ದೆಹಲಿ ಚುನಾವಣಾ ಫಲಿತಾಂಶ; ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ ಸೋಲು ಕಂಡ ಅರವಿಂದ್ ಕೇಜ್ರಿವಾಲ್
Delhi election 2025 Results: ಸತತ ಮೂರು ಸಲ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ ಪರಾಜಿತರಾಗಿದ್ದಾರೆ.

Delhi election 2025 Results: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಸತತ ಮೂರು ಸಲ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ 4 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಪರಾಜಿತರಾಗಿದ್ದಾರೆ. ಇದರೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ರಾಜಕೀಯ ಜೀವನದಲ್ಲಿ ದೊಡ್ಡ ಕುಸಿತ ಸಂಭವಿಸಿದೆ.
4000ಕ್ಕೂ ಹೆಚ್ಚು ಮತಗಳ ಅಂತರದ ಸೋಲು ಕಂಡ ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಮತಗಳನ್ನು ಎಣಿಸಿದ ಮೊದಲ ಎರಡು ಗಂಟೆಗಳಲ್ಲಿ ಹಿಂದುಳಿದಿದ್ದರು. ಆದಾಗ್ಯೂ, ಅರವಿಂದ್ ಕೇಜ್ರಿವಾಲ್ ಅವರು 254 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು ಎಂದು ಬೆಳಿಗ್ಗೆ 10.05 ಕ್ಕೆ ಚುನಾವಣಾ ಆಯೋಗದ ಮಾಹಿತಿ ನೀಡಿತ್ತು.. ಬೆಳಿಗ್ಗೆ 11 ಗಂಟೆ ಸುಮಾರಿಗೆ ಪರ್ವೇಶ್ ವರ್ಮಾ ಬಿಜೆಪಿ ನಾಯಕ 238 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಯ ಎರಡು ಸುತ್ತು ಬಾಕಿ ಇರುವಾಗ 3000 ಅಂತರದ ಮುನ್ನಡೆಯನ್ನು ಪರ್ವೇಶ್ ವರ್ಮಾ ಕಾಯ್ದುಕೊಂಡಿದ್ದರು. ಒಟ್ಟು 14 ಸುತ್ತುಗಳ ಮತ ಎಣಿಕೆ ಬಳಿಕ ಅರವಿಂದ್ ಕೇಜ್ರಿವಾಲ್ ಅವರು 25,999 ಮತಗಳನ್ನು ಪಡೆದುಕೊಂಡರು. ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಪರ್ವೇಶ್ ಶರ್ಮಾ ಅವರು 30,088 ಮತಗಳನ್ನು ಪಡೆದುಕೊಂಡಿದ್ದು, 4,089 ಮತಗಳ ಅಂತರದ ಗೆಲುವು ದಾಖಲಿಸಿದರು.
ಅರವಿಂದ್ ಕೇಜ್ರಿವಾಲ್ ಅವರ ರಾಜಕೀಯ ಜೀವನ ಸಾಕಷ್ಟು ತಿರುವುಗಳಿಂದ ತುಂಬಿದೆ. ಜನಸಾಮಾನ್ಯರ ಪ್ರತಿನಿಧಿಯಾಗಿ ರಾಜಕೀಯ ರಂಗ ಪ್ರವೇಶಿಸಿದ ಅವರು ಅವರ ಹೆಸರಲ್ಲೇ ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿ ಸಂಚಲನ ಮೂಡಿಸಿದವರು. ಆರ್‌ಟಿಐ ಕಾರ್ಯಕರ್ತರಾಗಿ ಅವರು ಮಾಡಿದ ಕಾರ್ಯಕ್ಕೆ ರಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಅವರಿಗೆ 2006ರಲ್ಲಿ ಸಿಕ್ಕಿತ್ತು. 2012ರಲ್ಲಿ ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿ ಮಾರನೇ ವರ್ಷವೇ ದೆಹಲಿಯ ಎರಡನೇ ಅತಿದೊಡ್ಡ ಪಕ್ಷವಾಗಿ ಅದನ್ನು ರೂಪಿಸಿದ್ದರು. ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿ ಎರಡು ಬಾರಿ ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸಿದರು. ಆದರೆ ಈ ಬಾರಿ ಆಡಳಿತ ವಿರೋಧಿ ಅಲೆ ತೀವ್ರವಾಗಿತ್ತು.
ಸೋಲಿನ ಸುಳಿವು ನೀಡಿದ್ದ ಮತಗಟ್ಟೆ ಸಮೀಕ್ಷೆಗಳು
ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿಯ ಭ್ರಷ್ಟಾಚಾರ, ಕೋವಿಡ್ ಸಂದರ್ಭದಲ್ಲಿ ತನ್ನ ಮನೆಯ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದು ಜನರ ಅಸಮಾಧಾನಕ್ಕೆ ಕಾರಣವಾಗಿದ್ದವು. ಜನ ಸಾಮಾನ್ಯನಂತೆ ಭ್ರಷ್ಟಾಚಾರ ನಿಗ್ರಹದ ಕನಸು ಕಂಡು ಮತ್ತೆ ಅದರದ್ದೇ ಸುಳಿಗೆ ಬಿದ್ದ ಅರವಿಂದ್ ಕೇಜ್ರಿವಾಲ್ ಜನರಿಂದಲೇ ದೂರಾಗುವಂತಾಯಿತು. ತಾವು ಪ್ರತಿನಿಧಿಸಿದ್ದ ನವದೆಹಲಿ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಕಂಡಿದ್ದವರಿಗೆ ನಾಲ್ಕನೇ ಬಾರಿ ಗೆಲುವು ದಕ್ಕಲಿಲ್ಲ ಎಂಬುದು ವಾಸ್ತವ.
ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ದಿನ ಸಂಜೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಬಹುತೇಕ ಸಮೀಕ್ಷೆಗಳು ಎಎಪಿ ಅಧಿಕಾರ ಕಳೆದುಕೊಳ್ಳುವುದನ್ನು ಖಚಿತಪಡಿಸಿದ್ದವು. ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್ ಕೂಡ ಎರಡು ಬಾರಿ ಅಂದಾಜು ಬದಲಾಯಿಸಿ, ಕೊನೆಗೆ ಬಿಜೆಪಿ ಮತ್ತು ಎಎಪಿಗೆ ಸಮಬಲದ ಅಂದಾಜು ನೀಡಿತ್ತು. ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೋಲು ಉಂಟಾಗಬಹುದು ಎಂದು ಬಹುತೇಕ ಸಮೀಕ್ಷೆಗಳು ಅಂದಾಜಿಸಿದ್ದವು. ಎರಡು ಅವಧಿಗೆ ಆಮ್ ಆದ್ಮಿ ಪಾರ್ಟಿಗೆ ಸಿಕ್ಕಷ್ಟು ಸ್ಥಾನಗಳು ಬಿಜೆಪಿ ಸಿಕ್ಕದೇ ಹೋದರೂ ಸ್ಪಷ್ಟ ಬಹುಮತ ಸಿಕ್ಕಿದೆ. ಕಳೆದ ಬಾರಿ 62 ಸ್ಥಾನಗಳಿಗೂ ಹೆಚ್ಚು ಸ್ಥಾನದಲ್ಲಿ ಗೆದ್ದ ಎಎಪಿ ಈ ಬಾರಿ 20 ಚಿಲ್ಲರೆ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.
