ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್- 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್- 5 ಮುಖ್ಯ ಅಂಶಗಳು

ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್- 5 ಮುಖ್ಯ ಅಂಶಗಳು

Delhi Exit Polls: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು (ಫೆ.1) ಪೂರ್ಣಗೊಂಡಿದೆ. ದೆಹಲಿ ಎಕ್ಸಿಟ್ ಪೋಲ್ ಕೂಡ ಪ್ರಕಟವಾಗಿದ್ದು, 10 ಚುನಾವಣೋತ್ತರ ಸಮೀಕ್ಷೆಗಳ ಪೈಕಿ 8 ಬಿಜೆಪಿ ಅಧಿಕಾರ ಹಿಡಿಯುವ ಮುನ್ಸೂಚನೆ ನೀಡಿವೆ. ಇವು ನಿಜವೇ ಆದರೆ 27 ವರ್ಷಗಳ ಬಳಿಕ ಬಿಜೆಪಿ ದೆಹಲಿಯ ಅಧಿಕಾರ ಗದ್ದುಗೆ ಏರಲಿದೆ. ಗಮನಿಸಬೇಕಾದ 5 ಮುಖ್ಯ ಅಂಶಗಳಿವು

ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್.
ದೆಹಲಿ ಚುನಾವಣೆ 2025; 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಹವಾ, ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್.

Delhi Exit Polls: ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗಿವೆ. ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು (ಫೆ 1) ಇಂದು ಪೂರ್ಣಗೊಂಡ ಬೆನ್ನಿಗೆ ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳು ಬಿಜೆಪಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರ ಹಿಡಿಯವ ಸುಳಿವು ನೀಡಿವೆ. ಇನ್ನೊಂದೆಡೆ, ಎರಡು ಅವಧಿಗೆ ದೆಹಲಿಯ ಆಡಳಿತ ಚುಕ್ಕಾಣಿ ಹಿಡಿದು ದೆಹಲಿಗರನ್ನು ಒಲಿಸುವಂತೆ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದ ಆಮ್ ಆದ್ಮಿ ಪಾರ್ಟಿಗೆ ಈ ಬಾರಿ ಸಂಕಷ್ಟ ಹೆಚ್ಚಾಗಿದೆ. ಎರಡು ಅವಧಿಗೆ ವಿಪಕ್ಷವೇ ಇಲ್ಲದಂತೆ ಬಹುಮತ ಪಡೆದಿದ್ದ ಆಮ್ ಆದ್ಮಿ ಪಾರ್ಟಿಗೆ ಈ ಬಾರಿ ಬಿಜೆಪಿಯಿಂದ ಭಾರಿ ಪೈಪೋಟಿ ಎದುರಾಗುವ ಸುಳಿವನ್ನು ದೆಹಲಿಯ ಎಕ್ಸಿಟ್ ಪೋಲ್‌ ಫಲಿತಾಂಶಗಳು ನೀಡಿವೆ. ಈ ವಿದ್ಯಮಾನದ ಹಿನ್ನೆಲೆಯಲ್ಲಿ ಗಮನಿಸಬೇಕಾದ 5 ಮುಖ್ಯ ಅಂಶಗಳಿವು.

