ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ- 5 ಕಾರಣಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ- 5 ಕಾರಣಗಳು

ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ- 5 ಕಾರಣಗಳು

Delhi Election 2025 Results: ದೆಹಲಿ ವಿಧಾನ ಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಕಂಡಿದೆ. ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ ಇಲ್ಲಿದೆ ಆ 5 ಕಾರಣಗಳು.

ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ ಎಂಬ ವಿವರ ಇಲ್ಲಿದೆ. ಬಿಜೆಪಿ ಕಾರ್ಯಕರ್ತರ ಸಂಭ್ರಮ (ಎಡ ಚಿತ್ರ), ಅರವಿಂದ ಕೇಜ್ರಿವಾಲ್ (ಬಲ ಚಿತ್ರ)
ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ ಎಂಬ ವಿವರ ಇಲ್ಲಿದೆ. ಬಿಜೆಪಿ ಕಾರ್ಯಕರ್ತರ ಸಂಭ್ರಮ (ಎಡ ಚಿತ್ರ), ಅರವಿಂದ ಕೇಜ್ರಿವಾಲ್ (ಬಲ ಚಿತ್ರ)

Delhi Election 2025 Results: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು 70 ವಿಧಾನ ಸಭಾ ಸ್ಥಾನಗಳ ಪೈಕಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಸತತ ಎರಡು ಅವಧಿಗೆ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದ್ದ ಆಮ್ ಆದ್ಮಿ ಪಾರ್ಟಿ (ಎಎಪಿ) ಈ ಬಾರಿ 20 ಚಿಲ್ಲರೆ ಸೀಟುಗಳಿಗೆ ಸಮಾಧಾನ ಪಟ್ಟುಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದೆ. ಆಮ್ ಆದ್ಮಿ ಪಾರ್ಟಿಯ ಘಟಾನುಘಟಿ ನಾಯಕರಾದ ಅರವಿಂದ ಕೇಜ್ರಿವಾಲ್, ಮನಿಷ್ ಸಿಸೋಡಿಯಾ, ಸೌರಭ್ ಭಾರದ್ವಾಜ್‌ ಕೂಡ ಸೋಲು ಕಂಡಿದ್ದಾರೆ. ಇದರೊಂದಿಗೆ 12 ವರ್ಷಗಳ ಆಮ್ ಆದ್ಮಿ ಆಡಳಿತ ಕೊನೆಗೊಂಡಂತಾಗಿದೆ. ದೆಹಲಿ ಗದ್ದುಗೆಯಲ್ಲಿ ಬಿಜೆಪಿಯನ್ನು ಕೂರಿಸಿದ ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ ಎಂಬ ಕುತೂಹಲ ಈ ಹೊತ್ತಿನಲ್ಲಿ ಸಹಜ. ಸೋನಿಯಾ - ಎ ಬಯಾಗ್ರಫಿ ಪುಸ್ತಕದ ಲೇಖಕ, ರಾಜಕೀಯ ವಿಶ್ಲೇಷಕ ರಶೀದ್ ಕಿದ್ವಾಯಿ ಅವರು ಅಂತಹ 5 ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದಾರೆ.

ಮತದಾರ, ಆಮ್ ಆದ್ಮಿಯನ್ನು ಕಡೆಗಣಿಸಿದ್ದೇಕೆ- 5 ಕಾರಣಗಳು

1) ಭರವಸೆ ಈಡೇರಿಸುವಲ್ಲಿ ಅರವಿಂದ್ ಕೇಜ್ರಿವಾಲ್ ವಿಫಲ: ಚುನಾವಣೆಗೆ ಮೊದಲು ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಅರವಿಂದ್ ಕೇಜ್ರಿವಾಲ್ ವಿಫಲರಾದರು. ಇದು ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರ ಕಳೆದುಕೊಳ್ಳಲು ದೊಡ್ಡ ಕಾರಣ ಎಂದು ಕಿದ್ವಾಯಿ ಹೇಳಿದರು. ಮಹಿಳಾ ಮತದಾರರಿಗೆ ಅನೇಕ ಉಚಿತಗಳ ಭರವಸೆಯನ್ನು ಕೇಜ್ರಿವಾಲ್ ನೀಡಿದ್ದರು. ಕಾನೂನು ಪ್ರಕಾರ ಅವರಿಗೆ ಅದು ಸಾಧ್ಯವಿಲ್ಲ ಎಂಬುದು ಮತದಾರರಿಗೂ ಗೊತ್ತಿತ್ತು. ಅರವಿಂದ್ ಕೇಜ್ರಿವಾಲ್ ಅವರು ಸಿದ್ದರಾಮಯ್ಯ, ಹೇಮಂತ್ ಸೊರೇನ್, ಮಮತಾ ಬ್ಯಾನರ್ಜಿ ಅಥವಾ ಒಮರ್ ಅಬ್ದುಲ್ಲಾ ಅವರು ಇರುವಂತಹ ರಾಜಕೀಯ ಸನ್ನಿವೇಶದಲ್ಲಿ ಇರಲಿಲ್ಲ ಎಂದು ಕಿದ್ವಾಯಿ ವಿವರಿಸಿದರು.

