ದೆಹಲಿ ಚುನಾವಣೆ ಫಲಿತಾಂಶ: ಮೋದಿ ಗಂಗೆಯಲ್ಲಿ ಮಿಂದ ಫಲ...! ಸೋಷಿಯಲ್ ಮೀಡಿಯಾದಲ್ಲಿ ಹರ್ಷೋದ್ಗಾರ, ಜೈಕಾರ, ಮೀಮ್ಸ್‌ಗಳ ಪ್ರವಾಹ
Delhi Election Result Memes: ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜನರು ಇನ್ನಿಲ್ಲದ ಉತ್ಸಾಹದಿಂದ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಹರ್ಷೋದ್ಗಾರ, ಜೈಕಾರ ಹಾಕುತ್ತಿದ್ದಾರೆ. ಬಗೆಬಗೆಯ ಮೀಮ್ಸ್‌ಗಳು ಹರಿದಾಡುತ್ತಿವೆ.

ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಜನರು ಇನ್ನಿಲ್ಲದ ಉತ್ಸಾಹದಿಂದ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಹರ್ಷೋದ್ಗಾರ, ಜೈಕಾರ ಹಾಕುತ್ತಿದ್ದಾರೆ. ಇದೇ ಸಮಯದಲ್ಲಿ ನೆಟ್ಟಿಗರು ಆಮ್ ಆದ್ಮಿಯ ಅರವಿಂದ ಕೇಜ್ರಿವಾಲ್ ಸೋಲನ್ನು ವಿಶ್ಲೇಷಣೆಯನ್ನೂ ಮಾಡುತ್ತಿದ್ದಾರೆ. ದೆಹಲಿ ಚುನಾವಣೆಯ ಅಧಿಕೃತ ಫಲಿತಾಂಶ ಬರುವ ಮುನ್ನವೇ ಮತ ಎಣಿಕೆಯ ಸಮಯದ ಮುನ್ನಡೆ, ಹಿನ್ನಡೆಯ ನಡುವೆ ಸೋಷಿಯಲ್ ಮೀಡಿಯಾದಲ್ಲಿ ನಗು ಉಕ್ಕಿಸುವ ಮೀಮ್ಸ್‌ಗಳ ಪ್ರವಾಹವೂ ಉಂಟಾಗಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಎಎಪಿಯ ಮತ್ತೊಬ್ಬ ನಾಯಕ, ಮಾಜಿ ಡಿಸಿಎಂ ಅನೀಶ್ ಸಿಸೋಡಿಯಾ ಕೂಡ ಪರಾಭವಗೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ, ಜಿಫ್, ಬರಹಗಳನ್ನು ಹಾಕುತ್ತ ಸಂಭ್ರಮಿಸುತ್ತಿದ್ದಾರೆ. ಚುನಾವಣಾ ಆಯೋಗದ ವೆಬ್ ಸೈಟ್ ಟ್ರೆಂಡ್ ಪ್ರಕಾರ ಬಿಜೆಪಿ ಮುನ್ನಡೆಯಲ್ಲಿದೆ. ಬನ್ನಿ ಸೋಷಿಯಲ್ ಮೀಡಿಯಾದ ಒಂದಿಷ್ಟು ಪೋಸ್ಟ್‌ಗಳನ್ನು ನೋಡಿಕೊಂಡು ಬರೋಣ.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುಧೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. "ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ Narendra Modi ಜೀ ಅವರ ನಾಯಕತ್ವಕ್ಕೆ ಶಕ್ತಿ ತುಂಬುವ ಸಂದೇಶವನ್ನು ದೆಹಲಿಯ ಜನತೆ ಬಿಜೆಪಿ ಗೆಲ್ಲಿಸುವ ಮೂಲಕ ಪಸರಿಸಿದ್ದಾರೆ. ಬಿಜೆಪಿಗೆ ದಾಖಲೆಯ ದಿಗ್ವಿಜಯ ದೊರಕಿಸಿಕೊಟ್ಟ ದೆಹಲಿಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಮಾನ್ಯ ಮೋದಿಜೀ ಅವರನ್ನು ಕರ್ನಾಟಕದ ಜನತೆಯ ಪರವಾಗಿ ಅಭಿನಂದಿಸುವೆ.