ಬಿಜೆಪಿಗೆ ಬಲ ತುಂಬಿದ ದೆಹಲಿ ಎಕ್ಸಿಟ್ ಪೋಲ್- 5 ಮುಖ್ಯ ಅಂಶಗಳು

1) ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶ: ದೆಹಲಿ ವಿಧಾನ ಸಭಾ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದೆ. ಇಂದು (ಫೆ 5) ಮತದಾನ ಪೂರ್ಣಗೊಂಡಿದ್ದು, ಫೆ 8 ರಂದು ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಈ ಹೊತ್ತಿನಲ್ಲಿ ಮತದಾನ ಪೂರ್ಣಗೊಂಡ ಕೆಲವೇ ನಿಮಿಷಗಳಲ್ಲಿ ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾಗಿವೆ. ದೆಹಲಿ ಎಕ್ಸಿಟ್ ಪೋಲ್‌ಗಳ ಪೈಕಿ 10ರಲ್ಲಿ 8 ಸಮೀಕ್ಷೆಗಳು ಬಿಜೆಪಿ ಅಧಿಕಾರ ಹಿಡಿಯುವುದನ್ನು ಸೂಚಿಸಿವೆ. ಇನ್ನೆರಡು ಆಮ್‌ ಆದ್ಮಿ ಪಾರ್ಟಿ ಗೆಲುವನ್ನು ಬಿಂಬಿಸಿವೆ. ವಿವರ ಓದಿಗೆ - ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶ; ಆಡಳಿತ ಚುಕ್ಕಾಣಿ ಬಿಜೆಪಿಗೆ ಎನ್ನುತ್ತಿವೆ ಚುನಾವಣೋತ್ತರ ಸಮೀಕ್ಷೆಗಳು, 10 ಸಮೀಕ್ಷೆಗಳ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

2) ಒಂದೇ ಅವಧಿಗೆ ಬಿಜೆಪಿ ಆಡಳಿತ: 1952ರಲ್ಲಿ ದೆಹಲಿ ವಿಧಾನ ಸಭಾ ಚುನಾವಣೆ ನಡೆಯಿತು. ಅಂದು 48 ಕ್ಷೇತ್ರಗಳಿದ್ದವು. ಅದಾದ ಬಳಿಕ 1956ರಲ್ಲಿ ಅದು ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿತು. ಹಾಗಾಗಿ 1993ರ ತನಕ ಚುನಾವಣೆ ನಡೆಯಲಿಲ್ಲ. ದೆಹಲಿಯನ್ನು ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌ ರೀಜಿಯನ್‌) ಎಂದು ಘೋಷಿಸಿದ ಬಳಿಕ 1993ರಲ್ಲಿ ಚುನಾವಣೆ ನಡೆಯಿತು. ಆಗ 70 ಕ್ಷೇತ್ರಗಳ ಪೈಕಿ ಬಿಜೆಪಿ 49 ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರ ಹಿಡಿಯಿತು. ಕಾಂಗ್ರೆಸ್‌ 14 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಜನತಾ ದಳಕ್ಕೆ 4, ಸ್ವತಂತ್ರ ಸದಸ್ಯರು ನಾಲ್ವರಿದ್ದರು. ಮದನ್‌ಲಾಲ್ ಖುರಾನಾ ಮುಖ್ಯಮಂತ್ರಿಯಾಗಿದ್ದರು. ಈ ಸರ್ಕಾರ 1998ರ ತನಕ ಪೂರ್ಣ ಅವಧಿ ಆಡಳಿತ ನಡೆಸಿತು. ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು.

3) ಮೂರು ಅವಧಿಗೆ ಕಾಂಗ್ರೆಸ್ ಆಡಳಿತ: 1998ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡು, ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾದರು. 70 ಸ್ಥಾನಗಳ ಪೈಕಿ 52 ಕಾಂಗ್ರೆಸ್, ಬಿಜಪಿ 15 ಸ್ಥಾನಗಳಲ್ಲಿ ಗೆಲುವು ಕಂಡಿದ್ದವು. 2003ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲುವು ದಾಖಲಿಸಿತು. ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿ ಮುಂದುವರಿದರು. ಕಾಂಗ್ರೆಸ್‌ಗೆ 47, ಬಿಜೆಪಿ 20 ಸ್ಥಾನಗಳು ಬಂದಿದ್ದವು. 2008 ರ ಚುನಾವಣೆಯಲ್ಲೂ ಕಾಂಗ್ರೆಸ್‌ ಗೆಲುವು ಕಂಡಿತು. ಶೀಲಾ ದೀಕ್ಷಿತ್ ಮೂರನೇ ಅವಧಿಗೆ ಸಿಎಂ ಆಗಿ ಮುಂದುವರಿದರು. ಕಾಂಗ್ರೆಸ್‌ 43, ಬಿಜೆಪಿ 23 ಕ್ಷೇತ್ರಗಳನ್ನು ಗೆದ್ದುಕೊಂಡವು. ಆದರೆ 2013ರ ಚುನಾವಣೆ ಕಾಂಗ್ರೆಸ್‌ಗೆ ಮುಳುವಾಯಿತು