2) ಬಿಜೆಪಿ ಪರ ಮಧ್ಯಮ ವರ್ಗ: ದೆಹಲಿಯ ಮಧ್ಯಮ ವರ್ಗದ ಜನರು ಬಿಜೆಪಿ ಪರ ನಿಂತರು. ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಪರವಾಗಿಯೇ ನಿಂತಿದ್ದರು. ವಿಧಾನ ಸಭಾ ಚುನಾವಣೆ ವೇಳೆ ಅವರು ಎಎಪಿ ಕಡೆಗೆ ವಾಲಲಿಲ್ಲ. ಶೇಕಡ 9 ರಷ್ಟು ಮತಗಳಿಕೆ ಕುಸಿತವಾಗಿರುವುದರಲ್ಲಿ ಇದನ್ನು ನಾವು ಗುರುತಿಸಬಹುದು. ಈ ಮಧ್ಯಮ ವರ್ಗದ ಮತದಾರರಲ್ಲಿ ಸರ್ಕಾರಿ ನೌಕರರು, ವ್ಯಾಪಾರಸ್ಥರು, ವೈದ್ಯಕೀಯ ಕ್ಷೇತ್ರದವರು, ಎಂಜಿನಿಯರ್‌, ಸಿಎಗಳು ಮುಂತಾದವರು ಸೇರಿಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಾದಾಗ ಸದಾ ಸಂತ್ರಸ್ತನಂತೆ ನಾಟಕೀಯ ನಡವಳಿಕೆ ತೋರಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರಿಂದ ಮಧ್ಯಮ ವರ್ಗ ಬಿಜೆಪಿ ಕಡೆಗೆ ಹೊರಳಿದೆ ಎಂದು ಕಿದ್ವಾಯಿ ವಿವರಿಸಿದರು.

3) ಎಎಪಿ- ಕಾಂಗ್ರೆಸ್ ಬಿಕ್ಕಟ್ಟು: ಇಂಡಿಯಾ ಮೈತ್ರಿಕೂಟದೊಳಗೆ ಅನಿವಾರ್ಯವಾಗಿ ಹೋಗಿದ್ದ ಎಎಪಿ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ಇರಲಿಲ್ಲ. ಇದು 65 ಕ್ಷೇತ್ರಗಳಲ್ಲಿ ಗೋಚರಿಸಿದೆ. ಇನ್ನು ಅರವಿಂದ್ ಕೇಜ್ರಿವಾಲ್ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಅವರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ (ಶೀಲಾ ದೀಕ್ಷಿತ್ ಪುತ್ರ) ಪಡೆದುಕೊಂಡ ಮತ 4568. ಇದರ್ಥ ಇಷ್ಟೆ. ಹೊಂದಾಣಿಕೆ ಮಾಡಿಕೊಂಡಿದ್ದರೆ ಅರವಿಂದ್ ಕೇಜ್ರಿವಾಲ್ ಗೆಲ್ಲುವ ಲಕ್ಷಣವಿತ್ತು ಎಂದು ಅವರು ವಿಶ್ಲೇಷಿಸಿದರು.

4) ನಾಗರಿಕ ಸಮಸ್ಯೆಗಳು: ದೆಹಲಿಯಲ್ಲಿ 2022ರಲ್ಲಿ ನಡೆದ ಪಾಲಿಕೆ ಚುನಾವಣೆ ಬಹಳ ನಿರ್ಣಾಯಕವಾಗಿದ್ದವು. ದೆಹಲಿ ಜನರಿಗೆ ಪಾಲಿಕೆ ಮತ್ತು ರಾಜ್ಯ ಸರ್ಕಾರ ಬೇರೆ ಬೇರೆ ಅಲ್ಲ. ಎಲ್ಲ ಸಮಸ್ಯೆಗಳೂ ಕೇಜ್ರಿವಾಲ್ ಎದುರು ಸವಾಲಾಗಿ ನಿಂತುಕೊಂಡವು ಎಂದು ಕಿದ್ವಾಯಿ ವಿವರಿಸಿದ್ದಾರೆ.

5) ಭ್ರಷ್ಟಾಚಾರ ಆರೋಪ: ಶೀಷ್ ಮಹಲ್ ಎಂಬುದು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತನ್ನ ಮನೆ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದನ್ನು ಉಲ್ಲೇಖಿಸುತ್ತದೆ. ಇದು ಅವರ ಕಾಮನ್ ಮ್ಯಾನ್ ಎಂಬ ಇಮೇಜ್ ಅನ್ನು ಕಳಚಿತು. ಆ ಹಾನಿಯಿಂದ ತಪ್ಪಿಸಿಕೊಳ್ಳುವುದು ಕೇಜ್ರಿವಾಲ್‌ಗೆ ಸಾಧ್ಯವಾಗಲಿಲ್ಲ. ಇನ್ನು ಅಬಕಾರಿ ನೀತಿ ವಿಚಾರದಲ್ಲಿ ಕೂಡ ಎಡವಿದ್ರು. ಯಮುನಾ ನದಿ ನೀರು ಸ್ವಚ್ಛಗೊಳಿಸುವ ವಿಚಾರದಲ್ಲಿ ಕೂಡ ಸೋತರು. ಹೀಗೆ ವಿವಿಧ ಕಾರಣಗಳಿಗೆ ಎಎಪಿ ಸೋಲು ಅನುಭವಿಸಿದೆ.


Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.