Delhi Election 2025: ದೆಹಲಿ ಚುನಾವಣಾ ವೇಳಾಪಟ್ಟಿ ಪ್ರಕಟ, ಫೆಬ್ರವರಿ 5ಕ್ಕೆ ಮತದಾನ, 8ಕ್ಕೆ ಫಲಿತಾಂಶ
Delhi Election 2025: ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಇಂದು (ಜನವರಿ 7) ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅಧಿಸೂಚನೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ಮತದಾನ ದಿನಾಂಕ ಮತ್ತು ಮತ ಎಣಿಕೆ ದಿನಾಂಕಗಳ ವಿವರವನ್ನು ಪ್ರಕಟಿಸಿತು.
Delhi Election 2025: ದೆಹಲಿ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಚುನಾವಣಾ ಆಯೋಗ ಇಂದು (ಜನವರಿ 7) ಪ್ರಕಟಿಸಿತು. ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 58 ಸಾಮಾನ್ಯ ಮತ್ತು 12 ಎಸ್‌ಟಿ ಮೀಸಲು ಕ್ಷೇತ್ರಗಳು. ಒಟ್ಟು ಮತದಾರರ ಸಂಖ್ಯೆ 1.55 ಕೋಟಿ. ದಿಲ್ಲಿ ದಿಲ್‌ಸೇ ವೋಟ್ ಕರೇಗಿ ಎನ್ನುತ್ತ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರು. ಅದರ ವಿವರ ಹೀಗಿದೆ-
ದೆಹಲಿ ವಿಧಾನಸಭಾ ಚುನಾವಣೆ, ಮತದಾರರು ಮತ್ತು ಮತಗಟ್ಟೆ ಸಂಖ್ಯೆ ವಿವರ
ದೆಹಲಿಯ ಒಟ್ಟು ಮತದಾರರ ಸಂಖ್ಯೆ 1.55 ಕೋಟಿ ಇದ್ದು, ಈ ಪೈಕಿ 83.49 ಲಕ್ಷ ಪುರುಷ ಮತದಾರರು, 71.74 ಲಕ್ಷ ಮಹಿಳಾ ಮತದಾರರು ಇದ್ದಾರೆ. 25.89 ಲಕ್ಷ ಯುವ ಮತದಾರರು. 2.08 ಲಕ್ಷ ಮತದಾರರು ಮೊದಲ ಬಾರಿ ಮತದಾನ ಮಾಡಲಿದ್ದಾರೆ. ಮತದಾರರ ಪೈಕಿ 79,436 ಮತದಾರರು ಅಂಗವೈಕಲ್ಯ ಹೊಂದಿದವರು. 85 ವರ್ಷ ಮೇಲ್ಪಟ್ಟವರು 1.09 ಲಕ್ಷ ಮತದಾರರಿದ್ದಾರೆ. ಅವರಿಗೆ ಮತದಾನ ಪ್ರಕ್ರಿಯೆ ಸುಲಭಗೊಳಿಸುವುದಕ್ಕೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗುತ್ತದೆ.
ದೆಹಲಿಯಲ್ಲಿ 13,033 ಮತಗಟ್ಟೆಗಳು ಇರಲಿದ್ದು, ಪ್ರತಿ ಮತಗಟ್ಟೆಯಲ್ಲಿ 1191 ಮತದಾರರು ಮತಚಲಾವಣೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 70 ಮತಗಟ್ಟೆಗಳನ್ನು ಅಂಗವಿಕಲರು, 70 ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. 210 ಮಾದರಿ ಮತಗಟ್ಟೆಗಳು ಇರಲಿವೆ.
ದೆಹಲಿ ವಿಧಾನಸಭಾ ಚುನಾವಣೆ 2025ರ ವೇಳಾಪಟ್ಟಿ
ಅಧಿಕೃತ ಅಧಿಸೂಚನೆ ಪ್ರಕಟವಾಗುವ ದಿನಾಂಕ ಜನವರಿ 10
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಜನವರಿ 17
ನಾಮಪತ್ರ ಪರಿಶೀಲನೆ ದಿನಾಂಕ ಜನವರಿ 18
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಜನವರಿ 20
ಮತದಾನ ದಿನಾಂಕ ಫೆ.5
ಮತ ಎಣಿಕೆ ದಿನಾಂಕ ಫೆ. 8
ಹಿಂದಿನ ಚುನಾವಣೆ ಮತ್ತು ಅದರ ಫಲಿತಾಂಶಗಳ ಕಡೆಗೆ ಹಿನ್ನೋಟ
ಪ್ರಸ್ತುತ 70 ಸದಸ್ಯರ ದೆಹಲಿ ಅಸೆಂಬ್ಲಿಯ ಅವಧಿಯು 2025ರ ಫೆಬ್ರವರಿ 23 ರಂದು ಮುಕ್ತಾಯಗೊಳ್ಳುತ್ತದೆ. ಹೊಸ ಶಾಸಕಾಂಗ ವ್ಯವಸ್ಥೆ ಸ್ಥಾಪಿಸಲು ಇದಕ್ಕೂ ಮೊದಲು ಚುನಾವಣೆ ನಡೆಯಬೇಕು. ಕಳೆದ ವಿಧಾನಸಭಾ ಚುನಾವಣೆಗೆ ಫೆಬ್ರವರಿ 8 ರಂದು ಮತದಾನ ಮತ್ತು ಫೆಬ್ರವರಿ 11 ರಂದು ಫಲಿತಾಂಶ ಪ್ರಕಟವಾಗಿದ್ದವು. ಜನವರಿ 6 ರಂದು ಚುನಾವಣಾ ವೇಳಾಪಟ್ಟಿ ಪ್ರಕಟವಾಗಿತ್ತು. ಈ ಚುನಾವಣಾ ಸ್ಪರ್ಧೆಗೆ ತಯಾರಿ ನಡೆಸುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ), ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿವೆ.
ದೆಹಲಿ ವಿಧಾನಸಭೆಗೆ 2020ರಲ್ಲಿ ನಡೆದ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) 62ರಲ್ಲಿ ಗೆಲುವು ಕಂಡರೆ, ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. 2015ರ ಚುನಾವಣೆಯಲ್ಲಿ ಎಎಪಿ 67 ಮತ್ತು ಬಿಜೆಪಿ 3 ಸ್ಥಾನಗಳನ್ನು ಗೆದ್ದುಕೊಂಡಿತ್ತು.