4) ಗೆದ್ದು ಅಧಿಕಾರ ಹಿಡಿವ ಬಿಜೆಪಿ ಕನಸಿಗೆ ಎಎಪಿ ಬ್ರೇಕ್‌: ಮೂರು ಅವಧಿಯ ಕಾಂಗ್ರೆಸ್ ಆಡಳಿತದ ಬಗ್ಗೆ ರೋಸಿ ಹೋಗಿದ್ದ ದೆಹಲಿಗರು ಬಿಜೆಪಿಯನ್ನು ಪರ್ಯಾಯವಾಗಿ ಕಂಡುಕೊಳ್ಳುತ್ತಾರೆ ಎಂಬ ಭರವಸೆ ಬಿಜೆಪಿ ನಾಯಕರದ್ದಾಗಿತ್ತು. 2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹುಟ್ಟಿದ ಆಮ್ ಆದ್ಮಿ ಪಕ್ಷ (ಎಎಪಿ) 2013ರ ದೆಹಲಿ ಚುನಾವಣೆಗೆ ಸ್ಪರ್ಧಿಸಿತು. 2013ರ ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಸಿಕ್ಕಿದ್ದು 70 ಸ್ಥಾನಗಳ ಪೈಕಿ 31. ಸರಳ ಬಹುಮತಕ್ಕೆ 36 ಸ್ಥಾನಗಳಲ್ಲಿ ಗೆಲ್ಲಬೇಕಾಗಿತ್ತು. ಆಮ್ ಆದ್ಮಿ ಪಾರ್ಟಿಗೆ 28, ಕಾಂಗ್ರೆಸ್‌ 8 ಸ್ಥಾನಗಳು ಸಿಕ್ಕವು. ಯಾರಿಗೂ ಬಹುಮತ ಇಲ್ಲ. ಕಾಂಗ್ರೆಸ್ ಪಕ್ಷದ ಬಾಹ್ಯಬೆಂಬಲದೊಂದಿಗೆ ಎಎಪಿಯ ಸಂಚಾಲಕ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾದರು. 49 ದಿನ ಆಡಳಿತ ನಡೆಸಿ, ಸರ್ಕಾರ ವಿಸರ್ಜಿಸಿದರು. 2015ರಲ್ಲಿ ದೆಹಲಿ ಮತ್ತೊಮ್ಮೆ ಚುನಾವಣೆ ಎದುರಿಸಿತು.