ವಿಕಸಿತ ಭಾರತದ ಸಂಕಲ್ಪ ತೊಟ್ಟು ದೇಶವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಟಗೊಳಿಸಲು ಯೋಜನೆ ರೂಪಿಸುತ್ತಿರುವ ಪ್ರಧಾನಿಯವರಿಗೆ ದೇಶದ ರಾಜಧಾನಿಯ ಗೆಲುವು ಭೀಮ ಬಲವನ್ನು ತಂದು ಕೊಟ್ಟಿದೆ. ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ J.P.Nadda ಜೀ ಹಾಗೂ ಗೃಹ ಸಚಿವರಾದ ಮಾನ್ಯ Amit Shah ಜೀ ಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಹೆಗ್ಗಳಿಕೆಯ ವಿಜಯ ಸಾಧಿಸಿದೆ.
ಭಾರತೀಯ ಜನತಾ ಪಾರ್ಟಿ ದೇಶಭಕ್ತಿ ಹಾಗೂ ರಾಷ್ಟ್ರ ಕಟ್ಟುವ ಲಕ್ಷಾಂತರ ಕಾರ್ಯಕರ್ತರನ್ನೊಳಗೊಂಡ ವಿಶ್ವ ದಾಖಲೆ ನಿರ್ಮಿಸಿರುವ ರಾಜಕೀಯ ಪಕ್ಷವಾಗಿದೆ. ಬಿಜೆಪಿಯ ವಿರುದ್ಧ ಸುಳ್ಳು ಅಪಪ್ರಚಾರಗಳನ್ನು ನಡೆಸಿ ತಾತ್ಕಾಲಿಕ ಗೆಲುವು ಸಾಧಿಸಬಹುದೇ ಹೊರತು ಪಕ್ಷ ಸಿದ್ಧಾಂತದೊಂದಿಗೆ ಸೆಣಸಿ ಬಿಜೆಪಿ ಮಣಿಸಲು ಸಾಧ್ಯವಿಲ್ಲ ಎನ್ನುವುದನ್ನು ದೆಹಲಿಯ ಫಲಿತಾಂಶ ತೋರಿಸಿಕೊಟ್ಟಿದೆ. ಭವಿಷ್ಯತ್ತಿನಲ್ಲಿ ಇದು ಕರ್ನಾಟಕದಲ್ಲೂ ಪ್ರತಿಫಲಿಸಲಿದೆ.
ದೆಹಲಿಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಮಡಿಲಿಗೆ ಸಮರ್ಪಿಸಿರುವ ದೆಹಲಿಯ ಜನತೆಯ ಆಶೋತ್ತರಗಳನ್ನು ಈಡೇರಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ಮಾರ್ಗದರ್ಶನದಲ್ಲಿ ನೂತನ ಸರಕಾರ ಕಟಿಬದ್ಧವಾಗಿ ಕೆಲಸ ಮಾಡಲಿದೆ ಎನ್ನುವುದು ದೆಹಲಿ ಚುನಾವಣೆಗಾಗಿ ಶ್ರಮಿಸಿದ ಪ್ರತಿಯೊಬ್ಬ ಪಕ್ಷ ಪ್ರಮುಖರು ಹಾಗೂ ಕಾರ್ಯಕರ್ತರ ಅಭಯವಾಗಿದೆ. ಈ ಚುನಾವಣೆ ಬಿಜೆಪಿಯ ಕಾರ್ಯಕರ್ತರು ಹಾಗೂ ದೆಹಲಿಯ ಜನತೆಯ ಚಾರಿತ್ರಿಕ ಜಯವಾಗಿದೆ" ಎಂದು ಸೋಷಿಯಲ್‌ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
"ಫಲಿತಾಂಶ ಹೀಗೆ ಬಂದಿದೆ ಎನ್ನುವ ಖುಷಿಗಿಂತ, ಅಣ್ಣ ಹಜಾರೆ ಅವರ ಜೊತೆಯಲ್ಲಿ ಸುಭಗನಂತೆ ನಾಟಕವಾಡಿ ಗದ್ದುಗೆ ಹಿಡಿದಿದ್ದ ವ್ಯಕ್ತಿ ಸೋಲು ಹೆಚ್ಚು ಖುಷಿ ನೀಡಿದೆ. ಜನ ಬೆಟ್ಟದಷ್ಟು ನಂಬಿಕೆ ಇಟ್ಟಿದ್ದರು.ದೇವರಾಗುವ ಅವಕಾಶವನ್ನು ಕಾಲಲ್ಲಿ ಒದ್ದುದರ ಫಲಿತಾಂಶ ಅಷ್ಟೇ" ಎಂದು ರಂಗಸ್ವಾಮಿ ಮೂಕನಹಳ್ಳಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ದೆಹಲಿಯಂತಹ ಫಲಿತಾಂಶ ಕರ್ನಾಟಕದಲ್ಲಿ ಯಾವಾಗ ಬರುತ್ತದೆ? ಎಂದು ಗೀರ್ವಾಣಿ ಪಶ್ನಿಸಿದ್ದಾರೆ.
"ಬಹಳ ಖುಷಿ ಕೊಟ್ಟ ಫಲಿತಾಂಶಗಳಲ್ಲಿ ದೆಹಲಿಯ ಫಲಿತಾಂಶವೂ ಒಂದು. ಭ್ರಷ್ಟಾಚಾರ ವಿರೋಧಿಸಿ ಹುಟ್ಟಿಕೊಂಡ ಪಕ್ಷ ಆಪ್. ಕಡೆಗೆ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಜೊತೆಯಲ್ಲೇ ಕೈ ಜೋಡಿಸಿತು. ಅಬಕಾರಿ ಹಗರಣ ಮಾಡಿತು. ಸಾಮಾನ್ಯ ಜನರ ಜೊತೆ ತಾನು ಅಂತ ಹೇಳಿಕೊಂಡ ಕೇಜರಿ ತನ್ನ ಮನೆಗೆ ಜನರ ತೆರಿಗೆ ಹಣದಿಂದ ಕೋಟಿ ಕೋಟಿ ಸುರಿದು ರೆನೋವೇಷನ್ ಮಾಡಿಸಿಕೊಂಡ. ಯಾವುದೇ ಅಜೆಂಡಾ ಇಲ್ಲದೆ, ಅಧಿಕಾರಕ್ಕಾಗಿ ಎನು ಮಾಡಲೂ ಸಿದ್ಧವಿರುವ ಕೇಜ್ರಿಯಂತವರಿಗೆ ಈ ರಿಸಲ್ಟ್ ಸರಿಯಾದ ಪಾಠ ಕಲಿಸಿದೆ. ಅವನೇ ಸೋತರಂತೂ ಮತ್ತೂ ಸಂತೋಷ. ಹೋದಸಲವೇ ಎಷ್ಟೋ ಕಡೆ ನೂರಕ್ಕೂ ಕಡಿಮೆ ಮಾರ್ಜಿನ್ನಲ್ಲಿ ಗೆದ್ದಿದ್ದ. ಬಿಜೆಪಿ ಒಳ್ಳೇ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡಿ ಒಳ್ಳೇ ಆಡಳಿತ ಕೊಡಲಿ" ಎಂದು ಜ್ಯೋತಿ ಉಮೇಶ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
"ಗಂಗೆಯಲ್ಲಿ ಮುಳುಗುವುದರಿಂದ ಭಾರತದ ಬಡತನ ತೊಲಗುತ್ತೊ ಇಲ್ಲವೋ ಗೊತ್ತಿಲ್ಲ. ಆದರೆ ಮೋದಿಜಿಗಂತೂ ಭರ್ಜರಿ ಗೆಲುವು ಸಿಕ್ತು" “ಮೋದಿ ಗಂಗೆಯಲ್ಲಿ ಮಿಂದ ಫಲ” "ದೆಹಲಿ ಫಲಿತಾಂಶ ಬೇಸರ ತರಿಸಿದೆ ಕಾಂಗ್ರೆಸ್ ಒಂದು ಸೀಟು ಪಡೆದಿದೆ" ಎಂದೆಲ್ಲ ಸಾಕಷ್ಟು ಜನರು ಪೋಸ್ಟ್ ಮಾಡಿದ್ದಾರೆ.
ಟ್ವಿಟ್ಟರ್‌ನಲ್ಲಿ ಕಾಣಿಸಿದ ಮೀಮ್ಸ್‌ಗಳು
