧಾ ಒತ್ತಡ ಹೇರುತ್ತಿದ್ದರಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

IPL_Entry_Point

ವಿಭಾಗ