5) ಎಎಪಿಗೆ ಸ್ಪಂದಿಸಿದ ದೆಹಲಿಗರು: ಅಣ್ಣಾ ಹಜಾರೆ ಅವರ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಅರವಿಂದ ಕೇಜ್ರಿವಾಲ್ ದೆಹಲಿಗರಲ್ಲಿ ಭಾರಿ ಭರವಸೆ ಹುಟ್ಟುಹಾಕಿದ್ದರು. ಹೀಗಾಗಿ ಅಲ್ಪ ಅವಧಿಯಲ್ಲೇ ದೆಹಲಿಗರ ಮೆಚ್ಚುಗೆ ಗಳಿಸಿದ್ದರು. 2015ರ ಚುನಾವಣೆ ಅದನ್ನು ನಿರೂಪಿಸಿತು. ದೆಹಲಿ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಅಡಿಮೇಲು ಮಾಡಿ ಎಎಪಿ ಭರ್ಜರಿ ಗೆಲುವು ದಾಖಲಿಸಿತು. 2015ರ ಚುನಾವಣೆಯಲ್ಲಿ ಎಎಪಿ 67 ಸ್ಥಾನಗಳಲ್ಲಿ ಗೆದ್ದರೆ, ಇನ್ನೇನು ಅಧಿಕಾರ ಗದ್ದುಗೆ ಸಿಕ್ಕೇ ಬಿಟ್ಟಿತು ಎಂದುಕೊಂಡಿದ್ದ ಬಿಜೆಪಿಗೆ 3 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿತ್ತು. ಕಾಂಗ್ರೆಸ್ ಪಕ್ಷ ದೆಹಲಿ ವಿಧಾನಸಭೆಯಲ್ಲಿ ಅಸ್ತಿತ್ವ ಕಳೆದುಕೊಂಡಿತು. 2020ರ ಚುನಾವಣೆಯಲ್ಲೂ ಇತಿಹಾಸ ಮರುಕಳಿಸಿತು. ಆದರೆ ಎಎಪಿ ಸ್ಥಾನ 67ರಿಂದ 62ಕ್ಕೆ ಇಳಿಯಿತು. ಬಿಜೆಪಿ ಸ್ಥಾನ 3 ರಿಂದ 8ಕ್ಕೆ ಏರಿತು. ಮೂರನೆ ಅವಧಿಗೆ ಎಎಪಿ ಈಗ ಆಡಳಿತ ಚುಕ್ಕಾಣಿ ಭದ್ರಪಡಿಸಲು ಬಯಸಿದೆ. ಆದರೆ ಮತದಾರನ ಇಚ್ಛೆ ಏನೆಂಬುದು ಫೆ 8ಕ್ಕೆ ಬಹಿರಂಗವಾಗಲಿದೆ.

ಒಂದೊಮ್ಮೆ ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಗೆದ್ದರೆ ಅದಕ್ಕೆ ಕಾರಣಗಳೇನಿರಬಹುದು?. ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಇಟ್ಟುಕೊಂಡು ವಿಶ್ಲೇಷಿಸುವುದಾದರೆ ಎಎಪಿಗೆ ಬಲ ತುಂಬಿದ್ದ ಮುಸ್ಲಿಮರು, ದಲಿತರು ಮತ್ತು ಮಧ್ಯಮ ವರ್ಗದ ಜನ ಈ ಬಾರಿ ಬಿಜೆಪಿ ಕಡೆಗೆ ತಿರುಗಿರುವ ಸಾಧ್ಯತೆ ದಟ್ಟವಾಗಿದೆ. ಆಮ್ ಆದ್ಮಿ ಪಾರ್ಟಿ ಸರ್ಕಾರದ ದೆಹಲಿ ಅಬಕಾರಿ ನೀತಿ ಹಗರಣ ಮತ್ತು ಎಎಪಿ ನಾಯಕರ ಬಂಧನ ಇವೆಲ್ಲವೂ ಮತದಾರರ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಅರವಿಂದ ಕೇಜ್ರಿವಾಲ್ ತನ್ನ ಅಧಿಕೃತ ಬಂಗಲೆ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದನ್ನೂ ಬಿಜೆಪಿ ನಾಯಕರು ಎತ್ತಿ ತೋರಿಸಿ ಟೀಕಿಸಿದ್ದರು. ಇವೆಲ್ಲವೂ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನೆರವಾಗುವ ಸಾಧ್ಯತೆ ಇದೆ. ಯಾವುದಕ್ಕೂ ಫೆ 8 ರ ದೆಹಲಿ ಚುನಾವಣಾ ಫಲಿತಾಂಶ ಎಲ್ಲವನ್ನೂ ನಿಚ್ಚಳವಾಗಿಸಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.