ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ: ದ್ರೌಪದಿ ಫೋಟೋ ಟ್ವೀಟ್ ಮಾಡಿದ್ರು ಸ್ವಾತಿ ಮಲಿವಾಲ್, ದೆಹಲಿ ಚುನಾವಣೇಲಿ ಎಎಪಿ ಸೋಲಿಗೆ ಪ್ರತಿಕ್ರಿಯೆ
Swati Maliwal: ದೆಹಲಿ ವಿಧಾನ ಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಎಎಪಿ ಹಾಗೂ ಅರವಿಂದ್ ಕೇಜ್ರಿವಾಲ್ ಸೋಲು ಕಂಡಿದ್ದಾರೆ. ಇದಕ್ಕೆ ಅವರದ್ಧೇ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್, ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ ಎಂದು ಬರೆದುಕೊಂಡು ದ್ರೌಪದಿ ಫೋಟೋ ಟ್ವೀಟ್ ಮಾಡಿ ಗಮನಸೆಳೆದರು.

Swati Maliwal: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತು ಅರವಿಂದ್ ಕೇಜ್ರಿವಾಲ್ ಸೋಲು ಖಚಿತವಾಗುತ್ತಿದ್ದಂತೆ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ನೀಡಿದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಸ್ವಾತಿ ಮಲಿವಾಲ್ ಕೂಡ ಆಮ್ ಆದ್ಮಿ ಪಾರ್ಟಿಯವರೇ ಆಗಿದ್ದು, ಕಳೆದ ವರ್ಷ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಂಘರ್ಷಕ್ಕೆ ಇಳಿದು ಸುದ್ದಿಯಾಗಿದ್ದರು. ಇಂದು ಮಧ್ಯಾಹ್ನ ಅರವಿಂದ್ ಕೇಜ್ರಿವಾಲ್ ಅವರು ಸೋಲು ಕಾಣುವುದು ಖಚಿತವಾದ ಕೂಡಲೇ ಸ್ವಾತಿ ಮಲಿವಾಲ್ ಎರಡು ಟ್ವೀಟ್ ಮಾಡಿದ್ದಾರೆ. ಅದು ಸಂಚಲನ ಮೂಡಿಸಿದೆ.
ಮಹಿಳೆಗೆ ಏನಾದರೂ ಸಂಭವಿಸಿದರೆ ಅದರ ಫಲ ಅನುಭವಿಸಬೇಕಾಗುತ್ತೆ- ಸ್ವಾತಿ ಮಲಿವಾಲ್
"ನಾವು ಇತಿಹಾಸವನ್ನು ಗಮನಿಸಿದರೆ,- ಯಾವುದೇ ಮಹಿಳೆಗೆ ಏನಾದರೂ ತಪ್ಪು ಸಂಭವಿಸಿದಲ್ಲಿ, ದೇವರು ಅದನ್ನು ಮಾಡಿದವರಿಗೆ ಶಿಕ್ಷೆ ವಿಧಿಸಿರುವುದನ್ನು ಕಾಣಬಹುದು ... ಇಂದು ನೀರಿನ ಮಾಲಿನ್ಯ, ವಾಯುಮಾಲಿನ್ಯ ಮತ್ತು ಬೀದಿಗಳ ಸ್ಥಿತಿಯಂತಹ ವಿಷಯಗಳಿಂದಾಗಿ, ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರು (ಎಎಪಿ) ಸುಳ್ಳು ಹೇಳಬಹುದು ಮತ್ತು ಜನ ಅವರನ್ನು ನಂಬುತ್ತಾರೆ. .. ನಾನು ಬಿಜೆಪಿಯನ್ನು ಅಭಿನಂದಿಸುತ್ತೇನೆ. ಜನರು ಅವರಿಗೆ ಭರವಸೆಯೊಂದಿಗೆ ಮತ ಚಲಾಯಿಸಿದ್ದಾರೆ - ಮತ್ತು ಅವರು (ಬಿಜೆಪಿ) ಅದನ್ನು ಪೂರೈಸಲು ಕೆಲಸ ಮಾಡಬೇಕು ... " ಎಂದು ರಾಜ್ಯಸಭಾ ಸಂಸದ ಸ್ವಾತಿ ಮಾಲಿವಾಲ್ ಪ್ರತಿಕ್ರಿಯಿಸಿದ್ದಾರೆ. ಅದರ ವಿಡಿಯೋ ಇಲ್ಲಿದೆ.
ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ…; ಸ್ವಾತಿ ಮಲಿವಾಲ್
ಸ್ವಾತಿ ಮಲಿವಾಲ್ ಅವರು ಆರಂಭದಲ್ಲಿ ದ್ರೌಪದಿ ವಸ್ತ್ರಾಪಹರಣದ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಶ್ರೀಕೃಷ್ಣ ಪರಮಾತ್ಮ ದ್ರೌಪದಿಯ ನೆರವಿಗೆ ಬಂದಿರುವ ದೃಶ್ಯವಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿ ವೈರಲ್ ಆಯಿತು.
ಸ್ವಾತಿ ಮಲಿವಾಲ್ ಅವರು ಕಳೆದ ವರ್ಷ ಅರವಿಂದ್ ಕೇಜ್ರಿವಾಲ್ ಅವರ ಜತೆಗೆ ಸಂಘರ್ಷಕ್ಕೆ ಇಳಿದ ಬಳಿಕ, ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಹೋಗಿದ್ದರು. ಆಗ ಕೇಜ್ರಿವಾಲ್ ಅವರ ಖಾಸಗಿ ಆಪ್ತ ಕಾರ್ಯದರ್ಶಿ ಕೆಟ್ಟದಾಗಿ ವರ್ತಿಸಿದರು ಎಂದು ಸ್ವಾತಿ ಆರೋಪಿಸಿದ್ದರು. ಮತದಾರರಿಗೆ ನೀಡಿರುವ ಭರವಸೆಗಳನ್ನು ಈಡೇರಿಸದೇ ಇರುವ ಕಾರಣಕ್ಕೆ ಸ್ವಾತಿ ಮಲಿವಾಲ್ ಬಹಿರಂಗವಾಗಿಯೇ ಕೇಜ್ರಿವಾಲ್ ಅವರನ್ನು ಟೀಕಿಸತೊಡಗಿದ್ದರು. ಈಗ ಎಎಪಿ ಸೋಲಿನ ಬೆನ್ನಿಗೆ ದ್ರೌಪದಿ ವಸ್ತ್ರಾಪಹರಣದ ಫೋಟೋ ಟ್ವೀಟ್ ಮಾಡಿದ ಬಳಿಕ “ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ…” ಎಂದು ಟ್ವೀಟ್ ಮಾಡಿದರು.
ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಂಘರ್ಷ ಹೆಚ್ಚಾದ ಬಳಿಕ, ಸ್ವಾತಿ ಮಲಿವಾಲ್ ಅವರು ಬಹಿರಂಗವಾಗಿಯೇ ಪಕ್ಷದ ನಾಯಕರ ವರ್ತನೆಗಳನ್ನು ಟೀಕಿಸಲಾರಂಭಿಸಿದರು. ಜನವರಿ 30 ರಂದು ಪ್ರತಿಭಟನಾರ್ಥವಾಗಿ ಅರವಿಂದ್ ಕೇಜ್ರಿವಾಲ್ ನಿವಾಸದ ಎದುರು ಮೂರು ಮಿನಿ ಟ್ರಕ್ ಕಸವನ್ನು ಸುರಿದ ಕಾರಣ ಸ್ವಾತಿ ಮಲಿವಾಲ್ ಅವರನ್ನು ಪೊಲೀಸರು ಬಂಧಿಸಿದ್ದರು. ವಿಕಾಸಪುರಿಗೂ ಭೇಟಿ ನೀಡಿದ್ದ ಸ್ವಾತಿ ಮಲಿವಾಲ್, ರಸ್ತೆ ತುಂಬಾ ಕಸ ತುಂಬಿಕೊಂಡಿರುವುದನ್ನು ಟೀಕಿಸಿದ್ದರು. ಇವೆಲ್ಲವೂ ದೆಹಲಿಯ ರಾಜಕಾರಣದಲ್ಲಿ ಪರಿಣಾಮ ಬೀರಿವೆ. ದೆಹಲಿ ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರಿದ್ದು ಈಗ ಪಕ್ಕಾ ಆಗಿದೆ.
ಅರವಿಂದ್ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿರುದ್ಧ ಸ್ವಾತಿ ಆರೋಪವೇನು
2024ರ ಮೇ 13 ರಂದು ಸ್ವಾತಿ ಮಲಿವಾಲ್ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಹೋದಾಗ, ಅವರ ನಿವಾಸದಲ್ಲಿದ್ದ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದರು ಎಂದು ಸ್ವಾತಿ ಮಲಿವಾಲ್ ಆರೋಪಿಸಿ ದೂರು ದಾಖಲಿಸಿದ್ದರು. ಮೇ 16 ರಂದು ಎಫ್‌ಐಆರ್ ದಾಖಲಾಯಿತು. ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ವಿಭಾಗ