ದೆಹಲಿ ಚುನಾವಣೆ; ಮತದಾನ ಇಂದು, ಶಾಂತಿಯುತ ಮತದಾನಕ್ಕಾಗಿ 45,000 ಯೋಧರ ನಿಯೋಜನೆ, ಗಮನಸೆಳೆದ 10 ಅಂಶಗಳಿವು
Delhi Election 2025: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು (ಫೆ 5) ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ತನಕ ನಡೆಯಲಿದೆ. 1.56 ಕೋಟಿ ಮತದಾರರು 699 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಶಾಂತಿಯುತ ಮತದಾನಕ್ಕಾಗಿ 45,000 ಯೋಧರ ನಿಯೋಜನೆ ಸೇರಿ ಗಮನಸೆಳೆದ 10 ಅಂಶಗಳ ವಿವರ ಇಲ್ಲಿದೆ.

Delhi Election 2025: ದೆಹಲಿ ವಿಧಾನಸಭಾ ಚುನಾವಣೆಯ ನಿರ್ಣಾಯಕ ದಿನ ಇಂದು (ಫೆ 5). ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಬೆಳಿಗ್ಗೆ 7 ಗಂಟೆಗೆ ಶುರುವಾಗಲಿದ್ದು, ಸಂಜೆ 6 ಗಂಟೆ ತನಕ ನಡೆಯಲಿದೆ. ದೆಹಲಿ ವಿಧಾನಸಭಾ ಚುನಾವಣೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯ ಗಡಿಗಳನ್ನು ಮುಚ್ಚಲಾಗಿದೆ. ಗಡಿ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾದ ತಪಾಸಣೆ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ದೆಹಲಿಯಲ್ಲಿ ವಾಹನಗಳ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಮತದಾನದ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಭದ್ರತಾ ಪಡೆಗಳು ಪ್ರತಿ ಮೂಲೆ ಮೂಲೆಯಲ್ಲೂ ಕಣ್ಣಿಟ್ಟಿವೆ.
ದೆಹಲಿ ವಿಧಾನಸಭಾ ಚುನಾವಣೆ; ಸದ್ಯದ ರಾಜಕೀಯ ಚಿತ್ರಣ
ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ, ಆಡಳಿತಾರೂಢ ಎಎಪಿ (ಆಮ್ ಆದ್ಮಿ ಪಾರ್ಟಿ) ಸತತ ಮೂರನೇ ಅವಧಿಗೆ ಆಡಳಿತ ನಡೆಸಲು ಬಯಸುತ್ತಿದೆ. ಎರಡು ಅವಧಿಗಳ ಅದರ ಆಡಳಿತ ದಾಖಲೆ ಮತ್ತು ಕಲ್ಯಾಣ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಓಲೈಸಲು ಪ್ರಯತ್ನಿಸಿದೆ. ಇದೇ ವೇಳೆ, ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ 25 ವರ್ಷಗಳ ನಂತರ ರಾಜಧಾನಿ ದೆಹಲಿಯನ್ನು ಪುನಃ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ.
ಮತ್ತೊಂದೆಡೆ, ದಿವಂಗತ ಶೀಲಾ ದಿಕ್ಷಿತ್ ಅವರ ನೇತೃತ್ವದಲ್ಲಿ ಎಎಪಿಗೂ ಆಡಳಿತಕ್ಕೂ ಮೊದಲು 15 ವರ್ಷಗಳ ಆಡಳಿತ ನಡೆಸಿದ್ದ ಕಾಂಗ್ರೆಸ್ ಪುನರಾಗಮನಕ್ಕಾಗಿ ಶ್ರಮಿಸುತ್ತಿದೆ. ಹಿಂದಿನ ಎರಡು ಚುನಾವಣೆಗಳಲ್ಲಿ ಒಂದೇ ಸ್ಥಾನವನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿತ್ತು. ಇಂತಹ ರಾಜಕೀಯ ಸನ್ನಿವೇಶದಲ್ಲಿ ದೆಹಲಿಯ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದೆ.
ದೆಹಲಿ ವಿಧಾನಸಭಾ ಚುನಾವಣೆ 2025; ಇಂದು ಮತದಾನ- 10 ಮುಖ್ಯ ಅಂಶಗಳಿವು
1) ದೆಹಲಿ ವಿಧಾನಸಭಾ ಚುನಾವಣೆಗೆ ಇಂದು (ಫೆ 5) ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಫೆ 8 ಕ್ಕೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. ಇದೇ ದಿನ ಉತ್ತರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಎರಡು ಉಪಚುನಾವಣೆಯ ಮತದಾನ ನಡೆಯುತ್ತಿವೆ.
2) ಚುನಾವಣಾ ಅಖಾಡದಲ್ಲಿ ಒಟ್ಟು 699 ಅಭ್ಯರ್ಥಿಗಳ ಭವಿಷ್ಯವನ್ನು 1.56 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ 13,766 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
3) ದೆಹಲಿಯ ಒಟ್ಟು 13,766 ಮತಗಟ್ಟೆಗಳಲ್ಲಿ 3193 ಸೂಕ್ಷ್ಮ ಮತಗಟ್ಟೆಗಳಾಗಿವೆ. ಭದ್ರತಾ ಮೇಲ್ವಿಚಾರಣೆಗಾಗಿ 42 ಡ್ರೋನ್‌ಗಳನ್ನು ಇಲ್ಲಿ ನಿಯೋಜಿಸಲಾಗಿದೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಡ್ರೋನ್ ಕಣ್ಗಾವಲು ತಂಡಗಳು ಈ ಮತಗಟ್ಟೆಗಳ ಮೇಲೆ ಕಣ್ಣಿಡಲಿವೆ ಮತ್ತು ಅರೆಸೈನಿಕ ಸಿಬ್ಬಂದಿಯನ್ನು ಇಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.
4) ಶಾಂತಿಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಅರೆಸೈನಿಕ ಪಡೆಗಳ 220 ತುಕಡಿಗಳು, 35,626 ದೆಹಲಿ ಪೊಲೀಸ್ ಸಿಬ್ಬಂದಿ ಮತ್ತು 19,000 ಗೃಹರಕ್ಷಕರನ್ನು ನಿಯೋಜಿಸಿದೆ.
5) ಮತದಾನ ಕೇಂದ್ರಗಳಲ್ಲಿ ಹಲವಾರು ಪದರಗಳ ಭದ್ರತೆಯ ವ್ಯವಸ್ಥೆ ಇದೆ. ವಿಶೇಷವಾಗಿ ಸ್ಟ್ರಾಂಗ್ ರೂಮ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮತದಾನದ ಹಿನ್ನೆಲೆಯಲ್ಲಿ ದೆಹಲಿಯ ಗಡಿಗಳನ್ನು ಮುಚ್ಚಲಾಗಿದೆ. ಭದ್ರತಾ ಸಿಬ್ಬಂದಿ ಮಂಗಳವಾರ ಸಂಜೆಯಿಂದ ಮತದಾನ ಕೇಂದ್ರಗಳಲ್ಲಿ ಸ್ಥಾನಗಳನ್ನು ವಹಿಸಿಕೊಂಡಿದ್ದಾರೆ.
6) ಮತದಾನ ಕೇಂದ್ರಗಳಲ್ಲಿ 45,000 ಸೇರಿದಂತೆ ರಾಜಧಾನಿಯಾದ್ಯಂತ ಸುಮಾರು 80,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡುವವರ ಮೇಲೂ ನಿಗಾ ಇಡಲಾಗಿದೆ.
7) ರಾಜಧಾನಿಯ 13,766 ಮತಗಟ್ಟೆಗಳ ಭದ್ರತೆಗಾಗಿ 45,000 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 220 ಕಂಪನಿ ಸಶಸ್ತ್ರ ಪಡೆಗಳ ಸಿಬ್ಬಂದಿ ಸೇರಿದ್ದಾರೆ. ಒಟ್ಟು 220 ತುಕಡಿಗಳಲ್ಲಿ 150 ತುಕಡಿಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಯಾಗಿದ್ದರೆ, ಉಳಿದ 70 ತುಕಡಿಗಳು ಇತರ ರಾಜ್ಯಗಳ ಸಶಸ್ತ್ರ ಪೊಲೀಸ್ ಪಡೆಗಳನ್ನು ಹೊಂದಿವೆ. ಇದಲ್ಲದೆ, ಪ್ರತಿ ಮತಗಟ್ಟೆಯ ಸುತ್ತಲೂ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಸಹ ನಿಯೋಜಿಸಲಾಗಿದೆ.
8) ಮತದಾರರ ಅನುಕೂಲಕ್ಕಾಗಿ ಚುನಾವಣಾ ಆಯೋಗವು ಕ್ಯೂ ಮ್ಯಾನೇಜ್ಮೆಂಟ್ ಸಿಸ್ಟಮ್ (ಕ್ಯೂಎಂಎಸ್) ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಮತದಾರರಿಗೆ ನೈಜ ಸಮಯದಲ್ಲಿ ಮತಗಟ್ಟೆಗಳಲ್ಲಿ ಮತದಾರರ ದಟ್ಟಣೆಯನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದನ್ನು ಹಿರಿಯ ನಾಗರಿಕರು ಮತ್ತು ವಿಕಲಾಂಗ ವ್ಯಕ್ತಿಗಳಿಗೆ ವಿಶೇಷವಾಗಿ ರೂಪಿಸಲಾಗಿದೆ.
9) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ವಿಶೇಷ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಅವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಒಟ್ಟು 733 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7,553 ಅರ್ಹ ಮತದಾರರ ಪೈಕಿ 6,980 ಮಂದಿ ಈಗಾಗಲೇ 'ಮನೆಯಿಂದ ಮತದಾನ' ಸೌಲಭ್ಯದಡಿ ಮತ ಚಲಾಯಿಸಿದ್ದಾರೆ.
10) ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಕಾರಣ ಇಂದು ಕೆಲವು ಸ್ಥಳಗಳಲ್ಲಿ ಎಸಿಪಿ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಕೆಲವು ಸ್ಥಳಗಳಲ್ಲಿ ಅಂತಹ ಮತಗಟ್ಟೆಗಳ ಭದ್ರತೆಯ ಉಸ್ತುವಾರಿಯನ್ನು ಇನ್‌ಸ್ಪೆಕ್ಟರ್ ಮಟ್ಟದ ಅಧಿಕಾರಿಯ ಕೈಗೆ ನೀಡಲಾಗಿದೆ. ಬಹು ಹಂತದ ಭದ್ರತೆಯನ್ನು ಮೇಲ್ವಿಚಾರಣೆ ಮಾಡಲು ಮತದಾನ ಕೇಂದ್ರಗಳಲ್ಲಿ ಸುಮಾರು 52,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವಿಭಾಗ